ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ಞೆ ತಪ್ಪಿಸಿ ಒಡವೆ ಕದ್ದವಳ ಬಂಧನ

ಮನೆಗಳ್ಳಿಯ ಪೂರ್ವಾಪರ ಕಂಡು ಬೆಚ್ಚಿದ ಪೊಲೀಸರು
Last Updated 28 ನವೆಂಬರ್ 2015, 19:44 IST
ಅಕ್ಷರ ಗಾತ್ರ

ಬೆಂಗಳೂರು: ನಿದ್ರೆ ಮಾತ್ರೆ ಬೆರೆಸಿದ ಕಾಫಿ ಕುಡಿಸಿ ಮನೆ ಮಾಲೀಕರು ಪ್ರಜ್ಞೆ ತಪ್ಪುತ್ತಿದ್ದಂತೆಯೇ ಒಡವೆಗಳೊಂದಿಗೆ ಪರಾರಿಯಾದ ಕೆ.ಕಾತ್ಯಾಯಿನಿ ಅಲಿಯಾಸ್ ಜನನಿ (39) ಎಂಬ ಚಾಲಾಕಿ ಕಳ್ಳಿ ಸುಬ್ರಹ್ಮಣ್ಯನಗರ ಪೊಲೀಸರ ಬಲೆಗೆ ಬಿದಿದ್ದಾಳೆ.

ಒಂದೂವರೆ ತಿಂಗಳ ಸತತ ಪ್ರಯತ್ನದಿಂದ ಕಾತ್ಯಾಯಿನಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ವಿಚಾರಣೆ ವೇಳೆ ಬಯಲಾದ ಆಕೆಯ ಪೂರ್ವಾಪರ ಕಂಡು ದಂಗಾಗಿದ್ದಾರೆ. ತಮಿಳುನಾಡಿನಲ್ಲಿ ಫೈನಾನ್ಸ್‌ ವ್ಯವಹಾರ ಮಾಡುತ್ತಿದ್ದ ಪಾರ್ಥಸಾರಥಿ ಎಂಬುವರನ್ನು ಈಕೆ ಚಲಿಸುವ ರೈಲಿನಿಂದ ತಳ್ಳಿ ಕೊಂದಿದ್ದ ಸಂಗತಿ ಗೊತ್ತಾಗಿದೆ.

ಕಾತ್ಯಾಯಿನಿ ಮಾತ್ರವಲ್ಲದೆ, ಕದ್ದ ಒಡವೆಗಳ ವಿಲೇವಾರಿಗೆ ಸಹಕರಿಸಿದ್ದ ಆಕೆಯ ಪ್ರಿಯಕರ ತೌಫಿಕ್ ಅಲಿಯಾಸ್ ಸಾಹುಲ್ ಹಮೀದ್ (21) ಸಹ ಈಗ ಕಂಬಿ ಎಣಿಸುತ್ತಿದ್ದಾನೆ. ಬಂಧಿತರಿಂದ ₹ 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇವರಿಬ್ಬರೂ ತಮಿಳುನಾಡಿನ ನಾಗಪಟ್ಟಿನಂ ಗ್ರಾಮದವರೆಂದು ಪೊಲೀಸರು ಹೇಳಿದ್ದಾರೆ.

ಕಾಫಿ ಕುಡಿಸಿ ಕಳವು!: ಗಾಯತ್ರಿನಗರ 8ನೇ ಅಡ್ಡರಸ್ತೆಯಲ್ಲಿ ಸಿವಿಲ್ ಗುತ್ತಿಗೆದಾರ ಎಲ್‌.ಎನ್.ಕಾಂತಿ ಎಂಬುವರು ಕುಟುಂಬ ಸದಸ್ಯರ ಜತೆ ನೆಲೆಸಿದ್ದಾರೆ. ಆರು ತಿಂಗಳ ಹಿಂದೆ ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ ಕಾತ್ಯಾಯಿನಿ, ಮೊದ–ಮೊದಲು ಉತ್ತಮ ಕಾರ್ಯವೈಖರಿ ಮೂಲಕ ಕುಟುಂಬದ ವಿಶ್ವಾಸ ಗಿಟ್ಟಿಸಿಕೊಂಡಳು. ಆದರೆ, ಕೆಲಸಕ್ಕೆ ಸೇರಿದ ಎರಡೇ ತಿಂಗಳಲ್ಲಿ 10 ಗ್ರಾಂನ ಚಿನ್ನದ ಓಲೆಗಳನ್ನು ಕದ್ದು ರಾತ್ರೋರಾತ್ರಿ ಪರಾರಿಯಾಗಿದ್ದಳು. ಈ ಸಂಬಂಧ ಕಾಂತಿ ಯಾವುದೇ ದೂರು ಕೊಟ್ಟಿರಲಿಲ್ಲ.

ಮತ್ತೆ ಬಂದಳು: ಕಾಂತಿ ಅವರ ಮನೆಯಲ್ಲೇ ದೊಡ್ಡ ಪ್ರಮಾಣದಲ್ಲಿ ಕನ್ನ ಹಾಕುವ ಸಂಚು ರೂಪಿಸಿಕೊಂಡ ಕಾತ್ಯಾಯಿನಿ, ಕದ್ದಿದ್ದ ಒಡವೆಗಳನ್ನು ಹಿಂದಿರುಗಿಸುವ ನೆಪದಲ್ಲಿ ಅ.7ರ ರಾತ್ರಿ ಮತ್ತೆ ಅವರ ಮನೆ ಹತ್ತಿರ ಬಂದಿದ್ದಳು. ಆಕೆಯಿಂದ ಓಲೆಗಳನ್ನು ಪಡೆದುಕೊಂಡ ಕಾಂತಿ ಪತ್ನಿ, ‘ಇನ್ನು ನೀನು ಕೆಲಸಕ್ಕೆ ಬರುವುದು ಬೇಡ’ ಎಂದು ಬೈಯ್ದಿದ್ದರು.

ಆ ನಂತರ ಕಾತ್ಯಾಯಿನಿ, ತನ್ನ ತಪ್ಪನ್ನು ಕ್ಷಮಿಸುವಂತೆ  ಕೋರಿ ರಾತ್ರಿ 12 ಗಂಟೆವರೆಗೂ ಸುರಿಯುತ್ತಿದ್ದ ಮಳೆಯಲ್ಲೆ ಅವರ ಮನೆ ಮುಂದೆ ನಿಂತಿದ್ದಳು. ಇದರಿಂದ ಕರಗಿದ ಕಾಂತಿ ಕುಟುಂಬ, ಕದ್ದ ಓಲೆಗಳನ್ನು ವಾಪಸ್ ತಂದು ಕೊಟ್ಟಳೆಂದು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿತ್ತು.

ಮರುದಿನವೇ ಕೃತ್ಯ: ರಾತ್ರಿ ಕಾಂತಿ ಕುಟುಂಬದ ಜತೆಗೇ ಊಟ ಮುಗಿಸಿ ಮಲಗಿದ್ದ ಕಾತ್ಯಾಯಿನಿ, ಬೆಳಿಗ್ಗೆ ಏಳು ಗಂಟೆಗೆ ಎದ್ದು ಕಾಫಿ ಮಾಡಿದ್ದಳು. ಸಂಚಿನಂತೆ ಅದರಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ, ಕಾಂತಿ, ಅವರ ಪತ್ನಿ, ಮಗ ಹಾಗೂ ಅತ್ತೆಗೆ ಕೊಟ್ಟಿದ್ದಳು. ಆ ಕಾಫಿ ಕುಡಿದ ಸ್ವಲ್ಪ ಸಮಯದಲ್ಲೇ ಎಲ್ಲರೂ ಪ್ರಜ್ಞೆ ತಪ್ಪಿದ್ದರು. ಆ ನಂತರ ಆಕೆ, ಅಲ್ಮೆರಾದಲ್ಲಿದ್ದ 350 ಗ್ರಾಂ ಚಿನ್ನಾಭರಣ  ಹಾಗೂ ₹ 36 ಸಾವಿರ ನಗದು ದೋಚಿ ಪರಾರಿಯಾಗಿದ್ದಳು. ಒಂದು ಗಂಟೆ ನಂತರ ಕುಟುಂಬ ಸದಸ್ಯರು ಎಚ್ಚರಗೊಂಡಾಗ ಮನೆಗೆಲಸದಾಕೆಯ ಕೃತ್ಯ ಗೊತ್ತಾಗಿತ್ತು. ಈ ಸಂಬಂಧ ಸುಬ್ರಹ್ಮಣ್ಯನಗರ ಠಾಣೆಗೆ ದೂರು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT