ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿಯದ ನೀರಿನ ಸಮಸ್ಯೆ

ರಾಮನಗರದಲ್ಲಿ ಪ್ರತಿಭಟನೆ: ಜಿ.ಪಂ. ಅಧ್ಯಕ್ಷರ ವಿರುದ್ಧ ಜೆಡಿಎಸ್‌ ಮುಖಂಡರ ಆಕ್ರೋಶ
Last Updated 28 ಮಾರ್ಚ್ 2015, 10:31 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಜೆಡಿಎಸ್‌ ಸದಸ್ಯರು ಮತ್ತು ಜಿಲ್ಲೆಯ ಜೆಡಿಎಸ್‌ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಇಲ್ಲಿಯವರೆಗೂ ಸಾಮಾನ್ಯ ಸಭೆ ಕರೆದಿಲ್ಲ. ತಿಂಗಳಿಗೆ ಸರಿಯಾಗಿ ಅಧಿಕಾರಿಗಳ ಸಭೆ ನಡೆಸುವ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಿಗೆ ನಿಗದಿತ ಅವಧಿಗೊಮ್ಮೆ ಸಾಮಾನ್ಯ ಸಭೆ ಕರೆಯಬೇಕು ಎಂಬ ಸೌಜನ್ಯ ಇಲ್ಲವೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಜಿ.ಪಂ. ಅಧ್ಯಕ್ಷರು  ಪ್ರತಿ ತಿಂಗಳು ನಡೆಸುತ್ತಿರುವ ಸಭೆಗಳ ಉದ್ದೇಶವೇ ಬೇರೆಯಾಗಿದೆ. ಅಧಿಕಾರಿಗಳಿಂದ ವಂತಿಗೆ ವಸೂಲಿ ಸಲುವಾಗಿ ಅವರು ಸಭೆಗಳನ್ನು ನಡೆಸುತ್ತಿದ್ದಾರೆಯೇ ಹೊರತು, ಜನರ ಸಮಸ್ಯೆ ಪರಿಹರಿಸುವ ಕಾಳಜಿ ಅವರಿಗಿಲ್ಲ ಎಂದು ಜಿ.ಪಂ ಸದಸ್ಯ ಎಂ.ಕೆ.ಧನಂಜಯ ಆರೋಪಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಅಧ್ಯಕ್ಷರು ಮತ್ತು ಕಾಂಗ್ರೆಸ್‌ನ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರು, ಜಿ.ಪಂ ಸದಸ್ಯರ ಸಭೆ ಕರೆದು ಚರ್ಚಿಸುವ ವಿವೇಚನೆ ಅವರಿಗಿಲ್ಲವಾಗಿದೆ ಎಂದು ಅವರು ದೂರಿದರು.

ಕೈತಪ್ಪಿದ ₹17 ಕೋಟಿ: ತಮ್ಮದೇ ಪಕ್ಷದ ಸಂಸದರು, ಸಚಿವರು ಹಾಗೂ ಮುಖ್ಯಮಂತ್ರಿ ಇರುವಾಗ ಜಿ.ಪಂ.ಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿಯ ಪಥದತ್ತ ಸಾಗಿಸುವುದಾಗಿ ಹೇಳಿಕೆ ನೀಡುತ್ತಿದ್ದ ಜಿ.ಪಂ ಅಧ್ಯಕ್ಷರು, ಜಿಲ್ಲೆಯ ಕುಡಿಯುವ ನೀರಿನ ಸಾಂದರ್ಭಿಕ ಯೋಜನೆ (ಕಂಟೆನ್‌ಜೆನ್ಸಿ)ಯನ್ನು ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯುವಲ್ಲಿ ವಿಫಲರಾ­ಗಿದ್ದಾರೆ. ಇದರಿಂದ ಜಿಲ್ಲೆಗೆ ಬರಬೇಕಾದ ₹17 ಕೋಟಿ ಕೈತಪ್ಪಿದೆ ಎಂದು  ಹೇಳಿದರು.

ಜಿ.ಪಂ ಸದಸ್ಯ ಎಚ್‌.ಸಿ.ರಾಜು ಮಾತನಾಡಿ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳ ಅಧ್ಯಕ್ಷರು ಮತ್ತು ಸಿಇಒಗಳು ಸರ್ಕಾರದಿಂದ ಸಾಂದರ್ಭಿಕ ಯೋಜನೆ ಅನುಮೋದನೆ ಪಡೆದು, ಅನುದಾನ ಪಡೆದು, ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ರಾಮನಗರದಲ್ಲಿ ಅಧ್ಯಕ್ಷ, ಸಿಇಒ ಅವರ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಈ ಕಾರ್ಯ ಇಲ್ಲಿಯವರೆಗೂ ಆಗಿಲ್ಲ ಎಂದು ಕಿಡಿಕಾರಿದರು.

ಹಣ ಬಿಡುಗಡೆ ಆಗಿಲ್ಲ: ಟಾಸ್ಕ್‌ಫೋರ್ಸ್‌ ಸಮಿತಿಯಲ್ಲಿ ಜಿಲ್ಲೆ ಪ್ರತಿ ತಾಲ್ಲೂಕಿಗೂ ತಲಾ ₹2 ಕೋಟಿ ಅನುದಾನ ನಿಗದಿಯಾಗಿದ್ದು, ವರ್ಷಾಂತ್ಯವಾಗುತ್ತಿದ್ದರೂ ಈ ಹಣ ಬಿಡುಗಡೆಯಾಗಿಲ್ಲ. ನರೇಗಾ ಯೋಜನೆಯಡಿ ಶೌಚಾಲಯ ಮತ್ತು ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿವಾರು ಅನುದಾನ ಬಿಡುಗಡೆ ಆಗಿಲ್ಲ.

ಎನ್‌ಆರ್‌ಡಿಡಬ್ಲ್ಯುಪಿ ಯೋಜನೆಯಡಿ ಸುಮಾರು ₹25 ಕೋಟಿ ಮೊತ್ತದ ಬಿಲ್ಲುಗಳು ಪಾವತಿಯಾಗದೆ ಬಾಕಿ ಉಳಿದಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಲು ಸ್ಥಳಕ್ಕೆ ಬಂದ ಸಿಇಒ ಕೆ.ಎಸ್‌.ಮಂಜುನಾಥ್‌ ಅವರನ್ನು ಸುತ್ತುವರಿದ ಪ್ರತಿಭಟನಾಕಾರರು, ತೀವ್ರ ತರಾಟೆಗೆ ತೆಗೆದುಕೊಂಡರು. ಸಿಇಒ, ಅಧ್ಯಕ್ಷ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಜಿ.ಪಂ. ಸದಸ್ಯರಾದ ವಿಜಯ್‌ ಕುಮಾರ್‌, ರಘುಕುಮಾರ್‌, ಹಂಸಕುಮಾರಿ, ಕಲ್ಪನಾ ಮಲ್ಲಿಕಾರ್ಜುನೇಗೌಡ, ಮಾಗಡಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ ಮರಿಗೌಡ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶ್ವತ್ಥ್‌, ಜೆಡಿಎಸ್‌ ಮುಖಂಡರಾದ ಕೂಟಗಲ್‌ ದೇವೇಗೌಡ, ರಾಜಶೇಖರ್‌, ಹನುಮಂತಪ್ಪ, ಶಿವಲಿಂಗಯ್ಯ, ಕಾಗೀಮಡು ಉದ್ದೀಶ್‌, ವಕೀಲ ಶಾಂತಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT