ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನಕ್ಕೆ ಕಮರಿದ ಪ್ರತಿಭೆ

ಕ್ಯಾಂಪಸ್ ಕಲರವ
Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಲೇಜು ಎಂದರೆ ಸಾವಿರ ನೆನಪುಗಳ ಕಣಜ. ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ನಾನು ಕಾಲೇಜಿನ ಮೆಟ್ಟಿಲು ಹತ್ತಿದ್ದೆ. ಅಲ್ಲಿನ ಒಂದು ಅನುಭವವನ್ನು ಇಂದಿಗೂ ನನಗೆ ಮರೆಯಲು ಆಗುತ್ತಿಲ್ಲ.

ನಾನು ಚಾಮರಾಜಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲ ವರ್ಷ ಪಿಯುಸಿ ಮುಗಿಸಿ ಎರಡನೇ ವರ್ಷ ಪಿಯುಸಿಗೆ ಬಂದಾಕ್ಷಣ ಮನೆಯಲ್ಲಿ ಎಲ್ಲರೂ ಹೆದರಿಸಿಬಿಟ್ಟರು. ಈ ವರ್ಷ ನೀನು ಸರಿಯಾಗಿ ಓದಬೇಕು ಇಲ್ಲದಿದ್ದರೆ ಫೇಲ್ ಆಗ್ತಿಯಾ. ಫೇಲ್‌ ಆದರೆ ನಿನಗೆ ಭವಿಷ್ಯವೇ ಇಲ್ಲ ಎಂಬಿತ್ಯಾದಿ ಮಾತುಗಳನ್ನು ಕೇಳಿ ಕೇಳಿ ನನಗೂ ಸಾಕಾಗಿತ್ತು. ಮುಖದ ಮೇಲೆ ಧೈರ್ಯದ ನಗು ಹಾಕಿಕೊಂಡರೂ ಮನಸ್ಸಿನ ಮೂಲೆಯೊಳಗೆ ಪರೀಕ್ಷೆ, ಪಾಸು, ಫೇಲು, ಓದಿನ  ವಿಚಾರಗಳೇ ಗಿರಕಿ ಹೊಡೆಯುತ್ತಿದ್ದವು.

ಇದೇ ಯೋಚನೆಯಲ್ಲಿ ಕಾಲೇಜಿಗೆ ಹೋದಾಗ ನನಗೆ ಆಪ್ತನಾಗಿದ್ದು ವಿಶ್ವನಾಥ. ಅವನ ವಿನಯ, ಮಾತು ನನಗೆ ತುಂಬಾ ಇಷ್ಟವಾಗಿತ್ತು. ನನ್ನ ಓದು, ಸಮಯ ಸಿಕ್ಕಾಗಲೆಲ್ಲಾ ಅವನೊಂದಿಗೆ ಮಾತು ನನಗೆ ಖುಷಿ ನೀಡುತ್ತಿದ್ದವು. ಅವನೊಂದಿಗೆ ಆಪ್ತವಾದಾಗ ಅವನ ಪರಿಸ್ಥಿತಿಯೂ ನನಗೆ ಅರ್ಥವಾಗತೊಡಗಿತು.

ಸಾಕಷ್ಟು ಕಷ್ಟದ ಹಿನ್ನೆಲೆಯಿಂದ ಬಂದವನು ಅವನು. ಬಡವನಾದರೂ ಬುದ್ಧಿವಂತ ಹುಡುಗ. ಅಷ್ಟೇ ಸ್ನೇಹ ಜೀವಿ. ಓದಿನ ಸಲುವಾಗಿ ಊರು ಬಿಟ್ಟು ನಗರಕ್ಕೆ ಬಂದಿದ್ದ. ಇಲ್ಲಿಯೇ ಒಂದು ಚಿಕ್ಕ ರೂಮ್‌ ಮಾಡಿಕೊಂಡಿದ್ದ. ಓದಿನ ಖರ್ಚು ನಿಭಾಯಿಸಲು ಸಣ್ಣದೊಂದು ಕೆಲಸಕ್ಕೂ ಸೇರಿಕೊಂಡಿದ್ದ. ಇವೆಲ್ಲ ಕಾರಣಗಳಿಂದ ನನಗೆ ಅವನ ಮೇಲಿದ್ದ ವಿಶ್ವಾಸ ಇನ್ನಷ್ಟು ಹೆಚ್ಚಾಗಿತ್ತು.

ನಮ್ಮ ತರಗತಿಯ ಬೇರೆಲ್ಲಾ ವಿದ್ಯಾರ್ಥಿಗಳಿಗಿಂತ ಅವನು ತುಂಬಾ ಚೆನ್ನಾಗಿ ಓದುತ್ತಿದ್ದ. ನಾನು ಕೂಡ ಅವನಬಳಿ ಸಾಕಷ್ಟು ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದೆ. ಯಾವುದೇ ವಿಷಯಗಳ ಕುರಿತು ಅವನ ಬಳಿ ಮಾತನಾಡುವಷ್ಟು ಸಲುಗೆ ನನಗಿತ್ತು. ಅವನೂ ಅಷ್ಟೇ, ನಾನು ಏನೇ ಕೇಳಿದರೂ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದ. ಸಾಕಷ್ಟು ಓದಿಕೊಂಡಿದ್ದ. ಅವನ ಸಾಂಗತ್ಯದಿಂದ ನಾನು ಓದಿನ ಕುರಿತು ಅಭಿರುಚಿ ಬೆಳೆಸಿಕೊಂಡೆ. ದ್ವಿತೀಯ ಪಿಯುಸಿ ಬಗ್ಗೆ ಇದ್ದ ಭಯ ಸ್ವಲ್ಪ ಕಡಿಮೆಯಾಗಿತ್ತು. ನಾನು ಚೆನ್ನಾಗಿ ಓದಲು ಶುರುಮಾಡಿದೆ. ಪಿ.ಯು.ಸಿಯಲ್ಲಿ ಚೆನ್ನಾಗಿ ಓದಿ ಪಾಸಾದೆ. ಬಿ.ಎ. ಸೇರಿಕೊಂಡೆ. ವಿಶ್ವನಾಥ್ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬಿ.ಎ.ಗೆ ಸೇರಿಕೊಂಡ.

ಓದಿನಲ್ಲಿ ತುಂಬಾ ಮುಂದಿದ್ದ ಅವನ ಮನಸ್ಸಿನಲ್ಲಿ ಏನೋ ನೋವಿತ್ತು. ನಾವೆಲ್ಲಾ ಖುಷಿಯಲ್ಲಿದ್ದರೆ, ಅವನು ಸದಾ ಮಂಕಾಗಿದ್ದ. ಕಾರಣ ಕೇಳಿದರೆ ಹೇಳುತ್ತಿರಲಿಲ್ಲ. ಕಾಲೇಜಿಗೂ ಸರಿಯಾಗಿ ಬರುತ್ತಿರಲಿಲ್ಲ. ಒಂದು ಸಲ ಗೆಳೆಯರೆಲ್ಲಾ ಸೇರಿ ವಿಚಾರಿಸಿದಾಗ ಅವನ ಕತೆ ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿತ್ತು. ಅವನಿಗೆ ತಾಯಿ ಇರಲಿಲ್ಲ. ಮನೆಯಲ್ಲಿ ಬಡತನವಿತ್ತು. ಓದುವ ಕನಸು ಇಟ್ಟುಕೊಂಡ ಅವನು ನಗರಕ್ಕೆ ಬಂದಿದ್ದ. ಕೆಲಸ ಮಾಡಿಕೊಂಡು ಓದುವುದು ಅವನಿಗೆ ಕಷ್ಟವಾದರೂ ಬೇರೆ ದಾರಿಯಿರಲಿಲ್ಲ. ಎಷ್ಟೋ ಸಲ ಊಟಕ್ಕೆ ಹಣವಿಲ್ಲದೇ ಉಪವಾಸ ಮಲಗುತ್ತಿದ್ದ. ಬದುಕಲು ಆಸಕ್ತಿಯೇ ಇಲ್ಲದವನಂತೆ ಇರುತ್ತಿದ್ದ. ಬಡತನ ಅವನನ್ನು ಅಷ್ಟು ಬೆಂಡಾಗಿಸಿತ್ತು.

ಮೂರು ದಿನವಾದರೂ ವಿಶ್ವನಾಥ್ ಕಾಲೇಜಿಗೆ ಬರಲಿಲ್ಲ. ನಾವೆಲ್ಲಾ ಏನೋ ಮೈಗೆ ಹುಷಾರಿಲ್ಲ ಅದಕ್ಕೆ ಬಂದಿಲ್ಲ ಎಂದುಕೊಂಡು ಸುಮ್ಮನಾಗಿದ್ದೆವು. ಒಂದು ದಿನ ಕ್ಲಾಸ್‌ನಲ್ಲಿ ಕನ್ನಡ ಟೀಚರ್‌ ಪಾಠ ಮಾಡುತ್ತಿದ್ದರು. ಆಗ ನನ್ನ ಸ್ನೇಹಿತನ ಪೋನ್‌ಗೆ ವಿಶ್ವನಾಥ್‌ನ ಫೋನ್‌ನಿಂದ ಕರೆ ಬಂದಿತ್ತು. ಅವನು ಎದ್ದುನಿಂತು ‘ಮೇಡಂ, ವಿಶ್ವನಾಥ್ ಆತ್ಮಹತ್ಯೆ ಮಾಡಿಕೊಂಡನಂತೆ’ ಎಂದಾಗ ಕ್ಲಾಸ್‌ನಲ್ಲಿದ್ದವರಿಗೆ ಶಾಕ್‌ ಆಗಿತ್ತು.

ಆ ಕ್ಷಣ ಅವನ ಮಾತು ಕೇಳಿ ನನಗೆ ತುಂಬಾ ನೋವಾಗಿತ್ತು. ನನ್ನ ಜೀವನದಲ್ಲಿ ಅವನ ಪಾತ್ರ ವನ್ನು ಮರೆಯಲು ಸಾಧ್ಯವಿಲ್ಲ. ಅಷ್ಟು ಬುದ್ಧಿವಂತ ಹುಡುಗ ಬಡತನಕ್ಕೆ ಹೆದರಿ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಂಡಿದ್ದ. ಅವನೇನಾದರೂ ಬದುಕಿದ್ದಿದ್ದರೆ ದೊಡ್ಡ ವ್ಯಕ್ತಿಯಾಗುತ್ತಿದ್ದ. ಅವನ ಪ್ರತಿಭೆ ಬಡತನದ ಬೇಗೆಗೆ ಸಿಕ್ಕು ಕಮರಿ ಹೋಗಿತ್ತು. ಇಂದಿಗೂ ಅವನ ನೆನಪಾದರೆ ಕಣ್ಣಂಚು ಒದ್ದೆಯಾಗುತ್ತದೆ. ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡ ನೋವು ಎಡೆಬಿಡದೇ ಕಾಡುತ್ತಿದೆ.  

ನೀವೂ ಬರೆಯಿರಿ
ಕಾಲೇಜು ಕ್ಯಾಂಪಸ್‌ನಲ್ಲಿ ನೀವೂ ಮಾನವೀಯ, ತಮಾಷೆಯ, ರೋಚಕ ಕಥನಗಳ ಭಾಗವಾಗಿರಬಹುದು. ನಿಮ್ಮ ಅಂತಹ ಕಥನಗಳನ್ನು ಸಂಕ್ಷಿಪ್ತವಾಗಿ ಬರೆದು ನಮಗೆ ಕಳುಹಿಸಿ. ಬರಹ ನುಡಿ, ಬರಹ ಅಥವಾ ಯುನಿಕೋಡ್‌ ತಂತ್ರಾಂಶದಲ್ಲಿರಲಿ. ಇಮೇಲ್: metropv@prajavani.co.in.

ಅಂಚೆ ವಿಳಾಸ: ಸಂಪಾದಕರು, ಪ್ರಜಾವಾಣಿ, ಕ್ಯಾಂಪಸ್ ಕಲರವ ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT