ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ಘಟನೆ ಮಾಹಿತಿ ಸಂಗ್ರಹಣೆ

ಯಶಸ್ಸಿನ ಚಿತ್ತ
Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಅಧ್ಯಯನ ಬಹಳ ಮುಖ್ಯವಾದುದು. ನಾಗರಿಕ ಸೇವಾ ಪರೀಕ್ಷೆಗಳಲ್ಲಂತು ದಿನನಿತ್ಯದ ಘಟನೆಗಳ ಅಧ್ಯಯನ ಒಂದು ಮಹತ್ವದ ಭಾಗ. ಹಲವು ಬಾರಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಸ್ಪರ್ಧಾರ್ಥಿಗಳ ಪ್ರಚಲಿತ ಘಟನೆಗಳನ್ನು ಯಾವ ರೀತಿ ಆಳವಾಗಿ ಅಧ್ಯಯನ ಮಾಡಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ.

ಇತ್ತೀಚಿನ ವರ್ಷಗಳ ನಾಗರಿಕ ಸೇವಾ ಪರೀಕ್ಷೆಗಳ ಅಂದರೆ ಕೆ.ಎ.ಎಸ್ ಹಾಗೂ ಐ.ಎ.ಎಸ್ ಪರೀಕ್ಷೆಗಳ ಪ್ರಶ್ನೆಗಳನ್ನು ಗಮನಿಸಿದರೆ ಮುಖ್ಯವಾಗಿ ಪೂರ್ವಭಾವಿ ಪರೀಕ್ಷೆಯಲ್ಲಿ ಶೇ 25.40 ರವರೆಗೆ ಪ್ರಶ್ನೆಗಳು ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಾಗಿದ್ದರೆ ಮುಖ್ಯ ಪರೀಕ್ಷೆಗಳಲ್ಲಿ ಸಾಮಾನ್ಯ ಅಧ್ಯಯನದ ಪ್ರಶ್ನೆ ಪತ್ರಿಕೆಗಳಲ್ಲಿ ಸುಮಾರು ಶೇ 70 ರಷ್ಟು ಪ್ರಶ್ನೆಗಳು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ್ದೇ ಆಗಿರುತ್ತವೆ. ಅದರಲ್ಲೂ ಮುಖ್ಯವಾಗಿ ಅರ್ಥಶಾಸ್ತ್ರ, ರಾಜನೀತಿ ಹಾಗೂ ಅಂತರರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಾಗಿರುತ್ತವೆ.

ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳ ಮನಸ್ಸಲ್ಲಿ ಕಾಡುವ ಪ್ರಶ್ನೆಗಳೆಂದರೆ 1) ಪ್ರಚಲಿತ ಘಟನೆಗಳೆಂದರೆ ಏನು? ಯಾವ ಕಾಲದಿಂದ ನಡೆಯುವ ಘಟನೆಗಳನ್ನು ಪ್ರಚಲಿತ ಘಟನೆಗಳೆನ್ನುತ್ತಾರೆ? ಪರೀಕ್ಷೆ ದಿನಾಂಕದಿಂದ ಒಂದು ವರ್ಷ ಮುಂದೆ ಜರುಗಿದ ಘಟನೆಗಳೆ? ಅಥವಾ ಒಂದು ಎರಡು ವರ್ಷಗಳಲ್ಲಿ ಜರುಗಿದ ಘಟನೆಗಳೆ? ಯಾವ ದಿನಪತ್ರಿಕೆಯನ್ನು ಓದಬೇಕು? ಯಾವ ಘಟನೆಗಳಿಗೆ ಒತ್ತು ಕೊಡಬೇಕು? ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನು ಯಾವ ರೀತಿ ಹುಡಕಬೇಕು, ಎಷ್ಟು ಸಂಗ್ರಹಿಸಬೇಕು ಇತ್ಯಾದಿ ವಿಷಯಗಳ ಬಗ್ಗೆ ಗೊಂದಲವಿರುತ್ತದೆ.

ಸಾಮಾನ್ಯವಾಗಿ ಪ್ರಚಲಿತ ಘಟನೆಗಳಿಗೆ ಯಾವುದೇ ಕಾಲ-ಮಿತಿ ಇರುವಷ್ಟು ಹಾಗೂ ನಿರ್ದಿಷ್ಟ ಸಮಯದ ಮಿತಿ ಇರುವುದಿಲ್ಲ ಆದರೆ ನಾಗರಿಕ ಸೇವಾ ಪರೀಕ್ಷೆಗಳು ಅದರಲ್ಲೂ ವಿಶೇಷವಾಗಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಗಳು ಪ್ರತಿ ವರ್ಷ ನಡೆಯುವುದರಿಂದ ಈ ಸಾಲಿನ ಮುಖ್ಯ ಪರೀಕ್ಷೆ ಮುಗಿದ ದಿನದಿಂದ ಮುಂದಿನ ವರ್ಷದ ಪೂರ್ವಭಾವಿ ಪರೀಕ್ಷೆಗೆ ಕೆಲವೇ ದಿನಗಳ ಮುಂದೆ ನಡೆಯುವ ಘಟನೆಗಳಿಗೆ ಪ್ರಚಲಿತ ಘಟನೆಗಳಾಗಿ ಭಾವಿಸಬಹುದು ಹಾಗೂ ಈ ವರ್ಷದ ಮುಖ್ಯ ಪರೀಕ್ಷೆಯ ಮುಕ್ತಾಯದಿಂದ ಮುಂದಿನ ವರ್ಷದ ಮುಖ್ಯ ಪರೀಕ್ಷೆಗಳು ಪ್ರಾರಂಭದವರೆಗಿನ ಒಂದು ವರ್ಷದ ಘಟನೆಗಳನ್ನು ಪ್ರಚಲಿತ ಘಟನೆಗಳನ್ನಾಗಿ ತೆಗೆದುಕೊಳ್ಳಬಹುದು. ಮುಖ್ಯವಾಗಿ ನಾವು ಪ್ರಚಲಿತ ಘಟನೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು ಅವೆಂದರೆ ರಾಜ್ಯಕ್ಕೆ ಸಂಬಂಧಿಸಿದ ಘಟನೆಗಳು ರಾಷ್ಟ್ರಕ್ಕೆ ಸಂಬಂಧಿಸಿದ ಘಟನೆಗಳು ಹಾಗೂ ಅಂತರಾಷ್ಟ್ರೀಯ ಘಟನೆಗಳು ಕೆ.ಎ.ಎಸ್ ಪರೀಕ್ಷೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಚಲಿತ ಘಟನೆಗಳಿಗೆ ಹೆಚ್ಚು ಒತ್ತು ಕೊಟ್ಟರೆ ಐ.ಎ.ಎಸ್ ಪರೀಕ್ಷೆಗಳಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಘಟನೆಗಳಿಗೆ ಹೆಚ್ಚು ಒತ್ತು ಕೊಡುವುದು ಒಳಿತು. ಇದಲ್ಲದೆ ಪ್ರಶ್ನೆಗಳು ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಘಟನೆಗಳಿಗೆ ಪ್ರತ್ಯೇಕ ದೃಷ್ಟಿ ಹರಿಸುವುದು ಒಳಿತು.

ಕೆಲವು ಘಟನೆಗಳು ಆ ದಿನದ ಸುದ್ದಿಗಳಾದರೆ ಇನ್ನು ಕೆಲವು ದಿನಂಪ್ರತಿ ಚಾಲ್ತಿಯಲ್ಲಿರುವ ಸುದ್ದಿಗಳಾಗಿರುತ್ತವೆ. ಉದಾ: ಈ ವರ್ಷದ ‘ವ್ಯಾಸ ಸಮ್ಮಾನ’ ಪ್ರಶಸ್ತಿಯನ್ನು ಕಮಲ್ ರೆಶೋರ್ ಗೋಯಂಕಾ ಅವರಿಗೆ ನೀಡಲಾಗಿದೆ ಎಂಬುದು ಆ ದಿನದ ಪ್ರಚಲಿತ ಘಟನೆಯಾದರೆ ಪೆಟ್ರೋಲಿಯಂ ಮಂತ್ರಾಲಯದಲ್ಲಿನ ದಾಖಲೆಗಳ ಸೋರಿಕೆ ಹಗರಣದ ಸುದ್ದಿಯು ದಿನಂಪ್ರತಿ
ಚಾಲ್ತಿಯಲ್ಲಿರುವ ಸುದ್ದಿಯಾಗುತ್ತದೆ.



ದಿನಪತ್ರಿಕೆಗಳು, ವಾರಪತ್ರಿಕೆಗಳು ಹಾಗೂ ಮಾಸ ಪತ್ರಿಕೆಗಳನ್ನು ಪ್ರಚಲಿತ ಘಟನೆಗಳನ್ನು ಓದುವ ಆಕರಗಳೆಂದೇ ಪರಿಗಣಿಸಬಹುದು. ಕೆ.ಎ.ಎಸ್ ಅಧ್ಯಯನಕ್ಕೆ ಸಂಬಂಧಿಸಿದಂತೆ ಮಾತೃಭಾಷೆಯ ಒಂದು ಉತ್ತಮ ದಿನಪತ್ರಿಕೆಯನ್ನು ಓದುವುದು ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ ದಿನಪತ್ರಿಕೆಗಳಲ್ಲಿ ಬರುವ ವಿಶೇಷ ಲೇಖನಗಳನ್ನು ಗಮನಿಸುತ್ತಿರಬೇಕು. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಉತ್ತಮ ಮಾಸಪತ್ರಿಕೆಯನ್ನು ಓದುವುದು ಅಭ್ಯಾಸ ಮಾಡಿಕೊಂಡಿರಬೇಕು. ಇಂಗ್ಲಿಷ್‌ ಮಾಧ್ಯಮದವರಾದರೆ ‘ಸಿವಿಲ್‌ ಸರ್ವಿಸ್ ಕ್ರೊಮಿನಲ್ ವಿಜಾರ್ಡ’, ‘ಪ್ರತಿಯೋಗಿತ ದರ್ಪಣ’ ಅಥವಾ ‘ಸಿವಿಲ್‌ಸರ್ವಿಸ್ ಟೈಮ್ಸ್’ ಗಳಲ್ಲಿ ಯಾವುದಾದರೂ ಒಂದನ್ನು ಓದುವುದು ಹಾಗೂ ಭಾರತ ಸರ್ಕಾರ ಹೊರಡಿಸುತ್ತಿರುವ ‘ಯೋಜನಾ’ ಹಾಗೂ ‘ಕುರುಕ್ಷೇತ್ರ’ ಪತ್ರಿಕೆಗಳನ್ನು ತಪ್ಪದೆ ಓದುವುದ ಒಳಿತು. ಯೋಜನಾದಂತಹ ಪತ್ರಿಕೆಗಳಲ್ಲಿ ಬರುವ ವಿಷಯವು ಪ್ರಬಂಧ ಪರೀಕ್ಷೆಗೆ ತುಂಬಾ ಸಹಕಾರಿಯಾಗುತ್ತದೆ. ಇದಲ್ಲದೆ ದೃಶ್ಯಮಾಧ್ಯಮಗಳಿಂದ ವಿಷಯ ಸಂಗ್ರಹಿಸುವುದಾದರೆ ಪ್ರೈಮ್ ಟೈಮ್ಸ್‌ಸುದ್ದಿಗಳನ್ನು ವೀಕ್ಷಿಸುವುದು ಹಾಗೂ ರಾಜ್ಯ ಸಭಾ ಮತ್ತು ಲೋಕಸಭಾದಂತಹ ಟಿ.ವಿ. ಚಾನೆಲ್‌ಗಳನ್ನು ವೀಕ್ಷಿಸುವುದು ಬಹಳ ಅವಶ್ಯಕ. ಅಂತರಾಷ್ಟ್ರೀಯ ಸುದ್ದಿಗಳಿಗಾಗಿ ಬಿ.ಬಿಸಿ, ಸಿ.ಎನ್.ಎನ್ ಹಾಗೂ ಅಲ್-ಜಜೀರಾದಂತಹ ಟಿ.ವಿ. ಚಾನೆಲ್‌ಗಳನ್ನು ನೋಡುವುದು ಅವಶ್ಯಕವಾಗಿರುತ್ತದೆ. ಇದಲ್ಲದೆ ಪ್ರತಿ ವರ್ಷ ಹೊರಬರುವ ‘ಇಂಡಿಯಾ ಇಯರ್ ಬುಕ್’ ಇಂಡಿಯನ್ ಎಕಾನಾಮಿಕ್ ಸರ್ವೇ, ಕರ್ನಾಟಕ ಎಕನಾಮಿಕ್ ಸರ್ವೇ, ಹಾಗೂ ಬಜೆಟ್ ಹಾಗೆ ಸಂಬಂಧಿಸಿದಂತೆ ಸುದ್ದಿಗಳು ಅತ್ಯವಶ್ಯವಾಗಿ ಓದಬೇಕು.

ಅಂತರ್ಜಾಲದಲ್ಲಿ ದಿನನಿತ್ಯದ ಘಟನೆಗಳನ್ನು ಹುಡುಕುವುದಾದರೆ GK Today, press trust of India , Wikipedia ದಂತಹ ತಾಣಗಳಿಂದ ಸುದ್ದಿ ಸಂಗ್ರಹಿಸುವುದು ಒಳಿತು. ಸರಕಾರದ ಅಧಿಕೃತ ವೆಬ್‌ಸೈಟ್‌ಗಳಿಂದ ದೊರಕಿದ ಮಾಹಿತಿಯು ನಿಷ್ಕೃಷ್ಟತೆಯಿಂದ ಕೂಡಿರುತ್ತದೆ.

ಇನ್ನು ಪ್ರಚಲಿತ ಘಟನೆಗಳ ಅಧ್ಯಯನ ಒಂದು ಕಲೆ ಅಂತ ಹೇಳಬಹುದು ದಿನನಿತ್ಯ ಚಾಲ್ತಿಯಲ್ಲಿರುವ ಸಾವಿರಾರು ಸುದ್ದಿಗಳಲ್ಲಿ ಯಾವುದನ್ನು ಓದುವುದು ಯಾವುದನ್ನು ಬಿಡುವುದು ಎಂಬ ಗೊಂದಲ ಬೀಳುವುದು ಸಹಜ. ಇದನ್ನು ಹೋಗಲಾಡಿಸಲು ಹಿಂದಿನ ನಾಲ್ಕರಿಂದ -ಐದು ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳಲ್ಲಿನ ಕೇಳಲಾದ ಪ್ರಸ್ತುತ ಘಟನೆಗಳ ಪ್ರಶ್ನೆಗಳತ್ತ ಗಮನಹರಿಸುವದು ಅತ್ಯವಶ್ಯಕ. ಇದರಿಂದ ನಮಗೆ ಯಾವ ರೀತಿಯ ಪ್ರಚಲಿತ ಘಟನೆಗಳನ್ನು ಅಧ್ಯಯನ ಮಾಡಬೇಕು ಎಂಬುದನ್ನು ತಿಳಿಯಲು ಸಹಕಾರಿಯಾಗುತ್ತದೆ.

ಪ್ರಚಲಿತ ಘಟನೆಗಳ ಅಧ್ಯಯನ ಮಾಡುವಾಗ ‘ನೋಟ್ಸ್‌’ ಬರೆದಿಟ್ಟುಕೊಳ್ಳುವುದು ತುಂಬಾ ಮುಖ್ಯ. ಹೀಗೆ ಮಾಡುವುದರಿಂದ ಅಭ್ಯರ್ಥಿಗಳಿಗೆ ವಿಷಯದ ಬಗ್ಗೆ ಹೆಚ್ಚು ಮನವರಿಕೆ ಹಾಗೂ ಕೈ ಬರಹದಲ್ಲಿ ವೇಗ ಮತ್ತು ಸುಧಾರಣೆಯನ್ನು ಕಾಣಬಹುದು.  ನೋಟ್ಸ್‌ ಮಾಡುವಾಗ ದಿನಾಂಕದ ಅನುಸಾರವಾಗಿ ಪ್ರಚಲಿತ ಘಟನೆಗಳನ್ನು ರಾಜ್ಯಕ್ಕೆ ಸಂಬಂಧಿಸಿದವು. ರಾಷ್ಟ್ರೀಯ ಘಟನೆಗಳು ಹಾಗೂ ಅಂತರರಾಷ್ಟ್ರೀಯ ಘಟನೆಗಳೆಂದು ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಬೇರೆ ಬೇರೆಯಾಗಿ ಬರೆದುಕೊಳ್ಳುವುದು ಒಳಿತು. ಕ್ರೀಡೆಗಳಿಗೆ ಸಂಬಂಧಿಸಿದ, ವಿಜ್ಞಾನ- ತಂತ್ರಜ್ಞಾನಕ್ಕೆ ಸಂಬಂಧಿಸಿದ ಘಟನೆಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳುವುದು ಉತ್ತಮ. ಪ್ರಶಸ್ತಿಗಳು ವ್ಯಕ್ತಿಗಳು ಶೃಂಗಸಭೆ - ಸಮ್ಮೇಳನ ನಡೆದಂತಹ ಸ್ಥಳಗಳು ದೇಶಗಳು ಕುರಿತು ಕಿರುಮಾಹಿತಿ ಬರೆದಿಟ್ಟುಕೊಂಡರೆ ದಿನಪತ್ರಿಕೆಗಳಲ್ಲಿ ಬರುವ ಸಂಪಾದಕೀಯ ಕಾಲಂಗಳನ್ನು ದಿನಂಪ್ರತಿ ಓದಿ ಆ ಪೇಪರನ್ನು ಕತ್ತರಿಸಿ ಸಂಗ್ರಹಿಸಿಕೊಳ್ಳುವುದು ಒಳಿತು. ಪರೀಕ್ಷೆಯ ಸಮಯದಲ್ಲಿ ಇದು ಪುನರ್ ಮನನಕ್ಕೆ ತುಂಬಾ ಸಹಕಾರಿಯಾಗುತ್ತದೆ.

ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಕ್ವಿಜ್ ಮಾದರಿಯ ಪ್ರಶ್ನೆಗಳಂತಿರುವುದಿಲ್ಲ ಬದಲಾಗಿ ಆಳವಾದ ಜ್ಞಾನವನ್ನು ಪ್ರಶ್ನಿಸುವಂತೆ ಇರುತ್ತವೆ ಹಾಗೂ ಮುಖ್ಯ ಪರೀಕ್ಷೆಗಳಲ್ಲಿ ವಿಸ್ತೃತವಾಗಿ ವಿವರಿಸಿ ಬರೆಯುವಂತೆ ವಿಶ್ಲೇಷಿಸಿ ಆಳವಾಗಿ ಮನವರಿಕೆಯಾಗುವಂತಹ ಪ್ರಶ್ನೆಗಳಿರುತ್ತವೆ. ವ್ಯಕ್ತಿ ಹಾಗೂ ಸ್ಥಳಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಒಂದು ಅಥವಾ ಎರಡು ಅಂಶಗಳ ಮಾದರಿಯ ಪ್ರಶ್ನೆಗಳಾಗಿರುತ್ತವೆ.

ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಹೆಚ್ಚಿನ ಸಮಯವನ್ನು ಮೀಸಲಿಡುವ ಅವಶ್ಯಕತೆ ಇರುವುದಿಲ್ಲ. ದಿನದಲ್ಲಿ ಕೇವಲ ಒಂದರಿಂದ ಎರಡು ಗಂಟೆಗಳ ಕಾಲದ ಸಮಯವನ್ನು ಮೀಸಲಿಟ್ಟರೆ ಸಾಕು. ಪ್ರತಿದಿನ ತಪ್ಪದೆ ದಿನಪತ್ರಿಕೆಗಳನ್ನು ಓದುವುದು. ಆಸಕ್ತಿಯಿಂದ ಕೂಡಿದ ಗೆಳೆಯರೊಡನೆ ಚರ್ಚಿಸುವುದು, ಮಾಸಿಕ ಪತ್ರಿಕೆಗಳಲ್ಲಿ ಬರುವ ಅದೇ ವಿಷಯದ ಬಗ್ಗೆ ಬರೆದಿರುವ ಇನ್ನು ಕೆಲವು ವಿಷಯಗಳನ್ನು ಕ್ರೋಢೀಕರಿಸುವುದು, ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಹುಡುಕುವುದು, ಹೀಗೆಲ್ಲ ವಿವಿಧ ಸಂಪನ್ಮೂಲಗಳಿಂದ ಮಾಹಿತಿ ಕಲೆ ಹಾಕಬೇಕು. ಪ್ರಚಲಿತ ಘಟನೆಗಳನ್ನು ಕೇವಲ ಸ್ಪರ್ಧಾ ಪರೀಕ್ಷೆಗೆ ಸಂಬಂಧಿಸಿದಂತೆ ಓದುವಂತಾಗದೇ ವ್ಯಕ್ತಿತ್ವ ವಿಕಸನ ಹಾಗೂ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಜೊತೆಗೆ ವಿಷಯವನ್ನು ಗ್ರಹಿಸುವ, ಸಂಗ್ರಹಿಸುವ, ವಿಶ್ಲೇಷಿಸುವ ಕೌಶಲವೂ ಬೆಳೆಯುತ್ತದೆ.
(ಮುಂದಿನ ವಾರ: ಈ ವರ್ಷದ ಪ್ರಚಲಿತ ಪ್ರಮುಖ ಘಟನೆಗಳು)
ಮಾಹಿತಿಗೆ: drkaginelli@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT