ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮದ ಕಾಣಿಕೆ

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

* ‘ಲೊಡ್ಡೆ’ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಛಾಯೆ ಇರುವುದು ಯಾವ ಕಾರಣಕ್ಕಾಗಿ?
ವಿಷ್ಣುವರ್ಧನ್ ಅವರು ತಮ್ಮ ಧ್ವನಿಯನ್ನು ಬೇರೆ ಯಾವ ಕಲಾವಿದರಿಗೂ ಕೊಟ್ಟಿಲ್ಲ. ಎಂದೂ ಮತ್ತೊಬ್ಬರಿಗೆ ಡಬ್ಬಿಂಗ್ ಮಾಡಿಲ್ಲ. ಆದರೆ ನನಗೆ ದನಿ  ನೀಡಿದ್ದಾರೆ. ವೇದಿಕೆಯ ಒಂದು ಕಾರ್ಯಕ್ರಮದಲ್ಲಿ ನನಗಾಗಿ ದನಿ ಕೊಟ್ಟಿದ್ದಾರೆ. ಈ ಮಾತು ಅತಿಶಯೋಕ್ತಿ ಎನಿಸುತ್ತದಾದರೂ ನಿಜ. ‘ಆಪ್ತರಕ್ಷಕ’ ಸಿನಿಮಾದ ಸಮಯದಲ್ಲಿ ನನ್ನ 200ನೇ ಸಿನಿಮಾವನ್ನು ನೀನು ನಿರ್ದೇಶಿಸಬೇಕು ಎಂದಿದ್ದರು.

‘ಆಪ್ತರಕ್ಷಕ’ ಶೂಟಿಂಗ್‌ನಲ್ಲಿ ನನ್ನ ಪಾತ್ರ ನೋಡಿ ವಿಪರೀತ ನಗುತ್ತಿದ್ದರು. ನಿರ್ದೇಶಕ ಪಿ. ವಾಸು, ‘ನೋಡಿ ಕೋಮಲ್ ಜತೆ ಮಗು ರೀತಿ ವಿಷ್ಣುವರ್ಧನ್ ನಗುತ್ತಿದ್ದಾರೆ’ ಎಂದಿದ್ದರು.

ನಾನು ದೂರ ಕೂತಾಗ, ‘ದೂರ ಕೂರುವುದಕ್ಕೆ ನೀನೇನೂ ಹೀರೊಯಿನ್ ಅಲ್ಲ, ಇಲ್ಲಿ ಬಾ’ ಎಂದು ಹತ್ತಿರ ಕರೆಯುತ್ತಿದ್ದರು. ಹೀಗೆ ನನ್ನ ಮತ್ತು ವಿಷ್ಣು ಸರ್‌ ನಡುವೆ ಒಂದು ಭಾವುಕ ಸಂಬಂಧವಿದೆ. ಹಾಗಾಗಿ, ‘ಲೊಡ್ಡೆ’ ಚಿತ್ರ ವಿಷ್ಣು ಸರ್‌ ಅವರಿಗೆ ನನ್ನ ಚಿಕ್ಕ ಗೌರವ ಅರ್ಪಣೆ. ನಾನು ಸುಮ್ಮನೆ ಅವರ ಹೆಸರು ಬಳಸಿಕೊಂಡಿದ್ದರೆ ಅದು ಮಾರುಕಟ್ಟೆ ತಂತ್ರವಾಗುತ್ತಿತ್ತು. ಆದರೆ, ಇಲ್ಲಿ ಮಾರುಕಟ್ಟೆ ಅನುಕೂಲಗಳ ಜೊತೆಗೆ ಅಭಿಮಾನದ ಕಳಕಳಿಯು ಇದೆ.

* ವಿಷ್ಣುವರ್ಧನ್ ಅವರನ್ನು ಚಿತ್ರದಲ್ಲಿ ಯಾವ ರೀತಿ ತೋರಿಸಿದ್ದೀರಿ?
ಅವರನ್ನು ಜೀವಂತವಾಗಿ ತೋರಿಸುವುದಕ್ಕೆ ಕಷ್ಟಪಟ್ಟಿದ್ದೇವೆ. ಅದನ್ನು ವಿವರಿಸಿದರೆ ಮಜಾ ಇರುವುದಿಲ್ಲ. ತೆರೆಯಲ್ಲಿಯೇ ನೋಡಬೇಕು. ಅದೇ ಇಲ್ಲಿನ ಕುತೂಹಲ.

* ‘ಲೊಡ್ಡೆ’ಯ ಬಗ್ಗೆ ಹೇಳಿ?
ಚಿಕ್ಕಚಿಕ್ಕ ಎಪಿಸೋಡ್‌ಗಳಂತೆ ಕಥೆ ಇದೆ. ಸಿನಿಮಾ ಪೂರ್ಣ ಮನರಂಜನೆ ಇದೆ. ಪ್ರತಿ ಚಿತ್ರದಲ್ಲೂ ನಾನು ಉತ್ತಮವಾಗಿಯೇ ತೊಡಗಿಸಿಕೊಳ್ಳುವೆ. ಪ್ರಯತ್ನವಂತೂ ಇದ್ದೇ ಇರುತ್ತದೆ. ಫಲ ಮುಂದಿನದ್ದು. ಎಲ್ಲ ವರ್ಗದ ಪ್ರೇಕ್ಷಕರು ನಗಬೇಕು ಎನ್ನುವುದು ನಮ್ಮ ಉದ್ದೇಶ. ದೊಡ್ಡ ತಾರಾಗಣವೂ ಚಿತ್ರದಲ್ಲಿದೆ.

* ತಮಿಳು ಚಿತ್ರಗಳಲ್ಲಿ ನಟಿಸುವೆ ಎಂದಿದ್ದೀರಿ. ಅದು ಯಾವ ಮಟ್ಟದಲ್ಲಿದೆ?
ಚಿತ್ರೀಕರಣ ಆರಂಭವಾಗಬೇಕು. ಅಲ್ಲಿ ಕೆಲವು ಕಲಾವಿದರ ಸಮಸ್ಯೆ ಇದ್ದು ಆ ಕಾರಣಕ್ಕೆ ತಡವಾಗಿದೆ. ಈ ನಡುವೆ ಮೂರು ಕನ್ನಡ ಸಿನಿಮಾಗಳಿದ್ದು, ಅವುಗಳನ್ನು ಪೂರ್ಣಗೊಳಿಸುವೆ. ತಮಿಳಿನಲ್ಲಿ ಲಾಂಚ್ ಆದರೂ ದೊಡ್ಡ ಮಟ್ಟದಲ್ಲಿ ಆಗುವೆ. ಆ ಸಿನಿಮಾಕ್ಕಾಗಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದೇನೆ.    ಎರಡನೇ ಪುಟಕ್ಕೆ...

* ಫಿಟ್‌ನೆಸ್‌ಗೆ ಹೆಚ್ಚು ಗಮನ ನೀಡುತ್ತಿರುವಂತಿದೆ?
ನನಗೆ ಥೈರಾಯಿಡ್ ಸಮಸ್ಯೆ ಇತ್ತು. ಯೋಗದಿಂದ ದೇಹಾರೋಗ್ಯ ಸುಧಾರಿಸಿತು. ಇಂಗ್ಲೆಂಡ್‌ನ ಡೆಕ್ಲಿನ್ ಎನ್ನುವವರು ನನಗೆ ಫಿಟ್‌ನೆಸ್‌ ಮತ್ತು ಆರೋಗ್ಯದ ತರಬೇತಿ ನೀಡುತ್ತಿದ್ದಾರೆ. ಕನಿಷ್ಠ 20 ಕೇಜಿ ತೂಕ ಕಡಿಮೆ ಮಾಡಿಕೊಳ್ಳುವೆ. ದಪ್ಪ ಇರುವವರಿಗೆ ಸಣ್ಣಗಾದರೆ ಅದೇ ದೊಡ್ಡ ಖುಷಿ ಅಲ್ಲವೇ. ಸಹಜವಾಗಿ ತೂಕ ಇಳಿಸಿಕೊಳ್ಳುತ್ತೇನೆ. ನಾನು ಸಮತೋಲನದಲ್ಲಿ ಸಾಗಲು ಇಷ್ಟಪಡುವವನು. ತುಂಬಾ ಎತ್ತರಕ್ಕೆ ಹಾರಲು ಇಷ್ಟಪಡುವುದಿಲ್ಲ. ಕೆಳಕ್ಕೆ ಬೀಳುವುದಕ್ಕೂ ಇಷ್ಟವಿಲ್ಲ.

* ‘ನಮೋ ಭೂತಾತ್ಮ’ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಕಾರಣಕ್ಕೆ ‘ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಎನ್ನುವ ಹಾರರ್ ಚಿತ್ರವನ್ನು ಒಪ್ಪಿಕೊಂಡಿದ್ದೀರಾ?
ಸಾಮಾನ್ಯವಾಗಿ ಹಾರರ್ ಚಿತ್ರಗಳು ಭಯ ಹುಟ್ಟಿಸುತ್ತವೆ. ನನ್ನ ಹಾರರ್ ಚಿತ್ರಗಳು ನಗಿಸುತ್ತವೆ. ‘ನಮೋ ಭೂತಾತ್ಮ’ದ ನಂತರ ಏಳೆಂಟು ಹಾರರ್ ಕಥೆಗಳ ಆಫರ್‌ ಬಂದವು. ಆದರೆ ಯಾವುದೂ ಇಷ್ಟವಾಗಲಿಲ್ಲ. ‘... ಪುಟ್ಟಣ್ಣ’ ಸಿನಿಮಾದ ಕಥೆ ಚೆನ್ನಾಗಿರುವ ಕಾರಣ ಒಪ್ಪಿಕೊಂಡೆ. ನಾನು ಪುಟ್ಟಣ್ಣ ಕಣಗಾಲ್ ಅವರ ಅಪ್ಪಟ ಅಭಿಮಾನಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನನ್ನದು ನಿರ್ದೇಶಕನ ಪಾತ್ರ. ಆ ಚಿತ್ರ ಪೂರ್ಣಗೊಂಡಿದ್ದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ.

* ಈ ಹಿಂದೆ ಕೋಮಲ್ ಅವರು ಚಿತ್ರಗಳ ಪ್ರಚಾರಕ್ಕೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು?
ಸುಮಾರು ಜನ ವ್ಯವಹಾರ ಗೊತ್ತಿಲ್ಲದವರು ಇಲ್ಲಿದ್ದಾರೆ. ಅವರಿಗೆ ಇಲ್ಲಿ ಆಳ ಇದೆ ಹೋಗಬೇಡಿ ಎಂದು ಹೇಳುವೆ. ಕೇಳದಿದ್ದರೆ ಏನು ಮಾಡಲಿ. ‘ಗೋವಾ’ ಚಿತ್ರದ ಬಿಡುಗಡೆ ಸಮಯದಲ್ಲಿ ಪರೀಕ್ಷೆಗಳು, ಕ್ರಿಕೆಟ್ ಇತ್ತು. ಸದ್ಯಕ್ಕೆ ಬಿಡುಗಡೆ ಬೇಡ ಎಂದೆ, ಅವರು ನನ್ನ ಮಾತು ಕೇಳಲಿಲ್ಲ. 

* ತೆರೆಕಾಣುವ ಅಂತಿಮ ಕ್ಷಣದಲ್ಲೂ ‘ಲೊಡ್ಡೆ’ ಚಿತ್ರಮಂದಿರಗಳ ಸಮಸ್ಯೆ ಎದುರಿಸುತ್ತಿರುವಂತಿದೆ?
ಈ ಸಮಸ್ಯೆ ಯಾವಾಗಲೂ ಇದ್ದದ್ದೇ. ಈ ವಿಚಾರವಾಗಿ ಎಲ್ಲರೂ ಒಂದು ದನಿಯಲ್ಲಿ ಮಾತನಾಡುವುದಿಲ್ಲ. ಚಿತ್ರೋದ್ಯಮದಲ್ಲಿ ಯಾವುದೇ ಸಮಸ್ಯೆಗಳ ಬಗ್ಗೆ ಮಾತನಾಡುವವರು ಇಲ್ಲ. ಎಷ್ಟೋ ಚಿತ್ರಮಂದಿರಗಳು ಉಗ್ರಾಣಗಳಾಗಿವೆ. ಈ ಕಾರಣಕ್ಕಾಗಿಯೇ ನಾನು ಕೆಲವು ಚಿತ್ರಮಂದಿರಗಳನ್ನು ನಿರ್ವಹಿಸಲು ಮುಂದಾಗಿದ್ದೆ. ಆದರೆ ಸರಿಯಾದ ಸಹಕಾರ ಸಿಕ್ಕಲಿಲ್ಲ. ನಾನು ‘ಲೊಡ್ಡೆ’ ಚಿತ್ರದ ನಟ ಮಾತ್ರ. ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.

* ‘ಲೊಡ್ಡೆ’ ವಿದೇಶಗಳಲ್ಲೂ ತೆರೆಗೆ ಬರುತ್ತಿದೆಯಂತೆ?
ಹೌದು. ಸದ್ಯ ಆಸ್ಟ್ರೇಲಿಯಾ, ಕೆನಡಾ ಮತ್ತು ಅಮೆರಿಕದಲ್ಲಿ ತೆರೆ ಕಾಣುತ್ತಿದೆ. ಶ್ರೀನಿವಾಸ್ ಎನ್ನುವವರು ವಿತರಣೆ ಹಕ್ಕುಗಳನ್ನು ಪಡೆದಿದ್ದಾರೆ. ನಂತರದ ದಿನಗಳಲ್ಲಿ ಕನ್ನಡಿಗರು ನೆಲೆಸಿರುವ ಬೇರೆ ಬೇರೆ ದೇಶಗಳಲ್ಲಿ ಚಿತ್ರ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT