ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಸೌತೆಯಲ್ಲ, ಆನೆ ಸೌತೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಿಜಾಪುರದಲ್ಲೊಂದು ಪುಟ್ಟ ಉದ್ಯಾನ. ಅಲ್ಲಿ ಹಲವಾರು ಬಗೆಯ ಗಿಡ-ಮರಗಳಿವೆ. ಕೆಳಗೆ ಹಸಿರು ಹುಲ್ಲಿನ ಹಾಸಿಗೆ. ನಿತ್ಯ ನಾವೆಲ್ಲ ಅಲ್ಲಿ ಹರಟೆ ಹೊಡೆಯುತ್ತೇವೆ. ನೆರಳು ಕೊಡುವ, ತಂಪು ನೀಡುವ ಆ ಹಸಿರು ಮರಗಳ ಬಗ್ಗೆ ನಮಗೇನೂ ತಿಳಿದಿಲ್ಲ. ಬೇವು, ಹುಣಸೆ, ಆಲ ಮೊದಲಾದ ಜನಪ್ರಿಯ ಮರಗಳನ್ನು ಬಿಟ್ಟರೆ, ಉಳಿದ ಮರಗಳ ಹೆಸರೂ ಗೊತ್ತಿಲ್ಲ.

ಒಂದು ದಿನ ಒಂದು ಮರ, ಇದ್ದಕ್ಕಿದ್ದಂತೆ ನಮ್ಮ ಗಮನ ಸೆಳೆಯಿತು. ಅದಕ್ಕೆ ಕಾರಣ, ಆ ಗಿಡದಲ್ಲಿ ಜೋತುಬಿದ್ದ ದೊಡ್ಡ ಗಾತ್ರದ ಕಾಯಿಗಳು. ಈ ಹಿಂದೆ ನಾವ್ಯಾರೂ ಅಂಥ ಕಾಯಿಗಳನ್ನು ನೋಡಿರಲಿಲ್ಲ.  ಅದು ಯಾವ ಗಿಡ ಎಂಬುದು ನಮಗ್ಯಾರಿಗೂ ಗೊತ್ತಿರಲಿಲ್ಲ.
ಅದು ಕಾಡು ಚಿಕ್ಕು ಹಣ್ಣಿನ ಮರವೆಂದು, ಮರುದಿನ ಅಲ್ಲಿಗೆ ಬಂದ ಗೆಳೆಯರೊಬ್ಬರು ಹೇಳಿದರು.  ಹಣ್ಣಿನ ಬಣ್ಣ ಚಿಕ್ಕು ಹಣ್ಣಿನಂತಿದ್ದು, ಗಾತ್ರದಲ್ಲಿ ದೊಡ್ಡದಿರುವುದರಿಂದ ಕಾಡು ಚಿಕ್ಕು ಎಂದು ತರ್ಕಿಸಿರಬೇಕು. ಬಹುತೇಕ ಗಿಡಗಳಿಗೆ ಇಂಥ ತರ್ಕಗಳೇ ಹೆಸರು ನೀಡಬಹುದೇನೋ?!

ನನಗೆ ಆ ಗಿಡದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆಯಾಯಿತು. ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನನ್ನ ಮಿತ್ರ ಪ್ರೇಮ್ ಡವಳಗಿಯವರಿಗೆ, ಆ ಗಿಡವನ್ನು ತೋರಿಸಿ ವಿವರ ಕೇಳಿದೆ. ಥಟ್ಟನೆ ಅವರಿಗೂ ಏನೂ ಹೇಳಲಿಕ್ಕಾಗಲಿಲ್ಲ.  ನಾನೂ ಆಮೇಲೆ ಹೇಳುತ್ತೇನೆ ಎಂದು ಹೇಳಿ ಮರೆತು ಬಿಟ್ಟರು. ಮತ್ತೆ ನನ್ನ ಹಾಗು ಅವರ ಮುಖಾಮುಖಿ ಯಾದದ್ದು ಹಲವು ದಿನಗಳ ನಂತರ. ಆಗಲೂ ಅವರು ಆ ಮರದ ಬಗ್ಗೆ ಏನೂ ಹೇಳಲಿಲ್ಲ.

ಬಹುಶಃ ಮಾಹಿತಿ ಸಿಕ್ಕಿರಲಿಕ್ಕಿಲ್ಲ ಎಂದು ಭಾವಿಸಿ, ಮತ್ತೆ ಕೇಳುವ ಗೋಜಿಗೆ ನಾನು ಹೋಗಲಿಲ್ಲ. ನನ್ನನ್ನು ನೋಡಿ ಅವರಿಗೆ ಮತ್ತೆ ಆ ಗಿಡದ ನೆನಪಾಗಿರಬೇಕು. ಅಂದೇ ರಾತ್ರಿ ನನಗೆ ಫೋನ್ ಮಾಡಿ ಕೆಲವು ವಿವರಗಳನ್ನು ನೀಡಿದರು. ಅದನ್ನು ಹಿಡಿದುಕೊಂಡು, ಅಲ್ಲಿ ಇಲ್ಲಿ ತಡಕಾಡಿ ಕೆಲವು ಮಾಹಿತಿಯನ್ನು ಕಲೆ ಹಾಕಿದೆ. ಆ ಗಿಡವನ್ನು ಕಿಗೇಲಿಯಾ ಪಿನ್ನಾಟಾ ಅಥವಾ ಕಿಗೇಲಿಯಾ ಆಫ್ರಿಕಾನಾ ಎಂದು ಕರೆಯುತ್ತಾರೆ.  ಹಿಂದಿಯಲ್ಲಿ ಬಲಮ್ ಖೀರಾ ಮತ್ತು ಝಾಡು ಫಾನೂಸ್ ಎನ್ನುತ್ತಾರೆ.

ತಮಿಳಿನಲ್ಲಿ ಶಿವನ ಕುಂಡಲಮ್ ಎಂದೂ ಇಂಗ್ಲಿಷಿನಲ್ಲಿ ಸಾಸೇಜ್ ಟ್ರಿ ಎಂದೂ ಗುರುತಿಸುತ್ತಾರೆ. ಸಾಸೇಜ್ ಎಂದರೆ ಕತ್ತರಿಸಿ ನೇತು ಹಾಕಿದ ಪ್ರಾಣಿಗಳ ಮಾಂಸ. ಈ ಗಿಡದ ಕಾಯಿಗಳು ಮಾಂಸದ ಅಂಗಡಿಯಲ್ಲಿ ನೇತು ಹಾಕಿದ ಮಾಂಸದ ತರಹ ಕಂಡಿರಬೇಕು. ಅದಕ್ಕೆ ಆಂಗ್ಲರು ಈ ಹೆಸರಿನಿಂದ ಕರೆದಿರಬೇಕು. ಆಂಗ್ಲ ಭಾಷೆಯಲ್ಲಿ ಇದಕ್ಕೆ ಎಲೆಫಂಟ ಕುಕಂಬರ್ ಎಂಬ ಹೆಸರೂ ಉಂಟು. ಕನ್ನಡದಲ್ಲಿ ಇದನ್ನು ಆನೆ ಸೌತೆಕಾಯಿ ಎಂದು ಕರೆಯುತ್ತಾರೆ.

ಅದು ದೊಡ್ಡ ಸೌತೆಕಾಯಿ ಹಾಗೆ ಕಂಡಿದ್ದರಿಂದ ಆನೆ ಸೌತೆಕಾಯಿ ಗಿಡ ಎಂದು ಗುರುತಿಸಿರಬಹುದು.  ಕೆಲವು ಭಾಗದಲ್ಲಿರುವ ಆನೆಗಳು ಈ ಕಾಯಿಗಳನ್ನು ತಿನ್ನುತ್ತವೆಯಂತೆ. ಮಂಗಗಳು, ಜಿರಾಫೆಗಳು, ಹಿಪ್ಪೋಗಳು, ಹೆಗ್ಗಣಗಳು ಅಲ್ಲದೇ ಇನ್ನೂ ಕೆಲವು ಪ್ರಾಣಿಗಳು ಈ ಗಿಡದ ಹಣ್ಣನ್ನು ಸೇವಿಸುತ್ತವೆಯಂತೆ.  ಬೂದು ಬಣ್ಣದ ಕೆಲವು ಗಿಳಿಗಳೂ ಈ ಹಣ್ಣುಗಳನ್ನು ತಿನ್ನುತ್ತವೆ ಎಂದು ಕೆಲವು ಮಾಹಿತಿಗಳು ತಿಳಿಸುತ್ತವೆ.

ಈ ಗಿಡದ ಹೂವುಗಳು ತುಂಬ ಸುಂದರ. ಹೀಗಾಗಿ ಈ ವೃಕ್ಷಗಳನ್ನು ಅಲಂಕಾರಿಕ ಗಿಡವಾಗಿಯೂ, ಮನೆಯಂಗಳದಲ್ಲಿ ಹಾಗೂ ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಗಂಟೆಯಾಕಾರದ 10 ಸೆಂಟಿ ಮೀಟರ್ ಅಗಲವಾದ ದೊಡ್ಡ ಹೂವುಗಳು ಈ ಮರದಲ್ಲಿ ಅರಳುತ್ತವೆ. ಹಗಲು ಹೊತ್ತಿನಲ್ಲಿ ಹಕ್ಕಿಗಳು, ಕೀಟಗಳು ಈ ಹೂವುಗಳತ್ತ ಧಾವಿಸುತ್ತವೆ. ರಾತ್ರಿ ಈ ಹೂವುಗಳು ದಟ್ಟವಾದ ವಾಸನೆಯನ್ನು ಹರಡುತ್ತಿದ್ದು, ಬಾವುಲಿ ಗಳನ್ನು ತಮ್ಮತ್ತ ಸೆಳೆಯುತ್ತವೆ. ಹಕ್ಕಿ, ಕೀಟ, ಬಾವಲಿಗಳಿಂದ ಇವುಗಳ ಪರಾಗಸ್ಪರ್ಶ ಕ್ರಿಯೆ ಸಾಗುತ್ತದೆ. ಕಿತ್ತಳೆ ಮಿಶ್ರಿತ ಕೆಂಪು ಹಾಗೂ ಹಸಿರು ಮಿಶ್ರಿತ ನೀಲಿ ಹೂವುಗಳು ತುಂಬ ಸುಂದರವಾಗಿರುತ್ತವೆ.

ಕಟ್ಟಿಗೆ ಬಣ್ಣದ ಹಣ್ಣುಗಳು 30 ರಿಂದ 100 ಸೆಂಟಿಮೀಟರ್ ಉದ್ದ ಬೆಳೆಯಬಲ್ಲವು.  5 ರಿಂದ 10 ಕಿಲೋ ತೂಗಬಲ್ಲವು. ಹಣ್ಣಿನ ತಿರುಳು ಮೃದುವಾಗಿದ್ದು ನಾರಿನಿಂದ ಕೂಡಿರುತ್ತದೆ. ಒಂದೇ ಹಣ್ಣಿನಲ್ಲಿ ಅನೇಕ ಬೀಜಗಳಿರುತ್ತವೆ. ಹಣ್ಣಿನ ಜತೆಗೆ ಬೀಜಗಳನ್ನು ತಿನ್ನುವ ಪ್ರಾಣಿಗಳು, ತಮ್ಮ ಜೀರ್ಣಾಂಗದಲ್ಲಿ ಬೀಜಗಳನ್ನು ಸಂಸ್ಕರಿಸಿ ವಿಸರ್ಜಿಸುವ ಮೂಲಕ ಬೀಜ ಪ್ರಸಾರಕ್ಕೆ ಸಹಾಯ ಮಾಡುವವು.      
ಈ ಹಣ್ಣು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.

ವಾಯುಪೀಡೆ, ಸಂದುನೋವು, ಚರ್ಮರೋಗ, ಸಿಫಿಲಿಸ್, ಹಾವು ಕಡಿತ ಮುಂತಾದವುಗಳನ್ನು ಗುಣಪಡಿಸಲು ಆನೆ ಸೌತೆಯನ್ನು ಬಳೆಸುತ್ತಾರೆ. ಇದರಿಂದ ಬೀರ ತರಹದ ಪೇಯವನ್ನೂ ಸಿದ್ಧಪಡಿಸುತ್ತಾರೆ. ಹಾಗೆಂದು ನೇರವಾಗಿ ಈ ಹಣ್ಣನ್ನು ಬಳಸುವಂತಿಲ್ಲ. ಸಂಸ್ಕರಿಸದೇ ಬಳಸುವ ಹಣ್ಣು ಮನುಷ್ಯನಿಗೆ ವಿಷಕಾರಿ. ಅದನ್ನು ಒಣಗಿಸಿ, ಬೇಯಿಸಿ ಸಂಸ್ಕಾರ ಕೊಟ್ಟ ನಂತರವೇ ಅದು ಸೇವನೆಗೆ ಯೋಗ್ಯವಾಗುತ್ತದೆ. ಈ ಹಣ್ಣು ತುಂಬ ಭಾರವಾಗಿರುವುದರಿಂದ ಈ ಗಿಡದ ಕೆಳಗೆ ಹಾಯುವುದು ಹಾಗೂ ಕುಳಿತುಕೊಳ್ಳುವುದು ತುಂಬ ಅಪಾಯಕಾರಿ.

ತೆಂಗು ಪ್ರವಾಸ
ಕೇರಳ ಮಾದರಿಯಲ್ಲಿ ತೆಂಗಿನ ಉದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರಿನ ‘ಸಿಜ್ಞಾ ಪರಿಸರ ಸಂಸ್ಥೆ’ಯು ರೈತರಿಗೆ ಕೇರಳ ರಾಜ್ಯದಾದ್ಯಂತ ಈ ತಿಂಗಳ ಅಂತಿಮ ದಲ್ಲಿ ಪ್ರವಾಸ ಹಮ್ಮಿಕೊಂಡಿದೆ. ನಲವತ್ತು ವಿವಿಧ ತೆಂಗಿನ ಮೌಲ್ಯವರ್ಧನೆಯ ಉತ್ಪನ್ನ, ಅವುಗಳ ಮಾರಾಟದ ಮಾಹಿತಿ, ಹಳ್ಳಿಗಳಲ್ಲಿ ಸಣ್ಣ ಸಣ್ಣ ತೆಂಗಿನ ಕೈಗಾರಿಕೆಗಳನ್ನು ತೆರೆಯಲು ಸಂಪೂರ್ಣ ಮಾಹಿತಿ, ತೆಂಗು ಅಭಿವೃದ್ಧಿ ಮಂಡಳಿ ಮತ್ತು ಸರ್ಕಾರಿ ಇಲಾಖೆಗಳ ಸಬ್ಸಿಡಿ ವಿವರ, ಕೈಗಾರಿಕೆಗಳಿಗೆ ಬೇಕಾಗುವ ತಂತ್ರಜ್ಞಾನದ ಸಲಹೆಗಳು ದೊರೆಯಲಿದೆ.  ಒಟ್ಟು 6 ದಿನಗಳ ಪ್ರವಾಸದಲ್ಲಿ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೂ ಕರೆದೊಯ್ಯಲಾಗುವುದು. ಇದಕ್ಕೆ ಪ್ರತಿಯೊಬ್ಬರಿಗೆ ತಗಲುವ ವೆಚ್ಚ ಊಟ, ವಸತಿ, ಪ್ರಯಾಣ ಖರ್ಚು ಸೇರಿ ನಾಲ್ಕು ಸಾವಿರ ರೂಪಾಯಿ. ಮಾಹಿತಿಗೆ 9449768426.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT