ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬದಾಯೂಂ ಪ್ರಕರಣ ಅತ್ಯಾಚಾರವಲ್ಲ, ಆತ್ಮಹತ್ಯೆ'

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ಬದಾಯೂಂ (ಪಿಟಿಐ): ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ನಡೆದ ಇಬ್ಬರು ಸೋದ­ರಿಯರ (ಸೋದರ ಸಂಬಂಧಿಗಳು) ಸಾವಿನ ಪ್ರಕ­ರಣದ ತನಿಖೆ­ಯನ್ನು ಸಿಬಿಐ ಪೂರ್ಣ­ಗೊಳಿಸಿದ್ದು, ಅವರ ಮೇಲೆ ಅತ್ಯಾಚಾರ ನಡೆದಿಲ್ಲ. ಅವರು ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

‘ಪ್ರಕರಣದ ತನಿಖೆ ಪೂರ್ಣ­ಗೊಂಡಿದೆ. ಸುಮಾರು 40 ವೈಜ್ಞಾನಿಕ ವರದಿ­ಗ­ಳನ್ನು ಸಿಬಿಐ ವಿಶ್ಲೇಷಿಸಿದ್ದು, ಎಫ್ಐ­ಆರ್‌­ನಲ್ಲಿ ಆರೋಪಿಸಿರುವಂತೆ ಬಾಲಕಿ­ಯರ ಮೇಲೆ ಅತ್ಯಾ­ಚಾರ ಮತ್ತು ಅವರ ಹತ್ಯೆ ನಡೆದಿಲ್ಲ’ ಎಂದು ಸಿಬಿಐ ವಕ್ತಾರ ಕಾಂಚನ್‌ ಪ್ರಸಾದ್‌ ಗುರುವಾರ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ನ್ಯಾಯಾಲ­ಯಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಿ ಪ್ರಕರಣ­ವನ್ನು ಪರಿಸಮಾಪ್ತಿಗೊಳಿಸಲು ಸಿಬಿಐ ಕೋರಲಿದೆ. ಜೊತೆಗೆ ಈ ಪ್ರಕರಣ ಬಗ್ಗೆ ಸೂಕ್ತ ತನಿಖೆ ನಡೆಸದ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಶಿಫಾರಸು ಕೂಡ ಮಾಡಲಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ಬಾಲಕಿಯರ ಕುಟುಂಬದ ಮೂವರು ಮತ್ತು ಸಂಬಂಧಿಯಾದ ನಜ್ರೂ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಬಗ್ಗೆ ಸಿಬಿಐ ಉಲ್ಲೇಖಿಸಿದೆ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳುವುದು ನ್ಯಾಯಾಲ­ಯಕ್ಕೆ ಬಿಟ್ಟ ವಿಚಾರ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿ­ರುವ ಐವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸದಿರಲು ಸಿಬಿಐ ನಿರ್ಧರಿಸಿದೆ.

ಸಾವನ್ನಪ್ಪಿದ ಸೋದರಿಯರ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದು ಖಚಿತವಾಗಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಮಾಧಿ­ಯಿಂದ ಹೊರತೆಗೆದ ಬಾಲಕಿ­ಯರ ಶವಗಳನ್ನು ಪರೀಕ್ಷೆ ನಡೆಸಿದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ, ಡಿಎನ್‌ಎ ಬೆರಳಚ್ಚು ಮಾದರಿ ಮತ್ತು ವಿಶ್ಲೇಷಣಾ ಕೇಂದ್ರ, ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದವರನ್ನು ಒಳಗೊಂಡ ವೈದ್ಯಕೀಯ ಮಂಡಳಿಯ ವರದಿ ತಿಳಿಸಿದೆ.

ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ
ಸಿಬಿಐ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಬಾಲಕಿಯರ ಕುಟುಂಬ, ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು. ಸ್ವತಂತ್ರ ತನಿಖಾ ಸಂಸ್ಥೆಯಿಂದ ನ್ಯಾಯೋಚಿತ ತನಿಖೆ ನಡೆಸಲು ಅವರು ಆದೇಶಿಸಬೇಕು ಎಂದು ಕೋರಿದೆ. ‘ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬುದರ ಬಗ್ಗೆ ತನಿಖಾ ವರದಿಯಲ್ಲಿ ವಿವರಗಳು ಇಲ್ಲ. ನಮಗೆ ನ್ಯಾಯ ಸಿಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಸಾವನ್ನಪ್ಪಿದ ಸೋದರಿಯರ ಪೈಕಿ ಒಬ್ಬಳು ಬಾಲಕಿಯ ತಂದೆ ಬೆದರಿಕೆ ಹಾಕಿದ್ದಾರೆ. ‘ಎಷ್ಟು ಎತ್ತರದ ಮಾವಿನ ಮರಕ್ಕೆ  14– 15 ವರ್ಷದ ಬಾಲಕಿಯರು ಹತ್ತಿ ನೇಣು ಹಾಕಿಕೊಳ್ಳಲು ಸಾಧ್ಯವೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಬಾಲಕಿಯರ ವಸ್ತ್ರಗಳ ಮೇಲೆ ಪುರುಷರ ಡಿಎನ್‌ಎ ಮಾದರಿಯ ಯಾವ ಕಲೆಯೂ ಇಲ್ಲ. ಬಂಧಿಸ­ಲಾಗಿ­ರುವ ಪ್ರಮುಖ ಆರೋಪಿಗಳ ಬಟ್ಟೆಗಳ ಮೇಲೆ ಬಾಲಕಿಯರ ಡಿಎನ್‌ಎ ಮಾದ­ರಿಯ ಕಲೆ ಕೂಡ ಪತ್ತೆಯಾಗಿಲ್ಲ. ಬಾಲಕಿ­ಯರ ಕುತ್ತಿಗೆ­ಯಲ್ಲಿನ ಕುಣಿಕೆಯ ಗುರುತು ಅವರು ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆ ಎನ್ನುವುದನ್ನು ಸ್ಪಷ್ಟ­ಗೊಳಿಸುತ್ತದೆಂದು  ಮಂಡಳಿ ಅಭಿ­ಪ್ರಾಯ­ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮೇ 27ರಂದು ಕಾಣೆಯಾಗಿದ್ದಾರೆ ಎನ್ನಲಾದ ಸೋದರಿಯರ ಶವಗಳು ಬೃಹತ್‌ ಮಾವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮರುದಿನ ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋದರರಾದ ಪಪ್ಪು, ಅವದೇಶ್‌ ಮತ್ತು ಉರ್ವೇಶ್‌ ಯಾದವ್‌  ಅವ­ರನ್ನು ಬಂಧಿಸಲಾಗಿದೆ. ಕಾನ್‌ಸ್ಟೆಬಲ್‌­ಗಳಾದ ಛತ್ರಪಾಲ್‌ ಯಾದವ್‌, ಸರ್ವೇಶ್‌ ಯಾದವ್‌ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಗಂಗಾ ನದಿ ದಡದಲ್ಲಿ ಬಾಲಕಿಯರ ಶವಗಳನ್ನು ಮಣ್ಣು ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ಮೇಲೆ ಶವಗಳನ್ನು ಹೊರತೆಗೆಯುವ ಪ್ರಯತ್ನಕ್ಕೆ ಗಂಗಾ ನದಿಯಲ್ಲಿ ಉಂಟಾದ ಪ್ರವಾಹ ಅಡ್ಡಿಯುಂಟು ಮಾಡಿತ್ತು. ಹಿರಿಯ ಸೋದರಿ ಸ್ಥಳೀಯ ಯುವಕ­ನೊಂದಿಗೆ ಪ್ರೇಮ ವ್ಯವಹಾರ ಹೊಂದಿ­ದ್ದಳು. ಇವರ ಭೇಟಿ ಸಂದರ್ಭದಲ್ಲಿ ಕಿರಿಯ ಸೋದರಿ ಸುತ್ತಲಿನ ನಿಗಾ ವಹಿಸುತ್ತಿದ್ದಳು. ಇದು ಬಹಿರಂಗ­ಗೊಂಡಿ­­ದ್ದಕ್ಕೆ ಆತ್ಮಹತ್ಯೆ ಮಾಡಿ­ಕೊಂಡಿ­ದ್ದಾರೆ ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT