ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಲಿ ಸಮಾಜದ ದೃಷ್ಟಿಕೋನ

ಕಿರುದಾರಿ
Last Updated 11 ಜುಲೈ 2016, 19:30 IST
ಅಕ್ಷರ ಗಾತ್ರ

ಸಮಾಜದ ಸ್ವಾಸ್ಥ್ಯಕ್ಕಾಗಿ ಮನೆಯ ಒಳಗೂ– ಹೊರಗೂ ವ್ಯವಸ್ಥೆ ಬದಲಾಗಲಿ ಎಂಬ ಧ್ಯೇಯದೊಂದಿಗೆ ಕಾರ್ಯಪ್ರವೃತ್ತವಾಗಿರುವ ‘ಜನದನಿ’ ತಂಡ ತಯಾರಿಸಿರುವ ಕಿರುಚಿತ್ರ ‘ನ್ಯಾಯ’.

ಮಹಿಳೆಯರ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಅದರ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ ‘ಜನದನಿ’ ತಂಡ ಈ ಕಿರುಚಿತ್ರದ ಮೂಲಕ ಅತಿ ಸೂಕ್ಷ್ಮವಾದ ಮತ್ತು ಅಷ್ಟೇ ಗಂಭೀರವಾದ ಸಂದೇಶವೊಂದನ್ನು ಸಮಾಜಕ್ಕೆ ನೀಡಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣೊಬ್ಬಳನ್ನು ಸಮಾಜ ಯಾವ ರೀತಿ ನೋಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಅತ್ಯಾಚಾರವೆಸಗಿದವನಿಗೆ ಕಾನೂನು ರೀತ್ಯಾ ಶಿಕ್ಷೆ ಆಗುತ್ತದೆ ಎಂಬ ಯಾವುದೇ ಖಾತರಿ ಇಲ್ಲ.

ಅತ್ಯಾಚಾರ ಎಂಬುದು ‘ಆಯೋಜಿತ ಆಕಸ್ಮಿಕ’ ಘಟನೆ. ಅದು ದೇಹಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ! ಅದು ಮನಸ್ಸಿಗೂ ಸಂಬಂಧಿಸಿದ್ದು. ಇಲ್ಲಿ ಆಕೆ ಮಾತ್ರವಲ್ಲ ಆಕೆಯ ಇಡೀ ಕುಟುಂಬವೇ ಈ ಆಘಾತದ ನೋವನ್ನು ಅನುಭವಿಸುತ್ತಿರುತ್ತದೆ.

ಇಂಥ ಸಂದರ್ಭದಲ್ಲಿ  ಆಕೆಯನ್ನು ಮದುವೆಯಾಗಲು ಹಿಂದೇಟು ಹಾಕುವ, ಗಂಡಿನ ಮನಸ್ಥಿತಿ ಮತ್ತು ಸಮಾಜದ ದೃಷ್ಟಿಕೋನವನ್ನು ಪ್ರಶ್ನಿಸಿ, ಅದನ್ನು ತಿದ್ದುವ ಯತ್ನವನ್ನು ಈ ಕಿರುಚಿತ್ರದಲ್ಲಿ ಮಾಡಲಾಗಿದೆ.

ಮದುವೆಗೆ ಗಂಡನ್ನು ಒಪ್ಪಿಕೊಳ್ಳುವ ಮುನ್ನ ಬಾಲ್ಯದಲ್ಲಿ ತನ್ನ ಮೇಲಾಗಿರುವ ದೌರ್ಜನ್ಯವನ್ನು ಪ್ರಾಮಾಣಿಕವಾಗಿ ಹೇಳುವ ಪಾವನಿ ಎಂಬ ಹುಡುಗಿಯ ಪಾಲಿಗೆ ಅದೊಂದು ‘ಆಕ್ಸಿಡೆಂಟ್’. ಅದರಲ್ಲಿ ನಿನ್ನದೇನು ತಪ್ಪಿಲ್ಲ ಎಂದು ಹೇಳಿ ಆಕೆಯನ್ನು ಸಂಗಾತಿಯಾಗಿ ಸ್ವೀಕರಿಸುವ ಗಂಡಿನ ಮಾತಿನಲ್ಲಿ ಸಮಾಜಕ್ಕೆ ಸಂದೇಶ ನೀಡಲಾಗಿದೆ.

ಅತ್ಯಾಚಾರಕ್ಕೊಳಗಾದ ಹೆಣ್ಣಿಗೆ ಸಾಂತ್ವನ ಬೇಕು, ಆಕೆಗೆ ನ್ಯಾಯ ಸಿಗಬೇಕು. ಅತ್ಯಾಚಾರಿ ಆರಾಮವಾಗಿ ಓಡಾಡುತ್ತಾನೆ. ಆದರೆ ನಿರಪರಾಧಿಯಾದ ಆ ಹೆಣ್ಣು ಜೀವನ
ಪರ್ಯಂತ ಶಿಕ್ಷೆ ಅನುಭವಿಸುತ್ತಿರುತ್ತಾಳೆ.

ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕು. ಅದೊಂದು ಆಕಸ್ಮಿಕ ಅಪಘಾತ, ಅಲ್ಲಿ ಹೆಣ್ಣು ನಿರ್ದೋಷಿ. ಅತ್ಯಾಚಾರಕ್ಕೊಳಗಾದ ಕೂಡಲೇ ಹೆಣ್ಣಿನ ಬದುಕೇ ಮುಗಿದುಹೋಯಿತು ಎಂಬ ಆಲೋಚನೆ ದೂರವಾಗಬೇಕು.

ಮಾನಸಿಕ ಆಘಾತಕ್ಕೊಳಗಾಗುವ  ಆಕೆಗೆ ಕೌನ್ಸೆಲಿಂಗ್ ಬೇಕು. ಆಕೆ ಮುಂಚೆ ಹೇಗಿದ್ದಳೋ, ಹಾಗೆಯೇ ಮುಂದಿನ ಜೀವನ ಸಾಗಿಸಲು ಆಕೆಗೆ ಮಾನಸಿಕ ಸ್ಥೈರ್ಯವನ್ನು ನೀಡುವ ಮನಸ್ಥಿತಿ ಪ್ರತಿಯೊಬ್ಬರಿಗೂ ಇರಬೇಕು. ಶಿಕ್ಷೆ ಆಗಬೇಕಾದುದು ಅತ್ಯಾಚಾರವೆಸಗಿದ ಅಪರಾಧಿಗೆ, ಅತ್ಯಾಚಾರದ ಆಘಾತಕ್ಕೊಳಗಾದ ಹೆಣ್ಣಿಗಲ್ಲ ಎಂಬ ಆಶಯದೊಂದಿಗೆ  ‘ನ್ಯಾಯ’ ಕಿರುಚಿತ್ರವನ್ನು ತಯಾರಿಸಲಾಗಿದೆ.

ತಿಂಗಳ ಹಿಂದೆಯಷ್ಟೇ ಜನದನಿ ‘ಫೀಡಿಂಗ್ ಪಾಯಿಸನ್’ ಎಂಬ ಕಿರುಚಿತ್ರ ತಯಾರಿಸಿ, ಅಶ್ಲೀಲ ಚಿತ್ರದ ವಿರುದ್ಧ ಅರಿವು ಮೂಡಿಸಿತ್ತು. ಜನದನಿ ಕಿರುಚಿತ್ರಗಳು ಕೇವಲ ಸಮಸ್ಯೆಗಳನ್ನು ಬಿಂಬಿಸುವುದಲ್ಲ, ಸಮಸ್ಯೆಗಳಿಗೆ ತಕ್ಕ ಪರಿಹಾರಗಳೂ ಇವೆ ಎನ್ನುವುದನ್ನು ತೋರಿಸುತ್ತವೆ ಅಂತಾರೆ ರಂಗಕರ್ಮಿ, ನಟಿ ಹಾಗೂ ನ್ಯಾಯ ಕಿರುಚಿತ್ರದ ನಿರ್ದೇಶಕಿ ಜಯಲಕ್ಷ್ಮಿ ಪಾಟೀಲ್. ಈ ಲಿಂಕ್‌ನಲ್ಲಿ ಚಿತ್ರ ವೀಕ್ಷಿಸಬಹುದು.http://bit.ly/29IzBCe. 

ನಟರೆಲ್ಲರೂ ಹೊಸಬರು
‘ಜನದನಿ’ ಗುಂಪಿನ ಸದಸ್ಯರಿಂದಲೇ ತಯಾರಿಸಲ್ಪಟ್ಟ ಈ ಕಿರುಚಿತ್ರಕ್ಕೆ ಕಥೆ ಬರೆದವರು ವಿದ್ಯಾಶಂಕರ್ ಹರಪನಹಳ್ಳಿ. ಇಲ್ಲಿರುವ ಪಾತ್ರಧಾರಿಗಳು ಕೂಡಾ ಜನದನಿ ಸದಸ್ಯರೇ.

ವಿಶೇಷವೆಂದರೆ ಬಾಲಕಿ ನಿಸಾ ಅವರಾದಿ ಹೊರತು ಪಡಿಸಿ ಇನ್ನುಳಿದ ಪಾತ್ರಧಾರಿಗಳಾದ ಮೇಘಾ ಕೋಟಿ, ಬಾಲು ಅಯ್ಯರ್, ಸುರಕ್ಷಾ ದಾಸ್, ಶಿಲ್ಪಾ ಅವರಾದಿ ಇದೇ ಮೊದಲ ಬಾರಿಗೆ ನಟಿಸಿದ್ದಾರೆ.

ಛಾಯಾಗ್ರಹಣ- ಎಚ್‌.ಎಂ.ಶಶಿಧರ್, ಅಮೋಲ್ ಪಾಟೀಲ್. ಕಂಠದಾನ ಕಲಾವಿದರು- ಅದಿತಿ ಪಾಟೀಲ್, ಅಮೋಲ್ ಪಾಟೀಲ್. ಸಂಕಲನ- ಅಮೋಲ್ ಪಾಟೀಲ್. ಕೆನಾನ್ 60D ಕ್ಯಾಮೆರಾ ಬಳಸಿ, ನೈಸರ್ಗಿಕ ಬೆಳಕಿನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT