ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ಜಿಲ್ಲೆಗಳಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್‌ ರೂಪಿಸಲು ಚಿಂತನೆ

Last Updated 8 ಜೂನ್ 2016, 19:49 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ ರೂಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜಲಸಂಪನ್ಮೂಲ ಸಚಿವಾಲಯ ಈ ಹೊಣೆಯನ್ನು ವಹಿಸಿಕೊಂಡಿದೆ.

‘ನಿರಂತರವಾಗಿ ಬರಕ್ಕೆ ತುತ್ತಾಗುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಗಳನ್ನು ಗುರುತಿಸಿ ವರದಿ ಸಲ್ಲಿಸಲು ತಿಳಿಸಲಾಗುವುದು’ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಜತೆ ಈ ಬಗ್ಗೆ ಚರ್ಚಿಸಲಾಗಿದೆ. ಕರ್ನಾಟಕ, ತೆಲಂಗಾಣ, ಛತ್ತೀಸಗಡ ಮುಂತಾದ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಈ ಬಗ್ಗೆ ಚರ್ಚಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಈ ಯೋಜನೆ ಅಡಿಯಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಬರ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳಿಗೆ ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಲಿದೆ. ಕೆರೆ, ಬಾವಿ, ಕೊಳಗಳ ಹೂಳೆತ್ತುವುದು, ಅಂತರ್ಜಲ ಮರುಪೂರಣ, ನದಿ ತೀರಗಳಲ್ಲಿ ಗಿಡ ನೆಡುವುದು, ನದಿ ತೀರ ಪ್ರದೇಶ ಸಂರಕ್ಷಣೆ ಮುಂತಾದ ಜಲ ಮೂಲಗಳ ಪುನಶ್ಚೇತನ ಕಾಮಗಾರಿಗಳಿಗೆ ಕೇಂದ್ರ ಹಣ ನೀಡಲಿದೆ.

ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸರಣಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಬೆಳೆ ನಾಶ
ಮತ್ತು ಬರ ಪರಿಹಾರದ ಬಗ್ಗೆ ಚರ್ಚೆ ಆಗಿತ್ತು. ಬರ ನಿಯಂತ್ರಣಕ್ಕೆ ಸಂಬಂಧಿಸಿ ವಿಶೇಷ ಪ್ಯಾಕೇಜ್‌ ರೂಪಿಸಲಾಗುವುದು ಎಂದು ಆಗಲೇ ಪ್ರಧಾನಿ ಭರವಸೆ ನೀಡಿದ್ದರು.
2015ರಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಅವುಗಳಲ್ಲಿ 1,841 ಪ್ರಕರಣಗಳು ಮಹಾರಾಷ್ಟ್ರವೊಂದರಲ್ಲೇ ನಡೆದಿವೆ.

2014ರಲ್ಲಿ 2,115 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ 1,163 ಮಂದಿ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರೆ ಉಳಿದವರು ಬೆಳೆ ನಾಶದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀರಿನ ತೀವ್ರ ಕೊರತೆ ಇರುವ ಪ್ರದೇಶಗಳಲ್ಲಿ ನೀರಾವರಿ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡುವಂತೆಯೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಈ ಕಾಮಗಾರಿಗಳಿಗೂ ಕೇಂದ್ರ ಹಣಕಾಸಿನ ನೆರವು ನೀಡಲಿದೆ.

ಮಧ್ಯಪ್ರದೇಶದ ಯಶೋಗಾಥೆ
2014ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದಾಗಿತ್ತು. ಆದರೆ ಕಳೆದ ವರ್ಷ ಮಧ್ಯಪ್ರದೇಶ ರೈತರ ಆತ್ಮಹತ್ಯೆಯ ದುರಂತದಿಂದ ತಪ್ಪಿಸಿಕೊಂಡಿದೆ.

2015ರಲ್ಲಿ ಈ ರಾಜ್ಯದಲ್ಲಿ ರೈತರ ಆತ್ಮಹತ್ಯೆಯ  ಒಂದು ಪ್ರಕರಣವೂ ದಾಖಲಾಗಿಲ್ಲ. ಈ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿಯೂ ಅಲ್ಲಿ ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿಲ್ಲ.

ಮಧ್ಯಪ್ರದೇಶದಲ್ಲಿ ಆಗಿರುವ ಕೃಷಿ ಅಭಿವೃದ್ಧಿಯೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ನೀರಿನ ಕೊರತೆಯ ಪ್ರದೇಶಗಳಲ್ಲಿ ನೀರಾವರಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ.

ಆದರೆ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರ ಮಾತ್ರ ಸಮರ್ಪಕ ಬೆಳೆ ಪದ್ಧತಿ ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇದರಿಂದಾಗಿ ಮರಾಠವಾಡ ಪ್ರದೇಶ ಅತಿ ಹೆಚ್ಚು ಹಾನಿ ಎದುರಿಸುವಂತಾಗಿದೆ ಎಂದು ಜಲ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT