ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರಿಗೆ ಧೈರ್ಯ ತುಂಬಿದ ಸಚಿವ ಪಾಟೀಲ

Last Updated 22 ಆಗಸ್ಟ್ 2014, 5:50 IST
ಅಕ್ಷರ ಗಾತ್ರ

ವಿಜಾಪುರ: ಆತಂಕಕ್ಕೀಡಾಗಬೇಡಿ. ನಿಮ್ಮೊಟ್ಟಿಗೆ ನಾವಿದ್ದೇವೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು... ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪೋಷಕರಿಗೆ ಧೈರ್ಯ ತುಂಬಿದರು.

ಈ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮ­ವಾಗಿ ನಿಭಾಯಿಸುವುದು ಎಲ್ಲರ ಜವಾಬ್ದಾರಿ­ಯಾಗಿದೆ. ಸಾಮಾಜಿಕ ಕಾಳಜಿ, ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಸಂಯಮದಿಂದ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿ­ಸಬೇಕು ಎಂದು ಎಲ್ಲರಲ್ಲೂ ಮನವಿ ಮಾಡಿದರು.

ಗುರುವಾರ ಮಧ್ಯಾಹ್ನ ಆಲಮೇಲದ ವಸತಿ ಶಾಲೆಗೆ ಭೇಟಿ ನೀಡಿದ ಸಚಿವ ಎಂ.ಬಿ.ಪಾಟೀಲ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಪರಿಶೀಲನೆ ನಡೆಸಿದರು. ನಂತರ ವಸತಿ ನಿಲಯದ ವಿದ್ಯಾರ್ಥಿನಿಗಳ ಕೊಠಡಿಗೆ ತೆರಳಿದ ಸಚಿವರು ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಯಾರಿಗೂ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ.

ವಿದ್ಯಾರ್ಥಿಗಳ ಹೇಳಿಕೆ ಪಡೆದ ಸಚಿವರು ಬಳಿಕ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು. ನಂತರ ವಸತಿ ನಿಲಯದ ಆವರಣದಲ್ಲಿದ್ದ ಪೋಷಕರ ಜತೆ ಸಮಾಲೋಚನೆ ನಡೆಸಿ ಅವರ ದುಃಖ ಕೇಳಿದರು. ಸಾಂತ್ವಾನ ಹೇಳಿದರು. ಪೋಷಕರು ಮಾಡಿದ ಮನವಿಗಳನ್ನು ಪರಿಶೀಲಿಸುವ ಭರವಸೆ ನೀಡಿದರು.

ಇಡೀ ಪ್ರಕರಣದ ಚಿತ್ರಣ ಪಡೆದ ಸಚಿವರು ಮಕ್ಕಳ ಸುರಕ್ಷ­ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ­ದರು. ಇದೇ ವೇಳೆ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಜತೆ ಮೊಬೈಲ್‌ನಲ್ಲಿ ಘಟನೆ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ಬಳಿಕ ಮಕ್ಕಳ ಪಾಲಕರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಯಾವುದೇ ಭಯ ಪಡಬೇಡಿ ತಮ್ಮ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾ­ಗುತ್ತದೆ ಎಂದು ಭರವಸೆ ನೀಡಿದರು.

ಮನವೊಲಿಕೆ ಯತ್ನ: ಬುಧವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಗುರುವಾರವೂ ತಮ್ಮ ತಂಡದೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ವಸತಿ ಶಾಲೆ ತೊರೆಯುತ್ತಿರುವ ಪೋಷಕರ ಮನವೊಲಿಸಲು ನಿರಂತರ ಸಭೆ ನಡೆಸಿದರು. ಅಧಿಕಾರಿ­ಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತಿದ್ದರು.

ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಉಮೇಶ ಕೋಳಕೂರ, ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಶಿವಕುಮಾರ, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕ್ರೈಸ್ಟ್‌ ಸಂಸ್ಥೆಯ ಜಂಟಿ ನಿರ್ದೇಶಕ ಷಣ್ಮುಕಸ್ವಾಮಿ ಮತ್ತಿತರರು ಉಪಸ್ಥಿತರಿದ್ದು, ಪರಿಸ್ಥಿತಿ ನಿಯಂತ್ರಿಸಿದರು.

ಭೇಟಿ ನೀಡದ ಸಮಿತಿ
ದುರ್ಘಟನೆ ಬೆಳಕಿಗೆ ಬಂದು ಎರಡು ದಿನ ಕಳೆದರೂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರು ಇನ್ನೂ ವಸತಿ ಶಾಲೆಗೆ ಭೇಟಿ ನೀಡದಿರುವುದು ಪೋಷಕರಲ್ಲಿ ಸಾಕಷ್ಟು ಆಕ್ರೋಶ ಮೂಡಿಸಿದೆ.

ಆಂಜನೇಯ ಭೇಟಿ ಇಂದು
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್.ಆಂಜನೇಯ ಶುಕ್ರವಾರ ಮಧ್ಯಾಹ್ನ ವಸತಿ ಶಾಲೆಗೆ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT