ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಹೊರೆಯಾಗದಿರಲಿ

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ರೈಲ್ವೆ ನಿಲ್ದಾಣಗಳನ್ನು ಖಾಸಗೀಕರಣ ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅಸ್ಸಾಂನಿಂದ ಮೇಘಾಲಯ ರಾಜ್ಯವನ್ನು ಸಂಪರ್ಕಿಸುವ ಮೊದಲ ರೈಲು ಸಂಚಾರವನ್ನು ಉದ್ಘಾಟಿಸಿದ ಸಮಾರಂಭದಲ್ಲಿ ಪ್ರಧಾನಿಯವರ ಈ ಹೊಸ ಆಲೋಚನೆ ಪ್ರಕಟಗೊಂಡಿದೆ.

‘ನಮ್ಮ ರೈಲು ನಿಲ್ದಾಣಗಳು ನೂರು ವರ್ಷಗಳ ಹಿಂದೆ ಇದ್ದಂತೆಯೇ ಈಗಲೂ ಇವೆ. ರೈಲು ನಿಲ್ದಾಣಗಳಲ್ಲಿ ಸೌಲಭ್ಯಗಳು ಹೆಚ್ಚಾಗಬೇಕು. ವಿಮಾನ ನಿಲ್ದಾಣಗಳಂತೆಯೇ ರೈಲು ನಿಲ್ದಾಣಗಳೂ ಆಧುನೀಕರಣ­ಗೊಳ್ಳ­ಬೇಕು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ದೇಶದ 12 ರೈಲು ನಿಲ್ದಾಣಗಳನ್ನು ಖಾಸಗೀಕರಣ ಮಾಡಲಾಗುವುದು’ ಎಂದು ಪ್ರಧಾನಿಯವರು ಹೇಳಿದ್ದಾರೆ.

ನಮ್ಮ ಬಹುತೇಕ ರೈಲು ನಿಲ್ದಾಣಗಳು ಸ್ವಚ್ಛತೆ­ಯನ್ನು ಕಾಪಾಡದೆ ಗಲೀಜಾಗಿವೆ ಎನ್ನುವುದು ನಿಜ. ಜತೆಗೆ ರೈಲು ಶೌಚಾ­ಲಯಗಳು ಕೂಡಾ ಗಬ್ಬು ನಾರುವುದು ಎಲ್ಲರಿಗೂ ಗೊತ್ತಿರುವಂತಹದ್ದೇ. ಅಸಮರ್ಪಕ ಸೇವೆ, ಕೌಂಟರುಗಳಲ್ಲಿ ನೂಕುನುಗ್ಗಲು ಎಲ್ಲ ಕಡೆ ಸಾಮಾನ್ಯ. ರೈಲು ನಿಲ್ದಾಣಗಳಲ್ಲಿ ಮಹಿಳೆಯರು, ಮಕ್ಕಳಿಗೆ ಉತ್ತಮ ನಿರೀಕ್ಷಣಾ ಕೊಠಡಿ, ಗುಣಮಟ್ಟದ ಆಹಾರ, ನೀರು ಮತ್ತಿತರ- ಮೂಲ ಸೌಲಭ್ಯಗಳು ಸಿಗಬೇಕು ಎನ್ನುವುದು ಎಲ್ಲರ ಆಶಯವೂ ಹೌದು. ಈ ಸೇವೆಗಳನ್ನು ಹೆಚ್ಚು ಆಸ್ಥೆಯಿಂದ ಅಚ್ಚುಕಟ್ಟಾಗಿ ಒದಗಿಸಲು ಖಾಸಗೀಕರಣ ಎನ್ನುವ ಕೇಂದ್ರ ಸರ್ಕಾರದ ಉದ್ದೇಶ ಒಳ್ಳೆಯದೇ.

ರೈಲು ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಿಕೊಡುವುದರಿಂದ ಇದು ಸಾಧ್ಯವಾಗಬಹುದು ಎಂದು ಪ್ರಧಾನಿ­ಯ­ವರು ಪ್ರಾಮಾಣಿಕವಾಗಿ ನಂಬಿರಲೂಬಹುದು. ಈಗಾಗಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಡೆದಿರುವ ಖಾಸಗೀಕರಣದಿಂದ ಸೇವೆಯ ಗುಣ­ಮಟ್ಟ ಹೆಚ್ಚಾಗಿದೆ ಎನ್ನುವುದು ನಿಜ. ಆದರೆ ಆ ಸೇವೆ ಕೇವಲ ಸಿರಿವಂತರಿಗೆ ಮಾತ್ರ ಮೀಸಲಾಗುತ್ತಿದ್ದು, ಬಡವರು ಅದರ ಹತ್ತಿರವೂ ಸುಳಿಯ­ದಂತಾ­ಗಿದೆ ಎನ್ನುವುದನ್ನು ಗಮನಿಸಬೇಕು.

ಪ್ರಪಂಚದಲ್ಲೇ ಅತ್ಯಂತ ದೊಡ್ಡ ರೈಲು ಸಂಪರ್ಕ ಸೇವೆ ಇರುವ ನಮ್ಮಲ್ಲಿ ರೈಲು ಪ್ರಯಾಣ ಇವತ್ತಿಗೂ ಜನಸಾಮಾನ್ಯರಿಗೆ ಅಚ್ಚುಮೆಚ್ಚು. ಇದಕ್ಕೆ ಮೊದಲ ಕಾರಣ ಅದು ಎಲ್ಲಾ ವರ್ಗದ ಜನರ ಕೈಗೆಟಕುವ ದರದಲ್ಲಿ ಸಿಗು­ತ್ತಿದೆ ಎನ್ನುವುದು. ರೈಲು ನಿಲ್ದಾಣಗಳ ಖಾಸಗೀಕರಣ ನಡೆಸಿದರೆ, ಅಲ್ಲಿ ಜನ­ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸೇವೆಗಳು ಲಭ್ಯವಾಗಬಹುದೆ ಎನ್ನುವ ಪ್ರಶ್ನೆ ಸಹಜ. ವಿಮಾನ ನಿಲ್ದಾಣಗಳಲ್ಲಿ ಸೇವೆಗಳು ಖಾಸಗೀಕರಣ ಆದ ಬಳಿಕ ಅಲ್ಲಿನ ಸೇವಾ ದರಗಳು ಗಗನಕ್ಕೆ ಏರಿವೆ. ಆಹಾರ ಪದಾರ್ಥಗಳೂ ಅತ್ಯಂತ ದುಬಾರಿಯಾಗಿವೆ.

ತನ್ನ ನೌಕರರನ್ನು ಮತ್ತು ಅಧಿಕಾರಿಗಳನ್ನು ದಕ್ಷತೆಯಿಂದ ದುಡಿಸಿಕೊಳ್ಳುವ ಸಾಮರ್ಥ್ಯ ಇಲ್ಲದಾಗ ಸರ್ಕಾರಗಳು  ಖಾಸಗೀಕರಣದತ್ತ ಒಲವು ತೋರಿಸುತ್ತವೆ. ಆದರೆ ಖಾಸಗೀಕರಣದಿಂದ ರೈಲು ನಿಲ್ದಾಣದ ಸೇವಾ ಗುಣಮಟ್ಟ ಹೆಚ್ಚಾಗಿ, ಸೇವಾ ವೆಚ್ಚಗಳು ಏರದಂತೆ ನೋಡಿಕೊಂಡರೆ, ನೌಕರರ ಹಿತಕ್ಕೆ ಧಕ್ಕೆ ಆಗದಿದ್ದರೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸ­ಬಹುದು. ಸಂಚಾರಕ್ಕೆ ಹೆಚ್ಚಾಗಿ ರೈಲನ್ನೇ ನಂಬಿಕೊಂಡಿರುವ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಹೊರೆಯಾಗದಂತೆ  ಖಾಸಗೀಕರಣ­ವನ್ನು ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಿದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT