ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಗ್ರಹ: ಕಲಿಕೆಯ ಶತ್ರು

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

‘ಕಂಡ ವಸ್ತುವನುಳಿದು ಕಾಣದುದ ಬಯಸುವವರೆ ಕೆಂಡವನು ಕರ್ಪೂರ ಬಯಸಿದಂತೆ’ - ಎಂಬುದು ನಾನು ಬಾಲ್ಯದಲ್ಲಿ ಓದಿದ ಕವನದ ಸಾಲು. ಈ ಕವನದ ಲೇಖಕರು ಅರ್ಚಿಕ ವೆಂಕಟೇಶ್. ಈಗ ಆ ಕವನವು ನೆನಪಾಗಿ ನನ್ನ ಆಲೋಚನೆಗೆ ಪ್ರಚೋದನೆಯಾಗಿದೆ. ಓದಿನ ಹವ್ಯಾಸದ ಅನುಕೂಲ ಇದು. ಎಂದೋ ಓದಿದ್ದು, ಓದಿದಾಗ ಸಂತಸ ನೀಡುವುದಲ್ಲದೆ ಅನಂತರವೂ ನೆನಪಾಗಿ ಆಲೋಚನೆಗೆ ಪ್ರೇರಣೆಯಾಗುತ್ತದೆ.

ಮನಸ್ಸು ದ್ರವ್ಯವಲ್ಲ. ಆದರೆ ವಿಚಿತ್ರವೆಂದರೆ ಮನಸ್ಸಿಗೆ ದ್ರವ್ಯಕ್ಕೆ ಇರುವ ಜಡತ್ವ ಇದೆ ಎಂಬುದು. ಮನಸ್ಸಿಗೆ ಯಾವ ವಿವೇಚನೆ ಇಲ್ಲದೇ ಹೋದರೂ ಈಗಾಗಲೇ ಆಗಿರುವ ಅನುಭವವನ್ನು ಪುನಾರಾವರ್ತನೆ ಆಗಲೆಂದು ಬಯಸುತ್ತದೆ. ಈ ಅರ್ಥದಲ್ಲಿ ಕಂಡ ವಸ್ತುವನ್ನೇ ಮನಸ್ಸು ಮತ್ತೆ ಮತ್ತೆ ಬಯಸುತ್ತದೆ.

ಮನಸ್ಸಿನ ಈ ಪ್ರವೃತ್ತಿ ಕನ್ನಡದ ಗಾದೆಯಲ್ಲಿ ಪ್ರಸ್ತಾಪವಾಗಿದೆ – ‘ಕಂಡ ಮನೆಗೆ ಕಳ್ಳ ಬಂದ; ಉಂಡ ಮನೆಗೆ ನೆಂಟ ಬಂದ!’ ಕಂಡ ಮನಕ್ಕೆ ಮುದ ನೀಡಿ ಮನಸ್ಸನ್ನು ಆಪಹರಿಸಿದ ವಸ್ತು ಮತ್ತೆ ಪುನರಾವರ್ತನೆ ಬಯಸಿ ಪೀಡಿಸುತ್ತದೆ; ಅನುಭವಿಸಿದ ಸುಖಕ್ಕೇ ಮತ್ತೆ ಮತ್ತೆ ಬೇಕೆಂದು ಬೇಡಿಕೆ ಸಲ್ಲಿಸುತ್ತದೆ.

ಆದರೆ ಅರ್ಚಿಕ ವೆಂಕಟೇಶ ಅವರ ಪದ್ಯದ ಸಾಲು ಹೇಳುವ - ಕಾಣದುದ ಬಯಸುವುದು ಪೂರ್ಣ ಸುಳ್ಳೆ? ಹಾಗಿರಲಾರದು. ಏಕೆಂದರೆ ಆದ ಅನುಭವ ಮುಂದೆ ಪುನರಾವವರ್ತನೆ ಆಗದಿದ್ದರೆ? ಹೊಸ ಅನುಭವಕ್ಕೆ ಹೊಂದಿಕೊಳ್ಳಲಾರದ ಮನಸ್ಸು ಇರುವುದೆಲ್ಲವ ಬಿಟ್ಟು (ವರ್ತಮಾನದಾನುಭವ ತೊರೆದು) ಇರದುದರೆಡೆಗೆ ತುಡಿದಾಗ (ಗತಕಾಲಕ್ಕೆ ಜೋತು ಬೀಳುವಾಗ) ಕಾಣದುದ ಬಯಸಿದ ಹಾಗೆಯೇ! ಅಲ್ಲವೆ?

ಆದರೆ ಮನಸ್ಸಿನ ಪುನರಾವರ್ತನೆಯ ಚಟವನ್ನು ಅರಿತ ಮೇಲೂ ಅದನ್ನು ಮೀರುವುದು ಕಠಿಣ. ಹಾಗೆಯೇ ಗತ ಅನುಭವವು ಮತ್ತೆ ಮತ್ತೆ ಆಗುವಂತೆ ಸಂದರ್ಭ ಸೃಷ್ಟಿಸುತ್ತಾ ಹೋಗುವುದೂ ಕಠಿಣ. ಹೀಗಾಗಿ ಮನಸ್ಸು ಹಗಲುಗನಸಿಗೆ ತೊಡಗುತ್ತದೆ! ಅನುತ್ಪಾದಕ ಸಮಯಹರಣ - ಇದರ ಪರಿಣಾಮ. ಈ ಪ್ರವೃತ್ತಿಯಿಂದಾಗಿ ನಮ್ಮ ಮನಸ್ಸು ವ್ಯಾಪಕ ಅನುಭವದಿಂದಲೂ ಸೃಜನಶೀಲತೆಯಿಂದಲೂ ವಂಚಿತವಾಗುತ್ತದೆ.

‘ಬುದ್ಧಿ’ ಎಂಬ ಮನಸ್ಸಿನ ವಿಚಾರ ಮಾಡುವ ವಿಭಾಗದ್ದೂ ಇದೇ ಗೋಳು. ಯಾವ ತರ್ಕ ಬದುಕಿನಲ್ಲಿ ಯಶಸ್ವಿಯಾಗಿರುತ್ತದೆಯೋ ಆ ತರ್ಕವನ್ನು ಅದು ಬಲವಾಗಿ ನಂಬುತ್ತದೆ; ಆದರೆ ಸಂದರ್ಭ ಬದಲಾದಾಗ ತರ್ಕವು ಕೈಕೊಡಬಹುದಾದ ಬಗ್ಗೆ ಒಮ್ಮೆಯೂ ಸಂದೇಹಿಸುವುದಿಲ್ಲ. ಪ್ರತಿಕೂಲ ಪುರಾವೆಗಳಿಗೆ ಕುರುಡಾಗುತ್ತದೆ/ಕಿವುಡಾಗುತ್ತದೆ. ಈ ಬುದ್ಧಿಯನ್ನು/ಬುದ್ಧಿಯ ತರ್ಕವನ್ನು ನೆಚ್ಚಿ ವಾಸ್ತವನನ್ನು ಉಪೇಕ್ಷಿಸಿ ದುಡುಕಿನ ಸುಳಿಗೆ ನಾವು ಅನೇಕೆ ಬಾರಿ ಬೇಸ್ತು ಬಿದ್ದಿದ್ದೇವೆ. ಅದರ ಪರಿಣಾಮವಾಗಿ ಅನಾಹುತವನ್ನೂ ಎದುರಿಸಿದ್ದೇವೆ.

ನಮ್ಮ ಮನಸ್ಸು, ಬುದ್ದಿಗಳನ್ನು ನಾವೇ ಎಂದು ಭಾವಿಸಿ ಅದನ್ನು ಅನುಸರಿಸುವುದು, ಇತರರ ಸಂದರ್ಭ ನೀಡುವ ಸೂಚನೆಗಳನ್ನು ಕಡೆಗಣಿಸುವುದು ನಮ್ಮೆಲ್ಲರ ಬದುಕಿನ ಪೂರ್ವಗ್ರಹವೆಂಬ ಶಾಪ.

ಅದಕ್ಕೆ, ಒಂದಂಶ ಸ್ಪಷ್ಟವಾಗಬೇಕು. ನಮ್ಮ ಅತಿದೊಡ್ಡ ಶತ್ರುವೆಂದರೆ - ನಮ್ಮ ಮನಸ್ಸು/ಬುದ್ಧಿಗಳೇ ಅರ್ಥಾತ್ ನಾವೇ! ಅದಕ್ಕೇ ಪು.ತಿ.ನ. ಹೇಳುತ್ತಾರೆ:
ಗೆಲುವಾಗೆಲೆ ಮನ
ಹಗುರಾಗೆಲೆ ಮನ
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು
ನನಗಂಟಲು ನೀನಾಗುವೆ ನಿಶ್ಚಲ . . .

ನಾವು ಸೃಜನಗುಣಕ್ಕೆ ತಲುಪದಂತೆ ನಮ್ಮ ಮನಸ್ಸೇ ಸೆರೆಮನೆ,  ನಾನು ಎಂಬುದೇ ಸೆರೆಮನೆ. ಆಸೆ ಎನ್ನುವುದು ನನ್ನ ಮನಸ್ಸಿನ ಮೂಲಕ / ನನ್ನ ಮೂಲಕ ಜಗತ್ತನ್ನು ಆನಂದಿಸುವುದು.

‘ನಾನು’ವನ್ನು ದಾಟಬೇಕಾದರೆ ನನ್ನ ಮನವನ್ನು ನನ್ನಿಂದ ಸೆಳೆಯುವ ‘ಹರಿ’ ಬೇಕು. ಭಕ್ತರಿಗೆ ಭಗವಂತನ ಸೆಳೆತ, ವಿಜ್ಞಾನಿಗೆ ನಿಸರ್ಗದ ಸೆಳೆತ, ಕಲಾವಿದನಿಗೆ ಕಲೆಯ ಸೆಳೆತ  – ಇವೇ ಹರಿ. ಆದರೆ ಸಂತನಿಗೂ, ವಿರಾಗಿಗೂ ವಿಜ್ಞಾನಿಗೂ ಬೇಕಾದ ಸೃಜನತೆಯನ್ನು ಸಾಧಿಸುವ ಮೊದಲು ‘ನಾನು’ನಿಂದ ಹೊರಬರದೆ ಗತ್ಯಂತರವಿಲ್ಲ.

ನಾನು/ ನನ್ನ ಮನಸ್ಸು / ನನ್ನ ಬುದ್ಧಿ ಎಲ್ಲವೂ ನನ್ನನೇ ಕಟ್ಟಿಹಾಕುವ ಸರಪಳಿಗಳು. ಈ ಸರಪಳಿಯನ್ನು ಕಳಚಿ ಹಾಕಲು ಧರ್ಮವು ‘ನಾನು, ನನ್ನ ಮನಸ್ಸು/ಬುದ್ಧಿಗಳಾಚೆಗಿನ ಮನಬುದ್ಧಿಗಳ ಚಾಲಕ ಚೈತನ್ಯ’  ಎಂದು ತಿಳಿಯುವ ಸ್ವಾಧ್ಯಾಯವನ್ನು ತಿಳಿಸುತ್ತದೆ.

ಅಂತರ್ಮುಖಿಯಾಗಿ ಪಡೆಯುವ ಬಿಡುಗಡೆ ಇದು. ಹರಿ ಹೊರಗಿನ ಆಕರ್ಷಣೆಯಾದರೂ ಬಾಹ್ಯ ಕಾರ್ಯದಲ್ಲಿ ತನ್ಮಯರಾಗಿ ನಾನುವಿನ ಸರಳಪಳಿಯಿಂದ ಹೊರಬರುವುದು ಸಾಧ್ಯ. ಆ ಬಹಿರ್ಮುಖಿತೆಗೆ ಮುಖ್ಯವಾಗಿ ನಾನುವಿನ ಬಂಧನದ ಅರಿವು, ಹೊರಜಗದ ಕುರಿತು ಆಕರ್ಷಕ ಧೋರಣೆ ರೂಪಿಸುವ ಸೃಜನತೆ ಬೇಕು.

ಸೃಜನತೆಯ ಬಿಡುಗಡೆ, ಆಟ ನಾನುವಿನ ಬಂಧನದ ಹಠ  ಆಯ್ಕೆ ನಮ್ಮದು. ಈ ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಒಂದರಿಂದ ಇನ್ನೊಂದರೆಡೆಗೆ ಸಾಗುವುದೇ ನಮ್ಮ ಚರ್ಯೆ. ಆತ್ಮನ್ನೈವಾತ್ಮನೋ ಬಂಧುಃ ಅರ್ತೈವರಿಪುರಾತ್ಮನಃ – ಎನ್ನುವುದು ಇದಕ್ಕೇ ಇರಬಹುದು. ಆದರೆ ಬಹುತೇಕರು ತಮ್ಮ ಪೂರ್ವಗ್ರಹದಲ್ಲೇ ಸೆರೆವಾಸಿಗಳು.

ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆ ಕನ್ನಡದಲ್ಲಿದೆ. ಆದರೆ ಮಾನಸಿಕ ವೈದ್ಯರು ಅನೇಕ ಮನೋರೋಗಗಳನ್ನು ಮದ್ದು ನೀಡಿ / ಬುದ್ಧಿ ಹೇಳಿ ವಾಸಿ ಮಾಡುತ್ತಾರೆ; ಅಂದರೆ ವಾಸ್ತವಕ್ಕೆ ಹೊಂದಾಣಿಕೆ ಮಾಡುತ್ತಾರೆ. ಕಾಣದ ವಸ್ತು/ಕನಸನ್ನು ಕಣ್ಣಿದುರಿರುವ ವಸ್ತುವನ್ನು ನಿರಾಕರಿಸದೆ ಆನಂದಿಸಲು ಸೂಚಿಸುತ್ತಾರೆ. ಆದರೆ ಮದ್ದಿಲ್ಲದ ಮನೋರೋಗವೊಂದಿದೆ  ಅದೇ ಮೊಂಡಾಟ! ಆ ಮೊಂಡಾಟಗಳು ಐದು:

1. ಹಿಂದೆ ಆದ ಸವಿ ಅನುಭವ ಮತ್ತೆ ಮತ್ತೆ ಅನುಭವಕ್ಕೆ ಬರುವಂತೆ ಸಂದರ್ಭ ರೂಪಿಸಲು ಒತ್ತಾಸೆ  – ‘ರಾಗ’.
2. ಹಿಂದೆ ಆದ ಕಹಿ ಅನುಭವ ಮುಂದೆಂದೂ ಆಗದಂತೆ ಎಚ್ಚರಿಕೆ ವಹಿಸಲು ಒತ್ತಡ – ‘ದ್ವೇಷ.’
3. ಹಿಂದೆ ಆದ ಅನುಭವದ ಗುಂಗಿನಲ್ಲಿ ನಿಸರ್ಗದ ಗತಿಶೀಲತೆ (dynamism)ಗೆ ಕುರುಡಾದ ಕಾರಣ ಆಗುವ ಸೃಜನತೆಯ ಕೊರತೆಯ ಗುಂಗು– ‘  ಅಭಿನಿವೇಶ.’
4. ನಾನೇ ಸರಿ ಎಂಬ ಹಠಮಾರಿತನ – ‘ಅಸ್ಮಿತೆ’.
5. ‘ನಾನು’ವಿನಿಂದ ಆಚೆಗೆ ಬರದ ಅಸಾಹಯಕತೆ – ‘ಅಜ್ಞಾನ’. ಇವೇ ನಾವು ಸೃಷ್ಟಿಸಿಕೊಂಡಿರುವ ಗತಿಶೀಲ ಜಗತ್ತಿಗೆ ಮನಸ್ಸಿನ ಸ್ಥಿತಿಶೀಲ ಮೂರ್ಖತನ. ಇದನ್ನೇ ಪಂಚಕ್ಲೇಶ ಎನ್ನುವರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT