ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು, ಖಾಸಗಿತನಕ್ಕೆ ಏಟು

‘ಸಲಿಂಗ ಕಾಮಿ’ಗಳ ಒಕ್ಕೊರಲ ಆಕ್ರೋಶ
Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸ್ವಚ್ಛಂದ ಕಾಮ’ಕ್ಕೆ ಬಿದ್ದ ಏಟಿದು. ಘನತೆ, ಸಮಾನತೆ, ಬದುಕು ಮತ್ತು ಖಾಸಗಿತನದ ಹಕ್ಕನ್ನು ಈ ತೀರ್ಪು ಕಸಿದುಕೊಂಡಿದೆ. ಸಮಾಜದಲ್ಲಿ ದೊಡ್ಡ ಸಂಖ್ಯೆ ಯಲ್ಲಿರುವ ಸಮುದಾ­ಯ­­ವೊಂದರ ಹಿತ ಕಾಪಾಡಬೇಕಾದ ಸರ್ವೋಚ್ಚ ನ್ಯಾಯಾಲಯ ಈ ಮೂಲಕ ಸಮಾಜದ ಮುಖ್ಯವಾಹಿನಿ­ಯಿಂದ ನಮ್ಮನ್ನು ಪ್ರತ್ಯೇಕವಾಗಿಸಿದೆ...’

‘ಸಲಿಂಗ ಕಾಮ ಕ್ರಿಮಿನಲ್‌ ಅಪರಾಧ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ನೀಡಿದ ತೀರ್ಪಿನ ವಿರುದ್ಧ ‘ಸಲಿಂಗ ಕಾಮಿ’ಗಳ ಒಕ್ಕೊರಲ ಆಕ್ರೋಶ­ವಿದು. ತೀರ್ಪಿನ ವಿರುದ್ಧ ಆ ವರ್ಗದ ಪರ ಹೋರಾಡುವ ಸಂಘಟನೆಗಳೂ ಆಕ್ಷೇಪ ಎತ್ತಿವೆ.

‘ಲೈಂಗಿಕ ದೌರ್ಜನ್ಯ ಅಥವಾ ಹದಿನೆಂಟು ದಾಟದವರು ಸೆಕ್ಸ್ ನಲ್ಲಿ ಭಾಗಿಯಾದರೆ ತಪ್ಪು. ಆದರೆ ವಯಸ್ಕ ಗಂಡು–ಹೆಣ್ಣು ಅಥವಾ ಗಂಡು–ಗಂಡು, ಹೆಣ್ಣು– ಹೆಣ್ಣು ಮಧ್ಯೆ ಪರಸ್ಪರ ಸಹಮತದ ಸೆಕ್ಸ್ ಅನೈಸರ್ಗಿಕ, ಕಾನೂನುಬಾಹಿರ ಹೇಗಾಗುತ್ತದೆ? ಎನ್ನುವುದು ‘ಸಲಿಂಗ ಕಾಮಿ’ಗಳ ಪ್ರಶ್ನೆ.

‘ಭಾರತೀಯ ದಂಡ ಸಂಹಿತೆ(ಐಪಿಸಿ)ಯ 377ನೇ ಸೆಕ್ಷನ್ ಯಾವುದೇ ರೀತಿಯ ಅಸ್ವಾಭಾವಿಕ ಲೈಂಗಿಕತೆ ಅಪರಾಧ ಎನ್ನುತ್ತದೆ. ಅಂದರೆ ಪರಸ್ಪರ ಒಪ್ಪಿಗೆ ಇದ್ದರೂ ಸಹಿತ ಅಸ್ವಾಭಾವಿಕವಾಗಿ ಒಬ್ಬ ಗಂಡಸು ಮತ್ತೊಬ್ಬ ಗಂಡಸಿನ ಜತೆ, ಹೆಣ್ಣು–ಹೆಣ್ಣಿನ ಜತೆ ಅಥವಾ ಪ್ರಾಣಿಗಳ ಜತೆ ಕಾಮಕೇಳಿ ಅಥವಾ ರತಿಕ್ರೀಡೆಯಲ್ಲಿ ತೊಡಗುವುದು 377ನೇ ಸೆಕ್ಷನ್ ಪ್ರಕಾರ ಅಪರಾಧ. ಆದರೆ ಸ್ವಾಭಾವಿ­ಕವಾದ ಸಲಿಂಗ ಕಾಮ ಅಪರಾಧ ಹೇಗಾಗು­ತ್ತದೆ. ಸಂವಿಧಾನಕ್ಕೆ ವಿರೋಧಿ­ಯಾದ ಈ ಸೆಕ್ಷನ್‌ ತೆಗೆದುಹಾಕಬೇಕು’ ಎನ್ನುವುದು ಈ ಮಂದಿಯ ಬೇಡಿಕೆ.

‘ನಮ್ಮ ಬದುಕುವ ಹಕ್ಕನ್ನು ಕಾಪಾಡಬೇಕಾದುದು ಕೋರ್ಟಿನ ಕೆಲಸ. ಪ್ರತಿಯೊಬ್ಬರ ಖಾಸಗಿತನವನ್ನು ಪ್ರಶ್ನಿಸುವಂತಹ ಈ ತೀರ್ಪುನ್ನು ಒಪ್ಪಿಕೊಳ್ಳಲು ಸಾಧ್ಯ ಇಲ್ಲ. ಸೆಕ್ಸ್ ವಿಷಯ ಬಂದಾಗ ಒಪ್ಪಿಗೆ, ವಯಸ್ಸು ಮುಖ್ಯವಾಗಬೇಕೇ ಹೊರತು ಅದು ‘ಸಲಿಂಗ ಕಾಮ’ವೇ ಎಂಬುವುದು ಮುಖ್ಯವಲ್ಲ’ ಎನ್ನುತ್ತಾರೆ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ ‘ಸಂಗಮ’ಯ ಸಂಸ್ಥಾಪಕ ಯಲವರ್ತಿ ಮನೋಹರ.

‘ಹದಿನೆಂಟು ವರ್ಷ ತುಂಬಿರುವ ಇಬ್ಬರು ವಯಸ್ಕರು ಪರಸ್ಪರ ಇಚ್ಛಿಸಿ ಖಾಸಗಿಯಾಗಿ ಕಾಮಿಸುವುದನ್ನು ಕ್ರಿಮಿನಲ್ ಅಪರಾಧವೆಂದು ೩೭೭ನೇ ಸೆಕ್ಷನ್ ಹೇಳುತ್ತದೆ. ಆದರೆ ಒಂದೇ ಲಿಂಗದವರು ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅಪರಾ­ಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್‌ ‘ಸಲಿಂಗ ಕಾಮ’ವನ್ನು ಎತ್ತಿ ಹಿಡಿದಿತ್ತು.

ಆ ಮೂಲಕ 18 ವರ್ಷದ ದಾಟಿದ ಸಲಿಂಗ ಕಾಮಿ­ಗಳಿಬ್ಬರು ‘ಕೂಡು’ವುದಕ್ಕೆ ನ್ಯಾಯಾ­ಲಯ ಮಾನ್ಯತೆ ನೀಡಿತ್ತು ಮತ್ತು ಅದಕ್ಕೆ ಕಾನೂನಿನ ರಕ್ಷಣೆ ಸಿಕ್ಕಂತಾಗಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಈ ವರ್ಗದ ಸಾಮಾಜಿಕ ಬದುಕನ್ನೇ ಪ್ರಶ್ನಿಸಿದೆ’ ಎಂದು ‘ಸಂಗಮ’ ಸಂಘಟನೆಯ ನಿರ್ದೇಶಕ ಗುರುಕಿರಣ್‌ ಕಾಮತ್‌ ಅಭಿಪ್ರಾಯಪಡುತ್ತಾರೆ.

‘ಸಲಿಂಗ ಕಾಮ ಅನೈತಿಕವಾಗಿದೆ. ಭಾರತೀಯ ಸಮಾಜ ಅದನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ಅದರಿಂದ ಏಡ್ಸ್ ನಂತಹ ರೋಗಗಳು ಹಬ್ಬುವ ಸಾಧ್ಯತೆ ಹೆಚ್ಚು ಎನ್ನುವ ವಾದದಲ್ಲಿ ಅರ್ಥವಿಲ್ಲ. ಪ್ರತಿಯೊಬ್ಬರಿಗೂ ಅವರ­ವರ ಆರೋಗ್ಯದ ಬಗ್ಗೆ ಕಾಳಜಿ ಇರು­ತ್ತದೆ. ಇದನ್ನೇ ವೃತ್ತಿಯಾಗಿಸಿ­ಕೊಂಡವರಿಗೆ ಅವರ ಆರೋಗ್ಯ ಬಗ್ಗೆ ಎಚ್ಚರಿಕೆ ಇದ್ದೇ ಇದೆ. ಹೀಗಾಗಿ ಇಷ್ಟಪಟ್ಟ ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವುದು ಹಕ್ಕು’ ಎಂದೂ ಅವರು ಪ್ರತಿಪಾದಿಸಿದರು.

‘ರಾಜ್ಯದ 26 ಜಿಲ್ಲೆಗಳಲ್ಲಿ ‘ಸಂಗಮ’ ಸಕ್ರಿಯವಾಗಿದೆ. ಸುಮಾರು 5 ಸಾವಿರ ಸದಸ್ಯರು ಜೊತೆಗಿದ್ದಾರೆ. ಕೇರಳದಲ್ಲೂ 10 ಜಿಲ್ಲೆಗಳಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ. ನಾವೆಲ್ಲರೂ ಈ ತೀರ್ಪಿನ ವಿರುದ್ಧ ಬೀದಿಗಿಳಿಯುತ್ತೇವೆ’ ಎಂದು ಕಾಮತ್‌ ಪ್ರತಿಕ್ರಿಯಿಸಿದ್ದಾರೆ.

‘ನಾವು ಎಷ್ಟು ಮಂದಿ ಇದ್ದೇವೆ ಎನ್ನುವ ಬಗ್ಗೆ ಸರಿಯಾದ ಅಂಕಿ–ಅಂಶ ಇಲ್ಲ. ಅನೇಕ ಮಂದಿ ಬಹಿರಂಗವಾಗಿ ತಮ್ಮನ್ನು ತೋರಿಸಿಕೊಳ್ಳಲು ಬಯಸು­ವುದಿಲ್ಲ. ಕಳೆದ ವರ್ಷ ಅಲ್ಪ­ಸಂಖ್ಯಾತ ಆಯೋಗ ನಮ್ಮ ಸಂಖ್ಯೆಯನ್ನು ತಿಳಿಯಲು
ಸಮೀಕ್ಷೆ ನಡೆಸಲು ನಿರ್ಧರಿಸಿತ್ತು. ಆದರೆ ಆ ಕೆಲಸ ಆಗಿಲ್ಲ. ಈ ಸಮೀಕ್ಷೆ ಆಗಬೇಕು. ಜೊತೆಗೆ ರಾಜ್ಯ ಸರ್ಕಾರ ಲೈಂಗಿಕ ಅಲ್ಪಸಂಖ್ಯಾತ­ರಿಗಾಗಿ ಆರಂಭಿಸಿದ ಮೈತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು’ ಎಂದೂ ಕಾಮತ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT