ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪ್ರೀತಿಯ ಶಿಕ್ಷಕಿ

ಭೂ ರಮೆ -13
Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಇವರು ಶಿಕ್ಷಕಿ. ಆದರೆ ಕೃಷಿ ಬಗೆಗೂ ಅಷ್ಟೇ ಪ್ರೀತಿ. ಹಲವು ಬಗೆಯ ಹಣ್ಣುಗಳನ್ನು ಬೆಳೆಯುವುದಷ್ಟೇ ಅಲ್ಲ, ಶಾಲೆಯ ಮಕ್ಕಳಿಗೂ ಅವನ್ನು ಕೊಟ್ಟು ಖುಷಿ ಪಡುವ ಅಪರೂಪದ ಶಿಕ್ಷಕಿ ಇವರು. ಶಾಲೆಗೆ ಹೋಗುವಾಗ ಚಿಕ್ಕ ಚೀಲ ಹಿಡಿದು ಹೋಗುವ ಅವರನ್ನು ನೋಡಿದರೆ ಪುಸ್ತಕ ಹಿಡಿದು ಹೋಗುತ್ತಿದ್ದಾರೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಆ ಚೀಲದಲ್ಲಿ ರಾಮಫಲ, ಜಂಬುನೇರಳೆ, ರಾಜ ನೆಲ್ಲಿಕಾಯಿ... ಹೀಗೆ ಆಯಾ ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣುಗಳೇ ತುಂಬಿರುತ್ತವೆ. ಆ ಹಣ್ಣುಗಳನ್ನೆಲ್ಲ ಕತ್ತರಿಸಿ ಒಂದೊಂದು ಚೂರು ಮಕ್ಕಳಿಗೆ ಹಂಚಿ ಖುಷಿ ಪಡುತ್ತಾರೆ. ಇವರೇ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಸಾವಿತ್ರಿ ಶರ್ಮ. ಈಗ ಅವರು ಕಲ್ಮಂಜದ ಸರ್ಕಾರಿ ಶಾಲೆಯ ಮುಖ್ಯ ಅಧ್ಯಾಪಕಿ.

ಗುರುವಾಯನಕೆರೆಯ ಬಳಿಯ ಮೇಲಂತಬೆಟ್ಟಿನಲ್ಲಿ ಇರುವ ಇವರ ಮನೆಯ ಸಮೀಪ ಒಂದು ಎಕರೆ ಜಾಗವಿದೆ. ಇಲ್ಲಿ ಅವರು ನೆಟ್ಟು ನೀರೆರೆಯಬೇಕಾದ ಯಾವ ಗಿಡಗಳನ್ನೂ ಬೆಳೆಸಿಲ್ಲ. ಆದರೆ ಮಳೆಯ ನೀರು ಕುಡಿದು ನೆಲದ ನಿಜ ಸತ್ವವನ್ನೇ ಬಳಸಿ ಬೆಳೆದು ಫಲ ಕೊಡಬಲ್ಲ ಹಣ್ಣಿನ ಗಿಡಗಳಿಂದ ಅವರ ಹಿತ್ತಿಲು ಕಂಗೊಳಿಸುತ್ತದೆ. ಅದರಲ್ಲಿ ಬೆಳೆದ ಫಲ ಹಕ್ಕಿಗಳಿಗೆ ಮೀಸಲು. ಉಳಿದವು ಅವರ ವಿದ್ಯಾರ್ಥಿಗಳ ಪಾಲು.

ಶಾಲೆಯ ಬಿಡುವಿಲ್ಲದ ಕೆಲಸಗಳ ನಡುವೆಯೂ ಮನೆಯ ಹಿತ್ತಿಲಿನಲ್ಲಿ ವೈವಿಧ್ಯಮಯ ಗಿಡಗಳನ್ನು ಬೆಳೆದಿರುವ ಇವರು ಮೂಲತಃ ಉತ್ತರ ಕನ್ನಡದ ಹಂದಿಗೋಣದವರು. ಮೊದಲಿನಿಂದಲೂ ಅವರಿಗೆ ಕೃಷಿ ಪರಿಚಿತ. ಹಿತ್ತಿಲ ತುಂಬ ವಿವಿಧ ತರಕಾರಿಗಳನ್ನು ಬೆಳೆದ ಅನುಭವ ಜೊತೆಗಿತ್ತು. ಬೆಳ್ತಂಗಡಿಯ ಜಯಶಂಕರ ಶರ್ಮ ಅವರ ಮನೆಗೆ ವಧುವಾಗಿ ಬಂದ ಅವರಿಗೆ ಗಂಡನಲ್ಲಿನ ಕೃಷಿ ಬಗೆಗಿನ ಅಮಿತ ಆಸಕ್ತಿ ಗಿಡಗಳನ್ನು ಬೆಳೆಯುವ ಶ್ರದ್ಧೆಗೆ ಪೂರಕವಾಯಿತು.

ಇವರಿಬ್ಬರ ಈ ಪರಿಶ್ರಮದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಜಾತಿಯ ಹಲಸಿನ ಗಿಡಗಳು ಬೆಳೆದು ನಿಂತು ಹಣ್ಣು ಕೊಡಲು ಸಿದ್ಧವಾಗಿವೆ. ಯಾವುದೇ ಹಲಸು ಮೇಳಕ್ಕೆ, ಕೃಷಿ ಮೇಳಕ್ಕೆ ಹೋದರೆ ಅಲ್ಲಿಂದ ಕಸಿಗಿಡಕ್ಕೆ ಎಷ್ಟು ಬೆಲೆ ಕೊಟ್ಟಾದರೂ ತರದೆ ಅವರು ಬಿಡುವುದಿಲ್ಲ. ಹೀಗಾಗಿ ತೂಬುಗೆರೆ ಹಲಸು, ಚಂದ್ರ ಹಲಸು, ಸಖರಾಯಪಟ್ಣದ ಹಲಸು, ರುದ್ರಾಕ್ಷಿ ಹಲಸು, ಮುಳಿಯದ ಬಕ್ಕೆ ಹೀಗೆ ಒಂದೊಂದಾಗಿ ಗಿಡಗಳು ಅವರ ಪುಟ್ಟ ತೋಟದಲ್ಲಿ ಜಾಗ ಪಡೆದು ಹತ್ತು ಅಡಿಗಿಂತ ಎತ್ತರ ಬೆಳೆದು ನಿಂತಿವೆ. ಇವು ಫಲ ಕೊಡಲು ಹೆಚ್ಚು ಕಾಲ ಬೇಕಾಗಿಲ್ಲ.

ಕೇವಲ ನೆಟ್ಟದ್ದಲ್ಲ, ಪ್ರತಿಯೊಂದು ಗಿಡಕ್ಕೂ ಕಬ್ಬಿಣದ ಗೂಡು ತಂದು ಮುಚ್ಚಿರುವ ಅವರು, ‘ಗಿಡ ನೆಟ್ಟ ಮೇಲೆ ಜಾನುವಾರುಗಳಿಗೆ ಆಹಾರವಾಗದಂತೆ ಕಾಯುವುದು ನಮ್ಮ ಜವಾಬ್ದಾರಿ. ಒಂದು ವರ್ಷ ರಕ್ಷಣೆ ನೀಡಿದರೆ ಮತ್ತೆ ಗಿಡಗಳಿಗೆ ಪಶುಗಳ ಕಾಟವಿಲ್ಲ. ಕಳೆದ ವರ್ಷ ಮೇಣರಹಿತ ಹಲಸಿನಮರದ ತುಂಬ ಹಣ್ಣುಗಳಾಗಿವೆ. ಇದು ಕಸಿಗಿಡವಾದ ಕಾರಣ ನಾಲ್ಕೇ ವರ್ಷದಲ್ಲಿ ಫಲ ಸಿಕ್ಕಿದೆ. ಬೇಗ ಹಣ್ಣು ಸಿಗಬೇಕೆಂದು ಕಸಿ ಗಿಡಗಳನ್ನೇ ನೆಟ್ಟಿದ್ದೇನೆ. ಬೀಜದಿಂದ ತಯಾರಿಸಿದ ಹಲಸಿನ ಗಿಡದಲ್ಲಿ ಮಾತೃ ಮರದ ಗುಣ ಬರುವುದಿಲ್ಲ. ಎಲ್ಲಾದರೂ ಹೋದಾಗ ರುಚಿಕರವಾದ ಮಾವಿನಹಣ್ಣು ಅಥವಾ ಹಲಸಿನಹಣ್ಣು ಇದ್ದರೆ ಒಂದೆರಡು ಕೊಂಬೆ ಮುರಿದು ತರುತ್ತೇನೆ. ಇದನ್ನು ಕಸಿಗೆ ಬಳಸಿದರೆ ಅದೇ ಗುಣದ ಹಲಸು ಸಿಗುತ್ತದೆ. ನಮ್ಮ ಹಿತ್ತಿಲಿನಲ್ಲಿ ಹೀಗೆ ತಯಾರಾದ ಗಿಡಗಳೂ ಇವೆ’ ಎಂದು ತೋರಿಸುತ್ತಾರೆ.

ಬೆಳೆಯುವುದು ಹೀಗೆ...
‘ಮಳೆಗಾಲ ಆರಂಭದಲ್ಲಿ ಗಿಡಗಳನ್ನು ನಾಟಿ ಮಾಡಿದರೆ ಬೇಸಿಗೆಯಲ್ಲಿ ನೀರು ಕೊಡುವ ಅಗತ್ಯವಿಲ್ಲ. ಮಳೆಗಾಲ ಮುಗಿಯುವಾಗ ಚೆನ್ನಾಗಿ ಬೇರು ಕೊಟ್ಟಿರುತ್ತದೆ. ಹಲಸು, ಜಂಬುನೇರಳೆ, ರಾಮಫಲ ಎಲ್ಲವೂ ನೀರಿಲ್ಲದೆ ಬೇಸಿಗೆಯನ್ನು ಎದುರಿಸುತ್ತವೆ’ ಎಂದು ತಮ್ಮ ಕೃಷಿಯ ಬಗ್ಗೆ ವಿವರಿಸುತ್ತಾರೆ ಇವರು.

ಹಲಸಿನ ಮರವಿದ್ದರೆ ಕಾಸು ಖರ್ಚಿಲ್ಲದೆ ಹೊಟ್ಟೆ ತುಂಬ ಆಹಾರ ಸಿಗುವುದೇ ದೊಡ್ಡ ಲಾಭವೆಂಬುದು ಸಾವಿತ್ರಿಯವರ ಲೆಕ್ಕಾಚಾರ. ಇಂಥ ಗಿಡಗಳಿಗೆ ಸಾವಯವ ಗೊಬ್ಬರವಾಗಲೀ ರಾಸಾಯನಿಕವಾಗಲೀ ಅವರು ಹಾಕುತ್ತಿಲ್ಲ. ದಕ್ಷಿಣದ ಬಿಸಿಲು ಬಾಧಿಸದಂತೆ ಒಂದು ವರ್ಷ ಎಚ್ಚರ ವಹಿಸಿದರೆ ಸಾಕು ಎಂಬ ಅನಿಸಿಕೆ ಅವರದ್ದು. ‘ನಾವು ಮುಂದಿನ ಪೀಳಿಗೆಗೆ ಉಳಿಸಿಕೊಡಬಲ್ಲ ಅನ್ನದ ಕಣಜವೆಂದರೆ ಹಲಸಿನ ಮರ. ಅದಕ್ಕೆ ಯಾವುದೇ ಬಗೆಯ ರೋಗಗಳಿಲ್ಲ, ಕೃಷಿ ನಿರ್ವಹಣೆಯ ವೆಚ್ಚಗಳಿಲ್ಲ. ಕೇವಲ ನೆಟ್ಟರೆ ಸಾಕು, ವರ್ಷವೂ ಫಲ ಕೊಡಲು ತಪ್ಪುವುದಿಲ್ಲ. ಆದ್ದರಿಂದ ನನ್ನ ಮೊದಲ ಆದ್ಯತೆ ಹಲಸಿಗೆ ನೀಡಿದ್ದೇನೆ.ಮಾರಾಟಕ್ಕಲ್ಲದಿದ್ದರೂ ನಾವೂ ತಿಂದು ಇತರರಿಗೂ ಹಂಚಬಹುದಲ್ಲವೆ? ನನ್ನ ಪರಿಚಿತರಿಗೂ ಬೇರೆ ಯಾವುದೇ ಗಿಡಕ್ಕಿಂತ ಹಲಸು ನೆಡಿ ಎಂಬುದೇ ನನ್ನ ಸಲಹೆ’ ಎನ್ನುತ್ತಾರೆ ಸಾವಿತ್ರಿ.

ಇನ್ನು ಎರಡು ಸೀಬೆ ಮರಗಳು ಹಣ್ಣುಗಳಿಂದ ಬಾಗುವಂತಿದ್ದವು. ಬೀಜದಿಂದ ತಯಾರಿಸಿದ ಗಿಡಗಳನ್ನು ನೆಟ್ಟಿದ್ದರೂ ಸುಮಾರು ಮುನ್ನೂರು ಗ್ರಾಂ ತೂಗಬಲ್ಲ ದೊಡ್ಡ ಗಾತ್ರದ ಈ ಹಣ್ಣುಗಳನ್ನು ಮಾಗುವ ಮೊದಲೇ ಶಾಲೆ ಮಕ್ಕಳು ಕೊಯ್ದು ಹೋಗುತ್ತಾರೆ. ಒಳಗೆ ಬೀಜ ಕಡಿಮೆ, ದೋರೆಗಾಯಿಯೂ ತುಂಬ ಸಿಹಿಯಾಗಿದೆ. ಎಲ್ಲ ಸಮಯವೂ ಫಲ ಕೊಡುತ್ತಿದ್ದು, ಬುಟ್ಟಿಗಟ್ಟಲೆ ಹಣ್ಣು ಸಿಗುತ್ತದೆ. ಪರಿಶ್ರಮವಿಲ್ಲದೆ ಸಹಜವಾಗಿ ಬೆಳೆಯಬಲ್ಲ ಫಲವೆಂದರೆ ಪೇರಳೆ ಎನ್ನುತ್ತಾರೆ.

ಹಲವು ಕಡೆ ಕಸಿಯ ರಾಜನೆಲ್ಲಿ ಗಿಡ ನೆಟ್ಟವರಿಗೆ ಕಹಿ ಅನುಭವವಾಗಿದೆ. ಆದರೆ ಅವರಲ್ಲಿರುವ ಒಂದೇ ಒಂದು ರಾಜನೆಲ್ಲಿಯ ಮರ ನಾಲ್ಕೇ ವರ್ಷದಲ್ಲಿ ಕಾಯಿ ಕೊಡುತ್ತಿದೆ. ಪೇಟೆಯಲ್ಲಿ ಒಂದು ಕಾಯಿ ಒಂದು ರೂಪಾಯಿಗೆ ಮಾರಾಟವಾಗು ತ್ತಿದ್ದರೂ ಸಾವಿತ್ರಿ ಶರ್ಮ ಅದರ ಮಾರಾಟಕ್ಕೆ ಮುಂದಾಗಿಲ್ಲ. ಎಲ್ಲವೂ ಶಾಲೆಯ ಮಕ್ಕಳಿಗೆ. ಹಲವೆಡೆ ವರ್ಷಕ್ಕೊಮ್ಮೆ ಮಾತ್ರ ಫಲ ಕೊಡುವ ನೆಲ್ಲಿ ಅವರ ಅಂಗಳದಲ್ಲಿ ಎರಡು ಸಲ ಹೂ ಬಿಟ್ಟು ಕಾಯಿ ಕೊಡುತ್ತಿದೆ. ತುಂಬ ಕಾಯಿಗಳಾಗುತ್ತಿವೆ. ನೆಲ್ಲಿಮರಕ್ಕೂ ಅಷ್ಟೇ ಗೊಬ್ಬರ ಹಾಕಿಲ್ಲ, ನೀರು ಬೇಕಾಗಿಲ್ಲ. ಸಹಜವಾಗಿಯೇ ಎತ್ತರ ಬೆಳೆದು ಮರದ ಕೆಳಗೆ ಹರಡಿದಂತೆ ಬೀಳುತ್ತಿವೆ. ಜ್ಯೂಸ್ ತಯಾರಿಕೆಗೆ ಈ ನೆಲ್ಲಿ ತುಂಬ ಸೂಕ್ತವಾಗಿದೆಯಂತೆ.

ಕೇವಲ ಬೀಜ ಬಿತ್ತಿದ್ದು ಮಾತ್ರ. ರಾಮಫಲದ ಗಿಡವೀಗ ಮರವಾಗಿ ತುಂಬ ಕಾಯಿಗಳನ್ನು ಬಿಟ್ಟಿದೆ. ಮಧುರವಾದ ಹಣ್ಣುಗಳು ಸಿಗುತ್ತವೆ. ಇದೂ ಸೀತಾಫಲಕ್ಕಿಂತ ರುಚಿಕರವಾದ ಹಣ್ಣು. ಪಕ್ವವಾದರೆ ಒಂದು ಹಣ್ಣು ಅರ್ಧ ಕಿಲೋ ತೂಗುವುದುಂಟು. ಮೂರು ಜಾತಿಯ ಸಪೋಟಾಗಳಿದ್ದು, ಅವೂ ಫಲ ಕೊಡುತ್ತಿವೆ. ಅದರಲ್ಲಿ ಕಾಲಿಪತ್ಥಿ ತಳಿಯಲ್ಲಿ ಫಸಲು ಅಧಿಕವಾಗಿದೆ. ಒಳಗೆ ಬೀಜವೇ ಇಲ್ಲದ ದೊಡ್ಡ ಗಾತ್ರದ ರಸಭರಿತವಾದ ದೊಡ್ಡ ಗಾತ್ರದ ನಿಂಬೆಯಿದೆ.

ಈ ಗಿಡದ ಕೊಂಬೆ ನೆಟ್ಟರೂ ಬದುಕಿ ಒಂದು ವರ್ಷದಲ್ಲಿ ಕಾಯಿ ಕೊಡುವುದು. ಇದಕ್ಕೆ ಬಿಸಿಲು ಹೆಚ್ಚಿದಷ್ಟೂ ಫಸಲು ಅಧಿಕ. ಬಟ್ಟೆ ತೊಳೆದ ನೀರನ್ನು ಬೇಸಿಗೆಯಲ್ಲಿ ಹನಿಸುವುದು ಬಿಟ್ಟರೆ ಇನ್ನೇನೂ ಅದಕ್ಕೆ ಕೊಟ್ಟಿಲ್ಲ. ಬಿಳಿ ವರ್ಣದ ನಕ್ಷತ್ರ ನೇರಳೆ ಹಣ್ಣು ಬುಟ್ಟಿ ತುಂಬ ಆಗುತ್ತದೆ. ಮಡಗಾಸ್ಕರ್ ಚೆರಿಯ ಮರದಲ್ಲಿ ಹಣ್ಣುಗಳಿರುವಾಗ ಕೊಂಬೆಗಳ ತುಂಬ ವಿಧ ವಿಧದ ಹಕ್ಕಿಗಳನ್ನು ಕಾಣಬಹುದು. ವರ್ಷವಿಡೀ ಕಾಯಿ ಕೊಡುವ ಸರ್ವಋತು ನುಗ್ಗೆಮರವಿದೆ, ಐದಾರು ಬಗೆಯ ಕಸಿಮಾವು ಹೂ ಬಿಡಲು ಸಿದ್ಧವಾಗುತ್ತಿದೆ, ದೀವಿ ಹಲಸು ಕಾಯಿ ಕೊಡಲಾರಂಭಿಸಿದೆ.

ಸಂಜೆ ಶಾಲೆಯಿಂದ ಬಂದ ಮೇಲೆ ಹಾಗೆಯೇ ರಜಾದಿನಗಳಲ್ಲಿ ಆವರಣದಿಂದ ಹೊರಗೆ ಮೇಯುವ ಊರಿನ ದನಗಳ ಸೆಗಣಿ ಇದ್ದರೆ ಹೆಕ್ಕಿ ತಂದು, ಒಣಮರದ ಎಲೆಗಳನ್ನು ಹಸಿ ಸೆಗಣಿಯೊಂದಿಗೆ ಗಿಡಗಳ ಬುಡಕ್ಕೆ ಹಾಕುವುದು ಬಿಟ್ಟರೆ ಬೇರೆ ಸತ್ವದ ಸೋಂಕಿಲ್ಲ. ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ನಾಚಿಕೆಮುಳ್ಳಿನ ಗಿಡಗಳನ್ನು ಬುಡದಿಂದ ಕೆತ್ತಿ ಗಿಡಗಳಿಗೆ ಹಾಕಿದರೆ ಅದು ಒಳ್ಳೆಯ ಗೊಬ್ಬರವಾಗಿ ಪುಷ್ಟಿ ನೀಡುವುದನ್ನು ಗಮನಿಸಿ ಇಂಥ ಗಿಡಮರಗಳಿಗೆ ಕಳೆಯನ್ನು ಬುಡಕ್ಕಿಡುವುದೂ ನೈಸರ್ಗಿಕ ಕೃಷಿಯ ಒಂದು ಅಂಗವೆನ್ನುತ್ತಾರೆ ಅವರು.

ಇಂಥ ಹಲವಾರು ಗಿಡಗಳನ್ನು ಬೆಳೆಸುತ್ತ ಮಾದರಿಯ ತೋಟ ಮಾಡಿರುವ ಸಾವಿತ್ರಿ ಅವರು, ‘ನಮ್ಮಿಂದ ಯಾವುದೇ ಪ್ರತಿಫಲ ಬಯಸದೆ ಬದುಕಿನುದ್ದಕ್ಕೂ ನಮಗೆ, ಬೇರೆಯವರಿಗೆ ಇವು ಫಲ ನೀಡಿ ಹೊಟ್ಟೆ ತಂಪಾಗಿಸುತ್ತವೆ. ವಿದೇಶೀ ಗಿಡಗಳಂತೆ ಅವುಗಳಿಗೆ ಕೀಟನಾಶಕ ಬೇಡ. ನಾನು ಇಂಥ ಸಸ್ಯಗಳನ್ನೇ ಆರಿಸಿ ಕೃಷಿ ಮಾಡುತ್ತಿದ್ದೇನೆ’ ಎನ್ನುತ್ತಾ ತಮ್ಮ ಸಹಜ ಕೃಷಿ ಮಾದರಿಯನ್ನು ವಿವರಿಸಿದರು. ಕೃಷಿಯಲ್ಲಿ ತೊಡಗುವುದರಿಂದ ಕೆಲಸದ ಒತ್ತಡದಿಂದ ಮುಕ್ತವಾಗಿ ಮಾನಸಿಕ ನೆಮ್ಮದಿಯೂ ಸಿಗುತ್ತದೆನ್ನುತ್ತಾರೆ. ಅವರ ಸಂಪರ್ಕ ಸಂಖ್ಯೆ 9448842633.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT