ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜೆತನ: ಅರಿವೇ ಪರಿಹಾರ

ಅಂಕುರ 92
Last Updated 15 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕಳೆದ ಕೆಲವು ವಾರಗಳಿಂದ ಎರಡನೆಯ ಮಗುವಾಗಲು ವಿಳಂಬವಾದರೆ ಎಂಬ ವಿಷಯವನ್ನು ಚರ್ಚಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಫಲವಂತಿಕೆಯ ಗುಣಮಟ್ಟವೂ ಪ್ರಶ್ನಾರ್ಹವಾಗಿದೆ. ಫಲವಂತಿಕೆಗೆ ಸಂಬಂಧಿಸಿದಂತೆ ಕೆಲವು ಅಂಶಗಳು ಹಾಗೂ ಸಮಸ್ಯೆಗಳ ಮೇಲೆ ಈಗಾಗಲೇ ಬೆಳಕು ಚೆಲ್ಲಿದ್ದೇವೆ. ಇನ್ನು ಪರಿಹಾರಗಳ ಬಗ್ಗೆ ಯೋಚಿಸುವ.

ಮೊದಲ ಪರಿಹಾರ ಫಲವಂತಿಕೆಯ ಬಗ್ಗೆ ಸಾಕಷ್ಟು ಅರಿವಿರಬೇಕು. ಅರಿವಿದ್ದರೆ ಖರ್ಚಿಲ್ಲದ ಪರಿಹಾರವನ್ನು ನೀವೆ ಕಂಡುಕೊಳ್ಳಬಹುದು. ಮಹಿಳೆಯು ಯಾವಾಗ ಅಂಡಾಣು ಬಿಡುಗಡೆ ಮಾಡುತ್ತಾಳೆ ಎಂಬುದು ನಿಮ್ಮ ದೈಹಿಕ ಪರಿಸ್ಥಿತಿಯನ್ನು ಗಮನಿಸುವ ಮೂಲಕವೂ ಪತ್ತೆ ಮಾಡಬಹುದು. ದೇಹದ ಉಷ್ಣಾಂಶವನ್ನು ಗಮನಿಸುವುದರಿಂದಲೂ ಪತ್ತೆ ಮಾಡಬಹುದು. ನಿಮ್ಮ ಋತುಚಕ್ರದ ನಂತರದ ಅವಧಿಯಲ್ಲಿ ಬೆಳಗ್ಗೆ ಎದ್ದೊಡನೆ ದೇಹದ ಉಷ್ಣವನ್ನು ಅಳೆಯಬೇಕು. ಅಂಡಾಣು ಬಿಡುಗಡೆಯಾಗುವ ಅಥವಾ ಆದ ದಿನ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದಲ್ಲದೇ ನಿಮ್ಮ ಸ್ರಾವವನ್ನು ಗಮನಿಸಿ. ಒಂದು ವೇಳೆ ಅದು ಜಾರುವಂತಿದ್ದು ಅಂಟು ಅಂಟಾಗಿದ್ದರೆ ಅದೂ ಸಹ ಅಂಡಾಣು ಬಿಡುಗಡೆಯನ್ನು ಸೂಚಿಸುತ್ತದೆ.

ಸ್ರಾವವನ್ನು ಗಮನಿಸುವ ದಂಪತಿ ಜಾರಕವಿದ್ದಾಗ ಮಿಲನದಲ್ಲಿ ತೊಡಗಿದರೆ ಶೇ 90ರಷ್ಟು ಗರ್ಭಧಾರಣೆಯ ಸಾಧ್ಯತೆಗಳಿರುತ್ತವೆ. ಉಳಿದವರಲ್ಲಿ ಶೇ 54ರಷ್ಟಿರುತ್ತದೆ. ಫಲವಂತಿಕೆಯ ದಿನಗಳನ್ನು ಗೊತ್ತು ಮಾಡಿಕೊಳ್ಳುವ ಅರಿವಿರಬೇಕು. ಈ ಅರಿವು ಅನುಭವದಿಂದ ಪಕ್ವವಾಗುತ್ತದೆ. ದೈಹಿಕ ಲಕ್ಷಣಗಳನ್ನು ಗಮನಿಸುತ್ತಿದ್ದರೆ ಫಲವಂತಿಕೆಯ ದಿನಗಳನ್ನು ಸುಲಭವಾಗಿಯೇ ಪತ್ತೆ ಮಾಡಬಹುದು.

ದೇಹದ ಈ ಲಕ್ಷಣಗಳನ್ನು ಪತ್ತೆ ಮಾಡುವಲ್ಲಿ ದಂಪತಿ ಸಫಲರಾದರೆ ಅಂಡಾಣು ಬಿಡುಗಡೆಯ ಮುನ್ನವೇ ಲಕ್ಷಣಗಳನ್ನು ಪತ್ತೆ ಮಾಡಬಹುದು. ಈ ಬಗ್ಗೆ ನಿಮ್ಮ ವೈದ್ಯರ ಬಳಿ ಸಮಾಲೋಚಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಮೂರು ತಿಂಗಳು ಪ್ರತಿಯೊಂದನ್ನು ಗಮನಿಸುತ್ತ ಹೋದರೆ ನಂತರ ಸಲೀಸಾಗುತ್ತದೆ. ದಂಪತಿಗೆ ಫಲವಂತಿಕೆಯ ಈ ಲಕ್ಷಣಗಳು ಅರ್ಥವಾದರೆ ಚಿಕಿತ್ಸೆಯೂ ಸುಲಭವಾಗುತ್ತದೆ. ಋತುಚಕ್ರ ನಿಯಮಿತವಾಗಿರದಿದ್ದಲ್ಲಿಯೂ ಅಂಡಾಣು ಬಿಡುಗಡೆಯನ್ನು ಪತ್ತೆ ಮಾಡಬಹುದಾಗಿರುತ್ತದೆ.

ಇನ್ನು ಎರಡನೆಯ ಮಗುವಾಗುವಲ್ಲಿ ವಿಳಂಬವಾಗಲು ಕಾರಣಗಳನ್ನು ನೋಡೋಣ..: ಎರಡನೆಯ ಮಗುವನ್ನು ಪಡೆಯುವಲ್ಲಿ ಮಹಿಳೆಯ ವಯಸ್ಸು ಮುಖ್ಯ ಕಾರಣವಾಗುತ್ತದೆ. ಮಹಿಳೆಗೆ ವಯಸ್ಸಾದಂತೆಲ್ಲ ಅವಳ ಅಂಡಾಶಯದಲ್ಲಿರುವ ಅಂಡಾಣುಗಳ ಸಂಗ್ರಹ ಕಡಿಮೆಯಾಗುತ್ತ ಹೋಗುತ್ತದೆ. ಇದರರ್ಥ ಅವಳಲ್ಲಿ ಅಂಡಾಣುಗಳ ಪ್ರಮಾಣ ಹಾಗೂ ಅಂಡಾಣುಗಳ ಗುಣಮಟ್ಟ ಎರಡೂ ಕಡಿಮೆಯಾಗುತ್ತದೆ. ಜೊತೆಗೆ ಗರ್ಭಪಾತವಾಗುವ ಸಾಧ್ಯತೆಗಳೂ ಹೆಚ್ಚು. ಮೊದಲ ಮಗು ಸರಳವಾಗಿ, ಸಹಜವಾಗಿ ಹುಟ್ಟಿದ್ದರೂ ಇಂಥ ಸಾಧ್ಯತೆಗಳು ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಕಂಡು ಬರುತ್ತವೆ.

ರಚನಾತ್ಮಕ ತೊಡಕುಗಳು: ಕೆಲವೊಮ್ಮೆ ದೇಹರಚನೆಯ ಸಮಸ್ಯೆಗಳೂ ಎರಡನೆಯ ಮಗುವಾಗದಿರಲು ತೊಡಕಾಗಬಹುದು. ಮೊದಲ ಮಗುವಿನ ನಂತರ ಡಿಂಭನಾಳಗಳಲ್ಲಿ ವ್ಯತ್ಯಾಸವಾಗಬಹುದು. ಡಿಂಭನಾಳದಲ್ಲಿ ಅಡೆತಡೆ ಉಂಟಾಗಬಹುದು. ಎಂಡೊಮೆಟ್ರಿಯೊಸಿಸ್‌ ಸಮಸ್ಯೆ ಉದ್ಭವವಾಗಬಹುದು. ಇಲ್ಲವೇ ಡಿಂಭನಾಳದಲ್ಲಿಯೇ ಗರ್ಭಕಟ್ಟಿ ತೊಂದರೆಯಾಗಬಹುದು. ಇದಲ್ಲದೇ ಯಾವುದಾದರೂ ಶಸ್ತ್ರಚಿಕಿತ್ಸೆಗಳಾಗಿದ್ದಲ್ಲಿ ಗರ್ಭಧಾರಣೆ ವಿಳಂಬವಾಗಬಹುದು.

ಇದಲ್ಲದೆ ಮೊದಲ ಮಗುವನ್ನು ಹೆರುವಾಗ ಯಾವುದಾದರೂ ತೊಂದರೆಯಾದಲ್ಲಿ ಗರ್ಭಕೋಶದ ಸೋಂಕು, ಡಿಂಭನಾಳದ ಸೋಂಕು ಉಂಟಾಗಿದ್ದಲ್ಲಿ ಗರ್ಭಕೋಶಕ್ಕೆ ತೊಂದರೆಯಾಗಿದ್ದಲ್ಲಿ ಇಂಥ ಸಮಸ್ಯೆಗಳೂ ಇನ್ನೊಂದು ಮಗು ಪಡೆಯಲು ತೊಡಕುಗಳಾಗಿರುತ್ತವೆ.

ವೀರ್ಯಾಣುವಿನ ಸಮಸ್ಯೆ: ಇವೆರಡೂ ತೊಡಕುಗಳಲ್ಲದೆ ಇನ್ನೊಂದು ಮುಖ್ಯ ಅಂಶವಿದೆ. ಮಹಿಳೆಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದಲ್ಲಿ ವೀರ್ಯಾಣುವಿನ ಗುಣಮಟ್ಟ ಮತ್ತು ಪ್ರಮಾಣವನ್ನು ಒಮ್ಮೆ ಪರಿಶೀಲಿಸಬೇಕು. ಗರ್ಭಧಾರಣೆಯಲ್ಲಿ ಇದೂ ಪ್ರಮುಖ ಅಂಶವಾಗಿದೆ. ಮಹಿಳೆಯರಲ್ಲಿ ಅಂಡಾಣುವಿನ ಗುಣಮಟ್ಟದಲ್ಲಿ ಬದಲಾವಣೆಯಾದಂತೆ ಜೀವನಶೈಲಿ­ಯಿಂದಾಗಿ, ವಯಸ್ಸಿನಿಂದಾಗಿ ಪುರುಷರ ವೀರ್ಯಾಣುವಿನ ಗುಣಮಟ್ಟ, ಪ್ರಮಾಣದಲ್ಲಿಯೂ ವ್ಯತ್ಯಾಸವಾಗುತ್ತವೆ. ಬಂಜೆತನದ ಚಿಕಿತ್ಸೆ ಪಡೆಯುವ ಮೊದಲ ಹಂತದಲ್ಲಿಯೇ ವೀರ್ಯಾಣು ವಿಶ್ಲೇಷಣೆಯ ತಪಾಸಣೆಗೆ ಒಳಗಾಗುವುದು ಒಳಿತು.

ಸ್ಥೂಲಕಾಯ: ಗರ್ಭಧಾರಣೆಯಲ್ಲಿ ಸ್ಥೂಲಕಾಯವೂ ಅಡೆತಡೆ ಒಡ್ಡುತ್ತದೆ. ಹೆಚ್ಚಿನ ತೂಕದಿಂದಾಗಿ ಅಂಡಾಣು ಬಿಡುಗಡೆಯ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್‌ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಇದರ ಪ್ರಭಾವದಿಂದಾಗಿ ಟೆಸ್ಟೊಸ್ಟರಾನ್‌ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆ  ಅಂಡಾಣು ಬಿಡುಗಡೆ, ವೀರ್ಯಾಣು ಹಾಗೂ ಅಂಡಾಣುವಿನ ಸಂಯೋಗದ ಸಾಧ್ಯತೆಗಳು ಕಡಿಮೆ­ಆಗುತ್ತವೆ. ಪುರುಷರಲ್ಲಿಯೂ ಸ್ಥೂಲಕಾಯದಿಂದ ಈಸ್ಟ್ರೋಜನ್‌ ಸ್ರವಿಕೆ ಹೆಚ್ಚಾಗಿ ವೀರ್ಯಾಣುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಧೂಮಪಾನ: ಪುರುಷರು ಅಥವಾ ಮಹಿಳೆ ಯಾರೇ ಆಗಿರಲಿ, ಸಂಗಾತಿಗಳಲ್ಲಿ ಒಬ್ಬರು ಅಥವಾ ಇಬ್ಬರೂ ಧೂಮಪಾನ ಮಾಡುತ್ತಿದ್ದಲ್ಲಿ ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆ ಆಗುತ್ತವೆ. ಮಹಿಳೆಯ ಬಂಜೆತನಕ್ಕೆ ಧೂಮಪಾನ ಮುಖ್ಯ ಕಾರಣವೂ ಆಗಿರಬಹುದು.

ಎರಡನೆಯ ಮಗು ಆಗುವುದು ವಿಳಂಬವಾಗುತ್ತಿದೆ ಎಂದೆನಿಸಿದಲ್ಲಿ ನಿಮ್ಮ ವೈದ್ಯರೊಡನೆ ಸಮಾಲೋಚಿಸುವುದು ಅತ್ಯಗತ್ಯ. ಚಿಕಿತ್ಸಾ ಕ್ರಮಗಳನ್ನು ನಿರ್ಧರಿಸುವಲ್ಲಿ ಇದು ಸಹಾಯಕವಾಗುತ್ತದೆ.
ಮಾಹಿತಿಗೆ ಸಂಪರ್ಕಿಸಿ: 18002084444.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT