ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವತತ್ವ ಮತ್ತು ತ್ರಿವಿಧ ಭಕ್ತರು

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

 ದೇವರ ಅವತಾರಗಳಂತೆ, ಸಮಾಜ ಸುಧಾರಕರ ಸಾವಿನ ಬಳಿಕ ಅವರನ್ನು ದೈವತ್ವಕ್ಕೇರಿಸಿ ಆರಾಧಿಸುವ ಪರಂಪರೆ ಪ್ರಾರಂಭವಾದುದು ದುರದೃಷ್ಟಕರ. ಯಾರು ದೇವರ ಹೆಸರಿನಲ್ಲಿ ನಡೆಯುತ್ತಿದ್ದಂತಹ ಪಶುಬಲಿ, ನರಬಲಿಯಂಥ ಅಮಾನವೀಯ ಆಚರಣೆಗಳ ವಿರುದ್ಧ ಹೋರಾಡಿ ಸಮಾಜ ಸುಧಾರಣೆಗೆ ಮುಂದಾದರೋ, ಅವರ ಹೆಸರಿನಲ್ಲಿ ಸ್ಥಾವರ ತಲೆಯೆತ್ತಿತು. ವೈದಿಕತನ ವಿಜೃಂಭಿಸಿತು. ಅವರನ್ನು ಸಮಾಜವು ವ್ಯಾಪಾರಿ ಸರಕಾಗಿಸಿಕೊಂಡಿತು. ಪ್ರಗತಿಪರವಾದ ವಿಚಾರಗಳಿಂದ ಪ್ರಭಾವಿತರಾಗಬೇಕಾಗಿದ್ದ ಸಮಾಜ ಅವರ ತತ್ವಾದರ್ಶಗಳನ್ನು ಮೂಲೆಗುಂಪು ಮಾಡಿದ್ದು, ಅವರಿಗೆ ಮಾಡುತ್ತಿರುವ ಅಗೌರವ. ಇದರಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಉಳಿದ ದಾರ್ಶನಿಕರನ್ನು ಕಾಣುವ ದೃಷ್ಟಿಯಂತೆ ಬಸವಣ್ಣನವರನ್ನೂ ಭಾವಿಸಲಾಗುತ್ತಿದೆ. ಯಾವುದೇ ಸಮಾಜ ಸುಧಾರಕರನ್ನು ಒಪ್ಪಿಕೊಳ್ಳುವ ಹಂತದಲ್ಲಿ ಮೂರು ಭಾಗವನ್ನು ಮಾಡಬಹುದು.

1. ಬಸವ ತತ್ವದಲ್ಲಿ ಮೂಲಭೂತವಾದ ಹುಡುಕುವವರು: ಇವರ ವಾದಸರಣಿ ಏನೆಂದರೆ, ಬಾಲಕ ಬಸವಣ್ಣ ಲಿಂಗ ತಾರತಮ್ಯವನ್ನು, ಅಸಮಾನತೆಯನ್ನು ಪ್ರಶ್ನಿಸಿದ್ದರಿಂದ ಮನೆಯಿಂದಲೂ, ಸ್ವ-ಜಾತಿಯಿಂದಲೂ ಬಹಿಷ್ಕೃತನಾಗಬೇಕಾಯಿತು. ಈ ಸಂದರ್ಭದಲ್ಲಿ ದಾರಿ ಕಾಣದೆ ವೇದಾಗಮ ಭೂಯಿಷ್ಟವಾಗಿದ್ದ ಶೈವಸಿದ್ಧಾಂತಕ್ಕೆ ಅನುಯಾಯಿ ಆಗಬೇಕಾಯಿತು. ಕೂಡಲಸಂಗಮದಲ್ಲಿ ಜಾತವೇದಮುನಿ (ಸೃಷ್ಟಿಸಿದ್ದು) ಎಂಬುವರಿಂದ ಸಂಸ್ಕೃತ ಪಾಂಡಿತ್ಯ ಕಲಿತ. ನಿಜವಾದ ಗುರು ಸಂಗಮೇಶ್ವರರು. ಅವರಿಂದಲೇ ಬಸವಣ್ಣನಿಗೆ ದೀಕ್ಷೆ ಆಯಿತು. ಬಿಜ್ಜಳನ ಆಸ್ಥಾನದಲ್ಲಿ ಕರಣಿಕ ವೃತ್ತಿ ಆರಂಭಿಸಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತ, ಗದ್ದುಗೆಯ ಕೆಳಗೆ ಅಡಗಿಸಿಡಲಾಗಿದ್ದ ಮುತ್ತುರತ್ನ ತೆರೆದು ತೋರಿದ. ತಾಡವೋಲೆಯನ್ನು ಯಾರಿಗೂ ಓದಲು ಸಾಧ್ಯವಾಗದಿದ್ದಾಗ ಬಸವಣ್ಣ ಅದನ್ನು ಓದಿ ರಾಜಗದ್ದುಗೆಯಡಿ ಇದ್ದ ಅನರ್ಘ್ಯ ಸಂಪತ್ತನ್ನು ತೋರಿಸಿದ್ದರಿಂದ ಬಿಜ್ಜಳ ಬಸವಣ್ಣನನ್ನು ಅರ್ಥಸಚಿವನನ್ನಾಗಿಸುತ್ತಾನೆ. ಅನುಭವ ಮಂಟಪ ರಚಿಸುತ್ತಾನೆ.
ವೇದಾಗಮ ಇತ್ಯಾದಿ ದರ್ಶನ ಗ್ರಂಥಗಳಲ್ಲಿರುವುದನ್ನು ಕನ್ನಡೀಕರಿಸಲಾಯಿತು, ಸಂಸ್ಕೃತ ಭಾಷೆಯಲ್ಲಿದ್ದುದನ್ನು ಬಸವಾದಿ ಶರಣರು ಕನ್ನಡದಲ್ಲಿ ಪ್ರತಿಪಾದಿಸಿದರೆಂದು ಅಪಪ್ರಚಾರ ಮಾಡುತ್ತಾ, ಬಸವತತ್ವದಹಿರಿಮೆಯನ್ನು ಅಲ್ಲಗಳೆಯುತ್ತಾರೆ. ಬಸವಣ್ಣ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದವರು ನಿಜ. ಅದರಲ್ಲಿ ಇರುವುದನ್ನು ಅರಿಯುವುದಕ್ಕಾದರೂ ಕಲಿಯಬೇಕಲ್ಲ? ಅದನ್ನವರು ಕಲಿಯುತ್ತಾರೆ. ಸವರ್ಣೀಯರಿಗೆ ಒಂದು ಕಾನೂನು, ಶೋಷಿತರಿಗೆ ಮತ್ತೊಂದುಕಾನೂನು ಇರುವುದನ್ನು ಬಸವಣ್ಣ  ತಮ್ಮ ವಚನದಲ್ಲಿ ಕಟುವಾಗಿ ಟೀಕಿಸುತ್ತಾರೆ-
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ?
ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ!
ಕೂಡಲಸಂಗಮದೇವಯ್ಯ, ಹೊಲೆಯರ ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.

ಸನಾತನ ವಾದಸರಣಿ ಮುಂದಿಟ್ಟು, ಬಸವಣ್ಣನವರಂಥ ಕ್ರಾಂತಿಕಾರಿಯನ್ನು ಅರ್ಥೈಸುವುದು ಮತ್ತು ವ್ಯಾಖ್ಯಾನಿಸುವುದು ಸಮಂಜಸವಲ್ಲ. ಯಾವ ಕಾರಣಕ್ಕೂ ಮೂಲಭೂತವಾದದೊಂದಿಗೆ ಕ್ರಾಂತಿಕಾರಿಗಳನ್ನು ಅನ್ವಯಿಸಬಾರದು; ಸಮರ್ಥಿಸಬಾರದು.

2. ಬಸವಣ್ಣನವರ ಬಹಿರಂಗ ಭಕ್ತರು: ಬಸವಣ್ಣನವರಂಥ ಪರಿವರ್ತಕರನ್ನು ಸಂಘಟನೆಗೆ ಬಳಸಿಕೊಳ್ಳಲಾಗುತ್ತದೆ. ಅವರ ಜಯಂತಿ ಮತ್ತಿತರ ವಾರ್ಷಿಕ ಸಭೆ-ಸಮಾರಂಭಗಳಲ್ಲಿ ಅವರ ಭಾವಚಿತ್ರವನ್ನು ಆಹ್ವಾನ ಪತ್ರಿಕೆಗಳಲ್ಲಿ, ಮುಖ್ಯ ವೇದಿಕೆಗಳಲ್ಲಿ, ಫ್ಲೆಕ್ಸ್‌ಗಳಲ್ಲಿ ಮುದ್ರಿಸಲಾಗುತ್ತದೆ. ಇನ್ನು ಕೆಲ ಸಂಘಟನೆಗಳು ಬಸವ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸುವುದು, ಹಾರ-ತುರಾಯಿ ಹಾಕುವುದು, ದೇವರುಗಳ ಪೂಜೆಯನ್ನೂ ಮೀರಿಸುವಂತೆ ಪೂಜಿಸುವುದು, ಹಣ್ಣು-ಕಾಯಿ ನೈವೇದ್ಯ, ಊದುಬತ್ತಿ ಕರ್ಪೂರ ಬೆಳಗುವುದು, ನಮಸ್ಕರಿಸುವುದು... ಇತ್ಯಾದಿಗಳಿಗೆ ಸೀಮಿತಗೊಳಿಸಲಾಗುತ್ತದೆ. ಬಸವಣ್ಣನವರು ಭಜನೆಗೆ ಸೀಮಿತ. ಬಸವಪುತ್ಥಳಿ ಮತ್ತು ಭಾವಕ್ಕೆ ಮಾತ್ರ ಭಕ್ತಿಯನ್ನು ತೋರಿಸಲಾಗುತ್ತದೆ. ಇವರು ಬಸವತತ್ವದ ಬಹಿರಂಗ ಆರಾಧಕರು. ಬಸವಣ್ಣನವರನ್ನು ಅತಿಯಾಗಿ ಪ್ರಶಂಸಿಸುವುದು, ಶರಣರ ವಚನಗಳನ್ನು ತಮಗೆ ಆಗದವರ ವಿರುದ್ಧ ಬಳಸುತ್ತಾ, ವಿಕಟ ಸಂತೋಷ ಅನುಭವಿಸುವುದು. ವಚನಗಳು ಸ್ವವಿಮರ್ಶೆಗೆ ಬಳಕೆಯಾಗದೆ ಅನ್ಯರನ್ನು ಟೀಕಿಸುವುದಕ್ಕೆ ಬಳಕೆ ಆದುದೇ ಬಹಳ. ವಚನಗಳಿಂದ ಪ್ರೇರಣೆ ಪಡೆಯುವವರ ಸಂಖ್ಯೆಯೂ ಅತ್ಯಲ್ಪವೆಂದು ಕಾಣುತ್ತದೆ.

3. ಬಸವತತ್ವ ನಿಷ್ಠರು: ಬಸವಾದಿ ಶರಣರ ಬೋಧೆಯನ್ನು ಸಾಧ್ಯವಾದ ಮಟ್ಟಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವವರೂ ಇದ್ದಾರೆ. ಅವರಿಗೆ ಮೂಲ ಪ್ರೇರಣೆಯೆಂದರೆ ಬಸವಾದಿ ಶರಣರ ಬದುಕು. ಶರಣರ ಬದುಕು ಸಾಹಸಮಯ. ಅಲ್ಲಿ ಏಕವ್ಯಕ್ತಿ ಸಾಹಸವಿದೆ; ಅದರೊಟ್ಟಿಗೆ ಬಸವಣ್ಣನವರಂತೆ ಅನೇಕ ವ್ಯಕ್ತಿಗಳನ್ನು ಅನುಭವ ಮಂಟಪದಲ್ಲಿ ಒಗ್ಗೂಡಿಸಿದ ಶರಣರ (ಸಮೂಹ ಸಾಹಸ) ಸಾಹಸಗಾಥೆಗಳು ಇವೆ. ಏಕವ್ಯಕ್ತಿಯು ತನ್ನ ಕಾಯಕವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ, ಅಮಾಯಕ ಹಾಗೂ ಅಸಹಾಯಕರಿಗೆ ನೀಡುವ ದಾಸೋಹಂಭಾವದ ಪರಿಕಲ್ಪನೆಯಿದೆ.

ಬಸವಣ್ಣನವರ ಬದುಕು ನಿಸ್ವಾರ್ಥಮಯ. ತ್ಯಾಗಜೀವನ. ಸ್ತ್ರೀಸಂಕುಲ ಅನುಭವಿಸುತ್ತಿದ್ದ ಸಮಸ್ಯೆಗಳನ್ನು ನಿವಾರಿಸುವುದು, ಅಸಹಾಯಕರ ಯಾತನೆಯನ್ನು ಬಿಡಿಸುವುದು ತನ್ಮೂಲಕ ಕಲ್ಯಾಣರಾಜ್ಯ ಸ್ಥಾಪನೆ. ಕಲ್ಯಾಣದಲ್ಲಿ ಪ್ರತಿಯೊಬ್ಬರೂ ಕಾಯಕ ನೆರವೇರಿಸುತ್ತಿದ್ದುದರಿಂದ ನೀಡುವವರಿದ್ದರು; ಬೇಡುವವರು ಇರಲಿಲ್ಲ. ಇದುವೇ ಶರಣರ ಕಲ್ಯಾಣ ರಾಜ್ಯದ ಪರಿಕಲ್ಪನೆ.
ರಾಮರಾಜ್ಯದಲ್ಲಿ ದುಡಿಯಲಾರದವರು; ಕಲ್ಯಾಣರಾಜ್ಯದಲ್ಲಿ ಕಾಯಕವಂತರು. ಬೇಡದೇ ಇರುವ ಸ್ಥಿತಿ ಅಲ್ಲಿ ಇದ್ದುದರಿಂದ ಸುಖೀರಾಜ್ಯ. ದುಡಿಮೆ ಸ್ವಂತದ್ದು, ಅದರ ಫಲವು ಅಮಾಯಕರಿಗೆ ಸೇರಿದ್ದು. ಇದು ನಿಜವಾದ ಸುಖೀ ರಾಜ್ಯದ ಕಲ್ಪನೆ. ದುಡಿಯದವರಿಂದ ಸುಖೀರಾಜ್ಯ ಸ್ಥಾಪನೆ ಸಾಧ್ಯವಿಲ್ಲ. ವ್ಯಕ್ತಿಯು ತಾನೂ ದುಡಿಯುತ್ತ, ಅಸಹಾಯಕರನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ಮತ್ತು ಸಮರ್ಥರನ್ನಾಗಿಸುವ ವಚನ ಚಳವಳಿಯ ಪ್ರಯತ್ನ ಶ್ಲಾಘನೀಯ.

ಇಂದು ದುಡಿಮೆಯು ಸಾರ್ವತ್ರಿಕ; ಅದರ ಫಲವು ವೈಯಕ್ತಿಕ. ಉಲ್ಟಾಪಲ್ಟಾ. ಮರುಳಶಂಕರ ದೇವನದು ಗುಪ್ತ ಭಕ್ತಿ. ಸತ್ಯಕ್ಕ ಮೊದಲಾದ ಶರಣರು ಕಾಯಕದ ಮೂಲಕವೇ ಆದರ್ಶವನ್ನು ಮೆರೆದವರು. ಇಂದು ಜನರು ವಿವಿಧ ಕೆಲಸಗಳನ್ನು ಮಾಡುತ್ತಾರೆ. ಅದರ ಮುಖ್ಯ ಗುರಿ ಹಣ ಸಂಪಾದನೆ; ಸ್ವಾರ್ಥ ಸಾಧನೆ. ಇದರಲ್ಲಿ ಮಗ್ನವಾದ ಸ್ವಾರ್ಥ ಸಮಾಜ. ಕೊನೆಯಪಕ್ಷ ಸಾಮಾಜಿಕ ಸಮಾನತೆ, ಮಾನವೀಯತೆ ಮತ್ತು ವೈಚಾರಿಕತೆ ಇಂಥ ತತ್ತ್ವಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅನುಸರಿ ಸಿದರೆ, ಒಂದು ಪ್ರಜ್ಞಾವಂತ ಸಮಾಜ ರಚನೆ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT