ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವಂತಿಕೆಯ ಪ್ರಶ್ನೆಗಳು

ಅಂಕುರ-95
Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಫಲವಂತಿಕೆಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಹೆಣ್ಣುಮಕ್ಕಳಲ್ಲಿರುತ್ತವೆ. ಆದರೆ ಯಾರನ್ನು ಕೇಳುವುದು, ಹೇಗೆ ಕೇಳುವುದು ಎಂಬ ಸಂಕೋಚದ ಪರದೆ ಅವರಲ್ಲಿ ಆತಂಕವನ್ನು ಸೃಷ್ಟಿಸಿರುತ್ತದೆ. ಕೇಳುವ ಪ್ರಶ್ನೆ ಸಹ್ಯವೋ ಅಸಹ್ಯವೋ ಎಂಬುದೇ ಅವರ ಆತಂಕವಾಗಿರುತ್ತದೆ. ಆದರೆ ನಿಮ್ಮೆಲ್ಲ ಸಂಶಯಗಳನ್ನು ನಿವಾರಿಸಿಕೊಂಡಷ್ಟೂ ನಿರಾಳವಾಗಿರುತ್ತೀರಿ. ಸಮಾಲೋಚನೆಯ ಸಂದರ್ಭದಲ್ಲಿ ಎದುರಿಸುವ ಹಲವು ಪ್ರಶ್ನೆಗಳನ್ನಿಲ್ಲಿ ಪಟ್ಟಿ ಮಾಡಿ, ಪರಿಹಾರಗಳನ್ನು ಸೂಚಿಸಲಾಗಿದೆ.

* ಸುಖದ ಪರಾಕಾಷ್ಠೆಯನ್ನು ತಲುಪುವುದು ಗರ್ಭಕಟ್ಟುವಲ್ಲಿ ಸಹಾಯಕವಾಗಿದೆಯೇ?
ಒಂದು ವ್ಯಾಖ್ಯಾನದ ಪ್ರಕಾರ ಮಿಲನದಲ್ಲಿ ಸುಖದ ಪರಾಕಾಷ್ಠೆಯನ್ನು ತಲುಪುವುದು ಗರ್ಭಕಟ್ಟಲು ಸಹಾಯ ಮಾಡಬಹುದು. ಆದರೆ ಪರಾಕಾಷ್ಠೆಯ ಸ್ಥಿತಿಯಲ್ಲಿಯೇ ಗರ್ಭಕಟ್ಟುತ್ತದೆ ಎಂಬ ನಂಬಿಕೆಯಲ್ಲಿ ಹುರುಳಿಲ್ಲ. ತಜ್ಞರ ಪ್ರಕಾರ ಪರಾಕಾಷ್ಠೆಯ ಸ್ಥಿತಿಯನ್ನು ತಲುಪಲೇಬೇಕೆಂಬ ನಿಯಮವೇನೂ ಇಲ್ಲ. ಆದರೆ ಪರಾಕಾಷ್ಠೆಯ ಸಂದರ್ಭದಲ್ಲಿ ಗರ್ಭಕಂಠದ ಬಾಯಿ ತೆರೆದುಕೊಳ್ಳುತ್ತದೆ. ಅಲ್ಲೊಂದು ನಿರ್ವಾತ ಸೃಷ್ಟಿಯಾಗಿ, ವೀರ್ಯಾಣು ಸರಾಗವಾಗಿ ಚಲಿಸುವಂತೆ ಅನುಕೂಲ ಮಾಡಿಕೊಡುತ್ತದೆ.

ಗರ್ಭಧಾರಣೆಯಾಗಲು ಪರಾಕಾಷ್ಠೆಗೆ ತಲುಪಲೇಬೇಕೆಂಬ ನಿಯಮವಿಲ್ಲ. ಆದರೆ ಸಕಾಲದಲ್ಲಿ ಮಿಲನಕ್ಕೆ ಒಳಗಾಗುವುದು ಅತಿ ಮಹತ್ವದ ಅಂಶವಾಗಿದೆ. ಒಂದು ವೇಳೆ ಪ್ರತಿ ಮಿಲನದಲ್ಲಿಯೂ ಪರಾಕಾಷ್ಠೆ ತಲುಪಲೇಬೇಕೆಂಬ ಹಟ ಹಿಡಿದರೆ ಆ ಒತ್ತಡದಿಂದಲೂ ಸುಖಿಸುವುದು ಸಾಧ್ಯವಾಗುವುದಿಲ್ಲ. ಎಲ್ಲ ಮಹಿಳೆಯರಲ್ಲಿಯೂ ಕೇವಲ ಸಂಭೋಗದಿಂದ ಮಾತ್ರ ಸುಖದ ಪರಮಸ್ಥಿತಿ ತಲುಪುತ್ತಾರೆ ಎಂದು ಹೇಳಲಾಗದು. ಆ ಸಮಯದಲ್ಲಿ ಇನ್ನಿತರ ಚಟುವಟಿಕೆಗಳಿಂದ ಉದ್ವೇಗಕ್ಕೆ ಈಡಾಗುವಂತೆ ಮಾಡಬೇಕು. ಉದ್ರೇಕಿತ ಮಹಿಳೆಯರು ಬಲುಬೇಗ ಪರಾಕಾಷ್ಠೆಯ ಹಂತವನ್ನು ತಲುಪಬಲ್ಲರು.

* ಮಿಲನದ ನಂತರ ವೀರ್ಯ ಹೊರಬರದಂತೆ ತಡೆದು ಹಿಡಿಯಬೇಕೆ? ಎಷ್ಟು ಹೊತ್ತಿನವರೆಗೂ ಈ ಪ್ರಯತ್ನವನ್ನು ಮುಂದುವರಿಸಬೇಕು?
ಸಾಮಾನ್ಯವಾಗಿ ಸ್ಖಲನದ ನಂತರ ಯೋನಿಯಿಂದಾಚೆ ಬರುವುದು ವೀರ್ಯವಾಗಿರುತ್ತದೆ. ವೀರ್ಯಾಣುಗಳು ತಮ್ಮ ಪಯಣವನ್ನು ಗರ್ಭಕೋಶದೆಡೆಗೆ ಡಿಂಭನಾಳಗಳು ಮೂಲಕ ಆಗಲೇ ಆರಂಭಿಸಿರುತ್ತವೆ. ವೀರ್ಯಾಣುಗಳನ್ನು ಸಾಗಿಸುವ ದ್ರವ ವೀರ್ಯ. ಅದು ಹೆಚ್ಚುವರಿಯಾದಾಗ ತಾನೇ ಹೊರಬರುತ್ತದೆ.

ವೀರ್ಯ ಮತ್ತು ವೀರ್ಯಾಣುಗಳ ನಡುವಿನ ಅಂತರವರಿಯದೇ ಬಹುತೇಕ ಜನರು ಆತಂಕ ಅನುಭವಿಸುತ್ತಾರೆ. ವೀರ್ಯಾಣುವಿನ ಚಲನೆ ಅತಿವೇಗವಾಗಿರುತ್ತದೆ. ಸಂಭೋಗದ ನಂತರ ಹತ್ತು ಹದಿನೈದು ನಿಮಿಷಗಳಲ್ಲಿ ಅದು ತನ್ನ ಗಮ್ಯ ಸೇರುವತ್ತ ಚಲಿಸುತ್ತದೆ. ಬಹುತೇಕ ತಜ್ಞರ ಶಿಫಾರಸು ಏನೆಂದರೆ ಸಂಭೋಗದ ನಂತರ ಪೃಷ್ಠಗಳ ಕೆಳಗೆ ಒಂದು ದಿಂಬನ್ನಿರಿಸಿಕೊಂಡು 15–20 ನಿಮಿಷಗಳವರೆಗೆ ವಿರಮಿಸಬೇಕು. ಇದು ನೋವುರಹಿತವಾಗಿರುತ್ತದೆ. ಮತ್ತು ವೀರ್ಯಾಣು ಚಲನೆಗೆ ಸಹಾಯಕವಾಗಿರುತ್ತದೆ.

ಲೈಂಗಿಕ ಅಭ್ಯಾಸಗಳು ವೀರ್ಯಾಣುವಿನ ಆರೋಗ್ಯಕ್ಕೆ ಹಾನಿ ತರುತ್ತವೆಯೇ? ಎಂದರೆ ಜಾರಕಗಳನ್ನು ಬಳಸುವುದು ಇಲ್ಲವೇ ಎಂಜಲನ್ನು ಬಳಸುವುದು... ಇವು ಸುರಕ್ಷಿತವೇ? ಯಾವುದೇ ಬಗೆಯ ಜಾರಕಗಳಾಗಲೀ ಮಿಲನದ ಸುಖಭಾವವನ್ನು ಹೆಚ್ಚಿಸುತ್ತವೆ. ಆನಂದದಾಯಿ ಎನಿಸುವಂತೆ ಮಾಡುತ್ತವೆ. ಆದರೆ ತೈಲಜನ್ಯ ಜಾರಕಗಳು ಅಥವಾ ಸುವಾಸನಾಯುಕ್ತ ಜಾರಕಗಳು ವೀರ್ಯಾಣುವಿನ ಚಲನೆಗೆ ಮಾರಕವಾಗಿರುತ್ತವೆ. ಅವು ವೀರ್ಯಾಣುಗಳ ಚಲನೆಯ ಮೇಲೆ ಪರಿಣಾಮ ಬೀರುತ್ತವೆ.

ಕೆಲವೊಮ್ಮೆ ಸಾಯಿಸಲೂಬಹುದು. ಸಂಭೋಗದ ಸಮಯದಲ್ಲಿ ನೋವಿದ್ದಲ್ಲಿ ನೈಸರ್ಗಿಕ ಜಾರಕಗಳನ್ನು ಬಳಸಬಹುದು. ಮೊಟ್ಟೆಯ ಬಿಳಿಯ ಭಾಗವು ಉತ್ತಮ ಜಾರಕದಂತೆ ವರ್ತಿಸುತ್ತದೆ. ಮೊಟ್ಟೆಯೊಡೆದು ಬಟ್ಟಲಿಗೆ ಹಾಕಿ, ಬಿಳಿಭಾಗವನ್ನು ಬೇರ್ಪಡಿಸಬೇಕು. ಸಾಮಾನ್ಯ ಉಷ್ಣಾಂಶಕ್ಕೆ ಬಂದ ನಂತರ ಅದನ್ನು ಜಾರಕದಂತೆ ಬಳಸಬಹುದಾಗಿದೆ. ಪರಿಶುದ್ಧವಾದ ಕೊಬ್ಬರಿ ಎಣ್ಣೆ, ಆಲಿವ್‌ ಆಯ್ಲ್‌ ಸಹ ನೈಸರ್ಗಿಕ ಜಾರಕವಾಗಿದೆ. ಆದರೆ ಎಂಜಲು ಅಥವಾ ಜೊಲ್ಲು ಮಾತ್ರ ವೀರ್ಯಾಣುವಿಗೆ ಮಾರಕವಾಗಿದೆ.

* ಗರ್ಭಧಾರಣೆಗೆ ಮಿಲನದ ಯಾವ ಭಂಗಿ ಹೆಚ್ಚು ಅನುಕೂಲಕರವಾಗಿದೆ?
ಯಾವುದೇ ಭಂಗಿಯಾಗಿರಲಿ, ವೀರ್ಯಾಣುವನ್ನು ಗರ್ಭಕಂಠದ ಬಳಿ ಸಾಗಿಸಲು ಅನುಕೂಲವಾಗುವಂತಿದ್ದರೆ ಸಾಕು. ಕೆಲವರು ಹೆಣ್ಣು ಮಕ್ಕಳು ಮೇಲಿರುವ ಭಂಗಿಯಲ್ಲಿ ಸಂಭೋಗಿಸಿದರೆ ವೀರ್ಯಾಣುವು ಹೊರಚೆಲ್ಲುತ್ತದೆ ಎಂಬ ಆತಂಕವನ್ನು ವ್ಯಕ್ತ ಪಡಿಸುತ್ತಾರೆ. ವೀರ್ಯವು ಗಾಢವಾಗಿರುತ್ತದೆ. ಆ ಭಂಗಿಯಲ್ಲಿ ಸ್ಖಲನವಾದಾಗ ವೀರ್ಯ ಚಿಮ್ಮಿ, ವೀರ್ಯಾಣುಗಳು ತಮ್ಮ ಚಲನೆಯನ್ನು ಆರಂಭಿಸಿರುತ್ತವೆ. ಅದು ವೀರ್ಯಾಣುವಿನ ಚಲನೆಗೆ ಅತಿಹೆಚ್ಚು ಅನುಕೂಲಕಾರಿಯಾಗಿರುತ್ತದೆ. ಯಾವುದೇ ಭಂಗಿಯಲ್ಲಿ ಸಂಭೋಗಿಸಿದರೂ ಮಗುವಿನ ಲಿಂಗ ನಿರ್ಧಾರದಲ್ಲಿ ಇವು ನಿರ್ಣಾಯಕ ಅಂಶವಾಗಿರುವುದಿಲ್ಲ ಎನ್ನುವುದಂತೂ ನೆನಪಿರಲಿ.

ಮಾಹಿತಿಗೆ ಸಂಪರ್ಕಿಸಿ: 18002084444.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT