ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಕಾಸ್ಟಿಂಗ್‌ ಮನೆ ರೂ 2.40 ಲಕ್ಷಕ್ಕೆ!

Last Updated 24 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಮೊದಲೇ ಅಚ್ಚು ಹಾಕುವಂತಹ (ಪ್ರೀ–ಕಾಸ್ಟ್‌) ತಾಂತ್ರಿಕತೆಯನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಸದೃಢವಾದ ಮನೆಗಳನ್ನು ನಿರ್ಮಿಸುವ ಕಾರ್ಯ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈನಂತಹ ಮಹಾ ನಗರಗಳಲ್ಲಿ ವೇಗವಾಗಿ ನಡೆಯುತ್ತಿದೆ. ಇತ್ತೀಚೆಗಂತೂ ಬಹುತೇಕ ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ ಹಾಗೂ ಬಹು ಮಹಡಿ ಕಟ್ಟಡಗಳ ನಿರ್ಮಾಣಕ್ಕೆ ‘ಪ್ರೀ–ಕಾಸ್ಟ್‌’ ತಾಂತ್ರಿಕತೆಯನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ.

ದೇಶದ ಮಹಾನಗರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಈ ತಾಂತ್ರಿಕತೆಯನ್ನು ಗ್ರಾಮೀಣ ಪ್ರದೇಶದ ಜನರಿಗೂ ಪರಿಚಯಿಸುವ ಕಾರ್ಯ ಇತ್ತೀಚೆಗೆ ರಾಜ್ಯದಲ್ಲಿಯೂ ಆರಂಭವಾಗಿದೆ. ಗ್ರಾಮೀಣ ಭಾಗದ ಬಡ ಜನರಿಗೂ ಈ ಉನ್ನತ ತಾಂತ್ರಿಕತೆಯ ನೆರವು ದೊರೆಯಬೇಕು, ಅದರ ಪ್ರಯೋಜನ ಪಡೆದುಕೊಂಡು ಸದೃಢವಾದ ಮನೆಗಳನ್ನು ಬಡ ಜನರೂ ನಿರ್ಮಿಸಿಕೊಳ್ಳಬೇಕು ಎಂಬ ಉದ್ದೇಶ ದಿಂದ ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರ (ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಅಧೀನ ಸಂಸ್ಥೆ) ಈ ಕಾರ್ಯದಲ್ಲಿ ನಿರತವಾಗಿದೆ.

ಏನಿದು ‘ಪ್ರೀ–ಕಾಸ್ಟ್‌’

* ಅಲ್ಪಾವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ

* ಸಾಂಪ್ರದಾಯಿಕ ಶೈಲಿ ಮನೆಗಿಂತ ಶೇ 35ರಷ್ಟು ಕಡಿಮೆ ವೆಚ್ಚ

* ನೈಸರ್ಗಿಕ ವಿಪತ್ತು ಸಂಭವಿಸಿದರೂ ಹೆಚ್ಚಿನ ಹಾನಿಯಾಗದ ಕಟ್ಟಡ

* ದೀರ್ಘಕಾಲ ಬಾಳಿಕೆ ಬರುವ ಮನೆಗಳು

ಮೊದಲೇ ಸಿದ್ಧಪಡಿಸಿದ ಅಚ್ಚುಗಳಲ್ಲಿ ನಿಯಮಿತ ಪ್ರಮಾಣದಷ್ಟು ಸಿಮೆಂಟ್‌, ಮರಳು, ಜಲ್ಲಿ ಬೆರೆಸಿ ಗೋಡೆ ಹಾಗೂ ಮೇಲ್ಛಾವಣಿಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಹೀಗೆ ವಿವಿಧ ಅಳತೆಗಳಲ್ಲಿ ಸಿದ್ಧಪಡಿಸಿದ ಗೋಡೆ, ಮೇಲ್ಛಾವಣಿಗಳನ್ನು ಸೂಕ್ತ ರೀತಿಯಲ್ಲಿ ಜೋಡಿಸುವ ಮೂಲಕ ಮನೆ ಮೊದಲಾಧ ಕಟ್ಟಡಗಳನ್ನು ಕ್ಷಿಪ್ರಗತಿಯಲ್ಲಿ ನಿರ್ಮಿಸಬಹುದಾಗಿದೆ. ಈ ತಾಂತ್ರಿಕತೆಯು ಯುರೋಪ್‌ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದು, ಇತ್ತೀಚಿಗೆ ಭಾರತದಲ್ಲಿಯೂ ಬಳಕೆ ಹೆಚ್ಚುತ್ತಿದೆ.

ಈಗಾಗಲೇ ಬೆಂಗಳೂರಿನ ವಿವಿಧೆಡೆ ‘ಪ್ರೀ–ಕಾಸ್ಟ್‌’ ಮಾದರಿಯಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅತ್ಯಾಧುನಿಕ ಮತ್ತು ಸುಧಾರಿತ ತಂತ್ರಜ್ಞಾನ ಬಳಸಿ ಗೋಡೆ ಮತ್ತು ಮೇಲ್ಛಾವಣಿಯನ್ನು ಸಿದ್ಧಪಡಿಸುವುದರಿಂದ ಕಟ್ಟಡಗಳು ಗುಣಮಟ್ಟದಿಂದ ಕೂಡಿರುತ್ತವೆ ಎನ್ನುತ್ತಾರೆ ರಾಜ್ಯ ಹ್ಯಾಬಿಟೇಟ್‌ ಕೇಂದ್ರದ ಯೋಜನಾ ವ್ಯವಸ್ಥಾಪಕ ಶ್ರೀನಿವಾಸ್‌.

ಗ್ರಾಮೀಣ ಪ್ರದೇಶಕ್ಕೆ ಮಾದರಿ
ಗ್ರಾಮೀಣ ಭಾಗದ ಕಡು ಬಡವರು, ಅನಕ್ಷರಸ್ತರಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಹೆಬಿಟೇಟ್‌ ಕೇಂದ್ರ ‘ಪ್ರೀ–ಕಾಸ್ಟ್‌’ ಮಾದರಿ ಮನೆಗಳನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದೆ.

ರೂ 2.40 ಲಕ್ಷಕ್ಕೆ ಮನೆ ಸಿದ್ಧ!
ಈ ತಾಂತ್ರಿಕತೆಯನ್ನು ಬಳಸಿ ಸುಮಾರು 285 ಚದರ ಅಡಿ ವಿಸ್ತಾರದಲ್ಲಿ ಮನೆ ನಿರ್ಮಿಸಲು ರೂ 2.40 ಲಕ್ಷ ವೆಚ್ಚವಾಗುತ್ತದೆ. ಒಂದು ಕೊಠಡಿ, ಅಡುಗೆ ಮನೆ, ಹಜಾರ, ಶೌಚಾಲಯ, ಸ್ನಾನಗೃಹವನ್ನು ಇದು ಒಳಗೊಂಡಿ ರುತ್ತದೆ. ಕೇವಲ ಏಳು ದಿನಗಳಲ್ಲಿ ಈ ಮನೆ ನಿರ್ಮಿಸ ಬಹುದು. ಇದು ಪರಿಸರ ಸ್ನೇಹಿ ಕೂಡ. ಅಲ್ಪ ಅವಧಿ ಯಲ್ಲಿ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆಗಳು ಗ್ರಾಮೀಣ ಭಾಗದ ಜನರಿಗೆ ದೊರಕಿಸಿಕೊಡುವುದೇ ಕೇಂದ್ರದ ಪ್ರಮುಖ ಉದ್ದೇಶವಾಗಿದೆ ಎನ್ನುತ್ತಾರೆ ಶ್ರೀನಿವಾಸ್‌ (ಮೊ: 98442 35369).

ಗ್ರಾಮೀಣ ಭಾಗದ ಸಮಸ್ಯೆ
ನಗರ, ಪಟ್ಟಣ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸುವ ಜನರಿಗೆ ಸೂಕ್ತ ತಾಂತ್ರಿಕ ಸಲಹೆಗಾರರು, ಎಂಜಿನಿಯರ್‌ಗಳು ದೊರೆಯುತ್ತಾರೆ. ಅಲ್ಲದೆ ನುರಿತ ಕಾರ್ಮಿಕರೂ ಲಭ್ಯರಿರುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಈ ಸೌಲಭ್ಯಗಳು ದೊರೆಯುವುದಿಲ್ಲ. ಹಾಗಾಗಿ ಅವರು ಸ್ಥಳೀಯವಾಗಿ ದೊರೆಯುವ ಸಂಪನ್ಮೂಲ ಬಳಸಿ, ಸಾಂಪ್ರದಾಯಿಕ ರೀತಿಯಲ್ಲಿ ಮನೆ ಕಟ್ಟಿಕೊಳ್ಳುತ್ತಾರೆ. ಅವುಗಳ ಗುಣಮಟ್ಟ ಕಡಿಮೆ ಇರುತ್ತವೆ. ಅವರಿಗೆ ಗುಣಮಟ್ಟದ ಮನೆಗಳನ್ನು ₨2.40 ಲಕ್ಷ ವೆಚ್ಚದಲ್ಲಿ ನಿರ್ಮಿಸಬಹುದಾದ ಮಾದರಿ ಯನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಅವರು.

ಸರ್ಕಾರದ ನೆರವು
‘ವಸತಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ದಿಂದ ರೂ 1.20 ಲಕ್ಷ ಆರ್ಥಿಕ ನೆರವು ದೊರೆಯುತ್ತದೆ. ಉದ್ಯೋಗ ಚೀಟಿ ಹೊಂದಿರುವವರು ನರೇಗಾ ದಲ್ಲಿಯೂ ನೆರವು ಪಡೆಯಬಹುದು. ಅಲ್ಲದೆ ಶೌಚಾಲಯ ನಿರ್ಮಿಸಿಕೊಳ್ಳಲು ರೂ 12 ಸಾವಿರ ನೆರವು ದೊರೆಯುತ್ತದೆ. ಜತೆಗೆ ಬ್ಯಾಂಕಿನ ಸಾಲ ಅಥವಾ ವೈಯಕ್ತಿಕ ಉಳಿತಾಯ ಅಥವಾ ಮತ್ತಿತರ ಮೂಲದ ಹಣವನ್ನು ಬಳಸಿ ಈ ಯೋಜನೆಯಡಿ ಗುಣಮಟ್ಟದ ಮನೆ ನಿರ್ಮಿಸಿಕೊಳ್ಳ ಬಹುದಾಗಿದೆ’ ಎಂಬುದು ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಧನುಷ್‌ ಅವರ ಕಿವಿಮಾತು.

ಪರಿಸರ ಸ್ನೇಹಿ ಹೇಗೆ?
‘ಪ್ರೀ–ಕಾಸ್ಟ್‌’ ತಾಂತ್ರಿಕತೆಯಲ್ಲಿ ನಿರ್ಮಾಣ ಮಾಡುವ ಈ ಮನೆಗಳು ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುತ್ತವೆ. ಕಾರ್ಖಾನೆಗಳಲ್ಲಿಯೇ ಸಿಮೆಂಟ್‌ ಬಳಸಿ ಗೋಡೆಯನ್ನು ಸಿದ್ಧಪಡಿಸುವುದರಿಂದ ಇಟ್ಟಿಗೆಗಳ ಅವಶ್ಯಕತೆ ಇರುವುದಿಲ್ಲ.

ಸುಟ್ಟ ಇಟ್ಟಿಗೆ ಸಿದ್ಧಪಡಿಸಲು ಸಾಕಷ್ಟು ಮರಗಳನ್ನು ಉರುವಲಾಗಿ ಬಳಸಲಾಗುತ್ತದೆ. ‘ಪ್ರೀ–ಕಾಸ್ಟ್‌’ ತಾಂತ್ರಿಕತೆಯಲ್ಲಿ ಇಟ್ಟಿಗೆಯೇ ಬೇಡವಾಗಿರುವುದರಿಂದ ಸಾಕಷ್ಟು ಮರಗಳನ್ನು ಉಳಿಸಿದಂತಾಗುತ್ತದೆ ಎಂಬುದು ಶ್ರೀನಿವಾಸ್‌ ಪ್ರತಿಪಾದನೆ.

ಅಲ್ಲದೆ ಈ ಮಾದರಿಯ ಮನೆಗಳಿಗೆ ಬಳಸುವ ಮರಳಿನ ಪ್ರಮಾಣವೂ ಕಡಿಮೆ. ಜಲ್ಲಿಕಲ್ಲಿನ ಪುಡಿ ಅಥವಾ ಕೃತಕ ಮರಳನ್ನು ಇದಕ್ಕೆ ಬಳಸಲಾಗುತ್ತದೆ. ಹಾಗಾಗಿ ನದಿ ಮೂಲದಿಂದ ಬಗೆದು ತೆಗೆಯುವ ಮರಳು ಅಗತ್ಯವಿರುವುದಿಲ್ಲ. ಅಂದರೆ ನಿಸರ್ಗ ಸಂಪತ್ತನ್ನು ಉಳಿಸಲು ಈ ತಂತ್ರಜ್ಞಾನ ಸಹಕಾರಿ. ಜತೆಗೆ ಸಾಂಪ್ರದಾಯಿಕ ಶೈಲಿ ಮನೆಗಳನ್ನು ನಿರ್ಮಿಸುವಾಗ ಮೇಲ್ಛಾವಣಿಯನ್ನು ಭದ್ರವಾಗಿ ನಿಲ್ಲಿಸಲು ನೀಲಗಿರಿ ಅಥವಾ ಇತರ ಮರಗಳ ಕಂಬಗಳನ್ನು ಬಳಸಲಾಗುತ್ತದೆ. ಅದರ ಅವಶ್ಯಕತೆಯೂ ಈ ಸಿದ್ಧ ಮಾದರಿ ಮನೆಗಳಿಗೆ ಬೇಕಾಗದು. ಅಂದರೆ, ಈ ತಂತ್ರಜ್ಞಾನದ ಕಟ್ಟಡಗಳು ಮರ, ನದಿ, ಮರಳಿನ ಸಂಪತ್ತನ್ನು ಉಳಿಸಲು ನೆರವಾಗುವುದರಿಂದ ಪರಿಸರ ಸ್ನೇಹಿ ಮನೆಯೇ ಆಗಿವೆ ಎನ್ನುತ್ತಾರೆ ಶ್ರೀನಿವಾಸ್‌.

ಕಾರ್ಮಿಕರ ಕೊರತೆಗೆ ಉತ್ತರ
ನಗರ ಮತ್ತು ಗ್ರಾಮೀಣ ಭಾಗದ ಬಹುತೇಕ ಕಡೆ ಕಾರ್ಮಿಕರ ಕೊರತೆ ಇದೆ. ಆದರೆ, ‘ಪ್ರೀ–ಕಾಸ್ಟ್‌’ ಕಟ್ಟಡದಲ್ಲಿ ಕ್ಯೂರಿಂಗ್‌ ಸೇರಿದಂತೆ ಬಹುತೇಕ ಎಲ್ಲ ಕಾರ್ಯವೂ ಕಾರ್ಖಾನೆಯಲ್ಲಿಯೇ ನಡೆದು ಹೋಗುತ್ತದೆ. ಸಿದ್ಧಪಡಿಸಿದ ಗೋಡೆ, ಮೇಲ್ಛಾವಣಿಗಳನ್ನು ಕ್ರೇನ್‌ಗಳ ನೆರವಿನಿಂದ ಸೂಕ್ತ ರೀತಿಯಲ್ಲಿ ಜೋಡಿಸುವ ಕೆಲಸವಷ್ಟೇ ಬಾಕಿ ಇರುತ್ತದೆ. ಹಾಗಾಗಿ ಕಟ್ಟಡ ಕಾರ್ಮಿಕರ ಕೊರತೆಯನ್ನೂ ಈ ತಂತ್ರಜ್ಞಾನ ನೀಗಿಸುತ್ತದೆ.

ಕಾರ್ಖಾನೆಯಲ್ಲಿ ನುರಿತ ಎಂಜಿನಿಯರ್‌ಗಳು ಗೋಡೆಗಳ ಸಾಮರ್ಥ್ಯವನ್ನು ಪರೀಕ್ಷಿಸುತ್ತಾರೆ. ಹಾಗಾಗಿ ಗುಣಮಟ್ಟದ ಬಗ್ಗೆ ಖಾತ್ರಿ ಇದೆ. 50ರಿಂದ 80 ವರ್ಷದವರೆಗೆ ಈ ಮನೆಗಳು ಬಾಳಿಕೆ ಬರುತ್ತವೆ. ನೈಸರ್ಗಿಕ ವಿಪತ್ತು ಸಂಭವಿಸಿದರೂ ಹೆಚ್ಚಿನ ಹಾನಿ ಆಗುವುದಿಲ್ಲ. ಈ ತಂತ್ರಜ್ಞಾನದಡಿ ಕಟ್ಟಡ ನಿರ್ಮಿಸಲು ಬಳಸುವ ಬಹುತೇಕ ವಸ್ತುಗಳನ್ನು ಪುನರ್‌ ಬಳಕೆ ಮಾಡಬಹುದಾಗಿದೆ ಎಂದು ಈ ತಾಂತ್ರಿಕತೆಯ ಇನ್ನೊಂದು ಮಗ್ಗಲನ್ನೂ ಪರಿಚಯಿಸುತ್ತಾರೆ ಶ್ರೀನಿವಾಸ್‌.

ಬೆಂಗಳೂರಿನ ರಾಜಾನುಕುಂಟೆ, ಯಲಹಂಕ ಹಾಗೂ ರಾಮನಗರ ಜಿಲ್ಲೆಯ ಕನಕಪುರದಲ್ಲಿ ‘ಪ್ರೀ–ಕಾಸ್ಟ್‌’ ಮಾದರಿಯ ವಸತಿ ಯೋಜನೆ ಕೈಗೊಳ್ಳಲಾಗಿದೆ. ಇತರ ಜಿಲ್ಲೆಗಳಿಂದಲೂ ಬೇಡಿಕೆ ಇದ್ದು, ಅವುಗಳನ್ನು ಪೂರೈಸುವ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಜಿ.ಜಗದೀಶ್‌ ಕಾರ್ಯಮಗ್ನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT