ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳದ ಭ್ರಮೆ

Last Updated 27 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿಯವರಿಗೆ ‘ದತ್ತು’ ಕೊಡುವ ಚರ್ಚೆಯಲ್ಲಿ ಬಹುಮುಖ್ಯವಾಗಿ ಪ್ರಸ್ತಾಪವಾಗುತ್ತಿರುವ ವಿಚಾರಗಳು ಎರಡು. ಮೊದಲನೆಯದ್ದು ಇಂಥ ಸಂಸ್ಥೆಗಳನ್ನು ನಡೆಸುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ಬಂಡವಾಳದ ಕೊರತೆ ಕಾಡುತ್ತಿರುವುದು. ಎರಡನೆಯದ್ದು ಖಾಸಗಿ ವಲಯದಿಂದ ಬರುವ ಹಣದಿಂದ ಇದನ್ನು ನಡೆಸುವುದಕ್ಕೆ ಅನುಕೂಲವಾಗುತ್ತದೆ ಎಂಬುದು. ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವಾರ್ಷಿಕ ವರದಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಬೇರೆಯೇ ಚಿತ್ರಣ ಕಾಣಿಸುತ್ತದೆ.

2014-15ರಲ್ಲಿ ರಾಜ್ಯ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ₹ 65 ಕೋಟಿ ಅನುದಾನ ದೊರೆತಿತ್ತು. ಇದರಲ್ಲಿ ಇಲಾಖೆ ವೆಚ್ಚ ಮಾಡಿದ್ದು ₹ 43.8 ಕೋಟಿ ಮಾತ್ರ. ಇಲಾಖೆಯು ಒಟ್ಟಾರೆ ಆಯವ್ಯಯದಲ್ಲಿ  ವೆಂಕಟಪ್ಪ ಆರ್ಟ್ ಗ್ಯಾಲರಿಗಾಗಿ 2014-15 ರಲ್ಲಿ ₹ 40.63  ಲಕ್ಷ ವ್ಯಯಿಸಿತ್ತು.  2013-14ರಲ್ಲಿ  ₹ 1.97 ಲಕ್ಷಗಳನ್ನು ‘ವಸ್ತು ಸಂಗ್ರಹಾಲಯಗಳನ್ನು ವೈಜ್ಞಾನಿಕವಾಗಿ ಮತ್ತು ಕ್ರಮಬದ್ಧವಾಗಿ ನಿರ್ವಹಿಸುವುದಕ್ಕಾಗಿ ವೆಚ್ಚ ಮಾಡಲಾಗಿದೆ. ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಕ್ರಮಬದ್ಧವಾಗಿ ಮಾಡಲಾಗಿದೆ’ ಎಂದು ವರದಿ ಹೇಳುತ್ತದೆ.

ತನ್ನ ಬಳಿ ಸಾಕಷ್ಟು ಹಣವಿದ್ದರೂ ಖರ್ಚು ಮಾಡದ ಇಲಾಖೆಯೊಂದರ ಅಡಿಯಲ್ಲಿ ಇರುವ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ‘ಉದ್ಧಾರ’ ಮಾಡುವುದಕ್ಕೆ ತಸ್ವೀರ್ ಫೌಂಡೇಷನ್ ಎಂಬ ಖಾಸಗಿ ಸಂಸ್ಥೆ ನೀಡಿದ ಪ್ರಸ್ತಾವ ಸರ್ಕಾರಕ್ಕೆ ಆಕರ್ಷಣೀಯವಾಗಿ ಕಂಡಿದ್ದೇ ವಿಚಿತ್ರ. ಏಕೆಂದರೆ ಪ್ರಾಚ್ಯವಸ್ತು  ಇಲಾಖೆಯ ಬಳಿಯೇ ಸರ್ಕಾರ ಒದಗಿಸಿದ ಅನುದಾನದಲ್ಲಿ ₹ 21 ಕೋಟಿ  ಬಳಕೆಯಾಗದೆ ಉಳಿದಿದೆ.  2014–2015ರ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಹೀಗೆಯೇ ₹ 15 ಕೋಟಿಯಷ್ಟು ದೊಡ್ಡ ಮೊತ್ತ ಖರ್ಚಾಗದೇ ಉಳಿದಿದೆ. ತಮಾಷೆ ಎಂದರೆ ತಸ್ವೀರ್ ಫೌಂಡೇಷನ್, ‘ದತ್ತು’ ಪಡೆಯುವುದಕ್ಕಾಗಿ ನೀಡಿರುವ ಪ್ರಸ್ತಾವದಲ್ಲಿ  ತಾನು ನೀಡುತ್ತೇನೆಂದು ಹೇಳಿರುವ ಮೊತ್ತ ₹ 10 ಕೋಟಿ  ಮಾತ್ರ. ಗ್ಯಾಲರಿಯನ್ನು ದತ್ತು ನೀಡುವುದಕ್ಕೆ ಹಣದ ಕೊರತೆ ಕಾರಣ ಎಂಬುದು ಸುಳ್ಳು ಎಂಬುದನ್ನು ಈ ಅಂಕಿ ಅಂಶಗಳು ಸ್ಪಷ್ಟ ಪಡಿಸುತ್ತವೆ.

ಕರ್ನಾಟಕ ಪ್ರವಾಸೋದ್ಯಮ ವಿಷನ್ ಗ್ರೂಪ್ (ಕೆಟಿವಿಜಿ- 2014) ಶಿಫಾರಸುಗಳಲ್ಲಿ ಮತ್ತು ಪ್ರವಾಸಿ ನೀತಿ 2014-15ರಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಕೈಗೊಳ್ಳಲಾಗುವ ಯೋಜನೆಗಳಲ್ಲಿ ಶೇಕಡ 50ರಷ್ಟು ವೆಚ್ಚವನ್ನು ಸರ್ಕಾರ ಭರಿಸಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಪಿಪಿಪಿಯ ಇಬ್ಬರೂ ಪಾಲುದಾರರು ಈ ವಿಚಾರವನ್ನು ಮುಚ್ಚಿಡುತ್ತಿದ್ದಾರೆ. ಅಂದರೆ ಸರ್ಕಾರ ತಾನು ಹೂಡುವ ಮೊತ್ತದ ಬಗ್ಗೆ ಹೇಳದೆಯೇ ಖಾಸಗಿಯವರಿಂದ ದಾನ ಪಡೆಯುತ್ತಿದ್ದೇನೆ ಎನ್ನುತ್ತಿದೆ. ಖಾಸಗಿಯವರು ತಾವು ದಾನ ಕೊಡುತ್ತಿದ್ದೇವೆ ಎಂಬ ಹುಸಿ ಉದಾರತೆ ತೋರುತ್ತಿದ್ದಾರೆ.

ವಸ್ತು ಸಂಗ್ರಹಾಲಯಗಳು ಮತ್ತು ಆರ್ಟ್ ಗ್ಯಾಲರಿಗಳನ್ನು ನಡೆಸಲಾಗದೆ ಖಾಸಗಿಯವರಿಗೆ ದತ್ತು ಕೊಡಲು ಹೊರಟಿರುವ ಪ್ರವಾಸೋದ್ಯಮ ಇಲಾಖೆ ಇತ್ತೀಚೆಗೆ ಮಾಡಿದ ಖರ್ಚುಗಳನ್ನು ನೋಡಿದರೆ ‘ಹಣಕಾಸು ಕೊರತೆ’ಯ ಮತ್ತೊಂದು ಮುಖ ಅನಾವರಣಗೊಳ್ಳುತ್ತದೆ. 2015ರ ಆಗಸ್ಟ್ 6ರಂದು ಬೆಂಗಳೂರಿನ ಇಂಟರ್ ನ್ಯಾಷನಲ್ ಎಗ್ಸಿಬಿಷನ್ ಸೆಂಟರ್‌ನಲ್ಲಿ ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ (ಪಿಎಟಿಎ) ಎಂಬ ಸಂಸ್ಥೆ ನಡೆಸಿದ ‘ಟ್ರಾವೆಲ್ ಮಾರ್ಟ್’ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಲು ಪ್ರವಾಸೋದ್ಯಮ ಇಲಾಖೆ ವ್ಯಯಿಸಿದ್ದು ಆರು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತ. ಪಂಚತಾರಾ ಹೋಟೆಲುಗಳಲ್ಲಿ ಪಿಎಟಿಎ ನಿರ್ದೇಶಕ ಸಭೆ ನಡೆಸಲೇ
₹ 10.5 ಲಕ್ಷದಷ್ಟು ಖರ್ಚಾಗಿದೆ. ಜಾಹೀರಾತಿಗೆ ವ್ಯಯಿಸಿದ ಹಣ ₹ 11.63 ಲಕ್ಷ. ಪಂಚತಾರಾ ವಸತಿ ವ್ಯವಸ್ಥೆಗೆ ಖರ್ಚು ಮಾಡಿದ್ದು ₹ 9.97 ಲಕ್ಷ. ಇವುಗಳನ್ನೆಲ್ಲಾ ಮಂಜೂರು ಮಾಡುವುದಕ್ಕೆ ಪಾರದರ್ಶಕತಾ ಕಾಯ್ದೆಯಿಂದಲೂ ಇಲಾಖೆ ವಿನಾಯಿತಿ ಪಡೆದುಕೊಂಡಿದೆ!

ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದಕ್ಕಾಗಿ ಮೊರೆ ಹೋಗುವ ಸರ್ಕಾರ ಪಿಎಟಿಎ ಕಾರ್ಯಕ್ರಮಕ್ಕೆ ಐದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಕಣ್ಣು ಮುಚ್ಚಿಕೊಂಡು ಮಂಜೂರು ಮಾಡುತ್ತದೆ. ಇದೇ ಸರ್ಕಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀಡುವ ಅನುದಾನ ಒಂದು ಕೋಟಿ ರೂಪಾಯಿಮೀರುವುದಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಸಾಂಸ್ಕೃತಿಕ ಕೇಂದ್ರಗಳನ್ನು ಖಾಸಗೀಕರಿಸುವ ಪರಿಕಲ್ಪನೆ ಹುಟ್ಟಿಕೊಂಡದ್ದು ಕೆಟಿವಿಜಿ ನೀಡಿರುವ ಶಿಫಾರಸುಗಳಿಂದ. ಇಂಗ್ಲಿಷ್‌ನಲ್ಲಿ ಮಾತ್ರವಿರುವ ಈ ವರದಿ ಮತ್ತು ಪ್ರವಾಸಿ ನೀತಿಯ ಉದ್ದಕ್ಕೂ ಕರ್ನಾಟಕದ ಪರಂಪರೆಯ ಅಂಗವಾಗಿರುವ ಅನೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪ್ರಸ್ತಾಪವೇ ಇಲ್ಲ. ಕರ್ನಾಟಕದ ಪ್ರವಾಸಿ ನೀತಿಯಲ್ಲಿ ವಚನ ಸಾಹಿತ್ಯ ಪರಂಪರೆ, ಕುವೆಂಪು, ತೇಜಸ್ವಿ, ನೀನಾಸಂ, ರಂಗಾಯಣ ಇತ್ಯಾದಿಗಳ ವಿಚಾರವೇ ಇಲ್ಲ. ಕೆಟಿವಿಜಿ ಗುಂಪಿನ ಸದಸ್ಯರಲ್ಲಿ ಖಾಸಗಿ ಉದ್ಯಮ ವಲಯದವರೇ ಹೆಚ್ಚಿದ್ದರು. ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಧಿಸುವವರ ಸಂಖ್ಯೆ ಬಹಳ ಕಡಿಮೆ ಇತ್ತು.

ಕೆಟಿವಿಜಿಯ ಶಿಫಾರಸುಗಳನ್ನು ಜಾರಿಗೆ ತರುವ ಕೆಲಸ ಮಾಡುವುದಕ್ಕೆ ಬೇಕಿರುವ ವಿವರಣಾತ್ಮಕ ಯೋಜನಾ ವರದಿಯನ್ನು ರೂಪಿಸುವುದಕ್ಕೆ ಕರೆದಿದ್ದ ಟೆಂಡರ್‌ನಲ್ಲಿಯೂ ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಮಾತ್ರ ಸಲ್ಲಿಸಬೇಕು ಎಂಬ ಷರತ್ತಿತ್ತು. ಕನ್ನಡವನ್ನು ಆಡಳಿತ ಭಾಷೆ ಎಂದು ಒಪ್ಪಿಕೊಂಡಿರುವ ರಾಜ್ಯದಲ್ಲೇ ಇದು ಹೇಗೆ ಸಂಭವಿಸಿತೆಂಬ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ.

ಜಗತ್ತಿನಾದ್ಯಂತ ಮುಕ್ತ ಮಾಹಿತಿಗಾಗಿ ಆಂದೋಲನ ನಡೆಯುತ್ತಿರುವ ಕಾಲವಿದು. ಸರ್ಕಾರದ ಪ್ರತಿಯೊಂದು ನಡೆಯನ್ನೂ ಸಾರ್ವಜನಿಕರು ಅರಿಯಲಿ ಎಂಬ ಕಾರಣಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆಯನ್ನು ಭಾರತದಲ್ಲಿಯೂ ಜಾರಿಗೆ ತರಲಾಗಿದೆ. ಆದರೆ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೆಟಿವಿಜಿ ಮತ್ತು ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿಯ ನಡುವಣ ಒಡಂಬಡಿಕೆಯ ಪ್ರತಿಯನ್ನು ಈ ಕಾಯ್ದೆಯನ್ವಯ ಒದಗಿಸಬೇಕು ಎಂದರೆ ‘ಈ ಮಾಹಿತಿಗಳು ಖಾಸಗಿ ಸಂಸ್ಥೆಗಳ ಹಾಗೂ ಇಲಾಖೆ ನಡುವಿನ ವಿಶ್ವಾಸ ಮತ್ತು ನಂಬಿಕೆಯ ಪ್ರಶ್ನೆಯಾಗಿರುವುದರಿಂದ ಹಾಗೂ ಅವುಗಳ ಉದ್ಯೋಗ ಮತ್ತು ವ್ಯವಹಾರಗಳಿಗೆ ಸಂಬಂಧಿಸಿದ್ದು, ಇವುಗಳ ನೀಡುವಿಕೆಯಿಂದ ಅವರ ವ್ಯಾಪಾರ ವ್ಯವಹಾರ ಸ್ಪರ್ಧಾತ್ಮಕತೆಗೆ ಅಡಚಣೆ ಉಂಟಾಗುವ ಕಾರಣ ತಮ್ಮ ಮನವಿಯನ್ನು ಪುರಸ್ಕರಿಸಲು ಬರುವುದಿಲ್ಲ’ ಎಂಬ ಉತ್ತರ ಬಂದಿದೆ. ಇದರ ಅರ್ಥವೇನು? ಸಾರ್ವಜನಿಕ ಸ್ವಾಮ್ಯದ ಗ್ಯಾಲರಿಯೊಂದನ್ನು ದತ್ತು ಪಡೆಯುವ ಸಂಸ್ಥೆಯ ಕುರಿತಂತೆ ಸಾರ್ವಜನಿಕರು ಏನನ್ನೂ ತಿಳಿದುಕೊಳ್ಳಬಾರದು ಎಂದೇ?
- ರಶ್ಮಿ ಮುನಿಕೆಂಪಣ್ಣ, ಶ್ರೀಧರ್ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT