ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸಿನಲ್ಲಿ ಬೆಂಕಿ: 6 ಜನ ಸಜೀವ ದಹನ

12ಕ್ಕೂ ಹೆಚ್ಚು ಮಂದಿಗೆ ಸುಟ್ಟಗಾಯ
Last Updated 16 ಏಪ್ರಿಲ್ 2014, 11:33 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್ಎಸ್): ಕರ್ನಾಟಕದಲ್ಲಿ ಹವಾ ನಿಯಂತ್ರಿತ (ಎಸಿ) ಖಾಸಗಿ ಬಸ್ಸೊಂದಕ್ಕೆ ಬುಧವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಕನಿಷ್ಠ 6 ಮಂದಿ ಪ್ರಯಾಣಿಕರು ಸಿಹಿ ನಿದ್ದೆಯಲ್ಲಿದ್ದಾಗಲೇ ಸಜೀವ ದಹನಗೊಂಡಿದ್ದು, ಹನ್ನೆರಡಕ್ಕೂ  ಹೆಚ್ಚು ಮಂದಿ ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ.

ರಾಜಧಾನಿಯಿಂದ ಸುಮಾರು 160 ಕಿ.ಮೀ. ದೂರದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಈ ದುರಂತ ಸಂಭವಿಸಿದೆ.

ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಸುಕಿನ 3 ಗಂಟೆ ವೇಳೆಗೆ ಹಳ್ಳವೊಂದಕ್ಕೆ ಉರುಳಿದಾಗ ಬೆಂಕಿ ಹೊತ್ತಿಕೊಂಡದ್ದು ಈ ಅಪಘಾತಕ್ಕೆ ಕಾರಣವಾಯಿತು ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಐಎಎನ್ ಎಸ್ ಗೆ ತಿಳಿಸಿದರು.

ಗಾಯಾಳುಗಳ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ. ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿರುವ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಬಸ್ಸಿನಿಂದ ಈವರೆಗೆ ಸುಟ್ಟು ಹೋಗಿರುವ 6 ಶವಗಳನ್ನು ಹೊರ ತೆಗೆಯಲಾಗಿದೆ. ಬಸ್ಸಿನ ಅವಶೇಷಗಳ ಅಡಿ ಇರಬಹುದಾದ ಇತರರ ಶವ ಪತ್ತೆಗಾಗಿ ರಕ್ಷಣಾ ತಂಡ ಕಾರ್ಯ ನಿರತವಾಗಿದೆ. ಬಸ್ಸಿನಲ್ಲಿ ಸುಮಾರು 30 ಪ್ರಯಾಣಿಕರಿದ್ದರು. 20 ಮಂದಿ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಕುಮಾರ್ ಹೇಳಿದರು.

ಬಸ್ಸಿನ ಚಾಲಕ ಮತ್ತು ಆಪರೇಟರ್ ವಿರುದ್ಧ ಪೊಲೀಸರು ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿಗೆ ಕಾರಣವೇನೆಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಚಾಲಕನ ಆಸನದ ಬಳಿ ಕಾಣಿಸಿಕೊಂಡಿತ್ತೆನ್ನಲಾದ ಬೆಂಕಿ ಬಹುಬೇಗನೇ ಇಡೀ ಬಸ್ಸನ್ನು ವ್ಯಾಪಿಸಿಕೊಂಡಿತ್ತು ಎಂದು ಹೇಳಲಾಗಿದೆ. ಬಸ್ಸು ದುರಂತಕ್ಕೆ ಈಡಾದಾಗ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು ಎಂದು ಕುಮಾರ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT