ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ– ಉತ್ತರ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಾವ್ಯ ಅಡಿವೆಪ್ಪಾ ಮೆಳವಂಕಿ, ಗೋಕಾಕ
*ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದೇನೆ.  ನವೋದಯ ಅಥವಾ ಇನ್ನಿತರ ವಸತಿ ಶಾಲೆಗಳ ಬಗ್ಗೆ ಮಾಹಿತಿ ತಿಳಿಸಿ.  ಪ್ರವೇಶ ಮತ್ತು ವಿವರಗಳನ್ನು ತಿಳಿಸಿ. ಪ್ರವೇಶ ಪರೀಕ್ಷೆಗೆ ಹೇಗೆ ಅಭ್ಯಾಸ ಮಾಡಬೇಕು.
- ಕೆಂದ್ರ ಸರಕಾರದವರು ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಸಾಧಾರಣವಾಗಿ ಜಿಲ್ಲೆಗೊಂದರಂತೆ ನವೋದಯ ವಸತಿ ಶಾಲೆ ನಡೆಸುತ್ತಿದ್ದಾರೆ.  ಇದೇ ರೀತಿ ರಾಜ್ಯ ಸರ್ಕಾರದವರೂ ಅನೇಕ ಜಿಲ್ಲೆಗಳಲ್ಲಿ ಮೊರಾರ್ಜಿ, ವಾಜಪೆಯಿ, ಕಿತ್ತೂರು ರಾಣಿ, ಏಕಲವ್ಯ ಮೊದಲಾದ ಶಾಲೆಗಳನ್ನು ನಡೆಸುತ್ತಿದ್ದಾರೆ.  ಇವುಗಳಿಗೆ ಆರನೇ ತರಗತಿಗೆ ಪ್ರವೇಶ ಪಡೆಯಬಹುದು.  ಐದನೆಯ ತರಗತಿಯ ಪಠ್ಯಕ್ರಮವನ್ನು ಅನುಸರಿಸಿ ಆಯ್ಕೆ ಪರೀಕ್ಷೆ ನಡೆಸುತ್ತಾರೆ.  ವಿವಿಧ ವರ್ಗಗಳಿಗೆ ಹಾಗೂ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಮೀಸಲಾತಿ ಇರುತ್ತದೆ. ಆರ್ಥಿಕವಾಗಿ ದುರ್ಬಲರಿಗೂ ಅವಕಾಶವಿರುತ್ತದೆ. ಪ್ರವೇಶ ಅರ್ಜಿ ಮತ್ತು ವಿವರಗಳನ್ನು ಬಿ.ಇ.ಓ. ಆಫೀಸಿನಿಂದ ಪಡೆಯಬಹುದು. ಸಾಮಾನ್ಯವಾಗಿ ಬೇಸಿಗೆ ರಜೆಯ ಸುಮಾರಿಗೆ ಪರೀಕ್ಷೆಗಳು ನಡೆಯುತ್ತವೆ.

ಅರ್ಜುನ, ಚಿತ್ರದುರ್ಗ
*ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 70 ಅಂಕ ಪಡೆದಿದ್ದು, ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿ ಶೇ.79 ಅಂಕಗಳಿಸಿದ್ದೆ. ದ್ವಿತೀಯ ಪಿಯುಸಿಯಲ್ಲಿ ಹಾಜರಾತಿ ಕಡಿಮೆ ಆಗಿ ಪರೀಕ್ಷೆಗೆ ಕೂರಲಿಲ್ಲ. ಒಂದು ವರ್ಷ ಕಳೆದಿದೆ. ಈಗ ನಾನು ಎಸ್.ಎಸ್.ಎಲ್.ಸಿ. ಆಧಾರದ ಮೇಲೆ ಡಿಪ್ಲೋಮಾ ಮಾಡಬಹುದೇ. ಸರ್ಕಾರಿ ಸೀಟು ಸಿಗುತ್ತದೆಯೇ ? 
- ನೀವು ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು.  ಸ್ಪರ್ಧೆಯಲ್ಲಿ ಆಯ್ಕೆಗೊಂಡರೆ ಅವಕಾಶ ಸಿಗುತ್ತದೆ.  ನಿಮ್ಮ ಅಂಕಗಳಿಗೆ ಸಿಗಬಹುದಾದ ಸಾಧ್ಯತೆ ಇದೆ.  ಪ್ರಯತ್ನಿಸಿ, ಮೀಸಲಾತಿ ಅವಕಾಶಗಳಿದ್ದಲ್ಲಿ ಬಳಸಿಕೊಳ್ಳಿ.  ನಿಮ್ಮ ಪರಿಶ್ರಮ ಉತ್ತಮವಾಗಿದ್ದಲ್ಲಿ ಯಾವುದೇ ಡಿಪ್ಲೋಮಾ ಆದರೂ ಉದ್ಯೋಗ ದೊರಕಿಸಿ ಕೊಡುತ್ತದೆ.  ಇದು ನೀವು ಸೇರುವ ವಿದ್ಯಾ ಸಂಸ್ಥೆ ಮತ್ತಿತರ ಅನುಕೂಲಗಳನ್ನು ಅವಲಂಬಿಸುತ್ತದೆ.  ಆದರೂ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವಾಗ ಮೆಕ್ಯಾನಿಕಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಸಿವಿಲ್, ಅಟೋಮೊಬೈಲ್ ಹಾಗೂ ಕೆಲವು ಅಪರೂಪದ ವಿಷಯಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಾರೆ.

ಹೆಚ್.ಎಂ. ಶಶಿರೇಖಾ, ಹೊಸಪೇಟೆ
*ನಾನು 2012-13ರಲ್ಲಿ ಶೇ. 74 ಅಂಗಳಿಸಿ ಎಸ್.ಎಸ್.ಎಲ್.ಸಿ. ಪಾಸಾಗಿರುತ್ತೇನೆ.  ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡಿದ್ದು ಅದು ಕಷ್ಟವೆನಿಸಿದ್ದರಿಂದ ನಿಲ್ಲಿಸಿದ್ದೇನೆ. ಮುಂದೆ ಐಎಎಸ್ ಮಾಡಬೇಕೆಂಬ ಆಸೆ ಇದೆ. ಏನು ಮಾಡಬೇಕು ?
-ನೀವು ಕಲೆ ಅಥವಾ ವಾಣಿಜ್ಯ ವಿಭಾಗದಲ್ಲಿ ಮತ್ತೆ ಪಿಯುಸಿ ಮಾಡಿ ಮುಂದೆ ಪದವಿಗೆ ಸೇರಬಹುದು ಅಥವಾ ವಯಸ್ಸಿನ ಆಧಾರದ ಮೇಲೆ ನೇರವಾಗಿ ದೂರಶಿಕ್ಷಣದ ಮೂಲಕ ಪದವಿ ಮಾಡಬಹುದು.  ಪದವಿ ಇದ್ದಲ್ಲಿ ಐಎಎಸ್ ಪರೀಕ್ಷೆ ಬರೆಯುವ ಅರ್ಹತೆ ನಿಮಗೆ ಸಿಗುತ್ತದೆ.

ಅಭಿಲಾಷಾ ಎಸ್. ಜಿ. ಉತ್ತರ ಕನ್ನಡ
*ನಾನು ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ.  ನನಗೆ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂಬ ಆಸೆ.  ಅದಕ್ಕೆ ಬಿಕಾಂ ಆದವರಿಗೆ ಅನುಭವ ಇರಬೇಕಾ. ಎಂಕಾಂ ಮಾಡಿದರೆ ಆದ್ಯತೆ ಇರುತ್ತದೆಯೇ? 
- ಬ್ಯಾಂಕುಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕಿಯೆ ನಡೆಯುತ್ತದೆ. ಇದಕ್ಕೆ ಕೆಲವು ಪೂರ್ವಭಾವಿ ತರಬೇತಿಗಳು ಉಂಟು.  ನೀವು ಪತ್ರಿಕಾ ಜಾಹೀರಾತು ಅಥವಾ ವೈಬ್ ಸೈಟ್‌ ಮೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು.

ಸೋನಿಯಾ ಎನ್. ಚಂದಾಪುರ, ಆನೇಕಲ್
*ನಾನು ಈಗಷ್ಟೆ ವಾಣಿಜ್ಯ ವಿಭಾಗದಲ್ಲಿ ಮೊದಲ ಪಿಯುಸಿ ಪರೀಕ್ಷೆ ಬರೆದು ಶೇ.೭೫ಕ್ಕಿಂತ ಅಧಿಕ ಫಲಿತಾಂಶ ನಿರೀಕ್ಷಿಸುತ್ತಿದ್ದೇನೆ. ಮುಂದೆ ಶೇ. 85ಕ್ಕಿಂತ ಹೆಚ್ಚಿನ ಅಂಕಗಳಿಸಬೇಕೆಂಬ ಗುರಿ ಇದೆ. ಇದರಲ್ಲಿ ಥಿಯರಿ ಹೆಚ್ಚಾಗಿದ್ದು ಪರೀಕ್ಷೆಯಲ್ಲಿ ಸಮಯ ಸಾಲುವುದಿಲ್ಲ.  ಕೆಲ ಪ್ರಶ್ನೆಗಳನ್ನು ಬಿಡಬೇಕಾಗಿ ಬರುತ್ತ್ತದೆ.   ಅಂದಿನ ಪಾಠವನ್ನು ಅಂದೇ ಓದಲು ಆಗುತ್ತಿಲ್ಲ.  ಹೇಗೆ ಗುರಿ ಸಾಧಿಸಬಹುದು.  ಸಿಎ ಮಾಡಲು ಡಿಗ್ರಿ ಅವಶ್ಯಕವೇ ತಿಳಿಸಿ.
- ಪರೀಕ್ಷೆಗಾಗಿ ಚೆನ್ನಾಗಿ ಓದುವುದು ಎಷ್ಟು ಮುಖ್ಯವೋ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸಿ ಹೆಚ್ಚಿನ ಅಂಕಗಳಿಸುವುದೂ ಒಂದು ಕಲೆ ಹಾಗೂ ಅದು ವೈಜ್ಞಾನಿಕ ತಳಹದಿ ಹೊಂದಿರುತ್ತದೆ. ಇದನ್ನು ಅಭ್ಯಾಸದಿಂದಲೇ ಸಾಧಿಸಬೇಕಾಗುತ್ತದೆ.  ಪ್ರಶ್ನೆ ಪತ್ರಿಕೆಯ ಸ್ವರೂಪದ ಬಗ್ಗೆ ಸ್ಪಷ್ಟ ಅರಿವು, ಯಾವ  ಪ್ರಶ್ನೆಗಳಿಗೆ ನಿಗದಿ ಮಾಡಿರುವ ಅಂಕಗಳ ಆಧಾರದ ಮೇಲೆ ಉತ್ತರಿಸುವುದು ಒಳಿತು. ಎಷ್ಟು ಸಮಯದಲ್ಲಿ ಅದನ್ನು ಮುಗಿಸಬೇಕು ಎಂಬ ಬಗ್ಗೆ ಸರಿಯಾದ ಕಲ್ಪನೆ ಇರಬೇಕು.  ಪ್ರಶ್ನೆ ಪತ್ರಿಕೆ ಓದಿ ಅರ್ಥ ಮಾಡಿಕೊಳ್ಳಲು ಹಾಗೂ ಮುಂದೆ ಪುನರ್ ಪರಿಶೀಲನೆಗೆ ಸ್ವಲ್ಪ ಸಮಯ ಇಟ್ಟುಕೊಳ್ಳಬೇಕು. ಅತೀ ಆತ್ಮವಿಶ್ವಾಸ ಅಥವಾ ಅತೀ ಆತಂಕವಿಲ್ಲದೆ ಸಮಚಿತ್ತದಿಂದ  ದೀರ್ಘಕಾಲ ದಣಿವಾಗದಂತೆ ಬರೆದು, ಉತ್ತರಿಸುವ ಅಭ್ಯಾಸ ಮಾಡಿಕೊಳ್ಳಬೇಕು.  ಕಲಿತಿರುವ ವಿಷಯವನ್ನು ಹೇಗೆ ಆಕರ್ಷಕವಾಗಿ ನಿರೂಪಿಸಬೇಕು ಎಂಬ ಕಲೆ ಕರಗತ ಮಾಡಿಕೊಳ್ಳಬೇಕು. ಟೈಂ ಮ್ಯಾನೇಜ್‌ಮೆಂಟ್ ಎಂಬುದು ಬರೀ ಪರೀಕ್ಷೆಗಳಿಗೆ ಮಾತ್ರವಲ್ಲ ಜೀವನದ ಎಲ್ಲ ರಂಗಗಳಲ್ಲೂ ಪ್ರಯೋಜನಕ್ಕೆ ಬರುವುದರಿಂದ ಅದರ ಅಭ್ಯಾಸ, ಪಾಲನೆ ಅತಿ ಮುಖ್ಯ, ಸಿಎ ಪರೀಕ್ಷೆಗೆ ಪಿಯುಸಿ ಆದ ನಂತರ ಐಪಿಸಿಸಿ ಬರೆಯಬಹುದು.  ಡಿಗ್ರಿ ಓದಿದವರಿಗೆ ರಿಯಾಯಿತಿ ಉಂಟು.  ಮುಂದೆ ಮೂರು ವರ್ಷ ತರಬೇತಿ ಪಡೆದು ಅಂತಿಮ ಪರೀಕ್ಷೆ ಬರೆಯಬಹುದು.

ಮಂಜುನಾಥ ಬಾದರದಿನ್ನಿ, ರಾಯಚೂರು
*ನಾನು ಬಿಎ ಮುಗಿಸಿ ಎಂಬಿಎಗೆ ಸೇರಿದೆ. ಕಲಾ ವಿಭಾಗದ ವಿದ್ಯಾರ್ಥಿಯಾದ ನನಗೆ ಇದು ತುಂಬಾ ಕಷ್ಟಕರವೆನಿಸಿ, ಕೆಲವು ವಿಷಯಗಳು ಉಳಿದುಕೊಂಡವು.  ಮುಂದೆ ಅದನ್ನು ಬಿಟ್ಟು ನನ್ನ ಸ್ನೇಹಿತನೊಡನೆ ಐದಾರು ತಿಂಗಳಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ನಿರತನಾದೆ.  ನಮ್ಮ ತಂದೆಗೆ ಇದು ಇಷ್ಟವಿಲ್ಲ.  ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆಗೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕು ಪರೀಕ್ಷೆಗಳು, ನೌಕರಿ ಹುಡುಕಾಟ, ಎಂಬಿಎ ಪೂರೈಸಲು ಹೇಳುತ್ತಿದ್ದಾರೆ.  ಕೆಲವು ಸ್ನೇಹಿತರು ಎಂಎಸ್‌ಡಬ್ಲು ಮಾಡಲು ಸೂಚಿಸುತ್ತಿದ್ದಾರೆ.  ಏನು ಮಾಡಬೇಕೆಂದು ಗೊಂದಲದಲ್ಲಿದ್ದೇನೆ. 
- ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಡಳಿತ ಕ್ಷೇತ್ರಕ್ಕೆ ಇಳಿಯುವ ಆಸೆ. ನಿಮ್ಮ ತಂದೆಯವರಿಗೆ ನೀವು ಆದಷ್ಟು ಬೇಗ ಜೀವನದಲ್ಲಿ ಸೆಟಲ್ ಆಗಲಿ ಎಂಬ ಅಪೇಕ್ಷೆ. ಇವೆರಡೂ ಸರಿಯೇ.  ಆದರೆ ನೀವು  ನಿಮ್ಮ ಸಾಮರ್ಥ್ಯವನ್ನು ನೀವೇ ಮೌಲ್ಯಮಾಪನ ಮಾಡಿಕೊಳ್ಳಿ.  ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗಂಭೀರವಾಗಿದ್ದರೆ, ಅದರಲ್ಲಿ ಗುರಿಮುಟ್ಟಿಯೇ ಮುಟ್ಟುವೆನೆಂಬ ಛಲವಿದ್ದಲ್ಲಿ ಮಾತ್ರ ಅದನ್ನು ಅನುಸರಿಸಿ. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಂದು ಶಂಕುವಿನಾಕೃತಿಯ ಗೋಪುರಕ್ಕೆ ಹೋಲಿಸಬಹುದು. ಇದರಲ್ಲಿ ಲಭ್ಯವಿರುವ ನೌಕರಿಗಳ ಸಂಖ್ಯೆ, ಅದಕ್ಕಾಗಿ ಪ್ರಯತ್ನಿಸುತ್ತಿರುವವರ ಸಂಖ್ಯೆ, ಸ್ಪರ್ಧೆ ಗೆಲ್ಲಲು ಬೇಕಾದ ವಿಷಯ ಜ್ಞಾನ, ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಬಲ್ಲ ತಾಂತ್ರಿಕತೆ, ಇಷ್ಟೆಲ್ಲಾ ಅರ್ಹತೆ ಇದ್ದರೂ ಕೆಲವು ವೇಳೆ ನಾನಾ ಕಾರಣಗಳಿಂದ ಕೆಲಸ ಸಿಗದಿರಬಹುದಾದ ಪರಿಸ್ಥಿತಿ ಇರುತ್ತದೆ. ಹೀಗೆ ವೈಫಲ್ಯವನ್ನು ಸಹಿಸಿಕೊಳ್ಳಬೇಕಾದವರ ಸಂಖ್ಯೆ ಸಾಕಷ್ಟು ಹೆಚ್ಚಿದೆ.  ಆದ್ದರಿಂದ ನಿಮಗೆ ಎಂಬಿಎ ಕಷ್ಟವೆನಿಸಿದರೆ ಬಿಟ್ಟುಬಿಡಿ. ನಿಮ್ಮ ತಂದೆಯವರೊಡನೆ ಮನಬಿಚ್ಚಿ ಮಾತನಾಡಿ ತಜ್ಞರ, ಹಿರಿಯರ, ಅನುಭವಿಗಳ ಸಲಹೆ ಪಡೆಯಿರಿ.  ಸದ್ಯಕ್ಕೆ ಕೆಲಸಕ್ಕೆ ಪ್ರಯತ್ತಿಸುತ್ತಾ ಬೇಕೆನಿಸಿದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗಮನ ನೀಡಿ. ಇಲ್ಲವಾದರೆ ಉದ್ಯೋಗಕ್ಕೆ ನೆರವಾಗಬಲ್ಲ ನಿಮಗಿಷ್ಟವಾದ ಕೋರ್ಸಿಗೆ ಸೇರಿಕೊಳ್ಳಿ.

ಬಸವರಾಜ ಎನ್. ಹೊಸೂರು
*ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ಬಾಹ್ಯವಾಗಿ ಕನ್ನಡ, ಇತಿಹಾಸ, ಶಿಕ್ಷಣ ವಿಷಯಗಳೊಂದಿಗೆ ಬಿಎ ಪದವಿ ಪಡೆದಿದ್ದೇನೆ. ಈಗ ಬಡ್ತಿ ಪಡೆಯಲು ಯಾವ ವಿಷಯ ಆರಿಸಿಕೊಂಡರೆ ಅನುಕೂಲ.
- ನೀವು ಪ್ರೌಢ ಶಾಲೆಯಲ್ಲಿ ಬಡ್ತಿ ಅಪೇಕ್ಷಿತರ ಸೀನಿಯಾರಿಟಿ ಪಟ್ಟಿ ಪರಿಶೀಲಿಸಿ ಅಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಿ. ಆದರೂ ನಿಮ್ಮ ಆಸಕ್ತಿಯ ವಿಷಯಕ್ಕೆ ಆದ್ಯತೆ ನೀಡುವುದು ಉತ್ತಮ. ಪಿಯು ಶಿಕ್ಷಕರಾಗಲು ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯ ಬೇಕಾಗುತ್ತದೆ.

ಕವಿತ ಎನ್. ದಾವಣಗೆರೆ
*ನಾನು ಶೇ. 80 ಅಂಕಗಳಿಸಿ ಬಿ.ಎಡ್ ಮಾಡಿದ್ದೇನೆ. ಮುಂದೆ ಅರ್ಥ ಶಾಸ್ತ್ರದಲ್ಲಿ ಎಂ.ಎ ಮಾಡಿ ಆದರ್ಶ ಶಿಕ್ಷಕಿಯಾಗಬೇಕೆಂಬ ಕನಸು ಇದೆ. ನಮ್ಮ ಮನೆಯಲ್ಲಿ ಮೂವರು ಹೆಣ್ಣು ಮಕ್ಕಳಿದ್ದು, ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ.  ನಾನು ಚಿಕ್ಕಂದಿನಿಂದ ಅಲ್ಪಸ್ವಲ್ಪ ಗಳಿಸುತ್ತಲೇ ಓದುತ್ತಾ ಬಂದಿದ್ದೇನೆ. ದೂರ ಶಿಕ್ಷಣ ಎಂ.ಎ ಮಾಡಿದರೆ ಅಂಕ ಕಡಿಮೆ ಬರುತ್ತದೆ ಎಂದು ಸ್ನೇಹಿತರು ಹೇಳುತ್ತಾರೆ. ನೇರವಾಗಿ ಎಂ.ಎ ಮಾಡಲು ದಾವಣಗೆರೆಯಿಂದ ತೊಳಹುಣಸೆಗೆ ಬಸ್ಸಿನಲ್ಲಿ ಹೋಗಿ ಬರಬೇಕು.  ಸಮಯ ಸಾಲದೆ ಕೆಲಸ ಮಾಡಲು ಕಷ್ಟವಿದೆ. 
- ದೂರಶಿಕ್ಷಣದಲ್ಲಿ ಅಂಕಗಳಿಕೆ ಕಷ್ಟಕರ ಪ್ರಯತ್ನವನ್ನು ಅವಲಂಬಿಸುತ್ತದೆ.  ಅದರಿಂದ ಕಡಿಮೆ ಅಂಕ ಬರುವ ಸಾಧ್ಯತೆ ಇರುತ್ತದೆ. ನೀವು ನೇರವಾಗಿ ಎರಡು ವರ್ಷದ ಎಂ.ಎ ಮಾಡಿಕೊಳ್ಳಲು ಪ್ರಯತ್ನಿಸಿ. ಗೌರವಾಸ್ಪದವಾಗಿ ಹಣಗಳಿಸಬಹುದಾದ ಯಾವುದೇ ವೃತ್ತಿಯನ್ನು ಅವಲಂಬಿಸಲು ಹಿಂಜರಿಯಬೇಡಿ. ನೀವು ಸ್ವಲ್ಪ ನಿಧಾನವಾಗಿ ಅವಲೋಕಿಸಿದರೆ ನಿಮ್ಮ ಪರಿಸರದಲ್ಲಿ ಸಾಕಷ್ಟು ಅರೆಕಾಲಿಕ ವೃತ್ತಿಗಳು ಇದ್ದೇ ಇರುತ್ತವೆ.  ಮಕ್ಕಳಿಗೆ ಪಾಠ ಹೇಳುವುದು, ಸಣ್ಣ ಮಕ್ಕಳ ಶುಶ್ರೂಷೆ, ಅಡುಗೆ ಕೆಲಸ, ಡಿಟಿಪಿ, ಈವೆಂಟ್ ಮ್ಯಾನೇಜ್‌ಮೆಂಟ್‌ಗಳಲ್ಲಿ ಕೆಲಸ, ಅಂಗಡಿಗಳಲ್ಲಿ ಪಾರ್ಟ್ ಟೈಂ ಹೀಗೆ ಹಲವು ಹತ್ತು ಅವಕಾಶಗಳು ಇದ್ದೇ ಇರುತ್ತವೆ.  ಅದಲ್ಲದೆ ತಾಯಿ ಮತ್ತು ಸೋದರಿಯರ ನೆರವಿನಿಂದ ಮನೆಯಲ್ಲಿ ಹೊಲಿಗೆ, ಹಪ್ಪಳ, ಕವರ್ ಮುಂತಾದ ವಸ್ತುಗಳ ತಯಾರಿಕೆ ಇಂಥವುಗಳನ್ನು ಮಾಡಬಹುದು. ಹೀಗೆ ಕೆಲಸ ಮಾಡುತ್ತಲೇ ಓದಿಕೊಂಡು ಮುಂದೆ ಬಂದಿರುವ ಅನೇಕರನ್ನು ನಾನು ಕಂಡಿದ್ದೇನೆ. ನೀವು ಆತ್ಮ ವಿಶ್ವಾಸದಿಂದ ನಿಮ್ಮ ಗುರಿಸಾಧಿಸಲು ಪ್ರಯತ್ನಿಸಿ.
ನಿಮಗೆ ಒಳ್ಳೆಯದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT