ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ನಿಂದ ಅಂದಾಜು ರೂ 200 ಕೋಟಿ ನಷ್ಟ

Last Updated 31 ಜುಲೈ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ದಿನದ ಬಂದ್‌ನಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತ­ಗೊಂಡಿದ್ದರಿಂದ ಮಹಾನಗರಿಯಲ್ಲಿ ವಾಣಿಜ್ಯ ಕ್ಷೇತ್ರಕ್ಕೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದೆ. ಈ ನಷ್ಟವನ್ನು  ರೂ 200 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

‘ರಾಜ್ಯದಲ್ಲಿ ಪ್ರತಿನಿತ್ಯ ಅಧಿಕೃತವಾಗಿ ರೂ 1,300 ಕೋಟಿ ವ್ಯಾಪಾರ ವಹಿವಾಟು ನಡೆಯುತ್ತದೆ. ಅದರಲ್ಲಿ ಬೆಂಗಳೂರಿನಲ್ಲಿಯೇ ಶೇ 65ರಷ್ಟು ವಹಿವಾಟು ಜರುಗುತ್ತದೆ. ಗುರುವಾರದ ಬಂದ್‌ನಿಂದಾಗಿ ಸುಮಾರು ರೂ 200 ಕೋಟಿ ನಷ್ಟ ಸಂಭವಿಸಿದೆ. ಅಲ್ಲದೇ, ಸರ್ಕಾರದ ಬೊಕ್ಕಸಕ್ಕೆ ಸುಮಾರು ರೂ 20 ಕೋಟಿ ನಷ್ಟವಾಗಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್‌ಕೆ ಸಿಸಿಐ) ಅಧ್ಯಕ್ಷ ಎಸ್‌.ಸಂಪತ್‌ರಾಮನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಂದ್‌ನಿಂದಾಗಿ ವಾಣಿಜ್ಯ ಕ್ಷೇತ್ರದ ಮೇಲೆ ಆಗಿರುವ ಪರಿಣಾಮವನ್ನು ವಿಶ್ಲೇಷಿಸಿದ ಬೆಂಗಳೂರು ಕೈಗಾರಿಕೆ ಹಾಗೂ ವಾಣಿಜ್ಯೋ ದ್ಯಮ ಮಹಾಸಂಘದ (ಬಿಸಿಐಸಿ) ಪ್ರಧಾನ ಕಾರ್ಯದರ್ಶಿ ಟಿ.ಎಸ್‌.ಸಂಪತ್‌ ಕುಮಾರ್‌, ‘ಮುನ್ನೆಚ್ಚರಿಕೆ ಕ್ರಮವಾಗಿ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರದಲ್ಲಿನ ಹೆಚ್ಚಿನ ಕೈಗಾರಿಕೆಗಳು ಕೆಲಸ ಸ್ಥಗಿತಗೊಳಿಸಿದ್ದವು. ಬಹುತೇಕ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಮುಚ್ಚಿದ್ದವು.  ಆರ್ಥಿಕ ನಷ್ಟವನ್ನು ಅಂದಾಜಿಸುವುದು ಕಷ್ಟ. ಆದರೆ,  ಹೆಚ್ಚು ನಷ್ಟ ಸಂಭವಿಸಿಲ್ಲ ಎನ್ನಬಹುದು. ಸ್ವಲ್ಪ ಪ್ರಮಾಣದ ಪರಿಣಾಮ ಬೀರಿದೆ ಅಷ್ಟೆ’ ಎಂದರು.

ಬಿಎಂಟಿಸಿಗೆ ನಷ್ಟ: ಪ್ರಯಾಣಿಕರ ಕೊರತೆ ಯಿಂದಾಗಿ ಮಹಾನಗರ ಸಾರಿಗೆ ಸಂಸ್ಥೆಯ ಬಹುತೇಕ ಬಸ್ಸುಗಳು ಖಾಲಿಯಾಗಿಯೇ ಓಡಾಡುತ್ತಿದ್ದವು. ಹಾಗಾಗಿ ಮಧ್ಯಾಹ್ನದ ವೇಳೆಗೆ ಬಸ್ಸುಗಳ ಸಂಖ್ಯೆ ಕಡಿಮೆಯಾಯಿತು.

‘ಬಸ್ಸುಗಳ ಸಂಖ್ಯೆಯನ್ನು ನಾವು ಕಡಿತಗೊಳಿಸಿ ರಲಿಲ್ಲ. ಆದರೆ, ಪ್ರಯಾಣಿಕರು ಕಡಿಮೆ ಇದ್ದುದರಿಂದ ಟ್ರಿಪ್‌ಗಳ ಸಂಖ್ಯೆ ಕಡಿಮೆಯಾಗಿದೆ ಅಷ್ಟೆ. ಎಷ್ಟು ಆರ್ಥಿಕ ನಷ್ಟವಾಗಿದೆ ಎಂಬುದು ಶುಕ್ರವಾರ ಬೆಳಿಗ್ಗೆಯೇ ಗೊತ್ತಾಗಲಿದೆ’ ಎಂದು ಬಿಎಂಟಿಸಿ ಪ್ರಧಾನ ವ್ಯವಸ್ಥಾಪಕ (ಸಂಚಾರ) ಜಿ.ಎನ್‌.ವೀರೇಗೌಡ ಅವರು ಮಾಹಿತಿ ನೀಡಿದರು. 

ಹಾಪ್‌ಕಾಮ್ಸ್‌ಗೆ ಹೊಡೆತ: ಹಾಪ್‌ಕಾಮ್ಸ್‌ ಮಳಿಗೆಗಳ ತೆರೆದಿದ್ದರೂ ವಹಿವಾಟು ಪ್ರಮಾಣದಲ್ಲಿ ಕುಸಿತವಾಗಿದೆ. ‘ದಿನನಿತ್ಯ ಸುಮಾರು 60 ಟನ್‌ ಹಣ್ಣು ಮತ್ತು ತರಕಾರಿ ಮಾರಾಟವಾಗುತ್ತದೆ. ಆದರೆ ಗುರುವಾರ ಮಾರಾಟವಾಗಿದ್ದು ಸುಮಾರು  20–25 ಟನ್‌. ಇದರಿಂದ ಭಾರಿ ನಷ್ಟವಾಗಿದೆ’ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರುದ್ರೇಗೌಡ ಅವರು ಪ್ರತಿಕ್ರಿಯಿಸಿದರು.

ಸರ್ಕಾರಕ್ಕೂ, ಕೈಗಾರಿಕೆಗೂ ನಷ್ಟ: ಪೀಣ್ಯ, ಬೊಮ್ಮಸಂದ್ರ, ಬಸವೇಶ್ವರ ನಗರ ಸೇರಿದಂತೆ ಬಹುತೇಕ ಕೈಗಾರಿಕಾ ಪ್ರದೇಶಗಳಲ್ಲಿ ಉದ್ದಿಮೆಗಳು ಮುಚ್ಚಿದ್ದವು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ವಲಯಗಳಲ್ಲಿ ವ್ಯಾಪಾರ -ಚಟುವಟಿಕೆಗಳು ನಡೆಯಲಿಲ್ಲ.
ಈ ಪರಿಣಾಮ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗಿದೆ. ಸರ್ಕಾರದ ಬೊಕ್ಕಸಕ್ಕೂ ಕೊಕ್ಕೆ ಬಿದ್ದಿದೆ ಎಂದು ರಾಜ್ಯ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಶಶಿಧರ್‌ ತಿಳಿಸಿದರು.

ಬಹುತೇಕ ಲಾರಿಗಳ ಚಾಲಕರು ನಗರದ ಹೊರವಲಯದಲ್ಲಿಯೇ ವಿಶ್ರಾಂತಿಗೆ ಮೊರೆ ಹೋಗಿದ್ದರು. ಹೀಗಾಗಿ ಸರಕು ಸಾಗಣಿಕೆ ಮೇಲೆ ಹೊಡೆತ ಬಿತ್ತು. ‘ನಗರಕ್ಕೆ ಬರುವ ಹೆಚ್ಚಿನ ಲಾರಿಗಳ ಓಡಾಟ ಸ್ಥಗಿತಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹೊರ ವಲಯದಲ್ಲಿಯೇ ನಿಲ್ಲಿಸಲಾಗಿತ್ತು. ಒಂದು ಲಾರಿ ಮೇಲೆ  ರೂ 1500 ಹೊರ ಬಿದ್ದಿದೆ. ಇದರಿಂದಾಗಿ ಸುಮಾರು ರೂ 4.5 ಕೋಟಿ ನಷ್ಟವಾಗಿದೆ’ ಎಂದು ರಾಜ್ಯ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT