ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲದಂಡೆ ಕಾಲುವೆಗೆ ನೀರು ಹರಿಸಲು ಆಗ್ರಹ

Last Updated 25 ಜುಲೈ 2014, 8:53 IST
ಅಕ್ಷರ ಗಾತ್ರ

ಬಳ್ಳಾರಿ: ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಹಾಗೂ ಕೆಳಮಟ್ಟದ ಕಾಲುವೆಗಳಗುಂಟ ಶೀಘ್ರವೇ ನೀರು ಹರಿಸುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ದರೂರು ಪುರುಷೋತ್ತಮಗೌಡ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಈ ವಿಷಯ ತಿಳಿಸಿದ ಅವರು, ಜಲಾಶಯದಲ್ಲಿ 51 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, 75000 ಕ್ಯೂಸೆಕ್‌ನಷ್ಟು ಒಳ ಹರಿವು ಇದೆ. ಕೂಡಲೇ ಕಾಲುವೆಗುಂಟ ನೀರು ಹರಿ­ಸುವ ಮೂಲಕ ಮುಂಗಾರು ಬಿತ್ತನೆಗೆ ಅನುವು ಮಾಡಿಕೊಡಬೇಕು ಎಂದರು.

ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಭತ್ತದ ಸಸಿಗಳನ್ನು ಬೆಳೆದು, ನಾಟಿ ಮಾಡಲು ಅಣಿ­ಯಾಗಿದ್ದಾರೆ. ಹತ್ತಿ, ಮೆಣಸಿನಕಾಯಿ ಬಿತ್ತನೆಯ ಸಿದ್ಧತೆಗಳೂ ಪೂರ್ಣ­ಗೊಂಡಿವೆ. ನೀರು ಬಿಡಲು ವಿಳಂಬ­ವಾದರೆ ಚಳಿಗಾಲ ಆರಂಭವಾಗಿ, ಬಿತ್ತನೆ ಮಾಡಿದ ಬೆಳೆಗೆ ಕೀಟದ ಹಾವಳಿ ಹಾಗೂ ರೋಗ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತುಂಗಭದ್ರಾ ಮಂಡಳಿಯು ಶೀಘ್ರ ನೀರು ಹರಿಸಲು ಮುಂದಾಗ­ಬೇಕು ಎಂದು ಅವರು ಕೋರಿದರು.

ತುಂಗಭದ್ರಾ ಜಲಾನಯನ ಪ್ರದೇಶ­ದಲ್ಲಿ 15 ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ನೀರು ಹರಿದುಬರು­ತ್ತಿದೆ. ಜಲಾಶಯ ಭರ್ತಿಯಾದ ನಂತರ ವ್ಯರ್ಥವಾಗಿ ನದಿಗೆ ನೀರನ್ನು ಬಿಡುವ ಬದಲು ಈಗಲೇ ಕಾಲುವೆಗುಂಟ ಹರಿಸಿ­ದರೆ ರೈತರಿಗೆ ಅನುಕೂಲ­ವಾಗುತ್ತದೆ ಎಂದು ಅವರು ಹೇಳಿದರು.

ಈಗಾಗಲೇ ನಡೆಯಬೇಕಿದ್ದ ನೀರಾವರಿ ಸಲಹಾ ಸಮಿತಿ ಸಭೆಯನ್ನು ವಿಧಾನಮಂಡಲದ ಅಧಿವೇಶನದ ನೆಪ­ದಲ್ಲಿ ಮುಂದಕ್ಕೆ ಹಾಕಲಾಗಿದೆ. ಜನ ಪ್ರತಿನಿಧಿಗಳು, ನೀರಾವರಿ ಸಚಿವರು ಗಮನ ಹರಿಸಿ ಆದಷ್ಟು ಬೇಗ ಸಭೆ ಕರೆದು, ಕರ್ನಾಟಕದ ಪಾಲಿನ ನೀರನ್ನು ಹರಿಬಿಡಲು ತೀರ್ಮಾನ ಕೈಗೊಳ್ಳ­ಬೇಕಿದೆ ಎಂದು ಅವರು ಒತ್ತಾಯಿಸಿದರು.

ಶುಕ್ರವಾರದೊಳಗೆ ನೀರು ಬಿಡಲು ಕ್ರಮ ಕೈಗೊಳ್ಳದಿದ್ದರೆ ಇದೇ 26ರಂದು ಶನಿವಾರ ನೂರಾರು ರೈತರೊಂದಿಗೆ ತುಂಗಭದ್ರಾ ಮಂಡಳಿಯ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಜಿಲ್ಲೆಯ ಹಗರಿ ಮತ್ತು ತುಂಗಭದ್ರಾ ನದಿಯಿಂದ ಮರಳು ಸಾಗಣೆ ಮಾಡಲು ರೈತರ ಟ್ರ್ಯಾಕ್ಟರ್‌ಗಳ ಬಳಕೆ­ಯನ್ನು ನಿಷೇಧಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಕೋರಿದರು.

ಸಿರುಗುಪ್ಪ ಮತ್ತು ಬಳ್ಳಾರಿ ತಾಲ್ಲೂಕು­ಗಳಲ್ಲಿನ ಕೆಲವು ಗ್ರಾಮಗಳ ರೈತರು ಕಾಲುವೆಗೆ ಅಳವಡಿಸಿರುವ ನೀರಾವರಿ ಪಂಪ್‌ಸೆಟ್‌ಗಳನ್ನು ಅಕ್ರಮ ವಿದ್ಯುತ್‌ ಸಂಪರ್ಕದ ಆರೋಪದಲ್ಲಿ ಜೆಸ್ಕಾಂ ಹಾಗೂ ನೀರಾವರಿ ಇಲಾಖೆಯವರು ಜಪ್ತಿ ಮಾಡುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕು. ಸಕ್ರಮವಾಗಿಯೇ ಪಂಪ್‌ಸೆಟ್‌ ಅಳವಡಿಸಿದರೂ ರೈತರ ಜಮೀನಿಗೆ ಅಕ್ರಮ ಪ್ರವೇಶ ಮಾಡುತ್ತಿರುವ ಸಿಬ್ಬಂದಿ ಪಂಪ್‌ಸೆಟ್‌ ಹೊತ್ತೊಯ್ಯುತ್ತಿ­ರುವುದು ಸರಿಯಲ್ಲ ಎಂದರು.

ಕರೂರು ರಾಮನಗೌಡ, ಬಸವ­ರಾಜ­ಗೌಡ, ಗುತ್ತಿಗನೂರು ತಿಪ್ಪೇ­ಸ್ವಾಮಿ, ವೀರೇಶಗೌಡ, ಶಾನವಾಸ­ಪುರ ಶೇಖರಗೌಡ, ಎಚ್‌.ಹೊಸಳ್ಳಿ ದರಪ್ಪ ನಾಯಕ, ರಾಮಸಾಗರ ವೀರೇಶಗೌಡ, ಎಸ್‌. ವಿರೂಪಾಕ್ಷಗೌಡ, ರುದ್ರಮುನಿ ನಾಯಕ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT