ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹಗಾರರೆಲ್ಲ ಅಮ್ಮಂದಿರೇ: ಪ್ರತಿಭಾ ರಾಯ್ ಪ್ರತಿಪಾದನೆ

Last Updated 26 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  `ಪುರುಷನೇ ಆಗಿರಲಿ, ಮಹಿಳೆಯೇ ಆಗಿರಲಿ ಎಲ್ಲ ಬರಹಗಾರರೂ ಅಮ್ಮಂದಿರೇ ಆಗಿದ್ದಾರೆ. ಗಂಡಸು ಅಪ್ಪನಾಗಲು ಸಂತಸದ ಒಂದು ಕ್ಷಣ ಸಾಕು. ಆದರೆ, ಹೆಣ್ಣು ತಾಯಿಯಾಗಲು ಒಂಬತ್ತು ತಿಂಗಳ ನೋವು ಅನುಭವಿಸಬೇಕು. ಬರಹ ಕೂಡ ಅಂತಹ ವೇದನೆ ಬಳಿಕವೇ ಹುಟ್ಟುತ್ತದೆ' ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಒರಿಯಾ ಲೇಖಕಿ ಪ್ರತಿಭಾ ರಾಯ್ ಪ್ರತಿಪಾದಿಸಿದರು.

ಸಾಹಿತ್ಯ ಅಕಾಡೆಮಿ ಮಂಗಳವಾರ ಏರ್ಪಡಿಸಿದ್ದ `ಸಾಹಿತ್ಯ ಸಭೆ' ಕಾರ್ಯಕ್ರಮದಲ್ಲಿ ಅವರು `ನಾನು ಲೇಖಕಿಯಾದ ಪರಿ' ವಿಷಯವಾಗಿ ಉಪನ್ಯಾಸ ನೀಡಿದರು.

`ಯಾವುದೇ ಘಟನೆಯಿಂದ ಮನಸ್ಸು ಉತ್ತೇಜನಗೊಂಡ ಬಳಿಕ ಕಥೆ ಮನಸ್ಸಿನಲ್ಲೇ ಹರಳುಗಟ್ಟತ್ತಾ ಹೋಗುತ್ತದೆ. ಕೆಲವೊಮ್ಮೆ ವರ್ಷಗಟ್ಟಲೇ ಅದು ಕಾಡುತ್ತದೆ. ನನ್ನ `ಮೋಕ್ಷ' ಕಥೆ 30 ವರ್ಷಗಳ ಕಾಲ ಕಾಡಿದ ಮೇಲೆ ಮನಸ್ಸಿನ ಗರ್ಭದಿಂದ ಹೊರಬಿತ್ತು' ಎಂದು ಭಿತ್ತಿಯ ಭಂಡಾರದಿಂದ ನೆನಪೊಂದನ್ನು ಹೆಕ್ಕಿ ತೆಗೆದರು.

`ನನ್ನದು ಸಂಪ್ರದಾಯಸ್ಥ ಕುಟುಂಬ. ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಕಥೆ ಬರೆಯಲು ಶುರುಮಾಡಿದೆ. ಮದುವೆಯಾದ ಮೇಲೆ ಏಳು ವರ್ಷಗಳ ಕಾಲ ಬರೆಯಲು ಆಗಲಿಲ್ಲ. ಆ ಅವಧಿಯಲ್ಲಿ ಮೂರು ಮಕ್ಕಳನ್ನು ಹೆತ್ತೆ. ಏನೂ ಬರೆಯಲಿಲ್ಲ ಎಂಬ ನೋವು ಕಾಡಿದ್ದರಿಂದ ಮಾನಸಿಕ ಆಘಾತಕ್ಕೂ ಒಳಗಾದೆ. ಆ ನೋವೇ ಎಲ್ಲ ಅಡೆತಡೆ ಮೀರಿ ಮತ್ತೆ ನನ್ನನ್ನು ಬರವಣಿಗೆಗೆ ಹಚ್ಚಿತು'ಂದರು.

`ನಿಸರ್ಗದ ಸೌಂದರ್ಯ ಮತ್ತು ಸಮಾಜದ ಕುರೂಪ ನನ್ನನ್ನು ಬರವಣಿಗೆಯಲ್ಲಿ ತೊಡಗುವಂತೆ ಮಾಡಿತು. ಬಂದ ಗೇಲಿಯನ್ನು ಸವಾಲಾಗಿ ಸ್ವೀಕರಿಸಿ ಕೃತಿ ರಚನೆ ಮೂಲಕ ಉತ್ತರ ಕೊಟ್ಟೆ' ಎಂದ ಅವರು, `ನಾನು ಭೌತಿಕವಾಗಿ ಮಹಿಳೆಯಾದರೂ ಸಾಹಿತ್ಯ ರಚನೆಯಲ್ಲಿ ತೊಡಗಿದಾಗ ಲಿಂಗರಹಿತ ಮನಸ್ಥಿತಿಯಲ್ಲಿ ಇರುತ್ತೇನೆ' ಎಂದು ತಿಳಿಸಿದರು.

`ಬರವಣಿಗೆ ಎಂಬುದು ಘಟನೆಯನ್ನು ಕ್ಯಾಮೆರಾದಲ್ಲಿ ಯಥಾವತ್ತಾಗಿ ಸೆರೆಹಿಡಿದ ಛಾಯಾಚಿತ್ರವಾಗಿರದೆ, ಕಲಾವಿದನ ಕುಂಚದಲ್ಲಿ ಅರಳಿದಂತಹ ಕಲಾಕೃತಿಯಾಗಿದೆ' ಎಂದು ವ್ಯಾಖ್ಯಾನಿಸಿದರು. `ಅಸಹಾಯಕರಿಗೆ ಧ್ವನಿಯಾಗುವಂತಹ ಸಾಹಿತ್ಯವನ್ನು ರಚನೆ ಮಾಡಬೇಕು. ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಅದರಲ್ಲಿ ಇರಬೇಕು. ನಾನು ಬುಡಕಟ್ಟು ಜನಾಂಗದ ಜತೆ ಕಾಲ ಕಳೆದು ಕಾದಂಬರಿ ಬರೆದಿದ್ದು ಇದೇ ಕಾರಣದಿಂದ' ಎಂದರು.

`ಈಗೀಗ ಗದ್ಯ- ಪದ್ಯ ನಡುವಿನ ಗಡಿ ಮಾಯವಾಗುತ್ತಿದೆ. ಹೀಗಾಗಿ ಎಲ್ಲ ಕಾದಂಬರಿಕಾರರೂ ಕವಿಹೃದಯಿಗಳೇ' ಎಂದು ಚಟಾಕಿ ಹಾರಿಸಿದರು. `ಸಾಹಿತಿಗೆ ಯಾವಾಗಲೂ ಅತೃಪ್ತಿ ಕಾಡುತ್ತಿರಬೇಕು. ಆಗಲೇ ಉತ್ತಮ ಸಾಹಿತ್ಯ ಸೃಷ್ಟಿ ಆಗುವುದು' ಎಂದು ಅಭಿಪ್ರಾಯಪಟ್ಟರು.

`ಜಾತಿ ನನಗೆಂದೂ ಮುಖ್ಯವಾಗಿ ಕಂಡಿಲ್ಲ. ನಮ್ಮ ಮನೆಯ ದೇವರ ಕೋಣೆಯಲ್ಲಿ ಹಿಂದೂ ದೇವತೆಗಳು, ಮುಸ್ಲಿಂ ಪೈಗಂಬರರು ಮತ್ತು ಕ್ರಿಶ್ಚಿಯನ್ನರ ಸಿಲುಬೆಗಳು ಒಂದೆಡೆ ಇವೆ. ಯಾರು ಬೇಕಾದರೂ ನಮ್ಮ ದೇವರ ಕೋಣೆಗೆ ಹೋಗಿಬರಬಹುದು' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, `ಪ್ರತಿಭಾ ಅವರ ಕೆಲವು ಕಥಾ ಸಂಕಲನಗಳನ್ನು ಓದಿದ್ದೇನೆ. `ಆಂಟಿಕ್' ಮತ್ತು `ಉಲ್ಲಂಘನ' ಕಥೆಗಳು ಗಾಢವಾಗಿ ತಟ್ಟಿವೆ. ತಮ್ಮ ಅನನ್ಯ ಶೈಲಿಯ ನಿರೂಪಣೆಯಿಂದ ಅವುಗಳು ಮನಸ್ಸನ್ನು ಕಲಕಿಬಿಡುತ್ತವೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. `ಪ್ರತಿಭಾ ನಮ್ಮ ತಲೆಮಾರಿನ ಬಹು ಮಹತ್ವದ ಲೇಖಕಿ' ಎಂದರು. ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎನ್.ಸಿ. ಹರೀಶ್ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT