ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಪರ್‌ವೇಟ್‌ ಸಮಾಚಾರ

ಅರಿವು ಹರಿವು
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಮೇಜಿನ ಮೇಲೆ ಇಟ್ಟ ಕಾಗದ ಪತ್ರಗಳು ಗಾಳಿಗೆ ಚೆಲ್ಲಾಪಿಲ್ಲಿಯಾಗುವುದನ್ನು ತಡೆಯಲು ಇಡುವ ‘ಪೇಪರ್‌ವೇಟ್‌’, ಶುದ್ಧ ಕನ್ನಡದಲ್ಲಿ ಹೇಳುವುದಾದರೆ ‘ಕಾಗದ ಭಾರದಾನಿ’ಯ ಇತಿಹಾಸದ ಬಗ್ಗೆ ತಿಳಿದವರು ಕಡಿಮೆ. ಅರೆ, ಅದರಲ್ಲೇನಿದೆ ಮಹಾ? ಎಂದು ಅಂದುಕೊಳ್ಳಬೇಡಿ. ಇದರ ಸಮಾಚಾರ ಕೌತುಕದ ವಿಚಾರ! ಓದಿ ನೋಡಿ.

ಪೇಪರ್‌ವೇಟ್‌, ಮೊದಲು ಬಳಕೆಯಾಗಿದ್ದು ಈ ಉದ್ದೇಶಕ್ಕಲ್ಲ (ಕಾಗದ ಗಾಳಿಗೆ ಹಾರುವುದನ್ನು ತಪ್ಪಿಸಲು) ಎಂಬುದನ್ನು ನೀವು ನಂಬಬೇಕು. ಆರಂಭದಲ್ಲಿ ಅದೊಂದು ಅಲಂಕಾರಿಕ ವಸ್ತು. ಗೃಹ, ಕಚೇರಿಗಳ ಅಲಂಕಾರದಲ್ಲಿ ಇದು ವಹಿಸುತ್ತಿದ್ದ ಪಾತ್ರ ಹಿರಿದು. ಬರವಣಿಗೆ ಜನಪ್ರಿಯಗೊಂಡಾಗ ಪೇಪರ್‌ವೇಟ್‌ಗಳ ಬಳಕೆ ಫ್ಯಾಷನ್‌ ಆಗಿ ಬದಲಾಯಿತು. ಈಗ ಅದು ಅಲಂಕಾರದ ವಸ್ತುವಿನ ಜೊತೆಗೆ ನಮ್ಮ ಜೀವನದ, ಅದರಲ್ಲೂ ವೃತ್ತಿ ಜೀವನದ ಭಾಗವಾಗಿ ಹೋಗಿದೆ.

ಈ ಅಂಕಣದಲ್ಲಿ ಈ ಹಿಂದೆ ಪ್ರಸ್ತಾಪಿಸಲಾಗಿದ್ದ ವಸ್ತುಗಳಿಗೆ ಹೋಲಿಸಿದರೆ ಪೇಪರ್‌ವೇಟ್‌ನ ಇತಿಹಾಸ ತೀರಾ ಇತ್ತೀಚಿನದು. ಪೇಪರ್‌ವೇಟ್‌ ಆವಿಷ್ಕಾರಗೊಂಡ ನಿಖರ ಸಮಯದ ಬಗ್ಗೆ ಗೊಂದಲವಿದೆ. ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿ ಹೇಳುವುದಾದರೆ ಇದು 175 ವರ್ಷಗಳ ಹಳೆಯ ವಸ್ತು. 19ನೇ ಶತಮಾನದಲ್ಲಿ ಅಂದರೆ, 1840ರ ದಶಕದಲ್ಲಿ ಯೂರೋಪ್‌ನಲ್ಲಿ ಮೊತ್ತ ಮೊದಲ ಬಾರಿಗೆ ಗಾಜಿನ ಪೇಪರ್‌ವೇಟ್‌ನ ಬಳಕೆ ಚಾಲ್ತಿಗೆ ಬಂತು. ಮೊದಲ ಪೇಪರ್‌ವೇಟ್‌ ಅನ್ನು ರೂಪಿಸಿದ ಕೀರ್ತಿ ಇಟಲಿಯ ಪೀಟ್ರೊ ಬಿಗಾಗ್ಲಿಯಾ ಅವರಿಗೆ ಸಲ್ಲುತ್ತದೆ. ವೃತ್ತಿಯಲ್ಲಿ ಗಾಜು ತಯಾರಕರಾಗಿದ್ದ ಬಿಗಾಗ್ಲಿಯಾ, 1845ರಲ್ಲಿ ಹೂವುಗಳ ವಿನ್ಯಾಸ ಹೊಂದಿದ್ದ ಗಾಜಿನ ಪೇಪರ್‌ವೇಟ್‌ ಅನ್ನು ವಿಯೆನ್ನಾದ ಕೈಗಾರಿಕಾ ಮೇಳದಲ್ಲಿ ಪ್ರದರ್ಶಿಸಿದ್ದರು.

ನಮ್ಮಲ್ಲೂ ಹಲವು ಪೇಪರ್‌ವೇಟ್‌ಗಳು!

ಜಗತ್ತಿನ ಕತೆ ಬಿಡಿ. ನಾವೂ ಪೇಪರ್‌ವೇಟ್‌ಗಳನ್ನು ಬಳಸುತ್ತೇವೆ. ಎಲ್ಲರೂ ಇವುಗಳನ್ನು ಪೇಟೆಯಿಂದ ಖರೀದಿಸುತ್ತಾರೆ ಎಂದಲ್ಲ. ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳು ಹಳ್ಳಿಗಳಲ್ಲಿ ಅಥವಾ ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಕಾಗದ ಭಾರದಾನಿಗಳಾಗಿ ಬದಲಾಗುತ್ತವೆ. ಉದಾಹರಣೆಗೆ, ನದಿಗಳಲ್ಲಿ ಸಿಗುವ ನಯವಾದ ಕಲ್ಲುಗಳು (ಬಿಳಿ ಅಥವಾ ಕೆಂಬಣ್ಣದ್ದು) ಎಷ್ಟೋ ಮನೆಗಳ ಮೇಜು, ಟೀಪಾಯಿಗಳಲ್ಲಿ ಪೇಪರ್‌ವೇಟ್‌ಗಳಾಗಿರುವುದನ್ನು ಗಮನಿಸಿರಬಹುದು. ಸಮುದ್ರದಲ್ಲಿ ದೊರೆಯುವ ಕಪ್ಪೆ ಚಿಪ್ಪುಗಳನ್ನು (ಅದೇ ರೀತಿ, ಸಣ್ಣ ಶಂಖ) ಈ ಉದ್ದೇಶಕ್ಕೆ ಬಳಸುವವರಿದ್ದಾರೆ. ಇನ್ನೂ ಕೆಲವು ಮನೆಗಳಲ್ಲಿ ಕಬ್ಬಿಣದ ತುಂಡು, ಮರದ ತುಂಡುಗಳು ಕಾಗದ ಭಾರದಾನಿ ಆಗುವುದುಂಟು. ಮತ್ತೂ ಕೆಲವೆಡೆ ಟಿ.ವಿ ರಿಮೋಟ್‌ಗಳೂ ಪೇಪರ್‌ವೇಟ್‌ಗಳೇ!

19ನೇ ಶತಮಾನದ ಮಧ್ಯದ ಅವಧಿಯು ಗಾಜು ಉದ್ದಿಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಅಂದಿನ ಜನರು ಗಾಜನ್ನು ಅಲಂಕಾರಿಕ ವಸ್ತುವನ್ನಾಗಿ ಪರಿಗಣಿಸುತ್ತಿದ್ದರು. ಹಾಗಾಗಿ ಗಾಜಿನಿಂದ ಮಾಡಿದ ಪೇಪರ್‌ವೇಟ್‌ ಕೂಡ ಅಲಂಕಾರಿಕ ವಸ್ತುವಾಗಿತ್ತು. ಹೂವುಗಳ ವಿನ್ಯಾಸ ಹೊಂದಿದ್ದ ಕಾಗದ ಭಾರದಾನಿಗಳು ಆಕರ್ಷಕವಾಗಿರುತ್ತಿದ್ದವು. ವಿಯೆನ್ನಾದಲ್ಲಿ ನಡೆದ ಮೇಳದಲ್ಲಿ ಪೇಪರ್‌ವೇಟ್‌ ಪ್ರದರ್ಶನಗೊಂಡ ನಂತರ ಇವುಗಳ ತಯಾರಿಕೆ ಇತರ ರಾಷ್ಟ್ರಗಳಿಗೂ ಪಸರಿಸಿತು. ಆದರೂ, ಫ್ರಾನ್ಸ್‌ನಲ್ಲಿ ತಯಾರಾಗುತ್ತಿದ್ದ ಪೇಪರ್‌ವೇಟ್‌ಗಳಿಗೆ ಹೆಚ್ಚು ಬೇಡಿಕೆ ಇತ್ತು. ಫ್ರಾನ್ಸ್‌ನಲ್ಲಿ ಇಳಿಗತಿಯಲ್ಲಿ ಸಾಗುತ್ತಿದ್ದ ಗಾಜು ಉದ್ಯಮಕ್ಕೆ ಚೈತನ್ಯ ತುಂಬಲು ಕೆಲವು ಕಂಪೆನಿಗಳು ಪೇಪರ್‌ವೇಟ್‌ಗಳ ಮೊರೆ ಹೋಗಿದ್ದವು ಎಂದರೆ ಇವುಗಳ ಪ್ರಸಿದ್ಧಿಯನ್ನು ಊಹಿಸಬಹುದು.

ಅಂದಹಾಗೆ, ಪೇಪರ್‌ವೇಟ್‌ಗಳು ಕೂಡ ಐಷಾರಾಮಿ ವಸ್ತುಗಳಾಗಿದ್ದವು. ಆದರೆ, ಇವುಗಳ ತಯಾರಿಕಾ ವೆಚ್ಚ ಕಡಿಮೆಯಾಗಿದ್ದರಿಂದ ಅಗ್ಗದ ದರದಲ್ಲಿ ಸಿಗುತ್ತಿದ್ದವು. 1850ರ ದಶಕದಲ್ಲಿ ವಲಸಿಗರಿಂದಾಗಿ ಅಮೆರಿಕದಲ್ಲೂ ಇವು ಜನಪ್ರಿಯಗೊಂಡವು. 19ನೇ ಶತಮಾನದ ಅಂತ್ಯದ ವೇಳೆಗೆ ಸಾಂಪ್ರದಾಯಿಕ ವಿನ್ಯಾಸದ ಪೇಪರ್‌ವೇಟ್‌ಗೆ ಪರ್ಯಾಯವಾಗಿ ವಿವಿಧ ಆಕಾರಗಳ, ಗಾತ್ರದ ಪೇಪರ್‌ವೇಟ್‌ಗಳನ್ನು ಕೆಲವು ಚಿತ್ರ ಕಲಾವಿದರು ರೂಪಿಸಿದರು.

ಪ್ರಸಿದ್ಧಿ ಹಿಂದೆ ಬರವಣಿಗೆಯ ‘ಕೈ’
ಕೇವಲ ಅಲಂಕಾರಿಕ ಉದ್ದೇಶಕ್ಕೆ ಬಳಸಲಾಗುತ್ತಿದ್ದ ಪೇಪರ್‌ವೇಟ್‌ಗಳು ಜನಪ್ರಿಯಗೊಂಡಿದ್ದು ಬರವಣಿಗೆಯಿಂದಾಗಿ ಎಂಬ ವಾದವನ್ನು ಕೆಲವರು ಮುಂದಿಡುತ್ತಾರೆ. 18ನೇ ಶತಮಾನದಲ್ಲಿ ಕೈ ಬರವಣಿಗೆ ಹೆಚ್ಚು ಚಾಲ್ತಿಯಲ್ಲಿತ್ತು. ಕಾಗದಗಳು ಚದುರಿಹೋಗುವ ಸಮಸ್ಯೆಗೆ ಪೇಪರ್‌ವೇಟ್‌ಗಳು ಪರಿಹಾರವಾಗಿದ್ದವು. ಈ ಉದ್ದೇಶಕ್ಕಾಗಿ ಇವುಗಳನ್ನು ಜನರು ಹೆಚ್ಚಾಗಿ ಬಳಸುತ್ತಿದ್ದರು ಎಂಬ ವಾದವೂ ಇದೆ.

20ನೇ ಶತಮಾನದ ಆರಂಭದಲ್ಲಿ ಗಾಜು ಮಾತ್ರವಲ್ಲದೇ ಲೋಹ, ಅಮೃತಶಿಲೆ ಸೇರಿದಂತೆ ಇತರ ವಸ್ತುಗಳಿಂದ ಮಾಡಿದ ಆಧುನಿಕ ಪೇಪರ್‌ವೇಟ್‌ಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟವು. 1960ರ ದಶಕದಲ್ಲಿ ಇವುಗಳ ತಯಾರಿಕಾ ಪ್ರಕ್ರಿಯೆ ಫ್ಯಾಕ್ಟರಿಗಳಿಂದ ಖ್ಯಾತ ಚಿತ್ರಕಾರರ ಸ್ಟುಡಿಯೊಗಳಿಗೆ ಸ್ಥಳಾಂತರಗೊಂಡಿತು. ಚಿತ್ರಕಾರರು ಇನ್ನಷ್ಟು ಆಕರ್ಷಕ ಹಾಗೂ ಸೂಕ್ಷ್ಮ ಕುಸುರಿಗಳನ್ನೊಳಗೊಂಡ ಪೇಪರ್‌ವೇಟ್‌ಗಳನ್ನು ರೂಪಿಸಲು ಆರಂಭಿಸಿದರು. ಈಗಂತೂ ಮಾರುಕಟ್ಟೆಯಲ್ಲಿ ಊಹೆಗೂ ನಿಲುಕದಷ್ಟು ಬಗೆಯ ಕಾಗದ ಭಾರದಾನಿಗಳಿವೆ. ಬಡವರಿಂದ ಹಿಡಿದು ಸಿರಿವಂತರು ಕೊಂಡುಕೊಳ್ಳಬಹುದಾದ ಪೇಪರ್‌ವೇಟ್‌ಗಳಿವೆ.

ಮರೆತಿದ್ದೆ. ಅಂದಿನ ಜನರು ಪೇಪರ್‌ವೇಟ್‌ಗಳನ್ನು ಆತ್ಮೀಯರಿಗೆ ಉಡುಗೊರೆ ನೀಡುತ್ತಿದ್ದರಂತೆ. ಈಗಲೂ ಈ ಸಂಪ್ರದಾಯ ಮುಂದುವರಿದಿದೆ. ಪೇಪರ್‌ವೇಟ್‌ಗಳ ಸಂಗ್ರಹವನ್ನು ಹವ್ಯಾಸವನ್ನಾಗಿ ಮಾಡಿಕೊಂಡ ಕುತೂಹಲಿಗಳೂ ಇದ್ದಾರೆ. ಅಷ್ಟೇ ಏಕೆ. ಬ್ರಿಟನ್‌ ಕೌಂಟಿ ಡೊವನ್‌ ಸೇರಿದಂತೆ ಹಲವು ಕಡೆಗಳಲ್ಲಿ ಇವುಗಳ ಸಂಗ್ರಹಾಲಯಗಳೂ ಇವೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT