ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಷೋಕಿ; ಬೆಟ್ಟದಷ್ಟು ಬೆಳೆದ ಬಾಕಿ

Last Updated 26 ಮೇ 2015, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2013ರ ಮೇ ತಿಂಗಳಿನಿಂದ ಇಲ್ಲಿಯತನಕ ನಡೆಸಿದ 12,500 ಸಿವಿಲ್‌ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಉಳಿಸಿಕೊಂಡಿರುವ ಬಾಕಿ ₨ 2,356 ಕೋಟಿ!

ತೋಟಗಾರಿಕೆ ಮತ್ತು ಬೀದಿ ದೀಪಗಳ ನಿರ್ವಹಣೆ, ವಕೀಲರ ಗೌರವಧನ, ಜಾಹೀರಾತು ವೆಚ್ಚ ಹಾಗೂ ಕಳೆದ ನಾಲ್ಕು ತಿಂಗಳಿನಿಂದ ಉಳಿದಿರುವ ಘನತ್ಯಾಜ್ಯ ನಿರ್ವಹಣೆ ಬಾಕಿ ಎಲ್ಲವನ್ನೂ ಸೇರಿದರೆ ಆ ಮೊತ್ತ ₨ 5,000 ಕೋಟಿಗೆ ತಲುಪುತ್ತದೆ. ಇಷ್ಟೊಂದು ಹಣ ಹೊಂಚುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್‌. ವಾರ್ಷಿಕ ತೆರಿಗೆ ಸಂಗ್ರಹದ ಗುರಿಯನ್ನು ತಲುಪಿದರೂ ₨ 2,350 ಕೋಟಿಯಷ್ಟು ವರಮಾನವಷ್ಟೇ ಲಭ್ಯವಾಗಲಿದೆ. ಸಿಬ್ಬಂದಿ ವೇತನ, ನಿತ್ಯದ ಆಡಳಿತ ವೆಚ್ಚ ಎಲ್ಲವನ್ನೂ ನಿಭಾಯಿಸಿಕೊಂಡು ಸಾಲ ತೀರಿಸುವುದು ಹೇಗೆ ಎಂಬ ಪ್ರಶ್ನೆ ಬಿಬಿಎಂಪಿ ಹಿರಿಯ ಅಧಿಕಾರಿಗಳನ್ನು ಕಾಡುತ್ತಿದೆ.

ಇಷ್ಟೊಂದು ಬಾಕಿ ಏಕೆ?: ಗುತ್ತಿಗೆದಾರರಿಗೆ ಸಾವಿರಾರು ಕೋಟಿಗಳಷ್ಟು ಹಣ ಬಾಕಿ ಉಳಿಸಿಕೊಳ್ಳುವ ಪ್ರಮೇಯ ಬಂದಿದ್ದೇಕೆ? – ಈ ಪ್ರಶ್ನೆಗೆ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ನಿವೃತ್ತ ಅಧಿಕಾರಿಯೊಬ್ಬರು, ‘ಕಳೆದ ಐದು ವರ್ಷಗಳಿಂದ ಗುರಿ ಸಾಧನೆಗೆ ಅಸಾಧ್ಯವಾದ
ಬಜೆಟ್‌ ಮಂಡಿಸುತ್ತಾ ಬರಲಾಗಿದೆ. ಬಜೆಟ್‌ ಗಾತ್ರಕ್ಕೆ ತಕ್ಕಂತೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುತ್ತಿದೆ. ವರಮಾನ ಮಾತ್ರ ಸೀಮಿತವಾಗಿದೆ.

ಆ ವ್ಯತ್ಯಾಸವೇ ಬಾಕಿ  ರೂಪದಲ್ಲಿ ವ್ಯಕ್ತವಾಗುತ್ತಿದೆ’ ಎಂದು ಉತ್ತರಿಸುತ್ತಾರೆ. ‘ವರ್ಷದ ಹಿಂದೆ ಬಿಬಿಎಂಪಿಯಲ್ಲಿ 16 ಸಾವಿರಕ್ಕೂ ಅಧಿಕ ಮುಂದುವರಿದ ಕಾಮಗಾರಿಗಳೇ ಇದ್ದವು. ಅಂದರೆ ಹಿಂದಿನ ವರ್ಷದಲ್ಲಿ ಕೆಲಸ ಮುಗಿಯದೆ ಮುಂದಿನ ಹಣಕಾಸು ವರ್ಷಕ್ಕೂ
ಆರ್ಥಿಕ ಹೊರೆಯಾಗಿ ಬಂದ ಕಾಮಗಾರಿಗಳವು. ನಗರದಲ್ಲಿ ಅಷ್ಟೊಂದು ಕೆಲಸಗಳು ಎಲ್ಲಿ ನಡೆದಿವೆ ಎಂಬುದನ್ನು ಉಪಗ್ರಹದ ಸಹಾಯದಿಂದಲೇ ಪತ್ತೆ ಹಚ್ಚಬೇಕು’ ಎಂದು ಅವರು ವ್ಯಂಗ್ಯವಾಡುತ್ತಾರೆ. ‘ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು’ ಎನ್ನುವುದು ಲೋಕಮಾನ್ಯವಾದ ಮಾತು. ಅರ್ಥವ್ಯವಸ್ಥೆ ನಿರ್ವಹಣೆ ಮಾಡುವವರಿಗೆ ಇದು ಯಾವಾಗಲೂ ತಲೆಯಲ್ಲಿರಬೇಕು. ಬಿಬಿಎಂಪಿಯಲ್ಲಿ ತೋರಿದ ಆರ್ಥಿಕ ಅಶಿಸ್ತಿನಿಂದ ಪ್ರಮುಖ ಕಟ್ಟಡಗಳನ್ನೆಲ್ಲ ಅಡವಿಟ್ಟು ಸಾಲ ಮಾಡಬೇಕಾಯಿತು. ಹಲವು ಆಸ್ತಿಗಳನ್ನೂ ಮಾರಾಟ ಮಾಡಬೇಕಾಯಿತು’ ಎಂದು ವಿವರಿಸುತ್ತಾರೆ.

ಬಿಬಿಎಂಪಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಅರಿವು ಹೊಂದಿರುವ ಹಲವು ಗುತ್ತಿಗೆದಾರರು ಹಿರಿತನದ ಸರದಿ ಕಡೆಗಣಿಸಿ ಪ್ರಭಾವಿಗಳಿಂದ ಒತ್ತಡ ಹೇರಿ, ಹಣ ಭರವಸೆ ಪತ್ರದ (ಎಲ್‌ಒಸಿ) ಮೂಲಕ ಶೀಘ್ರ ದುಡ್ಡು ಪಡೆಯಲು ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮುಖ್ಯಮಂತ್ರಿ ಸೇರಿದಂತೆ ಹಲವರು ಎಲ್‌ಒಸಿ ಬಿಡುಗಡೆಗೆ ಒತ್ತಡ ಹೇರಿದ ಬಗೆಗೆ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಈ ಹಿಂದೆಯೇ ಚರ್ಚೆಯಾಗಿದೆ. ಬಲಾಢ್ಯರು ಬೇಗ ಹಣ ಪಡೆದರೆ, ಅಸಹಾಯಕರು ಚಾತಕಪಕ್ಷಿಯಂತೆ ಬಿಲ್‌ ಬಿಡುಗಡೆ ಆಗುವ ದಿನಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

‘ಬಿಬಿಎಂಪಿಯಿಂದ ಯಾವುದೇ ಕಾಮಗಾರಿ ವಹಿಸಿಕೊಂಡಾಗ ಒಂದಿಷ್ಟು ಲಾಭವಾಗುವುದು ಸುಳ್ಳಲ್ಲ. ಲಾಭದ ಉದ್ದೇಶದಿಂದಲೇ ನಾವೂ ಕೆಲಸ ಮಾಡುವುದು. ಆದರೆ, 2 ವರ್ಷಗಳಷ್ಟು ದೀರ್ಘ ಅವಧಿಗೆ ಪಾಲಿಕೆ ಬಿಲ್‌ ಬಾಕಿ ಉಳಿಸಿಕೊಂಡರೆ ಸಾಲದ ಮೇಲಿನ ಬಡ್ಡಿ ತುಂಬುವಲ್ಲಿಯೇ ನಾವು ಸುಸ್ತು ಹೊಡೆದಿರುತ್ತೇವೆ’ ಎಂದು ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ರವೀಂದ್ರ ಹೇಳುತ್ತಾರೆ.
‘ಬಂಗಾರದ ಒಡವೆಗಳನ್ನು ಒತ್ತೆಯಿಟ್ಟು ಸಾಲ ತಂದು ಕೆಲಸ ಮಾಡಿದ್ದೇವೆ. ಅಧಿಕಾರಿಗಳಿಗೆ ಕನಿಕರ ಬೇಡವೇ; ಮಾಡಿದ ಕೆಲಸಕ್ಕಾಗಿ ಹಣ ಪಡೆಯಲು ನಾವು ಇಷ್ಟೊಂದು ಒದ್ದಾಡಬೇಕೇ’ ಎಂದು ಅವರು ಕೇಳುತ್ತಾರೆ.ಆರ್ಥಿಕ ಅಶಿಸ್ತಿಗೆ ಮೂಗುದಾರ ಹಾಕಲು ನಿರ್ಧರಿಸಿರುವ ವಿಜಯಭಾಸ್ಕರ್‌, ಬಜೆಟ್‌ ಗಾತ್ರವನ್ನು ತಗ್ಗಿಸಿದ್ದು, ಬಿಲ್‌ ಪಾವತಿಗಾಗಿ ಆನ್‌ಲೈನ್‌ ವ್ಯವಸ್ಥೆ ತರುತ್ತಿದ್ದಾರೆ.

‘ಎಲ್ಲ ವಿಧದ ಬಿಲ್‌ಗಳನ್ನು ಇನ್ನುಮುಂದೆ ಆನ್‌ಲೈನ್‌ ಮೂಲಕವೇ ಪಾವತಿಸಬೇಕು. ಅದಕ್ಕೆ ಬೇಕಾದ ತಂತ್ರಾಂಶವನ್ನು ಸಿದ್ಧಪಡಿಸಿ, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು. ಈ ವ್ಯವಸ್ಥೆ ಆಗುವವರೆಗೆ ಬಿಲ್‌ ಪಾವತಿ ತಡೆಹಿಡಿಯಬೇಕು. ಹಣ ಭರವಸೆ ಪತ್ರಗಳನ್ನು ಸ್ವೀಕರಿಸಬಾರದು’ ಎಂದು ಹಣಕಾಸು ವಿಭಾಗಕ್ಕೆ ಸೂಚಿಸಿದ್ದಾರೆ. ‘ಕಾಮಗಾರಿ ಕುರಿತಂತೆ ಕಾಮಗಾರಿ ಮುಂಚಿನ, ಆರಂಭಿಸಿದ ಹಾಗೂ ಪೂರ್ಣಗೊಂಡಿರುವ ಕುರಿತು ಗುಣಮಟ್ಟ ನಿಯಂತ್ರಕರಿಂದ ವರದಿ ಪಡೆಯಬೇಕು. ಗುಣಮಟ್ಟ ಸರಿಯಿದ್ದಲ್ಲಿ ಅಂದಾಜು ಪಟ್ಟಿ, ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ, ಎಂ.ಬಿ. ಪುಸ್ತಕದ ಪ್ರತಿಗಳನ್ನು ಸ್ಕ್ಯಾನ್‌ ಮಾಡಿ ಆನ್‌ಲೈನ್‌ನಲ್ಲೇ ಲೆಕ್ಕ ಅಧೀಕ್ಷಕರಿಗೆ ಕಳುಹಿಸಬೇಕು’ ಎಂದು ಆದೇಶಿಸಿದ್ದಾರೆ.

‘ಹಣಕಾಸಿನ ಲಭ್ಯತೆ ಆಧಾರದ ಮೇಲೆ ಹಂತ, ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಆಡಳಿತಾಧಿಕಾರಿ ಭರವಸೆ ನೀಡುತ್ತಾರೆ.

25 ತಂಡಗಳ ರಚನೆ: ಕಾಮಗಾರಿಗಳನ್ನು ಪರಿಶೀಲಿಸದೆ ಬಿಲ್‌ ಬಿಡುಗಡೆ ಸಾಧ್ಯವಿಲ್ಲ ಎಂದಿರುವ ವಿಜಯಭಾಸ್ಕರ್‌ ಇದುವರೆಗೆ ನಡೆದಿರುವ ಕಾಮಗಾರಿಗಳ ತಪಾಸಣೆಗೆ 25 ತಂಡ ರಚಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ಗಳು, ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ವಿಭಾಗದ ಮುಖ್ಯಸ್ಥರು ತಂಡದಲ್ಲಿದ್ದಾರೆ.

ಎರಡು ವರ್ಷದ ಹಿಂದೆ ನಡೆದಿರುವ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಹೇಗೆ ಪರೀಕ್ಷಿಸಲಾಗುತ್ತದೆ ಎಂಬ ಪ್ರಶ್ನೆ ಮುಂದಿಟ್ಟಾಗ, ‘ರಸ್ತೆ ಗುಣಮಟ್ಟ ಸಂಪೂರ್ಣವಾಗಿ ಪರಿಶೀಲಿಸುವುದು ಸಾಧ್ಯವಿಲ್ಲ ಎನ್ನುವುದು ನಮಗೂ ಗೊತ್ತಿದೆ. ಆದರೆ, ಕಡತದಲ್ಲಿರುವ ವಿವರಕ್ಕೂ (ರಸ್ತೆ ಹೆಸರು, ಉದ್ದ, ಅಗಲ ಇತ್ಯಾದಿ) ಭೌತಿಕ ಸ್ಥಿತಿಗೂ ತಾಳೆಯಾಗಬೇಕು. ಅದನ್ನೇ ಪರಿಶೀಲನೆ ಮಾಡಲಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

13 ಟೇಬಲ್‌ ಓಡಾಡುವ ಕಡತ
ಗುತ್ತಿಗೆದಾರರೊಬ್ಬರು ಯಾವುದೇ ಕಾಮಗಾರಿ ಪೂರ್ಣಗೊಳಿಸಿದಾಗ ಅದರ ಬಿಲ್‌ ಬಿಡುಗಡೆಯಾಗಲು 13 ಟೇಬಲ್‌ ಓಡಾಡಬೇಕು. ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಅವರು ಸಹಾಯಕ ಎಂಜಿನಿಯರ್‌ (ಎಇ) ಅವರಿಗೆ ಸಲ್ಲಿಸಬೇಕು. ಅಂದಾಜು ಪತ್ರಿಕೆ ನೋಡಿ ಎಇ ಬಿಲ್‌ ರಿಜಿಸ್ಟರ್‌ (ಬಿ.ಆರ್‌)ನಲ್ಲಿ ವಿವರ ನಮೂದಿಸುತ್ತಾರೆ.

ಕಡತಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಅನುಮೋದನೆ ನೀಡುತ್ತಾರೆ. ಕಾರ್ಯನಿರ್ವಾಹಕ ಎಂಜಿನಿಯರ್‌ (ಇಇ) ಕಚೇರಿಗೆ ಪ್ರಸ್ತಾವ ಬರುತ್ತದೆ. ಕಾಮಗಾರಿ ಪರಿಶೀಲಿಸಿ ಮೇಜರ್‌ಮೆಂಟ್‌ ಬುಕ್‌ (ಎಂ.ಬಿ)ನಲ್ಲಿ ಅವರು ವಿವರ ದಾಖಲಿಸುತ್ತಾರೆ. ಅಲ್ಲಿಂದ ವಲಯದ ಮುಖ್ಯ ಎಂಜಿನಿಯರ್‌ (ಸಿಇ) ಮೂಲಕ ಜಂಟಿ ಆಯುಕ್ತರಿಗೆ ಕಡತ ಹೋಗುತ್ತದೆ. ಕಾಮಗಾರಿ ಪರಿಶೀಲಿಸಿ ಟಿಪ್ಪಣಿಯೊಂದಿಗೆ ಪ್ರಧಾನ ಕಚೇರಿ ಮುಖ್ಯ ಎಂಜಿನಿಯರ್‌ಗೆ ಕಡತವನ್ನು ಕಳಿಸುತ್ತಾರೆ.

ಜಂಟಿ ಆಯುಕ್ತರಿಂದ ವಿಶೇಷ ಆಯುಕ್ತರಿಗೆ, ಅವರ ಮೂಲಕ ಹೆಚ್ಚುವರಿ ಆಯುಕ್ತರಿಗೆ (ಹಣಕಾಸು), ಅಲ್ಲಿಂದ ಆಯುಕ್ತರಿಗೆ ಕಡತ ಹೋಗುತ್ತದೆ. ಆಯುಕ್ತರು ಕಡತ ಪರಿಶೀಲಿಸಿ ಮುಖ್ಯ ಹಣಕಾಸು ಅಧಿಕಾರಿಗೆ ಕಳಿಸುತ್ತಾರೆ. ಪ್ರಸ್ತಾವ ಸಿದ್ಧಪಡಿಸಿದ ಮೇಲೆ ಪುನಃ ಆಯುಕ್ತರ ಬಳಿ ಕಡತ ಬರುತ್ತದೆ. ಅವರಿಂದ ಅನುಮತಿ ಸಿಕ್ಕಮೇಲೆ ಚೆಕ್‌ ಸೆಕ್ಷನ್‌ಗೆ ಕಡತ ಹೋಗುತ್ತದೆ. ಅಲ್ಲಿಂದ ಗುತ್ತಿಗೆದಾರರಿಗೆ ಚೆಕ್‌ ರವಾನೆಯಾಗುತ್ತದೆ. ‘ಕಡತದ ಈ ಓಡಾಟದಲ್ಲಿ ನಮ್ಮ ಬಿಲ್‌ನ ಶೇ 27ರಷ್ಟು ಹಣ ಸೋರಿಕೆಯಾಗುತ್ತದೆ’ ಎಂದು ಗುತ್ತಿಗೆದಾರರೊಬ್ಬರು ಹೇಳುತ್ತಾರೆ.

ಧರಣಿ ಕೈಬಿಟ್ಟ ಗುತ್ತಿಗೆದಾರರು
ಬೆಂಗಳೂರು: ಜೂನ್ 15ರೊಳಗೆ ಬಾಕಿ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್‌ ಮಂಗಳವಾರ ಭರವಸೆ ನೀಡಿದ್ದರಿಂದ ಗುತ್ತಿಗೆದಾರರು ಧರಣಿ ಕೈಬಿಟ್ಟಿದ್ದಾರೆ.

‘2013ರ ಸೆಪ್ಟೆಂಬರ್ ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ನಡೆದ ಕಾಮಗಾರಿಗಳ ಪರಿಶೀಲನೆಯನ್ನು ಜೂನ್‌ 15ರೊಳಗೆ ಪೂರ್ಣಗೊಳಿಸಿ ವಿವರ ಪಡೆಯಲಾಗುತ್ತದೆ. ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಿದ ಗುತ್ತಿಗೆದಾರರಿಗೆ ಆ ಕ್ಷಣವೇ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಆಡಳಿತಾಧಿಕಾರಿ ಭರವಸೆ ನೀಡಿದರು.

ಮೇ ತಿಂಗಳಿನಿಂದ ಸೆಪ್ಟೆಂಬರ್‌ ವರೆಗಿನ ಅವಧಿಯಲ್ಲಿ ₨ 250 ಕೋಟಿ ಮೊತ್ತದ 1,500 ಕಾಮಗಾರಿಗಳು ನಡೆದಿವೆ. ಸರದಿ ಹಿರಿತನದಲ್ಲಿ ಮೊದಲು ಈ ಬಾಕಿಯನ್ನು ತೀರಿಸಲಾಗುತ್ತದೆ. ನಂತರ ಮುಂದಿನ ಅವಧಿ ಬಿಲ್‌ಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT