ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲಿ ಕೀಟ,ರೋಗ ಬಾಧೆ

ಮತ್ತೊಂದು ಬರಗಾಲ: ಚಿಕ್ಕನಾಯಕನಹಳ್ಳಿ: ವಾಡಿಕೆ ಮಳೆ ಕೊರತೆ ಕೃಷಿ ಚಟುವಟಿಕೆಗೆ ತೊಡಗಲು ರೈತರ ಹಿಂದೇಟು
Last Updated 3 ಸೆಪ್ಟೆಂಬರ್ 2015, 11:04 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಇದು ಐದನೇ ವರ್ಷದ ಬರ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುವುದಕ್ಕೇ ಹಿಂದೇಟು ಹಾಕುವಂತಾಗಿದೆ.

ಅನಿಶ್ಚಿತ ಮಳೆ, ಕೀಟ–ರೋಗ ಬಾಧೆ, ಅಂತರ್ಜಲ ಮಟ್ಟ ಕುಸಿತ, ಮಾರುಕಟ್ಟೆ ಸಮಸ್ಯೆ, ಸಾಲ ಬಾಧೆಯೇ ಮುನ್ನೆಲೆಗೆ ಬಂದು, ಹೇಳಿಕೊಳ್ಳುವುದಕ್ಕೂ ರೈತರ ಬಳಿ ಒಂದೊಳ್ಳೆ ಸುದ್ದಿ ಇಲ್ಲದಂತಾಗಿದೆ.

ಶೇ 54ರಷ್ಟು ಬಿತ್ತನೆ: ತಾಲ್ಲೂಕಿನ ಅರ್ಧ ಭಾಗದಷ್ಟು ರೈತರು ಕೃಷಿಯಿಂದ ವಿಮುಖರಾಗಿದ್ದಾರೆ ಎಂಬ ಸಂಗತಿ ಕೃಷಿ ಇಲಾಖೆ ಮಾಹಿತಿಗಳೇ ಹೊರಹಾಕುತ್ತಿವೆ. ಒಟ್ಟು 38,202 ಹೆಕ್ಟೇರ್ ಕೃಷಿ ಭೂಮಿ ಪೈಕಿ 21,561 ಹೆಕ್ಟೇರ್ ಬಿತ್ತನೆ ಆಗಿದೆ. ಇದೇ ಲೆಕ್ಕಾಚಾರ ನೋಡಿದರೆ ಶೇ 54ರಷ್ಟು ಬಿತ್ತನೆ ಆದಂತಾಗಿದೆ.

ಏಪ್ರಿಲ್‌ನಲ್ಲಿ ಉತ್ತಮ ಮಳೆ ಬೀಳುವ ಲಕ್ಷಣ ಕಂಡು ಬಂದಿದ್ದರಿಂದ ರೈತರು ಪೂರ್ವ ಮುಂಗಾರಿನ ಪ್ರಮುಖ ಬೆಳೆ ಹೆಸರನ್ನು ಗುರಿ ಮೀರಿ ಬಿತ್ತಿದರು. ಇಲಾಖೆ ಗುರಿ 4,500 ಹೆಕ್ಟೇರ್ ಇದ್ದರೆ 5,600 ಹೆಕ್ಟೇರ್  (ಶೇ 124) ಬಿತ್ತನೆಯಾಯಿತು.

ಹುಳು ಬಾಧೆ: ಆದರೆ, ಜೂನ್-ಜುಲೈನಲ್ಲಿ ಮಳೆ ಕೈ ಕೊಟ್ಟಿತು. ಹೆಸರು ಹೂ-ಚಟ್ಟು ಮುಡಿಯುವ ಕಾಲಕ್ಕೆ ಮಳೆ ಬಾರದೆ  ಜೊಳ್ಳುಗಾಯಿಗೆ ಬಿದ್ದಿತು. ಹಂದನಕೆರೆ ಹಾಗೂ ಶೆಟ್ಟಿಕೆರೆ ಹೋಬಳಿಗಳ ಅನೇಕ ಕಡೆ ಕೆಂಪು ತಲೆ ಕಂಬಳಿ ಹುಳು ಬಾಧೆ ಶುರುವಾಯಿತು. ಹುಳಿಯಾರು, ಕಂದಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ನಂಜುರೋಗ (ಯೆಲ್ಲೋ ಮಜಾಯಿಕ್) ಕಾಣಿಸಿಕೊಂಡು ಇಳುವರಿ ಕುಂಠಿತಗೊಂಡಿತು. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯೂ ಸಿಗಲಿಲ್ಲ.

ಬಹುತೇಕ ರೈತರಿಗೆ ಹಾಕಿದ ಬಂಡವಾಳವೂ ಸಿಗಲಿಲ್ಲ. ಇಲಾಖೆ ಮಾಹಿತಿ ಪ್ರಕಾರ ಈ ಹಂಗಾಮಿನ ಹೆಸರು ಕಾಳು ಇಳುವರಿ ಶೇ 47 ಭಾಗ. ಈ ಕಾರಣದಿಂದ ಪೂರ್ವ ಮುಂಗಾರಿನಲ್ಲಿದ್ದ ಉತ್ಸಾಹ ಮುಂಗಾರು ಬಿತ್ತನೆಗೆ ಇಲ್ಲವಾಯಿತು. ರಾಗಿ ಬಿತ್ತನೆಗೆ ತೀವ್ರ ಹಿನ್ನಡೆಯಾಯಿತು. ಆಗಸ್ಟ್ ಮೊದಲ ವಾರದಲ್ಲಿ  ಶೇ 2ರಷ್ಟು ಬಿತ್ತನೆಯಾಗಿತ್ತು. ಎರಡನೇ ವಾರದಲ್ಲಿ ‘ಮಖೆ’ ಮಳೆ ಸುಳಿದಾಡಿದ್ದರಿಂದ ಬಿತ್ತನೆ ಚುರುಕುಗೊಂಡಿತು. 25,520 ಹೆಕ್ಟೇರ್ ಗುರಿ ಇದ್ದು,13,050 ಹೆಕ್ಟೇರ್ ರಾಗಿ ಬಿತ್ತನೆಯಾಗಿದೆ. ಆಗಸ್ಟ್ ಅಂತ್ಯಕ್ಕೆ ಶೇ 51.1ರಷ್ಟು ಬಿತ್ತನೆ ದಾಖಲಾಗಿದೆ. ಇನ್ನು ಮುಂದೆ ಮಳೆ ನಡೆಸುತ್ತದೋ ಹೇಗೋ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ಮರುಕಳಿಸುವ ಆತಂಕ: ಕಳೆದ ವರ್ಷ ರಾಗಿಗೆ ಬಿದ್ದಿದ್ದ ಇಲುಕು ರೋಗ, ಬಕಾಸುರ ಹುಳುಗಳು ಭಾರಿ ನಷ್ಟ ಉಂಟು ಮಾಡಿದ್ದವು. ಈ ಬಾರಿಯೂ ರೋಗ, ಕೀಟಬಾಧೆ ಮರುಕಳಿಸಿದರೆ ಗತಿ ಏನು ಎಂಬ ಚಿಂತೆಯೂ ರೈತರನ್ನು ಕಾಡುತ್ತಿದೆ. ಕಳೆದ ವರ್ಷ ತೊಗರಿ ತಾಕುಗಳು ಹೂ ಮುಡಿಯದೆ ಗೊಡ್ಡು ಬಿದ್ದಿದ್ದವು. ಹರಳಿಗೆ ವಿಪರೀತ ಕೊಂಡಲಿ ಕಾಟ ಕಂಡು ಬಂದಿತ್ತು. ಈ ವರೆಗೂ ತೋಟಗಳಿಗೆ ನೀರು ನುಗ್ಗಿಲ್ಲ. ಕೆರೆ– ಕಟ್ಟೆ ತುಂಬಿಲ್ಲ. ನಾಲ್ಕು ವರ್ಷಗಳಿಂದ ತೆಂಗಿನ ತೋಟಗಳು ಸುಳಿ ಕಳಚಿ ಬೀಳುತ್ತಿವೆ.

ಸಾಲು ಕೊಳವೆಬಾವಿ: ಈಗಾಗಲೇ ತಾಲ್ಲೂಕಿನಲ್ಲಿ ಶೇ 50 ಭಾಗ ತೆಂಗು ಹಾಳಾಗಿದೆ. ಈ ಬಾರಿ ಮಳೆ ಕೈ ಕೊಟ್ಟರೆ ಶೇ 80ರಷ್ಟು ತೆಂಗು, ಅಡಿಕೆ ಒಣಗಲಿವೆ. ತೆಂಗು– ಅಡಿಕೆ ಉಳಿಸಿಕೊಳ್ಳಲು ರೈತರು ಸಾಲ ಮಾಡಿ ಸಾಲು ಸಾಲು ಕೊಳವೆಬಾವಿಗಳನ್ನು ತೋಡಿಸುತ್ತಿದ್ದಾರೆ. ಅಂತರ್ಜಲ ಅಪಾಯದ ಮಟ್ಟ ತಲುಪಿದ್ದು, 1600 ಅಡಿ ದಾಟಿದೆ. ಜತೆಗೆ ಹಂದನಕೆರೆ ಹೋಬಳಿಯಲ್ಲಿ ತೆಂಗಿಗೆ ನುಸಿ ಪೀಡೆ ರೋಗ ತಗುಲಿಕೊಂಡಿದೆ. ಗಣಿ ಬಾಧಿತ ಪ್ರದೇಶದಲ್ಲಿ ಅಡಿಕೆಗೆ ಕೊಳೆ ರೋಗ ಹಬ್ಬುತ್ತಿದೆ.

ತೋಟಗಳನ್ನು ಉಳಿಸಿಕೊಳ್ಳುವ ಹಾಗೂ ಮಾಡಿದ ಸಾಲವನ್ನು ತೀರಿಸುವ ಪರ್ಯಾಯ ಮಾರ್ಗವಾಗಿ ತಾಲ್ಲೂಕಿನ ರೈತರು ತೋಟಗಳಲ್ಲಿ ತರಕಾರಿ ಬೆಳೆಯಲು ಮುಂದಾಗುತ್ತಿದ್ದಾರೆ. ಜತೆಗೆ ಹೈನುಗಾರಿಕೆ ಮಾಡುತ್ತಿದ್ದಾರೆ. ತರಕಾರಿ ಬೆಳೆಗಳಿಗೆ ಕಾಣಿಸಿಕೊಂಡಿರುವ ವಿಪರೀತ ಕೀಟ, ರೋಗ ಬಾಧೆ ಹಾಗೂ ಮೇವಿನ ಸಮಸ್ಯೆ ರೈತರ ಪರ್ಯಾಯ ನಡಿಗೆಗೂ ಅಡ್ಡಗಾಲು ಹಾಕಿವೆ.

ತರಕಾರಿ ಬೆಳೆ: ಹಂದನಕೆರೆ ಹಾಗೂ ಶೆಟ್ಟಿಕೆರೆ ಹೋಬಳಿಗಳಲ್ಲಿ ತರಕಾರಿ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದೆ. ಟೊಮೆಟೊಗೆ ಎಲೆಚುಕ್ಕಿರೋಗ, ಹಳದಿರೋಗ, ಬೆಂಡೆಗೆ ಕರಿ ಹೇನು, ಸೌತೆಗೆ ಸೊರಗು ರೋಗ ಹೀಗೆ ತರಕಾರಿಗೆ ತರಹೇವಾರಿ ರೋಗ ಕಾಣಿಸಿಕೊಂಡಿದ್ದು ಬೆಳೆಗಾರರನ್ನು ಕಂಗೆಡಿಸಿದೆ.

ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಮೇವಿನ ಸಮಸ್ಯೆ ಎದುರಾಗಿದೆ. ಇಲಾಖೆ ದಾಖಲೆಗಳ ಪ್ರಕಾರ ಹಂದನಕೆರೆ ಹಾಗೂ ಕಸಬಾದಲ್ಲಿ 4 ವಾರ ಹಾಗೂ ಹುಳಿಯಾರು, ಶೆಟ್ಟಿಕೆರೆ ಮತ್ತು ಕಂದಿಕೆರೆ ಹೋಬಳಿಗಳಲ್ಲಿ 5 ವಾರಗಳವರೆಗೆ ಮೇವಿನ ಲಭ್ಯತೆ ಇದೆ. ಒಂದು ತಿಂಗಳು ಇದೇ ಪರಿಸ್ಥಿತಿ ಮುಂದುವರಿದರೆ ತೀವ್ರ ಮೇವಿನ ಸಮಸ್ಯೆ ತಲೆದೋರಲಿದೆ. ಅಲ್ಲದೆ  ಮಳೆಗಾಲದಲ್ಲೇ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕುರಿಗಾಹಿಗಳು ನೀರು, ಮೇವಿಗಾಗಿ ಅಲೆದಾಟ ಶುರು ಮಾಡಿದ್ದಾರೆ.

ಅಷ್ಟೇ ಅಲ್ಲ, ರಾಸುಗಳಿಗೆ ಚಪ್ಪೆ ರೋಗ, ಕುರಿಗಳಿಗೆ ಪಿಪಿಆರ್ ಕಾಯಿಲೆ ಕಾಣಿಸಿಕೊಂಡಿದೆ. ಜತೆಗೆ ಬೆಳೆಗಳಿಗೆ ಕಾಡು ಹಂದಿ, ನವಿಲು, ಕಾಡಾನೆ ದಾಳಿ ಸಾಮಾನ್ಯ ಎಂಬಂತಾಗಿದೆ. ಚಿರತೆ ಊರಿಗೆ ನುಗ್ಗಿ ಜಾನುವಾರುಗಳನ್ನು ಎಳೆದೊಯ್ಯುತ್ತಿವೆ.

ಮಳೆ ವಿವರ: ಕಳೆದ ವರ್ಷ ಆಗಸ್ಟ್ ತಿಂಗಳ ಅಂತ್ಯಕ್ಕೆ 330.3 ಮಿ.ಮೀ. ಮಳೆ ಬಿದ್ದಿತ್ತು. ಈ ಬಾರಿ 266.3 ಮಿ.ಮೀ. ಮಳೆಯಾಗಿದೆ. ಈ ಬಾರಿ ಮಳೆ ಹಂಚಿಕೆಯಲ್ಲಿ ಅಗಾಧ ವ್ಯತ್ಯಾಸ ಕಂಡು ಬಂದಿದೆ. ಹಂದನಕೆರೆ ಹಾಗೂ ಕಂದಿಕೆರೆ ಹೋಬಳಿಗಲ್ಲಿ ತೀವ್ರ ಮಳೆ ಕೊರತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT