ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್ನು ಹಿಡಿವ ವಿದ್ಯಾರ್ಥಿನಿಯರ ಕೈಯಲ್ಲಿ ಪೊರಕೆ, ಸಲಾಕೆ!

ಬಲ್ಮಠ ಶಾಲೆ, ಕಾಲೇಜಿನಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ
Last Updated 2 ಅಕ್ಟೋಬರ್ 2014, 9:04 IST
ಅಕ್ಷರ ಗಾತ್ರ

ಮಂಗಳೂರು:  ನಿತ್ಯವೂ ಕೈಯಲ್ಲಿ ಪೆನ್ನು, ಪುಸ್ತಕ ಹಿಡಿದುಕೊಂಡು ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರು, ಇಂದು ಅಕ್ಷರಶಃ ಸ್ವಚ್ಛತೆಯ ರಾಯಭಾರಿಗಳಂತೆ ಗೋಚರಿಸಿ­ದರು. ಪೆನ್ನು ಹಿಡಿಯುವ ಕೈಯಲ್ಲಿ ಪೊರಕೆ ಹಿಡಿದು ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಹಾಳೆ, ಮರದ ಒಣಗಿದ ಎಲೆಗಳನ್ನು ಗೂಡಿಸಿ ಗುಡ್ಡೆ ಹಾಕಿದರೆ. ಕೆಲವರು ಸಂಗ್ರಹ­ವಾದ ಕಸವನ್ನು ಬುಟ್ಟಿಗಳಲ್ಲಿ ತುಂಬಿ ಹೊರ­ಗಡೆ ಸಾಗಿಸಿದರು.

ಕೆಲ ವಿದ್ಯಾರ್ಥಿ­ನಿಯರು ಸಲಾಕೆಗಳನ್ನು ಹಿಡಿದು ಮಣ್ಣಿನ ಗುಡ್ಡೆಗಳನ್ನು ನೆಲಸಮಗೊಳಿಸಿದರು. ಇನ್ನೂ ಕೆಲವರು ತಗ್ಗುಗಳನ್ನು ಮುಚ್ಚಿ ಸಮತಟ್ಟು­ಗೊಳಿಸಿದರು.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಆಂದೋ­ಲನದ ಹಿನ್ನೆಲೆಯಲ್ಲಿ ಬುಧವಾರ ನಗರದ ಬಲ್ಮಠ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಡಿಇಡಿ ಕಾಲೇಜಿನ ಆವರಣದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು, ಅಧ್ಯಾಪಕರು ಎರಡು ಗಂಟೆಗಳ ಕಾಲ ನಡೆಸಿದ ಶ್ರಮದಾನದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

ಹೌದು, ಮನೆಯಲ್ಲಿ ಸಣ್ಣ ಪುಟ್ಟ ಕೆಲಸವನ್ನೂ ಮಾಡದ ಬಹಳಷ್ಟು ವಿದ್ಯಾ­ರ್ಥಿನಿ­ಯರು, ಸ್ವಚ್ಛತಾ ಆಂದೋಲನ­ದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರಲ್ಲದೇ, ಯಾವು­ದಕ್ಕೂ ಹಿಂದೆ ಮುಂದೆ ನೋಡದೇ ಶಾಲಾ ಆವರಣದಲ್ಲಿ ಬಿದ್ದ ಕಸ ಕಡ್ಡಿಗಳನ್ನು, ಗಿಡ­ಗಂಟಿಗಳ ಟೊಂಗೆಗಳನ್ನು ಹೊತ್ತು ಬೇರೆಡೆ ಸಾಗಿಸಿದರು. ಶಿಕ್ಷಕರು, ಪ್ರಾಧ್ಯಾಪಕ­ರು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ಮಾಡು­­­­ವು­ದರ ಜತೆಗೆ ತಾವು ಕೂಡಾ ಅವರ ಜತೆ ಸ್ವಚ್ಛತಾ ಕೆಲಸದಲ್ಲಿ ನಿರತರಾಗಿದ್ದು ವಿಶೇಷವಾಗಿತ್ತು.

ಸುಮಾರು ಎರಡು ಗಂಟೆಗಳ ಕಾಲ ನಡೆಸಿದ ಸ್ವಚ್ಛತಾ ಆಂದೋಲನದಲ್ಲಿ ವಿದ್ಯಾ­ರ್ಥಿನಿ­ಯರು ಹಾಗೂ ಶಿಕ್ಷಕರು ಇಡೀ ಶಾಲಾ ಆವರಣವನ್ನು ಸ್ವಚ್ಛ ಹಾಗೂ ಸಮತಟ್ಟು­ಗೊಳಿಸಿ ನಳನಳಿಸುವಂತೆ ಮಾಡಿದರು.

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯ ಕ್ಯಾ. ಗಣೇಶ ಕಾರ್ಣಿಕ್‌ ವಿದ್ಯಾರ್ಥಿನಿಯರಿಗೆ ಕಸ ಗುಡಿಸುವ ಪೊರಕೆ, ಬುಟ್ಟಿಗಳನ್ನು ನೀಡುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು. ನಂತರ ಕ್ಯಾ. ಗಣೇಶ ಕಾರ್ಣಿಕ್‌ ಅವರು ಮಾತನಾಡಿ, ‘ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಿದ್ದರೆ, ಮಾನಸಿಕವಾಗಿ ನೆಮ್ಮದಿ­ಯಿಂದ ಇರುವುದರ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾ­ಗುತ್ತದೆ. ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನ ಮಾಡಿ ಮುಗಿಸುವ ಕೆಲಸವಲ್ಲ.

ಅದು ದಿನನಿತ್ಯವೂ ನಡೆಯುತ್ತಿರ­ಬೇಕು. ಕೇಂದ್ರ ಸರ್ಕಾರ ಸ್ವಚ್ಛತಾ ಆಂದೋಲನ ಮಾಡಲು ಹೇಳಿದೆ ಎಂದು ಅದನ್ನು ಕೇವಲ ಸಾಂಕೇ­ತಿಕವಾಗಿ ಮಾಡದೇ, ಪ್ರತಿ ದಿನದ ಚಟು­ವಟಿಕೆಯಲ್ಲಿ ಸ್ವಚ್ಛತೆಗೂ ಸ್ವಲ್ಪ ಸಮಯ ತೆಗೆದಿಟ್ಟಾಗ ಮಾತ್ರ ಈ ಆಂದೋಲನಕ್ಕೆ ನಿಜವಾದ ಅರ್ಥ ಬರುತ್ತದೆ. ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿರು­ವುದು ನಿರ್ಮಲ ಭಾರತ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ತೇಜೋಮಯ, ಪ್ರದೀಪಕುಮಾರ್‌ ಕಲ್ಕೂರ, ನೇವಲ್‌ ಎನ್‌ಸಿಸಿಯ ಸಿಇಓ ಕ್ಯಾ.ಬೆಳ್ಳಿಯಪ್ಪ, ಪ್ರೊ. ಎವಲಿನ್‌ ಬೆನ್ನಿಸ್‌, ಎನ್‌.ವಿ.ಪೌಲ್‌, ಆಶಾಲತಾ ಸುವರ್ಣ, ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.­ರಮಾನಾಥ ರೈ, ಪ್ರೌಢಶಾಲೆ ಮುಖ್ಯೋ­ಪಾಧ್ಯಾಯ ಅಬ್ದುಲ್‌ ಖಾದರ್‌ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT