ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಸಿದವರ ಹುಡುಕಿ ಹೊರಟ ಬಾಲಕಿಯರು!

ಇಬ್ಬರನ್ನು ರಕ್ಷಿಸಿದ ಚಿತ್ರದುರ್ಗ ಮಹಿಳಾ ಸಾಂತ್ವನ ಕೇಂದ್ರ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರೀತಿಯ ಬಲೆಗೆ ಬಿದ್ದು ತುಮಕೂರಿಗೆ ಹೊರಟಿದ್ದ ಶಿವಮೊಗ್ಗ ಮತ್ತು ಭದ್ರಾ­ವತಿಯ ಬಾಲಕಿಯರಿಬ್ಬ­ರನ್ನು ಚಿತ್ರದುರ್ಗದ ಅಂಗನವಾಡಿ ಸಹಾಯಕಿ­ಯೊಬ್ಬರು ರಕ್ಷಿಸಿ ಜಿಲ್ಲಾ ಸಾಂತ್ವನ ಕೇಂದ್ರದ ವಶಕ್ಕೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ. ಸಂಜೆ ಇವರಿಬ್ಬ­ರನ್ನು  ಪೋಷಕರಿಗೆ ಒಪ್ಪಿಸಲಾಯಿತು.

ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದ ಈ ಶಾಲಾ ಬಾಲಕಿಯರು, ಚಿತ್ರದುರ್ಗದ ಕೆಎಸ್‌­ಆರ್‌­ಟಿಸಿ ಬಸ್‌ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಇಳಿ­ದಿ­ದ್ದಾರೆ. ಶಿವಮೊಗ್ಗದಲ್ಲಿ ಒಂದೇ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಈ ಬಾಲಕಿಯರನ್ನು ಬಸ್‌ ನಿಲ್ದಾಣ­ದಲ್ಲಿ ಕಂಡು ಸಂಶಯಗೊಂಡ ಮುಖ್ಯ ಶಿಕ್ಷಕಿ­ಯೊಬ್ಬರು ಕರೆದು ವಿಚಾರಿಸಿದ್ದಾರೆ.

‘ನಾವು ಕೃಷಿ ವಿಜ್ಞಾನ ಓದುತ್ತಿದ್ದು, ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದೇವೆ. ಇಲ್ಲಿ ನಮಗೆ ಯಾರೂ ಪರಿ­ಚಯ­ದವರಿಲ್ಲ; ಉಳಿದುಕೊಳ್ಳಲು ಅವಕಾಶ ಮಾಡಿ­ಕೊಡಿ’ ಎಂದು ಬಾಲಕಿಯರು ಕಥೆ ಹೆಣೆದಿದ್ದಾರೆ. ಕೊನೆಗೆ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಅಂಗನ­ವಾಡಿ ಸಹಾಯಕಿ ತಮ್ಮ ಮನೆಯಲ್ಲಿ ಆಶ್ರಯ ನೀಡಿ­ದ್ದಾರೆ. ಶುಕ್ರವಾರ ಚಿತ್ರದುರ್ಗದ ಬಸವೇಶ್ವರ ವಿದ್ಯಾ­ಸಂಸ್ಥೆಯ ಜಿಲ್ಲಾ ಸಾಂತ್ವನ ಕೇಂದ್ರಕ್ಕೆ ಬಾಲಕಿಯರನ್ನು ಕರೆದುಕೊಂಡು ಹೋಗಿದ್ದಾರೆ.

ಪ್ರೇಮ ಪ್ರಕರಣ: ಕೇಂದ್ರದ ಆಪ್ತ ಸಲಹೆಗಾರರಾದ ಮಂಜುಳಾ ಮತ್ತು ಶಂಕರಪ್ಪ ಅವರು, ಬಾಲಕಿಯ­ರನ್ನು ಕೌನ್ಸೆಲಿಂಗ್‌ಗೆ ಒಳಪಡಿ­ಸಿದಾಗ ಆರಂಭದಲ್ಲಿ ಸುಳ್ಳು ಹೇಳಿದ ಬಾಲಕಿಯರು ನಂತರ ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿನಿ, ಪೇಂಟರ್‌ ಒಬ್ಬನನ್ನು ಪ್ರೀತಿಸು­ತ್ತಿದ್ದು, ಪೋಷಕರಿಗೆ ವಿಷಯ ತಿಳಿದ ಕಾರಣ ಮನೆ ಬಿಟ್ಟು ಬಂದಿರುವುದಾಗಿ ಬಹಿರಂಗ­ಪಡಿಸಿದ್ದಾಳೆ ಎಂದು ಶಂಕರಪ್ಪ ಹೇಳಿದರು.

ಮತ್ತೊಬ್ಬಳು, ‘ನಾನು ಆಟೊ ಚಾಲಕನನ್ನು ಪ್ರೀತಿಸು­ತ್ತಿದ್ದೆ. ಆತ ನಿತ್ಯ ನನ್ನನ್ನು ಕಾಲೇಜಿಗೆ ಕರೆದು­ಕೊಂಡು ಹೋಗುತ್ತಿದ್ದ. ಒಂದು ದಿನ ಹಣ್ಣಿನ ರಸ­ದಲ್ಲಿ ಮತ್ತೇರಿಸುವ ಔಷಧಿ ಬೆರೆಸಿ ನನ್ನ ಮೇಲೆ ದೌರ್ಜನ್ಯ ಮಾಡಲು ಪ್ರಯತ್ನಿಸಿದ. ಘಟನೆ ಬಳಿಕ ನಾನು ಆತನ ಸಹವಾಸ ಕೈಬಿಟ್ಟೆ. ನಂತರ ತುಮ­ಕೂರಿನಿಂದ ಮೊಬೈಲ್‌ ಮೂಲಕ ಅಪರಿಚಿತನ ಪರಿ­ಚಯ­ವಾಗಿ ಅವನನ್ನು ಪ್ರೀತಿಸುತ್ತಿದ್ದೇನೆ. ಈಗ ಆತ­­ನನ್ನು ಭೇಟಿ­ಯಾಗಲು ಹೊರಟಿದ್ದೇನೆ’ ಎಂದಿದ್ದಾಳೆ.

ಸಾಂತ್ವನ ಕೇಂದ್ರದವರ ಪ್ರಶ್ನೆಗಳಿಗೆ ಉತ್ತರಿಸು­ತ್ತಿದ್ದ ವಿದ್ಯಾರ್ಥಿನಿಯರು, ‘ನಾವಷ್ಟೇ ಅಲ್ಲ, ಇದೇ ರೀತಿ ಅನೇಕ ಗೆಳತಿಯರು ಪ್ರೇಮದ ಬಲೆಯಲ್ಲಿ ಬಿದ್ದಿ­ದ್ದಾರೆ’ ಎಂಬ ಆತಂಕಕಾರಿ ಮಾಹಿತಿ ನೀಡಿದ್ದಾರೆ. ಬಾಲಕಿಯರನ್ನು ಅವರ ತಂದೆ– ತಾಯಿ ಕರೆದು­ಕೊಂಡು ಹೋಗಿದ್ದಾರೆ. ‘ಹಿಂದೆ ನಾವು ಬುದ್ಧಿ ಹೇಳಿ­ದ್ದೇವೆ. ಮುಂದೆ ಎಚ್ಚರಿಕೆ ವಹಿಸುತ್ತೇವೆ. ಇವರಿಬ್ಬ­ರನ್ನು ಪ್ರೇಮಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಪೋಷಕರು ತಿಳಿಸಿದ್ದಾರೆ. ಇಬ್ಬರ ತಂದೆಯರೂ ರೈತಾಪಿ ವರ್ಗದವರು.

ಬಾಲಕಿಯ ಮದುವೆ; ಜೈಲು: ಎರಡು ಮದುವೆ­ಯಾಗಿ ವಿಚ್ಛೇದನ ಪಡೆದ 40 ವರ್ಷದ ವ್ಯಕ್ತಿಯೊಬ್ಬ, ಕೆಲವು ದಿನಗಳ ಹಿಂದಷ್ಟೇ ಚಿತ್ರದುರ್ಗ­ದಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಬಿಹಾರಕ್ಕೆ ಕರೆದು­ಕೊಂಡು ಹೋಗಿ ಮದುವೆ­ಯಾಗಿದ್ದ. ಈ ಪ್ರಕರಣದ ಬೆನ್ನುಹತ್ತಿದ ಸಾಂತ್ವನ ಕೇಂದ್ರದವರು ಆತನಿಗೆ ಜೈಲು ಶಿಕ್ಷೆಯಾಗುವಂತೆ ಮಾಡಿದ್ದಾರೆ. ವಾರಕ್ಕೆ 4–5 ಬಾಲಕಿಯರ ನಾಪತ್ತೆ ಪ್ರಕರಣ ಪ್ರತಿ ಜಿಲ್ಲೆಗಳಲ್ಲೂ ನಡೆಯು­ತ್ತಿದೆ ಎಂದು ಸಾಂತ್ವನ ಕೇಂದ್ರದವರು ಬೇಸರ ವ್ಯಕ್ತಪಡಿಸಿದರು.

ಜಾಗೃತಿ ಕಾರ್ಯಕ್ರಮ
ಈ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಬಾಲಕಿ­ಯರು ನಾಪತ್ತೆಯಾ­ಗ­ದಂತೆ ಹಾಗೂ ಕೆಲವು ವಿದ್ಯಾರ್ಥಿನಿ­ಯರು ಪ್ರೀತಿ– ಪ್ರೇಮದ ಬಲೆಗೆ ಸಿಲುಕಿ ಮೋಸಕ್ಕೆ ಒಳಗಾಗದಂತೆ ತಡೆ­ಯಲು ಜಿಲ್ಲೆಯ ಎಲ್ಲ ಶಾಲಾ – ಕಾಲೇಜು­ಗ­ಳಲ್ಲೂ ವಿದ್ಯಾರ್ಥಿನಿಯ­ರಲ್ಲಿ ಹೆಚ್ಚಿನ ಜಾಗೃತಿ ಮೂಡಿ­ಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಪೋಷ­ಕರು ಕೂಡ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.

– ಪಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT