ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಗೆ ನೂರೆಂಟು ದಾರಿಗಳು

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಪ್ರತೀಕ್‌ ಪಟೇಲ್‌
“ಈ ಜಗತ್ತು ನಮಗೆ ಬೇಕಾದ್ದನ್ನು ಕೊಡುತ್ತದೆ, ಆದರೆ ನಾವು ಜಗತ್ತಿಗೆ ಏನು ಕೊಡುತ್ತೇವೆ?’ ಎಂದು ಮಹಾತ್ಮ ಗಾಂಧಿ ಅವರು ಯುವಕರನ್ನು ಪ್ರಶ್ನಿಸುತ್ತಿದ್ದರು. ಅವರ ಜೀವನ ಚರಿತ್ರೆಯಲ್ಲೂ ಇದು ದಾಖಲಾಗಿದೆ. ಈ ಪ್ರಶ್ನೆ ಪ್ರತೀಕ್‌ ಪಟೇಲ್‌ ಅವರ ಬದುಕಿನಲ್ಲೂ ಬದಲಾವಣೆ ತಂದಿದೆ. ಆ ಮೂಲಕ ಯಶಸ್ವಿ ಸಾಧಕನನ್ನಾಗಿ ರೂಪಿಸಿದೆ.


‘ನಾವು ಮೂಲತಃ ಗುಜರಾತ್‌ನವರು. ಅಪ್ಪ ಸಣ್ಣದೊಂದು ಹಣಕಾಸು ಸಂಸ್ಥೆ ನಡೆಸುತ್ತಿದ್ದರು. ಆಗ ನನಗೆ 18 ವರ್ಷ ವಯಸ್ಸು. ಪಿಯುಸಿ ಪಾಸಾಗಿ ಎಂಜಿನಿಯರಿಂಗ್‌ ಕೋರ್ಸ್‌ಗೆ ದಾಖಲಾಗಿದ್ದೆ. ಆ ವೇಳೆ ಅಪ್ಪನ ಹಣಕಾಸು ಸಂಸ್ಥೆ ತೀವ್ರತರನಾದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತು. ಕೆಲ ಕಂಪೆನಿಗಳು ಮೋಸ ಮಾಡಿದ್ದರಿಂದ ಕಂಪೆನಿ ದಿವಾಳಿಯಾಯಿತು. ಒಂದು ವರ್ಷ ಕಷ್ಟಪಟ್ಟು ಎಂಜಿನಿಯರಿಂಗ್‌ ಕೋರ್ಸ್‌ ಮುಗಿಸಿದೆ. ಒಂದು ದಿನ ಅಪ್ಪನ ಕಚೇರಿಗೆ ತೆರಳಿದೆ. ಅಲ್ಲಿದ್ದ ಕಡತಗಳನ್ನು ತೆಗೆದು ನೋಡಿದೆ. ಅವುಗಳ ತಳಬುಡ ಅರ್ಥವಾಗಲಿಲ್ಲ. ಅಲ್ಲೇ ಇದ್ದ ಮಹಾತ್ಮ ಗಾಂಧಿ ಅವರ ಜೀವನ ಚರಿತ್ರೆ ಓದಿದೆ. ಅದರಿಂದ ಪ್ರಭಾವಿತನಾದೆ. ಎಂಜಿಯರಿಂಗ್‌ ಕೋರ್ಸನ್ನು ಅರ್ಧಕ್ಕೆ ಮೊಟಕುಗೊಳಿಸಿ, ಅಪ್ಪನ ಹಣಕಾಸು ಸಂಸ್ಥೆಯನ್ನು ನೋಡಿಕೊಳ್ಳತೊಡಗಿದೆ. ಹಣಕಾಸು ಸಂಸ್ಥೆಯಲ್ಲಿ ಪಾರದರ್ಶಕವಾಗಿ ವ್ಯವಹಾರ ನಡೆಯುವುದಿಲ್ಲ ಎಂಬುದು ಗೊತ್ತಿತ್ತು.

ಗಾಂಧೀಜಿ ಅವರ ಸತ್ಯದ ಪರಿಕಲ್ಪನೆಯನ್ನು ನನ್ನ ಹಣಕಾಸು ಸಂಸ್ಥೆಗೆ ಅನ್ವಯಿಸಿದೆ. ‘ನಿಫ್ಟಿಮಿಲೇನಿಯರ್‌’ ಎಂಬ ಹಣಕಾಸು ಹೂಡಿಕೆ ಮತ್ತು ನಿರ್ವಹಣೆ ಕಂಪೆನಿ ಆರಂಭಿಸಿದೆ. ಆ ಸತ್ಯ ನನ್ನ ಕೈಬಿಡಲಿಲ್ಲ. ಹತ್ತು ವರ್ಷಗಳಲ್ಲಿ ಕಂಪೆನಿ ಗಣನೀಯವಾಗಿ ಬೆಳವಣಿಗೆ ಕಂಡಿತು. ಇಂದು ಕಂಪೆನಿಯ ವಹಿವಾಟು ವಾರ್ಷಿಕ 200 ಕೋಟಿ ರೂಪಾಯಿ ದಾಟಿದೆ. ಸುಮಾರು 30ಸಾವಿರ ಗ್ರಾಹಕರು ನಮ್ಮ ಕಂಪೆನಿಯಲ್ಲಿ ಹಣಕಾಸು ಸಂಬಂಧಿತ ವಹಿವಾಟು ನಡೆಸುತ್ತಿದ್ದಾರೆ. 100 ಜನರು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಣಕಾಸು ವಿಷಯದಲ್ಲಿ ಪಾರದರ್ಶಕತೆ, ಶಿಸ್ತು ಮತ್ತು ಸತ್ಯವನ್ನು ಕಾಪಾಡಿಕೊಂಡು ಬಂದಿದ್ದರಿಂದ ಕಂಪೆನಿ ಏರುಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ’ ಎನ್ನುತ್ತಾರೆ ಪ್ರತೀಕ್‌.
www.niftymillionaire.com

ರಾಜೇಂದ್ರ ವಿನೋದ್‌
ವೃತ್ತಿನಿಷ್ಠೆ ಇಟ್ಟಿರುವ ಪ್ರತಿಯೊಬ್ಬ ಸಿನಿಮಾ ನಿರ್ದೇಶಕನಿಗೆ ಆಸ್ಕರ್‌ ಪ್ರಶಸ್ತಿ ಪಡೆಯುವ ಕನಸು ಇದ್ದೇ ಇರುತ್ತದೆ. ಕನಿಷ್ಠ ಪಕ್ಷ ಆ ಪ್ರಶಸ್ತಿಗೆ ನಾಮಾಂಕಿತಗೊಳ್ಳುವುದೇ ಪುಣ್ಯ ಎಂದು ಎಷ್ಟೋ ಪ್ರತಿಭಾವಂತ ನಿರ್ದೇಶಕರು ಅಂದುಕೊಂಡಿರುತ್ತಾರೆ. ಆದರೆ ಚೊಚ್ಚಲ ಪ್ರಯತ್ನದಲ್ಲೇ ಕಿರುಚಿತ್ರವೊಂದರ ಚಿತ್ರಕಥೆ ಆಸ್ಕರ್‌ ಸಿನಿಮಾ ಲೈಬ್ರರಿಯಲ್ಲಿ  ಭಾರತೀಯ ಯುವಕನ ಹೆಸರಲ್ಲಿ ಇರುವುದು ಭಾರತೀಯ ಚಿತ್ರರಂಗಕ್ಕೆ ಭರವಸೆ ಮೂಡಿಸಿದೆ. ಅದು ಆಂಧ್ರಪ್ರದೇಶದ ಯುವ ನಿರ್ದೇಶಕ ರಾಜೇಂದ್ರ ವಿನೋದ್‌ ಅವರ ಹೆಸರಿನಲ್ಲಿದೆ. ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ದೊಡ್ಡ ಕನಸು ಕಾಣುತ್ತ ಯಶಸ್ಸಿನತ್ತ ವಿನೋದ್‌ ಮುನ್ನಡೆಯುತ್ತಿದ್ದಾರೆ.


ವಿನೋದ್‌ ಹಿಂದೂಪುರ ಸಮೀಪದ ಕುಗ್ರಾಮದವರು. ಹಿಂದೂಪುರದಲ್ಲೇ ಎಂಜಿನಿಯರಿಂಗ್‌ ಮುಗಿಸಿ ಏನಾದರೂ ಸಾಧನೆ ಮಾಡಲೇಬೇಕೆಂಬ ಹಟದಲ್ಲಿ ಬೆಂಗಳೂರಿಗೆ ಬಂದರು. ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಿರುಚಿತ್ರ, ಸಾಕ್ಷ್ಯ ಚಿತ್ರ ಮತ್ತು ಜಾಹೀರಾತುಗಳನ್ನು ನಿರ್ಮಿಸುತ್ತಿದ್ದಾರೆ. ಜಾಹೀರಾತು ನಿರ್ಮಾಣ ಮಾಡುವುದು ಹೊಟ್ಟೆಪಾಡಿಗಾಗಿ ಮಾತ್ರ. ಆದರೆ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳನ್ನು ಜನರನ್ನು ಪ್ರಜ್ಞಾವಂತರನ್ನಾಗಿ ರೂಪಿಸಲು ತಯಾರಿಸುತ್ತಿದ್ದಾರೆ.

‘ಜನರನ್ನು ಬಹುಬೇಗ ತಟ್ಟುವ ಮಾಧ್ಯಮವೆಂದರೆ ಸಿನಿಮಾ. ಇದರ ಮೂಲಕವೇ ನಾವು ಜನರಲ್ಲಿ ಹಲವು ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಬಹುದು’ಎನ್ನುತ್ತಾರೆ ವಿನೋದ್‌.

ಇಲ್ಲಿಯವರೆಗೂ 15 ಕಿರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇಂಗ್ಲಿಷ್‌ ಭಾಷೆಯಲ್ಲಿ ನಿರ್ಮಾಣ ಮಾಡಿರುವ ‘ಚೇಂಜ್‌’ ಕಿರುಚಿತ್ರದ ಚಿತ್ರಕಥೆ ಆಸ್ಕರ್‌ ಸಿನಿಮಾ ಗ್ರಂಥಾಲಯದಲ್ಲಿದೆ. ವಿನೋದ್‌ ಅವರ ಲೇಪಾಕ್ಷಿ ಕಿರುಚಿತ್ರವನ್ನು ಕನ್ನಡ ಸೇರಿದಂತೆ 11 ಭಾರತೀಯ ಭಾಷೆಗಳಿಗೆ ರಿಮೇಕ್‌ ಮಾಡಲಾಗಿದೆ. ಇವರ ಎಲ್ಲಾ ಕಿರುಚಿತ್ರಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿವೆ. ವಿನೋದ್‌ರ ಎಲ್ಲಾ ಚಿತ್ರಗಳಿಗೂ ಪ್ರಶಸ್ತಿ ಬಂದಿರುವುದು ವಿಶೇಷ. ಇವರ ಚಿತ್ರಗಳು ಒಂದು ಲಕ್ಷ ರೂಪಾಯಿ ಬಜೆಟ್‌ ಮೀರುವುದಿಲ್ಲ. ಇವರ ಚಿತ್ರಗಳಿಗೆ ಅವಾರ್ಡ್‌ ಆಫ್ ಎಕ್ಸೆಲೆನ್ಸ್‌ ಹಾಗೂ ಐದನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ನಮ್ಮ ಆರ್ವಿ ಪ್ರೊಡಕ್ಷನ್‌ ಹೌಸ್‌ಗೆ ‘ಉತ್ತಮ ಚಿತ್ರ ನಿರ್ಮಾಣ ಸಂಸ್ಥೆ ಪ್ರಶಸ್ತಿ’  ದೊರೆತಿದೆ.

ಸುಹಾಸಿನಿ ಮತ್ತು ಅನಿಂದಿತಾ
ಅಕ್ಕ ತಂಗಿಯರು ಸೇರಿ ಕಟ್ಟಿದ ‘ಯೋಗಾ ಬಾರ್‌’ ಸಂಸ್ಥೆಯ ಕಥೆ ಇದು. ಮೂಲತಃ ಬೆಂಗಳೂರಿನವರಾದ ಸುಹಾಸಿನಿ ಮತ್ತು ಅನಿಂದಿತಾ ಯೋಗಾ ಬಾರ್‌ ಸ್ಥಾಪಿಸುವುದಕ್ಕಿಂತ ಮುಂಚೆ ಅಮೆರಿಕದ ನ್ಯೂಯಾರ್ಕ್‌ನ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಸುಹಾಸಿನಿ ವಾಣಿಜ್ಯ ಶಾಲೆಯೊಂದರಲ್ಲಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದರು.

ಅನಿಂದಿತಾ ಶಕ್ತಿವರ್ಧಕ ಮತ್ತು ಪ್ರೋಟಿನ್‌ಯುಕ್ತ ಪಾನೀಯ ಮತ್ತು ತಿನಿಸುಗಳನ್ನು ಮಾರಾಟ ಮಾಡುವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಹಾಸಿನಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದರಿಂದ ಅಲ್ಲಿನ ಪ್ರವಾಸದಿಂದ ಸಾಕಷ್ಟು ಸುಸ್ತಾಗುತ್ತಿದ್ದರು. ಆಗ ಅನಿಂದಿತಾ ಅಕ್ಕನಿಗೆ ಶಕ್ತಿವರ್ಧಕ ಮತ್ತು ಪ್ರೋಟಿನ್‌ಯುಕ್ತ ಪಾನೀಯ ಮತ್ತು ತಿನಿಸುಗಳನ್ನು ನೀಡುತ್ತಿದ್ದರು. ಅನಿಂದಿತಾಗೆ ಇಂತಹದ್ದೇ ಒಂದು ಉದ್ಯಮವನ್ನು ಭಾರತದಲ್ಲಿ ಯಾಕೆ ಆರಂಭಿಸಬಾರದು ಎಂಬ ಆಲೋಚನೆ ಹೊಳೆಯಿತು.


   ಭಾರತಕ್ಕೆ ಮರಳಿದ ಬಳಿಕ ‘ಯೋಗಾಬಾರ್‌’ ಆರಂಭಿಸುವ ಯೋಜನೆ ರೂಪಿಸಿದರು. ಈ ಯೋಗಾ ಬಾರ್‌ನಲ್ಲಿ ಶಕ್ತಿದಾಯಕ ತಿನಿಸುಗಳು ಮತ್ತು ಪಾನೀಯಗಳು ಲಭ್ಯ. ಈ ಉತ್ಪನ್ನಗಳನ್ನು ನೈಸರ್ಗಿಕ ಮತ್ತು ವೈಜ್ಞಾನಿಕವಾಗಿ ತಯಾರಿಸಲಾಗುತ್ತದೆ. ಈ ಉತ್ಪನ್ನಗಳನ್ನು ಸಾವಯವ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಈ ಯೋಗಾಬಾರ್‌ ಪರಿಕಲ್ಪನೆ ಭಾರತದಲ್ಲೇ ಹೊಸದು ಎನ್ನುತ್ತಾರೆ ಸುಹಾಸಿನಿ.

‘ಈ ಉದ್ಯಮವನ್ನು ಆರಂಭಿಸುವುದಕ್ಕೂ ಮುಂಚೆ ನಾವು ಕ್ಷೇತ್ರಕಾರ್ಯ ಮಾಡಿ ಗ್ರಾಹಕರ ಅಭಿರುಚಿಯನ್ನು ಆಲಿಸಿ ಆರಂಭಿಸಿದ್ದೇವೆ. ಬೆಂಗಳೂರಿನ ದೊಮ್ಮಲೂರಿನಲ್ಲಿ ಯೋಗಾಬಾರ್‌ ಉತ್ಪನ್ನಗಳು ತಯಾರಾಗುತ್ತವೆ. ನಗರದಾದ್ಯಂತ 50 ಫ್ರಾಂಚೈಸಿಗಳಿವೆ. ದೇಶದ ಇತರ ನಗರಗಳಲ್ಲೂ ನಮ್ಮ ಫ್ರಾಂಚೈಸಿಗಳನ್ನು ಆರಂಭಿಸಬೇಕು ಎಂಬುದು ನಮ್ಮ ಗುರಿ’ ಎನ್ನುತ್ತಾರೆ ಅನಿಂದಿತಾ. ‘ಸದಾ ಬ್ಯುಸಿಯಾಗಿರುವ, ಒತ್ತಡದಲ್ಲಿರುವ ಯುವಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ನಮ್ಮ ಕಂಪೆನಿಯ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ಇಲ್ಲಿಯವರೆಗೂ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಿಲ್ಲ’ ಎನ್ನುತ್ತಾರೆ ಸುಹಾಸಿನಿ.
www.yogabar.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT