ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯ ಗಾಳಿ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಮುಂಬರುವ ಗಣ­ರಾಜ್ಯೋತ್ಸವದ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವರ್ಷಂ­ಪ್ರತಿ ಗಣರಾಜ್ಯೋತ್ಸವಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವುದು ಸಾಮಾನ್ಯ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಜಪಾನ್‌ ಪ್ರಧಾನಿ ಶಿಂಜೊ ಅಬೆ, ಭೂತಾನ್‌ ದೊರೆ ಜಿಗ್ಮೆ ಖೇಸರ್‌ ವಾಂಗ್‌ಚುಕ್‌ ಸೇರಿದಂತೆ ಹಲವಾರು ವಿದೇಶಿ ಗಣ್ಯರು ಈಗಾಗಲೇ ಇಂತಹದ್ದೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ಅಮೆ­ರಿಕದ ಅಧ್ಯಕ್ಷರು ಅತಿಥಿಯಾಗಿ ಆಗಮಿಸುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು.

ಇದು ಉಭಯ ದೇಶಗಳ ಬಾಂಧವ್ಯದ ಹೊಸ ಶಕೆಯ ದ್ಯೋತಕದಂತಿದೆ. ಭಾರತೀಯರಿಗೆ ಸಾಕಷ್ಟು ನೆರವಾಗಬಲ್ಲ ಎಚ್‌1ಬಿ ವೀಸಾ ನೀಡಿಕೆ, ವಾಣಿಜ್ಯ ಬಾಂಧವ್ಯ, ಭಯೋತ್ಪಾದನೆ ನಿಗ್ರಹದಂತಹ ಮಹತ್ವದ ವಿಷಯಗಳಲ್ಲಿ ಎರಡೂ ದೇಶಗಳು ಜೊತೆಯಾಗಿ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ಗೆಲುವು ಎಂದೇ  ವ್ಯಾಖ್ಯಾನಿಸಲಾಗುತ್ತಿದೆ.

ಹಿಂದೆ ಭಾರತ ಅಲಿಪ್ತ ನೀತಿಯ ಭಾಗವಾಗಿದ್ದಾಗ ಅಮೆರಿಕ ನೇತೃತ್ವದ ಪಶ್ಚಿಮ ರಾಷ್ಟ್ರಗಳ ಜೊತೆ ಒಂದು ಅಂತರ ಕಾಪಾಡಿಕೊಳ್ಳಲಾಗುತ್ತಿತ್ತು. ಅಮೆರಿಕ– ಭಾರತ ಅಣು ಒಪ್ಪಂದಕ್ಕೆ ಬಿಜೆಪಿಯೂ ಸೇರಿದಂತೆ ದೇಶದ ರಾಜ­ಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ತನ್ನ ಗಣ್ಯರನ್ನು ಭದ್ರತಾ ತಪಾಸಣೆಯ ಹೆಸರಿನಲ್ಲಿ ಅಮೆರಿಕ ಆಗಾಗ್ಗೆ ನಡೆಸಿಕೊಳ್ಳುತ್ತಿದ್ದ ರೀತಿ ಭಾರತ­ವನ್ನು ಕೆರಳಿಸಿತ್ತು. ಇಂತಹ ಮಹತ್ವದ ಸಂಗತಿಗಳಿಂದ ಹಿಡಿದು ಇತ್ತೀಚಿನ ದೇವಯಾನಿ ಖೋಬ್ರಾಗಡೆ ಪ್ರಕರಣದವರೆಗೂ ಹಲವು ವಿಷಯಗಳಲ್ಲಿ ಅಮೆ­ರಿಕದ ವರ್ತನೆ ಭಾರತಕ್ಕೆ ಅಸಮಾಧಾನ ಉಂಟು ಮಾಡಿತ್ತು.

ಗುಜ­ರಾತ್‌ ಕೋಮುಗಲಭೆ ಹಿನ್ನೆಲೆಯಲ್ಲಿ ಹಿಂದೆ ಮೋದಿ ಅವರಿಗೆ ವೀಸಾ ನಿರಾ­ಕ­ರಿಸಲಾಗಿತ್ತು. ಆದರೆ ಇದೀಗ ಮೋದಿ ಅವರು ಪ್ರಧಾನಿಯಾದ ತರು­ವಾಯ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ವಿದೇಶಾಂಗ ನೀತಿಗೆ ಹೆಚ್ಚು ಒತ್ತು ನೀಡುತ್ತಿರುವ ಮೋದಿ, ತಮ್ಮ ಪ್ರಮಾಣವಚನ ಸ್ವೀಕಾರ ಸಮಾ­ರಂಭಕ್ಕೆ ಸಾರ್ಕ್‌ ರಾಷ್ಟ್ರಗಳನ್ನು ಆಹ್ವಾನಿಸಿ ನೆರೆಹೊರೆ ಬಾಂಧವ್ಯ­ದೆಡೆ­ಗಿನ ಬದ್ಧತೆ ವ್ಯಕ್ತಪಡಿಸಿದ್ದರು. ಅದೇ ರೀತಿ ತಮ್ಮ ಮೊದಲ ಅಮೆರಿಕ ಭೇಟಿಯೇ ಫಲಪ್ರದವಾಗುವಂತೆ ನೋಡಿಕೊಂಡಿದ್ದರು. ಆಹಾರ ಭದ್ರತೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ಭಾರತಕ್ಕೆ ಇದ್ದ ತೊಡಕುಗಳನ್ನು ನಿವಾರಿ­ಸಿ­ಕೊಳ್ಳಲು ಈ ಭೇಟಿಯನ್ನು ಅವರು ಯಶಸ್ವಿಯಾಗಿ ಬಳಸಿಕೊಂಡಿದ್ದರು.

ಒಬಾಮ ಅವರು ಇತ್ತೀಚೆಗೆ ಪ್ರಕಟಿಸಿರುವ ವಲಸೆ ನೀತಿ ಸುಧಾರಣೆಯಿಂದ ಭಾರತದ ಸಾಫ್ಟ್‌ವೇರ್‌ ಎಂಜಿನಿಯರುಗಳಿಗೆ ಲಾಭವಾಗುವ ನಿರೀಕ್ಷೆ ಇದೆ. ಆದರೂ ಈ ಹೊಸ ಉಪಕ್ರಮದ ಸ್ಪಷ್ಟ ಚಿತ್ರಣ ಇನ್ನೂ ದೊರೆತಿಲ್ಲ. ಎಚ್‌1ಬಿ ವೀಸಾ ನೀಡಿಕೆ ಸಂಖ್ಯೆಯನ್ನು ಏರಿಸದಿರುವುದು ಸಾಕಷ್ಟು ಮಂದಿ­ಯನ್ನು ನಿರಾಶರನ್ನಾಗಿಸಿದೆ. ಹೀಗಾಗಿ ಒಬಾಮ ಭೇಟಿ, ವೀಸಾ ನೀಡಿಕೆ­ಯಲ್ಲಿ­ರುವ ನಿರ್ಬಂಧಗಳನ್ನು ಸಡಿಲಿಸುವಲ್ಲಿ ಅವರ ಮನವೊಲಿಸಲು ಭಾರತಕ್ಕೆ ಒಂದು ವೇದಿಕೆ ಒದಗಿಸಿಕೊಟ್ಟಂತೆಯೂ ಆಗಿದೆ. ಜೊತೆಗೆ ರಕ್ಷಣೆ, ಭದ್ರತೆ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸೈಬರ್‌ ಭದ್ರತೆ, ನಾಗರಿಕ ಅಣುಶಕ್ತಿ, ಶುದ್ಧ ಇಂಧನ, ಪರಿಸರ, ಕೃಷಿ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT