ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಪಶ್ಚಿಮದ ನಡುವೆ ಹುಡುಕಾಡಿದವರು

ಅಕ್ಷರ ಗಾತ್ರ

ನಾನು ಅನಂತಮೂರ್ತಿಯವರ ‘ಘಟಶ್ರಾದ್ಧ’ ಓದಿದ್ದು ಪ್ರೌಢಶಾಲೆ­ಯಲ್ಲಿದ್ದಾಗ. ಆಗಲೇ ಅದರಿಂದ ಬಹಳ ಪ್ರಭಾವಿತನಾಗಿದ್ದೆ. ಅದೇ ನನ್ನ ಮೊದಲ ಸಿನಿಮಾವಾಯಿತು.  ಅನಂತ­ಮೂರ್ತಿ ಅವರು ಮತ್ತು ನಾನು ಇಬ್ಬರೂ ತೀರ್ಥಹಳ್ಳಿಯವರಾಗಿದ್ದರಿಂದ ಆ ಕೃತಿಯಲ್ಲಿನ ಅನೇಕ ವಿವರಗಳು ನನಗೆ ನಿಜವೆನಿಸಿತ್ತು. ಅದರಲ್ಲಿ ಎರಡು ಥರದ ವಿಷಯಗಳು ಬಹಳ ಮುಖ್ಯವೆನಿಸಿದ್ದವು. ಒಂದು ಕಥೆಯಲ್ಲಿನ ಗಟ್ಟಿ ತಿರುಳು. ಮತ್ತೊಂದು. ಸಮಾಜವನ್ನು ವಿಭಿನ್ನವಾಗಿ ನೋಡುವ ಕ್ರಮ. ಅದನ್ನು ಸಿನಿಮಾದಲ್ಲಿಯೂ ಸಮರ್ಪಕವಾಗಿ ಹಿಡಿದಿಡುವ ಪ್ರಯತ್ನ ಮಾಡಿದೆ.

ಅನಂತಮೂರ್ತಿಯವರು ಸಿನಿಮಾವನ್ನು ಬಹಳ ಇಷ್ಟಪಟ್ಟರು. ‘ಕಾದಂಬರಿಯ ಸಿನಿಮಾ ಅಳವಡಿಕೆ­ಯೆಂದರೆ ಹೀಗೆ ಮಾಡಬೇಕು ಕಣಯ್ಯಾ’ ಎಂದು ಬೆನ್ನುತಟ್ಟಿದರು. ‘ಕಾದಂಬರಿ ಇದ್ದಹಾಗೆಯೇ ಸಿನಿಮಾ ಮಾಡಬೇಕಿಲ್ಲ. ಹೊಸ ಹೊಸ ಅರ್ಥಗಳನ್ನು ಹುಡುಕಬೇಕು. ನೀನು ಆ ಕೆಲಸ ಮಾಡಿದ್ದೀಯ. ತುಂಬಾ ಖುಷಿ­ಯಾಗುತ್ತಿದೆ’ ಎಂದು ಹೇಳಿದ್ದರು.
ಆನಂತರ ಅವರ ಯಾವ ಕಾದಂಬರಿ­ಯನ್ನು ಸಿನಿಮಾಕ್ಕೆ ಅಳವಡಿಸದಿದ್ದರೂ, ಅವರ ಚಿಂತನೆಗಳನ್ನು ನನ್ನ ಸಿನಿಮಾಗಳಲ್ಲಿ ಅಳವಡಿಸಿಕೊಂಡಿದ್ದೇನೆ. 

ಅನಂತಮೂರ್ತಿ ಅವರು ತಮ್ಮ ಮತ್ತು ಕಿರಿಯ ತಲೆಮಾರಿನ ಅನೇಕರನ್ನು ಬೆಳೆಸಿದರು. ಸರಿ ಅಥವಾ ತಪ್ಪು ಎಂಬ ಸುಲಭದ ತೀರ್ಮಾನಗಳನ್ನು ಕೊಡುತ್ತಿ­ರಲಿಲ್ಲ. ಎಲ್ಲವನ್ನೂ ಸಮಸ್ಯಾತ್ಮಕ ಎಂಬಂತೆ ನೋಡುತ್ತಿದ್ದರು.
ಕೆಲವರಿಗೆ ಪಶ್ಚಿಮ ಸರಿ, ಪೂರ್ವ ತಪ್ಪು. ಇನ್ನು ಕೆಲವರಿಗೆ ಪೂರ್ವ ಸರಿ, ಪಶ್ಚಿಮ ತಪ್ಪು. ವೈಜ್ಞಾನಿಕ ಕ್ರಮ ಸರಿ, ಆದರೆ ಪರಂಪರೆ ತಪ್ಪು, ಕೆಲವರಿಗೆ ಪರಂಪರೆ ಸರಿ, ವೈಜ್ಞಾನಿಕ ಕ್ರಮ ತಪ್ಪು. ಅನಂತಮೂರ್ತಿ ಅವರು ಆ ರೀತಿ ವಿಭಜನೆಯಲ್ಲಿ ಯಾವುದನ್ನೂ ನೋಡುತ್ತಿರಲಿಲ್ಲ. ಸತ್ಯ ಎರಡರಲ್ಲೂ ಇದೆ ಎಂದು ಎರಡರ ನಡುವೆ ಹುಡುಕಾಟಕ್ಕೆ ತೊಡಗುತ್ತಿದ್ದರು.

‘ನನಗೆ ವಿಜ್ಞಾನವೂ ಬೇಕು, ಪರಂಪರೆಯೂ ಬೇಕು, ಧರ್ಮವೂ ಬೇಕು’– ಈ ರೀತಿ ನೋಡುವುದಿದೆಯಲ್ಲ  ಅನಂತಮೂರ್ತಿಯವರ ನೆಲೆ ಅದು. ‘ಪೂರ್ವ, ಪಶ್ಚಿಮ, ಹೊಸತು, ಹಳತು ಎಲ್ಲವೂ ಬೇಕು. ಇವೆಲ್ಲದರಿಂದ ಆರಿಸಿ­ಕೊಂಡು ನನ್ನ ಜೀವನ ಕಟ್ಟಿಕೊಳ್ಳಬೇಕು’ ಎಂದು ಯಾವಾಗಲೂ ಹೇಳುತ್ತಿದರು. ಅನಂತಮೂರ್ತಿ ಅವರ ಕುರಿತ ‘ಅನಂತಮೂರ್ತಿ–ನಾಟ್‌ ಎ ಡಾಕ್ಯು­ಮೆಂಟರಿ, ಬಟ್‌ ಎ ಹೈಪೋಥೀಸಿಸ್‌’ ಸಾಕ್ಷ್ಯಚಿತ್ರ ಮಾಡುವಾಗ ಅವರು ಇನ್ನಷ್ಟು ಸ್ಪಷ್ಟವಾಗಿ ಅರ್ಥವಾದರು. ಸಾಕ್ಷ್ಯಚಿತ್ರಕ್ಕಾಗಿ ಅವರ ಇಡೀ ಕಲಾ­ಪ್ರಪಂಚವನ್ನು, ವೈಚಾರಿಕ ಕೃತಿಗಳನ್ನು ಮತ್ತೊಮ್ಮೆ ಓದಬೇಕಾಗಿ ಬಂತು. ಅವರನ್ನು ನನಗಿಂತ ಚೆನ್ನಾಗಿ ಅರ್ಥಮಾಡಿಕೊಂಡವರ ಬಳಿ ಚರ್ಚಿಸಿದೆ. ಅದೊಂದು ದೊಡ್ಡ ಅನುಭವ.

ಸಾಹಿತ್ಯಲೋಕದಲ್ಲಿ ತೊಡಗಿ­ಕೊಂಡು ಸಿನಿಮಾ ಜಗತ್ತಿನ ಬಗ್ಗೆ ಗಾಢ ಆಸಕ್ತಿ, ಜ್ಞಾನ ಇರಿಸಿಕೊಂಡ ಕೆಲವೇ ಕೆಲವು ಲೇಖಕರಲ್ಲಿ ಅನಂತಮೂರ್ತಿ ಒಬ್ಬರು.  ಇತ್ತೀಚೆಗೆ ಫೋನ್‌ ಮಾಡಿ ‘ನೀನು ತೀರಾ ಇಷ್ಟಪಡುವ 20 ಸಿನಿಮಾಗಳನ್ನು ಕಳುಹಿಸಯ್ಯ’ ಎಂದರು. ‘ಯಾಕೆ’ ಎಂದು ಕೇಳಿದೆ. ‘ಸಿನಿಮಾ ನಿರ್ದೇಶಕನ ಮನಸು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು’ ಎಂದರು.

81ನೇ ವಯಸ್ಸಿನಲ್ಲೂ ಆ ದಣಿಯದ ಕುತೂಹಲ ಅನಂತಮೂರ್ತಿ ಅವರಲ್ಲಿ ಇತ್ತು. ಜಗತ್ತಿನ 20 ಶ್ರೇಷ್ಠ ಸಿನಿಮಾಗಳನ್ನು ಕಳುಹಿಸಿದ್ದೆ. ಸಿನಿಮಾ ಕೊಡುವಂತೆ ತುಂಬಾ ಜನ ಹೇಳುತ್ತಾರೆ ಆದರೆ ನೋಡುವುದಿಲ್ಲ. ಒಮ್ಮೆ ಅವರ ಮನೆಗೆ ಫೋನ್‌ ಮಾಡಿದಾಗ ಆರೇಳು ಸಿನಿಮಾಗಳನ್ನು ಈಗಲೇ ನೋಡಿದ್ದಾರೆ ಎಂದರು.

ಆರೋಗ್ಯ ಕೆಟ್ಟಿರುವ ಸಂದರ್ಭ­ದಲ್ಲಿಯೂ ಹೊಸತನ್ನು ನೋಡಬೇಕು, ತಿಳಿದುಕೊಳ್ಳಬೇಕು ಎಂಬ ತುಡಿತ ಅವರಲ್ಲಿತ್ತು. ಅದು ನನಗೆ ಬಹಳ ಸೋಜಿಗವಾಗಿ ಕಾಣುತ್ತದೆ. ನನಗೆ ತುಂಬಾ ಹಿರಿಯ ಲೇಖಕರು ಗೊತ್ತು. ಆದರೆ ಒಂದು ವಯಸ್ಸು ದಾಟಿದ ಮೇಲೆ ಹೊಸತರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುವುದಿಲ್ಲ.

ಆದರೆ, ಅನಂತಮೂರ್ತಿ ಅವರು ಹಾಗಲ್ಲ. ನಾಟಕ, ಸಿನಿಮಾ, ಚಿತ್ರಕಲಾ ಪ್ರದರ್ಶನಕ್ಕೆ ಕರೆದರೂ ಬರುತ್ತಿದ್ದರು. ಜಾಥಾ ಹೋಗೋಣ ಎಂದು ಕರೆದರೆ ಬರುತ್ತಿದ್ದರು. ಧರಣಿ ಕೂರಲು ಬರು­ತ್ತಿದ್ದರು. ಪರಿಸರ, ರಾಜಕೀಯ ವಿಷಯ­ಗಳಾದರೂ ಸಿದ್ಧರಾಗಿ­ರು­ತ್ತಿದ್ದರು. ಎಲ್ಲಾ ಥರದ ವಾಗ್ವಾದ­ಗಳಿಗೆ, ಜಂಜಾಟಗಳಿಗೆ ತೆರೆದುಕೊ­ಳ್ಳುತ್ತಿದ್ದರಲ್ಲ, ಅಂಥವರು ಬಹಳ ಅಪರೂಪ.

ಅವರು ಇತ್ತೀಚೆಗೆ ಕೋಮಾಕ್ಕೆ ಹೋಗಿ ಚೇತರಿಸಿಕೊಂಡಿದ್ದಾಗ ಅವರನ್ನು ನೋಡಲು ಹೋಗಿದ್ದೆ. ‘ಕೋಮಾದಲ್ಲಿ ಇದ್ದಾಗ ವಿಶೇಷವಾದದ್ದೇನೋ ಹೊಳೆ­ಯಿತು. ಗಾಂಧಿಗೂ ಚೀನಾದ ದಾವೊಯಿಸಂ ಸಿದ್ಧಾಂತಕ್ಕೂ ಹತ್ತಿರದ ಸಂಬಂಧ ಇದೆ ನೋಡು’ ಎಂದು ಹರಟಿದರು. ಕೋಮಾದಲ್ಲಿದ್ದಾಗ ಆರೋಗ್ಯ ಹೀಗಾಯಿತು ಎಂದು ಹೇಳುವವರೇ ಹೆಚ್ಚು. ಆದರೆ ಅವರು ಮನಸು ಅಲ್ಲಿಯೂ ಚಿಂತನೆಯಲ್ಲಿ ತೊಡಗಿತ್ತು. ಗುರುವಾರ ರಾತ್ರಿಯೂ ಸ್ನೇಹಿತರ ಜತೆ ದೇಶ ಹೇಗೆ ಆಗಬೇಕು, ಯಾವ ರೀತಿ ಸರ್ಕಾರ ಇರಬೇಕು ಎಂದು ಮಾತನಾಡುತ್ತಿದ್ದರಂತೆ. ನನ್ನ ಬದುಕಿನ ಬಹು­ದೊಡ್ಡ ಪ್ರೇರಣಾ ಶಕ್ತಿ ಅನಂತಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT