ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳ ಬೀಡು ಸಕ್ಕರೆ ನಾಡು

Last Updated 29 ಮಾರ್ಚ್ 2016, 8:42 IST
ಅಕ್ಷರ ಗಾತ್ರ

ಮಂಡ್ಯ ಏಷ್ಯಾದ ಮೊದಲ ಜಲ ವಿದ್ಯುತ್‌ ಘಟಕ ಹೊಂದಿದ ಕೀರ್ತಿಗೆ ಪಾತ್ರವಾಗಿರುವ ಈ ಜಿಲ್ಲೆಯ ಅನೇಕ ವೈವಿಧ್ಯಮಯ ಪ್ರಾಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ಹೊಂದಿರುವ ಪ್ರವಾಸಿ ತಾಣಗಳ ಬೀಡು ಹೌದು ಗಂಗರು, ಚೋಳರು, ಹೊಯ್ಸಳರು, ವಿಜಯನಗರ ಅರಸರು, ಹೈದರ್ ಅಲಿ, ಟಿಪ್ಪು ಸುಲ್ತಾನ್‌, ಯದುವಂಶದ ಮೈಸೂರು ಅರಸರು ಆಳ್ವಿಕೆ ನಡೆಸಿದ್ದಾರೆ. ಹೊಯ್ಸಳ ಅರಸರು ವಿವಿಧೆಡೆ ನಿರ್ಮಿಸಿರುವ ಶಿಲ್ಪಕಲೆ ಕೆತ್ತನೆ ಅದ್ಭುತವಾಗಿದೆ.

ಕಾವೇರಿ, ಹೇಮಾವತಿ, ಲೋಕಪಾವನಿ, ಶಿಂಷಾ, ಕಪಿಲ ನದಿಗಳು ಹರಿಯುತ್ತಿವೆ. ಲಕ್ಷ್ಮಣ ತೀರ್ಥ ನದಿ ಕೆ.ಆರ್‌. ಪೇಟೆ ತಾಲ್ಲೂಕಿನ ಸಂಗಮದಲ್ಲಿ ಕಾವೇರಿಗೆ ಸೇರುತ್ತದೆ.
ಪ್ರವಾಸಿ ತಾಣಗಳು ಚಲನಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ. ಮೇಲುಕೋಟೆ, ಬಲಮುರಿ, ಶ್ರೀರಂಗಪಟ್ಟಣ, ಕೆಆರ್‌ಎಸ್‌ ಇತರಡೆ ಚಿತ್ರೀಕರಣ ನಡೆಯುತ್ತಿರುತ್ತದೆ.

ಬಸರಾಳು
13ನೇ ಶತಮಾನದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹೊಯ್ಸಳರ ಶಿಲ್ಪಕಲೆಯ ವೈಭವಕ್ಕೆ ಸಾಕ್ಷಿ. ಮೂರು ಅಡಿ ಎತ್ತರದ ಜಗುಲಿ ಮೇಲೆ ನಿರ್ಮಾಣಗೊಂಡಿರುವ ದೇಗುಲಕ್ಕೆ ಬಹುಕೋನಾಕಾರದ ತಳ ವಿನ್ಯಾಸವಿದೆ.

ಶಾರದೆ, ಗಣಪತಿ, ಮಹಿಷಮರ್ದಿನಿ ಪಟ್ಟಿಕೆಗಳು ಇವೆ. ಆಳೆತ್ತರದ ನಂದಿ ಶಿಲ್ಪ ಆಕರ್ಷಕವಾಗಿದೆ. ಜಿಲ್ಲಾ ಕೇಂದ್ರ ಮಂಡ್ಯದಿಂದ ನಾಗಮಂಗಲಕ್ಕೆ ಹೋಗುವ ಮಾರ್ಗದಲ್ಲಿ ಬಸರಾಳು ಇದೆ. ಮಂಡ್ಯದಿಂದ 24 ಕಿ.ಮೀ. ದೂರದಲ್ಲಿದೆ. ಬಸ್‌ ವ್ಯವಸ್ಥೆ ಉತ್ತಮವಾಗಿದೆ.

ಕೊಕ್ಕರೆ ಬೆಳ್ಳೂರು
ಸೈಬೀರಿಯಾ, ಅಟ್ಲಾಂಟಾದಿಂದ ಗ್ರೇ ಪೆಲಿಕನ್ಸ್‌, ಪೈಂಟೆಡ್‌ ಸ್ಟಾರ್ಕ್‌ ಪಕ್ಷಿಗಳು ಡಿಸೆಂಬರ್‌ ಅಂತ್ಯದಿಂದ ಇಲ್ಲಿಗೆ ವಲಸೆ ಬರುತ್ತವೆ. ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿಗಳನ್ನು ಬೆಳೆಸುತ್ತವೆ. ಜುಲೈ ಹೊತ್ತಿಗೆ ಬಲಿತ ಮರಿಗಳೊಂದಿಗೆ ಮರಳಿ ಹೊರಟು ಬಿಡುತ್ತವೆ.

ಕೊಕ್ಕರೆಗಳು ಊರಿನ ಮನೆಗಳ ಮಧ್ಯದಲ್ಲಿಯೇ ಇರುವ ಹುಣಸೆ, ಗೊಬ್ಬಳಿ, ಆಲದ ಮರಗಳಲ್ಲಿಯೇ ವಾಸಿಸುವುದು ವಿಶೇಷ. ಬೆಂಗಳೂರಿನಿಂದ ಮಂಡ್ಯಕ್ಕೆ ಬರುವ ಹೆದ್ದಾರಿ
ಯಲ್ಲಿಯೇ ಎಡಕ್ಕೆ ತಿರುಗಿಕೊಂಡು ಕೊಕ್ಕರೆ ಬೆಳ್ಳೂರಿಗೆ ಹೋಗಬೇಕು. ಮದ್ದೂರಿನಿಂದ 3 ಕಿ.ಮೀ. ಮೊದಲು ಒಳಗಡೆ 12 ಕಿ.ಮೀ. ಹೋಗಬೇಕು. ಬಸ್ ಸೌಲಭ್ಯವಿದೆ.

ರಂಗನತಿಟ್ಟು
ಶ್ರೀಲಂಕಾ, ಮಂದಗದ್ದೆ ಮುಂತಾದ ಕಡೆಗಳಿಂದ ಡಿಸೆಂಬರ್‌ ತಿಂಗಳಿನಲ್ಲಿ ರಂಗನತಿಟ್ಟು ಪಕ್ಷಿಧಾಮಕ್ಕೆ ವಿವಿಧ ಪಕ್ಷಿಗಳು ಬರುತ್ತವೆ.
ರಿವರ್‌ ಟರ್ನ್, ಸ್ಪೂನ್‌ ಬಿಲ್ಸ್‌, ಪೆಲಿಕನ್ಸ್‌, ಒಪನ್‌ ಬಿಲ್‌ಸ್ಟಾರ್ಕ್, ನೈಟ್‌ ಹೈರಾನ್‌, ಪೈಂಟೆಡ್‌ ಸ್ಟಾರ್ಕ್ಸ್, ಕಿಂಗ್‌ ಫಿಷರ್‌, ವೈಟ್‌ ಐಬಿಸ್‌ ಮುಂತಾದ ಪಕ್ಷಿಗಳನ್ನು ಕಾಣಬಹುದು. ಏಪ್ರಿಲ್‌ ಅಂತ್ಯದವರೆಗೂ ಗೂಡುಕಟ್ಟಿಕೊಂಡಿರುತ್ತವೆ.

ಶ್ರೀರಂಗಪಟ್ಟಣದಿಂದ ನಾಲ್ಕು ಕಿ.ಮೀ. ದೂರದಲ್ಲಿದ್ದು, ಬೆಳಗೊಳ ಮಾರ್ಗವಾಗಿ ಹೋಗುವ ಬಸ್‌ ರಂಗನತಿಟ್ಟಿನ ಮುಖ್ಯ ದ್ವಾರದ ಬಳಿಯವರೆಗೆ ಹೋಗುತ್ತವೆ. ಅಲ್ಲಿಂದ ಒಂದು ಕಿ.ಮೀ. ನಡೆದುಕೊಂಡು ಹೋಗಬೇಕು. ಸ್ವಂತ ವಾಹನದಲ್ಲಿ ಬಂದವರು ನೇರವಾಗಿ ಪಕ್ಷಿಧಾಮಕ್ಕೆ ಹೋಗಬಹುದು.

ರಂಗನಾಥಸ್ವಾಮಿ ದೇಗುಲ
9ನೇ ಶತಮಾನದ ಗಂಗರ ಆಳ್ವಿಕೆ ಕಾಲದಲ್ಲಿ ರಂಗನಾಥಸ್ವಾಮಿಯ ಗರ್ಭಗುಡಿ ನಿರ್ಮಾಣವಾಗಿದೆ. ಮೂಲ ವಿಗ್ರಹ ಕೆತ್ತನೆ ದ್ರಾವಿಡ ಶೈಲಿಯಲ್ಲಿದೆ. ಉತ್ತರ ದಕ್ಷಿಣವಾಗಿರುವ 10 ಅಡಿ ಉದ್ದದ ರಂಗನಾಥ ಸ್ವಾಮಿಯ ಶಯನದಲ್ಲಿರುವ ವಿಗ್ರಹವು ಏಕಶಿಲ್ಪದಲ್ಲಿ ಕೆತ್ತನೆಯಾಗಿದೆ. ಇದನ್ನು ಆದಿರಂಗ ಎನ್ನುತ್ತಾರೆ. ಬ್ಲಫ್‌ ಹತ್ತಿರ ಇರುವುದ ಮಧ್ಯ ರಂಗ ಹಾಗೂ ತಮಿಳುನಾಡಿನ ಶ್ರೀರಂಗಂನಲ್ಲಿ ಇರುವುದು ಅಂತ್ಯರಂಗ. ಸಮೀಪದಲ್ಲಿಯೇ ನಿಮಿಷಾಂಬಾ ದೇವಸ್ಥಾನವೂ ಇದೆ. ಕಾವೇರಿ ತೀರದಲ್ಲಿದ್ದು, ಉತ್ತಮ ಪ್ರಕೃತಿ ತಾಣವೂ ಆಗಿದೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿದ್ದು, ಬಸ್‌, ರೈಲು ಸಂಚಾರ, ವಾಸ್ತವ್ಯಕ್ಕೆ ವ್ಯವಸ್ಥೆ ಇದೆ.

ಕೃಷ್ಣರಾಜಸಾಗರ
ಕಾವೇರಿ ನದಿಗೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕನ್ನಂಬಾಡಿ ಎಂಬಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು 1931ರಲ್ಲಿ ನಿರ್ಮಾಣ ಆಗಿದೆ. 130 ಅಡಿ ಎತ್ತರವಿದ್ದು, 8,600 ಅಡಿ ಉದ್ದವಿದೆ. 49 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

1938ರಲ್ಲಿ ನಿರ್ಮಾಣವಾದ ಬೃಂದಾವನವು ಆಗ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಅವರ ಕೊಡುಗೆ ಆಗಿದೆ. ಕಾಶ್ಮೀರದ ಷಾಲಿಮಾರ ತೋಟವನ್ನು ನೆನಪಿಸುತ್ತದೆ. ಸಂಗೀತ ನೃತ್ಯ ಕಾರಂಜಿಯು ಪ್ರಮುಖ ಆಕರ್ಷಣೆ. ಶ್ರೀರಂಗಪಟ್ಟಣದಿಂದ 14 ಕಿ.ಮೀ. ದೂರದಲ್ಲಿದೆ. ಬಸ್‌ ವ್ಯವಸ್ಥೆ ಇದೆ.

ಕರಿಘಟ್ಟ
ಲೋಕಪಾವನಿ ದಡದ ಮೇಲಿರುವ ಕರಿಘಟ್ಟದಲ್ಲಿ ವೆಂಕಟರಮಣ ದೇವಸ್ಥಾನವಿದೆ. ವಿಜಯನಗರ ಹಾಗೂ ಮೈಸೂರು ಅರಸರ ಕಾಲದಲ್ಲಿ ನಿರ್ಮಾಣಗೊಂಡಿದೆ.
ಕರಿಘಟ್ಟ ಬೆಟ್ಟವು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದೆ. ಮಂಡ್ಯದಿಂದ ಶ್ರೀರಂಗಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಬರುತ್ತದೆ.

ಶ್ರೀರಂಗಪಟ್ಟಣ
ದಿಂದ ನಾಲ್ಕು ಕಿ. ಮೀಟರ್ ದೂರದಲ್ಲಿದ್ದು, ದೇವಸ್ಥಾನವರೆಗೂ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆಯ ಮೂಲಕ ಏರುವಾಗ ನಿಸರ್ಗದ ಸೌಂದರ್ಯ ಸವಿಯಬಹುದು.

ಗುಂಬಜ್‌
ಇಲ್ಲಿ ಟಿಪ್ಪು ಸುಲ್ತಾನ್‌, ಹೈದರ್‌ ಅಲಿ ಸಮಾಧಿಗಳಿವೆ. ಅವರ ಆಡಳಿತದಲ್ಲಿದ್ದ ಪ್ರಮುಖರ ಸಮಾಧಿಗಳೂ ಇಲ್ಲಿವೆ. 1789ರಲ್ಲಿ ಗುಂಬಜ್‌ ನಿರ್ಮಾಣವಾಗಿದೆ. ನಾಲ್ಕು ದ್ವಾರಗಳಿದ್ದು, ದ್ವಾರದಲ್ಲಿರುವ ಕುಸುರಿ ಕಲೆಗಳನ್ನು ಆನೆಯ ದಂತಗಳಿಂದ ಮಾಡಲಾಗಿದೆ. ದರಿಯಾ ದೌಲತ್‌ ಅಥವಾ ಬೇಸಿಗೆ ಅರಮನೆಯು ಗುಂಬಜ್‌ನಿಂದ 2 ಕಿ.ಮೀ. ದೂರದಲ್ಲಿದೆ. ಶೇ 90 ರಷ್ಟು ಭಾಗವನ್ನು ಕಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ. ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. 16 ಎಕರೆ ಉದ್ಯಾನವಿದೆ.

ಗಗನ ಚುಕ್ಕಿ
ಕಾವೇರಿ ನದಿಯ ಸೊಬಗು ನೋಡಲು ಗಗನಚುಕ್ಕಿ ಜಲಪಾತ ನೋಡಬೇಕು. ಹಾಲಿನ ನೊರೆಯಂತೆ 300 ಅಡಿಗಳಿಗೂ ಹೆಚ್ಚು ಅಂತರದಿಂದ ಧುಮ್ಮಿಕ್ಕುವುದನ್ನು ನೋಡಲು ಬಲು ಚೆಂದ. ಕೆಆರ್‌ಎಸ್‌ ಅಣೆಕಟ್ಟು ತುಂಬಿ ನೀರು ಹೊರಬಿಟ್ಟಾಗ ಜಲಪಾತದ ವೈಭವ ಜೋರಾಗಿರುತ್ತದೆ.

ಮಂಡ್ಯದಿಂದ 50 ಕಿ.ಮೀ, ಮಳವಳ್ಳಿಯಿಂದ 20 ಕಿ.ಮೀ. ದೂರದಲ್ಲಿದೆ. ಶೇಷಾದ್ರಿ ಅಯ್ಯರ್‌ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರದವರೆಗೆ ಬಸ್‌ ಹೋಗುತ್ತವೆ. ಅಲ್ಲಿಂದ 2.5 ಕಿ.ಮೀ. ನಡೆದುಕೊಂಡು ಹೋದರೆ ಗಗನಚುಕ್ಕಿ ಜಲಪಾತ ಸಿಗುತ್ತದೆ. ಸ್ವಂತ ವಾಹನದಲ್ಲಿ ಹೋಗುವುದು ಉತ್ತಮ.

ಮುತ್ತತ್ತಿ
ಇಲ್ಲಿನ ಆಂಜನೇಯ ದೇವಸ್ಥಾನ ಪ್ರಸಿದ್ಧಿ ಹೊಂದಿದೆ. ಅನತಿ ದೂರದಲ್ಲಿಯೇ ಕಾವೇರಿ ನದಿ ಇದೆ. ಮೀಸಲು ಅರಣ್ಯ ಪ್ರದೇಶ ಆಗಿರುವುದರಿಂದ  ಹಸಿರುಮಯವಾಗಿದೆ. ಮುತ್ತತ್ತಿ, ಭೀಮೇಶ್ವರಿ ಫಿಶ್‌ ಕ್ಯಾಂಪ್‌ ನಿಸರ್ಗದ ಮಡಿಲಿನಲ್ಲಿವೆ.

ಮಳವಳ್ಳಿಯಿಂದ 40 ಕಿ.ಮೀ. ಹಲಗೂರಿನಿಂದ 16 ಕಿ.ಮೀ. ದೂರದಲ್ಲಿದೆ. ಕೆಲವೇ ಕೆಲವು ಬಸ್‌ಗಳಿವೆ. ಸ್ವಂತ ವಾಹನಗಳಲ್ಲಿ ಬಂದರೆ ಉತ್ತಮ.

ಸೌಮ್ಯ ಕೇಶವ ದೇವಾಲಯ
ನಾಗಮಂಗಲ ಪಟ್ಟಣದಲ್ಲಿರುವ ಸೌಮ್ಯ ಕೇಶವ ದೇವಾಲಯವು ಮೂಲತಃ ಹೊಯ್ಸಳರ ಕಾಲದಲ್ಲಿ 12ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ನಂತರ ವಿಜಯ ನಗರ ಅರಸರ ಕಾಲದಲ್ಲಿ ಮಹಾದ್ವಾರ ಗೋಪುರ ಹಾಗೂ 55 ಅಡಿ ಎತ್ತರದ ಗರುಢಗಂಭ ನಿರ್ಮಾಣ ಮಾಡಲಾಗಿದೆ.  ಗರುಡಪೀಠದ ಮೇಲೆ ಸುಮಾರು ಆರು ಅಡಿ ಎತ್ತರದ ಸೌಮ್ಯಕೇಶವನ ಸುಂದರ ಶಿಲ್ಪವಿದೆ.

ಆದಿ ಚುಂಚನಗಿರಿ ಕ್ಷೇತ್ರ
ಇದು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಚುಂಚನಗಿರಿಯಲ್ಲಿ ನವಿಲುಗಳನ್ನು ಕಾಣಬಹುದಾಗಿದೆ. ದ್ರಾವಿಡ ಶೈಲಿಯ ಕಾಲಭೈರವನ ವಿಶಾಲ ದೇವಾಲಯ ಇತ್ತೀಚೆಗೆ ₹ 30 ಕೋಟಿ ವೆಚ್ಚದಲ್ಲಿ ಹೊಸ ರೂಪ ಪಡೆದಿದೆ. ಚಂದ್ರಮೌಳೇಶ್ವರ, ಅನ್ನಪೂರ್ಣೇಶ್ವರಿ, ಭೈರವನ ಹಳೆಯ ಗುಡಿಗಳಿವೆ. ಕಡಿದಾದ ಬಂಡೆ ಏರಿದಂತೆ ಚೋಳೂರು ಕಂಬ ಸಿಗುತ್ತದೆ. ಅಲ್ಲಿಂದ ಸುತ್ತಲಿನ ಪರಿಸರ ನೋಡಿದರೆ ರೋಮಾಂಚನವಾಗುತ್ತದೆ. ಪ್ರತಿ ವರ್ಷ ಜಾತ್ರೆ ಇರುತ್ತದೆ.

ಮೇಲುಕೋಟೆ
ಹೊಯ್ಸಳ, ವಿಜಯನಗರ, ಮೈಸೂರು ಅರಸರ ಕಾಲಘಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ಚಲುವನಾರಾಯಣಸ್ವಾಮಿ ದೇವಾಲಯಕ್ಕೆ ಕರ್ನಾಟಕವಲ್ಲದೇ ವಿವಿಧ ರಾಜ್ಯಗಳಲ್ಲಿಯೂ ಭಕ್ತರಿದ್ದಾರೆ. ವೈರಮುಡಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಬೆಟ್ಟದ ಮೇಲೆ ಯೋಗಾನರಸಿಂಹ ದೇವಾಲಯವಿದೆ. ಮೇಲುಕೋಟೆಯಲ್ಲಿ ಅಕ್ಕ–ತಂಗಿಯರದ್ದು ಸೇರಿ ಹಲವಾರು ಕೊಳಗಳಿವೆ. ಸಂಸ್ಕೃತ ಅಧ್ಯಯನ ಕೇಂದ್ರವಿದ್ದು, ಹಸ್ತ ಪ್ರತಿ ಸಂಗ್ರಹ ಇದೆ.  ಮಂಡ್ಯ, ಮೈಸೂರಿನಿಂದ ಬಸ್ ಸೌಲಭ್ಯವಿದೆ.

ಭೂವರಾಹನಾಥ
ಹೇಮಾವತಿಯ ನದಿ ದಂಡೆಯ ಮೇಲಿರುವ ಕಲ್ಲಹಳ್ಳಿಯ ಲಕ್ಷ್ಮೀ ವರಾಹನಾಥ ವಿಗ್ರಹವು ಶಿಲ್ಪಕಲೆಯಿಂದ ಕೂಡಿದೆ. ಇದನ್ನು ಭೂವರಾಹನಾಥ ಎಂತಲೂ ಕರೆಯುತ್ತಾರೆ. ಚತುರ್ಭುಜಧಾರಿ ವರಾಹನಾಥನ ಎಡತೊಡೆ ಮೇಲೆ ಭೂ ದೇವಿ (ಲಕ್ಷ್ಮೀ) ಆಸೀನನಾಗಿದ್ದಾಳೆ. 15 ಅಡಿ ಎತ್ತರದ ಕರಿಕಲ್ಲಿನ ಶಿಲ್ಪ. ಕೆ.ಆರ್‌.   ಪೇಟೆಯಿಂದ 18 ಕಿ.ಮೀ. ದೂರದಲ್ಲಿದೆ.

ಹೊಸಹೊಳಲು
ಹೊಯ್ಸಳರ ಕಾಲದ ಲಕ್ಷ್ಮೀನಾರಾಯಣ ದೇವಸ್ಥಾನ ಅವರ ಶಿಲ್ಪ ಕಲಾವೈಭವಕ್ಕೆ ಸಾಕ್ಷಿಯಾಗಿದೆ.   ನೂರಡಿ ಎತ್ತರದ ಜಗತಿಯ ಮೇಲೆ ಬಹುಕೋನಾಕಾರದ ತಳ ವಿನ್ಯಾಸ ಹೊಂದಿದೆ. ಕೆ.ಆರ್‌. ಪೇಟೆಯಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಬಸ್‌ ವ್ಯವಸ್ಥೆ ಇದೆ. ಕೆ.ಆರ್‌. ಪೇಟೆಯಲ್ಲಿ ವಸತಿ ವ್ಯವಸ್ಥೆ ಇದೆ.

ಗೋವಿಂದನಹಳ್ಳಿ
ಇಲ್ಲಿನ ಪಂಚಲಿಂಗೇಶ್ವರ ದೇಗುಲ ಹೊಯ್ಸಳರ ವಿನೂತನ ಶೈಲಿಗೆ ಸಾಕ್ಷಿಯಾಗಿದೆ. ಐದು ಗರ್ಭಗುಡಿಗಳ ಶಿಖರಗಳು ಸಾಲಂಕೃತ ರಥಗಳಂತೆ ಕಾಣುತ್ತವೆ. ಕೆ.ಆರ್‌. ಪೇಟೆಯಿಂದ 20.ಕಿ.ಮೀ ದೂರದಲ್ಲಿದೆ. ಕಿಕ್ಕೇರಿಯಿಂದ 5 ಕಿ.ಮೀ. ದೂರ. ಬಸ್‌ ಸಂಚಾರ ಕಡಿಮೆ. ಸ್ವಂತ ವಾಹನದ ಪಯಣ ಉತ್ತಮ.

ಕೆರೆತೊಣ್ಣೂರು
ಕೆರೆತೊಣ್ಣೂರಿನ ಕೆರೆಯು ಜಿಲ್ಲೆಯ ಮತ್ತೊಂದು ಪ್ರವಾಸಿ ತಾಣವಾಗಿದೆ. ಹೊಯ್ಸಳರ ವಿಷ್ಣುವರ್ಧನ ಕಾಲದಲ್ಲಿ ಉಪರಾಜಧಾನಿಯಾಗಿದ್ದ ಅಂಶ ಶಾಸನದಿಂದ ತಿಳಿದು ಬರುತ್ತದೆ. 2,100 ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದ್ದು, ಇದು 0.42 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೃಷ್ಣ ದೇವಾಲಯ, ಯೋಗಾ ನರಸಿಂಹ ದೇವಾಲಯಗಳೂ ಇವೆ. ಪಾಂಡವಪುರದಿಂದ ಹತ್ತು ಕಿ.ಮೀ. ದೂರದಲ್ಲಿದೆ. ಬಸ್‌ ಸೌಲಭ್ಯವಿದೆ.

ಶಿವಪುರ ಸೌಧ
1938ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದ ಸಂದರ್ಭ ಮಾಡಿದ ಧ್ವಜಾರೋಹಣ ಹಾಗೂ ಸಮಾವೇಶದ ನೆನಪಿಗಾಗಿ ಶಿವಪುರ ಸತ್ಯಾಗ್ರಹ ಸೌಧ ನಿರ್ಮಾಣ ಮಾಡಲಾಗಿದೆ.  1978ರಲ್ಲಿ ಕೆಂಗಲ್‌  ಹನುಮಂತಯ್ಯ ಅವರು ಧ್ವಜ ಸತ್ಯಾಗ್ರಹದ ನೆನಪಿಗೆ ಸೌಧ  ನಿರ್ಮಿಸಿದರು.  1939ರಲ್ಲಿ  ಉದ್ಘಾಟನೆಗೊಳ್ಳುತ್ತದೆ.  ಈಗ ₹ 40 ಲಕ್ಷ ವೆಚ್ಚದಲ್ಲಿ ಮತ್ತಷ್ಟು ಸುಂದರಗೊಳಿಸಲು ಯೋಜಿಸಲಾಗಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಸಾಗುವಾಗ ಮದ್ದೂರು ಪಟ್ಟಣದಲ್ಲಿಯೇ ಸೌಧವಿದೆ. ಬಸ್‌ ಸೌಲಭ್ಯ ಸಾಕಷ್ಟಿದೆ.

ಬಲಮುರಿ
17ನೇ ಶತಮಾನದಲ್ಲಿ ಚಿಕ್ಕ ದೇವರಾಜ ಒಡೆಯರ್‌ ಕಾವೇರಿ ನದಿಗೆ ಒಡ್ಡು ಕಟ್ಟಿ ವಿರಿಜಾ ನಾಲೆ ತೋಡಿಸಿದರು. ಆ ಒಡ್ಡಿನಿಂದ ಬೀಳುತ್ತಿದ್ದ ನೀರು  ಆಕರ್ಷಕವಾಗಿತ್ತು. ಹಸಿರಿನ ಮಧ್ಯೆ 10 ಅಡಿ ಎತ್ತರದಲ್ಲಿ ಬೀಳುವ ನೀರು ಜಲಪಾತದಂತೆ ಕಾಣಿಸುತ್ತದೆ. ಚೋಳರ ಕಾಲದ ಅಗಸ್ತೇಶ್ವರ, ಹನುಮಂತ ಮತ್ತು ಗಣಪತಿ ದೇವಸ್ಥಾನಗಳಿವೆ.

ಶ್ರೀರಂಗಪಟ್ಟಣದಿಂದ 15 ಕಿ.ಮೀ. ದೂರದಲ್ಲಿದೆ. ಬೆಳಗೋಳದಿಂದ 3 ಕಿ.ಮೀ. ದೂರದಲ್ಲಿದೆ. ಬಸ್ ವ್ಯವಸ್ಥೆ ಇಲ್ಲ. ಸ್ವಂತ ವಾಹನದಲ್ಲಿ ಬರುವವರ ಸಂಖ್ಯೆಯೇ ಹೆಚ್ಚು. ಶ್ರೀರಂಗಪಟ್ಟಣದಲ್ಲಿ ವಸತಿಗೆ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT