ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿರುವವರಿಗೇ ಮರಣ ಪ್ರಮಾಣ ಪತ್ರ ನೀಡಿದ ಪುರಸಭೆ

ಕಡೂರಿನಲ್ಲೊಂದು ವಿಶೇಷ ಪ್ರಕರಣ
Last Updated 31 ಅಕ್ಟೋಬರ್ 2014, 7:32 IST
ಅಕ್ಷರ ಗಾತ್ರ

ಕಡೂರು:   ಜೀವಂತವಿರುವಾಗಲೇ ಮಹಿಳೆ­ಯೊಬ್ಬರಿಗೆ ಮರಣ ಪ್ರಮಾಣ­ಪತ್ರ ನೀಡುವ ಮೂಲಕ ಕಡೂರು ಪುರಸಭೆಯ ಜನನ ಮರಣ ವಿಭಾಗ ಪ್ರಮಾದವೆಸಗಿದೆ. ಈ ಪ್ರಕರಣ ಸಾರ್ವ­ಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಪಟ್ಟಣದ ಎರಡನೇ ವಾರ್ಡ್ ವ್ಯಾಪ್ತಿಯ ರಹಮತ್‌ ನಗರ ಪ್ರದೇಶ­ದಲ್ಲಿ ವಾಸವಿರುವ ನವಾಬ್‌ಜಾನ್ ಅವರ ಪತ್ನಿ ಅಬೀದಾಬಾನು (40) 2014ರ ಆ.20ರಂದು ಹೃದಯಾಘಾ­ತದಿಂದ ನಿಧನರಾಗಿದ್ದಾರೆಂದು ನೋಂದಣಿ ಸಂಖ್ಯೆ 2014_ಡಿ_181ರ ಮೂಲಕ ಪ್ರಕರಣ ದಾಖಲಿಸಿಕೊಂಡು ಅ.21ರಂದು ಕಡೂರು ಪುರಸಭೆಯ ಜನನ ಮರಣ ವಿಭಾಗದಿಂದ ಮರಣ ಪ್ರಮಾಣಪತ್ರವನ್ನು ಅಧಿಕೃತವಾಗಿ ನೀಡಲಾಗಿದೆ.

ಈ ಪ್ರಮಾಣಪತ್ರ ನೀಡುವ ಮುನ್ನ ಸ್ಥಳೀಯರ ಸಾಕ್ಷಿ ಪಡೆಯಲು ಸ್ಥಳಕ್ಕೆ ಭೇಟಿ ನೀಡಿದ ಪುರಸಭೆಯ ಆರೋಗ್ಯ ನಿರೀಕ್ಷಕರು ಮತ್ತು ಸಿಬ್ಬಂದಿ ಅಬೀದಾ­ಬಾನು ಹೃದಯಾಘಾತದಿಂದ ಸಾವನ್ನ­ಪ್ಪಿ­ರುವ ಬಗ್ಗೆ ಸ್ಥಳೀಯರ ಮಹಜರು ಹೇಳಿಕೆ ನೀಡಲು ಕೋರಿದ್ದಾರೆ.

ಈ ಮಹಜರಿಗೆ ಇಸ್ಮಾಯಿಲ್, ರಫೀಕ್, ಹಸೀನಾ ಮಾತ್ರವಲ್ಲದೆ ಕೃಷ್ಣಮೂರ್ತಿ ಅವರು ಅಬೀದಾಬಾನು ಸಾವಪ್ಪಿರುವುದು ಸತ್ಯ; ನಾವೇ ಕಣ್ಣಾರೆ ನೋಡಿದ್ದೇವೆ ಎಂದು ಒಪ್ಪಿ ಸಹಿ ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಪುರಸಭೆಯ ದಾಖಲೆಗಳಲ್ಲಿ ಮರಣ ಹೊಂದಿದ್ದಾರೆಂದು ಹೇಳಲಾದ ಅಬೀದಾ­ಬಾನು ಬೆಂಗಳೂರಿನಲ್ಲಿ ವಾಸವಿ­ದ್ದಾರೆ. ಅಲ್ಲದೆ ಅವರು ಎಸ್‍ಕೆಎಸ್ ಮತ್ತು ಗ್ರಾಮೀಣ ಕೂಟದಲ್ಲಿ ಸಾಲ ಪಡೆದಿದ್ದಾರೆ. ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಲೂ ಸಾಲ ಪಡೆದಿದ್ದಾರೆ ಎಂದು ಯೋಜ­ನೆಯ ತಾಲ್ಲೂಕು ಯೋಜನಾಧಿಕಾರಿ ದಿನೇಶ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆಯ ಒಳಗಡೆ, -ಹೊರಗೆ ಮತ್ತು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ತರೀಕೆರೆ ಉಪ ವಿಭಾಗಾಧಿಕಾರಿ ಸಂಗಪ್ಪ ಕರಡಿ ಅವರನ್ನು ಕೇಳಿದಾಗ, ‘ಈ ರೀತಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ನಾನೇ ಖುದ್ದಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಬದುಕಿರುವವರಿಗೆ ಮರಣ ಪ್ರಮಾಣ ಪತ್ರ ನೀಡಿರುವ ಪ್ರಕರಣ ಗಂಭೀರ ಸ್ವರೂಪದ್ದು. ಇದಕ್ಕೆ ಯಾರ ಮಾರ್ಗದರ್ಶನ ಇದೆ, ಯಾರ ಕೊರಳಿಗೆ ಉರುಳಾಗಲಿದೆ ಎಂಬ ಕುತೂಹಲ ಕಡೂರು ಜನತೆಗೆ ಎದುರಾಗಿದೆ. ಜತೆಗೆ ಮರಣ ಪ್ರಮಾಣ ಪತ್ರವನ್ನು ಧೃಡೀಕರಿಸಿ ನೀಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳನ್ನು ಒತ್ತಾಯಿಸಿ­ದ್ದಾರೆ. ಹಿಂದಿನ ಆಡಳಿತ ಮಂಡಳಿ 15ನೇ ವಾರ್ಡ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಖಾತೆಗಳನ್ನು ಅಕ್ರಮವಾಗಿ ಹಣ ಪಡೆದು ಮಾಡಿಕೊಟ್ಟಿದ್ದಾರೆಂಬ ಬಗ್ಗೆಯೂ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT