ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ದಾರಿ ತಪ್ಪಿಸಿದ ರೈಲ್ವೆ

ಗುಲ್ಬರ್ಗಕ್ಕೆ ಬಂದ ಎರ್ನಾಕುಲಂ ರೈಲು!
Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಜರಾತ್‌ನ ಓಖಾದಿಂದ ಹೊರಟು ಎರ್ನಾ­ಕುಲಂ ತಲುಪಬೇಕಿದ್ದ ಓಖಾ–ಎರ್ನಾಕುಲಂ ರೈಲು (ಗಾ.ಸಂ: 16637) ಅಧಿಕಾರಿಗಳ ಸಂವಹನ ಕೊರ­­ತೆ­ಯಿಂದಾಗಿ ಮಂಗಳವಾರ ಗುಲ್ಬರ್ಗಕ್ಕೆ ಬಂದ ಪರಿಣಾಮ ಪ್ರಯಾಣಿಕರು ಪರದಾಡಬೇಕಾಯಿತು.

ಏ. 14ರಂದು ರಾತ್ರಿ 2 ಗಂಟೆಗೆ ಓಖಾದಿಂದ ಹೊರಟ ರೈಲು ಅದೇ ದಿನ ರಾತ್ರಿ 10.05 ಗಂಟೆಗೆ ಮಹಾ­ರಾಷ್ಟ್ರದ ಪನವೇಲ್‌ ನಿಲ್ದಾಣ ತಲುಪಿತು. ಅಲ್ಲಿಂದ ರತ್ನಗಿರಿ, ಮಡಗಾಂವ್, ಕುಂದಾಪುರ ಮತ್ತು ಮಂಗಳೂರು (ಕೊಂಕಣ ) ಮಾರ್ಗವಾಗಿ ಏ. 16ರ ರಾತ್ರಿ 10.20 ಗಂಟೆಗೆ ಎರ್ನಾಕುಲಂ ತಲುಪಬೇಕಿತ್ತು.

ಆದರೆ, ಮಹಾರಾಷ್ಟ್ರದ ಉಕಾಶಿ ರೈಲು ನಿಲ್ದಾಣದ ಬಳಿ ಸರಕು ಸಾಗಣೆ ರೈಲು ಹಳಿ ತಪ್ಪಿದ್ದರಿಂದ ಕೊಂಕಣ ಮಾರ್ಗದ ಬದಲು ಕರ್ಜತ್, ಪುಣೆ, ಸೊಲ್ಲಾ­ಪುರ ಮೂಲಕ ಏ.15 ರಂದು ಬೆಳಿಗ್ಗೆ 10.30 ಗಂಟೆಗೆ ಗುಲ್ಬರ್ಗಕ್ಕೆ ಬಂದಿತು. ಇದರಿಂದಾಗಿ ಮಂಗ­ಳೂರು, ಕಾರ­ವಾರ, ಬೈಂದೂರು, ಉಡುಪಿ, ಗೋವಾಕ್ಕೆ ತೆರಳಬೇಕಾಗಿದ್ದ ಪ್ರಯಾ­ಣಿಕರು ಸಂಕಷ್ಟಕ್ಕೆ ಸಿಲುಕಿಕೊಂಡರು.

‘ಓಖಾದಿಂದ ಹೊರಟು, ಪನವೇಲ್ ತಲುಪಿದಾಗ ಪುಣೆ–ಮೀರಜ್ ಮಾರ್ಗವಾಗಿ ಮಡಗಾಂವ್‌ಗೆ ಹೋಗ­ಲಾ­ಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಬೆಳಿಗ್ಗೆ ಎಚ್ಚರವಾದಾಗ ರೈಲು ಗುಲ್ಬರ್ಗಕ್ಕೆ ಬಂದಿರುವುದು ಗೊತ್ತಾಯಿತು’ ಎಂದು ಸೂರತ್‌ನಿಂದ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದ ನಾಗರಾಜ್ ಹಾಗೂ ಉಡುಪಿಗೆ ತೆರಳುತ್ತಿದ್ದ ಕೀರ್ತನ್ ಹೇಳಿದರು.

ಚಾಲಕನಿಗೆ ತರಾಟೆ: ಗುಲ್ಬರ್ಗಕ್ಕೆ ಬಂದ ರೈಲು, ನಿಲ್ದಾಣ­ದಿಂದ ಕೆಲವೇ ಮೀಟರ್‌ ಅಂತರದಲ್ಲಿರುವ ಕೋರಂಟಿ ಹನುಮಾನ್ ದೇವಸ್ಥಾನದ ಬಳಿ ತೆರಳುತ್ತಿದ್ದಾಗ ರೈಲು ನಿಲ್ಲಿಸಿದ ಪ್ರಯಾಣಿಕರು ಕೆಳಕ್ಕೆ ಇಳಿದು ಎಂಜಿನ್‌ನತ್ತ ಕಲ್ಲು ತೂರಿಸಿದರು.

ದಾರಿ ತಪ್ಪಿ ಬೇರೆ ಮಾರ್ಗದಲ್ಲಿ ಹೊರಟಿದ್ದ ಬಗ್ಗೆ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕಂಗಾಲಾದ ಚಾಲಕ ರೈಲನ್ನು ನಿಲ್ದಾಣಕ್ಕೆ ತಂದು ನಿಲ್ಲಿಸಿದ. ಬಳಿಕ ಪ್ರಯಾಣಿಕರು ಸ್ಟೇಷನ್ ಮಾಸ್ಟರ್ ರಮಣರಾವ್ ಅವರ ಜತೆಯೂ ಮಾತಿನ ಚಕಮಕಿ ನಡೆಸಿದರು.

ಪ್ರಯಾಣಿಕರ ಆಕ್ರೋಶ: ‘ರೈಲು ಮಡ­ಗಾಂವ್‌ಗೆ ತೆರಳುತ್ತದೆ. ಪ್ರಯಾಣಿಕರು ಇದರಲ್ಲೇ ಪ್ರಯಾಣಿಸ­ಬಹುದು. ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಹೋಗುವುದಾದರೆ ಟಿಕೆಟ್‌ ಶುಲ್ಕವನ್ನು ಮರು ಪಾವತಿಸಲಾಗುವುದು’ ಎಂದು ಅಧಿಕಾರಿಗಳು ಘೋಷಿಸಿದರು. ಆಗ 100ಕ್ಕೂ ಹೆಚ್ಚು ಪ್ರಯಾಣಿಕರು ಹಣ ವಾಪಸು ಪಡೆದು, ಬಸ್, ಕ್ರೂಸರ್ ಮೂಲಕ ಮಂಗಳೂರು, ಗೋವಾದತ್ತ ತೆರಳಿದರು.

ಓಖಾ–ಎರ್ನಾಕುಲಂ ರೈಲು ಮಧ್ಯಾಹ್ನ 1.45 ಗಂಟೆಗೆ ಗುಲ್ಬರ್ಗದಿಂದ ಹುಟಗಿ, ವಿಜಾಪುರ, ಬಾಗಲಕೋಟೆ ಮಾರ್ಗವಾಗಿ ಮಡಗಾಂವ್‌ನತ್ತ ತೆರಳಿತು.

‘ರೈಲು ಸರಿಯಾದ ಮಾರ್ಗದಲ್ಲೇ ಸಾಗಿದೆ. ಪನವೇಲ್‌ನಿಂದ ಸೊಲ್ಲಾಪುರ, ವಾಡಿ, ಶೋರ್ನೂರ್ ಮೂಲಕ ಎರ್ನಾಕುಲಂಗೆ ತೆರಳುವಂತೆ ಚಾಲಕನಿಗೆ ಸೂಚಿಸಲಾಗಿತ್ತು’ ಎಂದು ಮುಂಬೈನ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈಲು ವಾಡಿ ಮೂಲಕ ಎರ್ನಾ­ಕುಲಂಗೆ ಹೋಗುವುದಾದರೆ ಕರ್ನಾಟ­ಕದ ಪ್ರಯಾಣಿಕರು ತಮ್ಮ ಊರುಗಳಿಗೆ ಹೇಗೆ ತಲುಪಬೇಕು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿಲು ಅವರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT