ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ಕಟ್ಟಡ ಸಕ್ರಮಕ್ಕೆ ಅನರ್ಹ!

Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಕಟ್ಟಡ ನಿರ್ಮಾ­ಣದಲ್ಲಿ ಗರಿಷ್ಠ ಶೇ 50ರಷ್ಟು ನಿಯಮ ಉಲ್ಲಂಘಿಸಿದ್ದರೂ ಅದನ್ನು ಸಕ್ರಮಗೊಳಿ­ಸುವುದಾಗಿ ನಗರಾಭಿವೃದ್ಧಿ ಇಲಾಖೆ ಹೇಳಿದೆ. ಆದರೆ, ‘ಅಕ್ರಮ ಸಕ್ರಮ’ ನಿಯ­ಮಗಳ ಪ್ರಕಾರ ಸಕ್ರಮಕ್ಕೆ ಅರ್ಹವಾಗುವ ಕಟ್ಟಡಗಳು ಎಷ್ಟು?
ನಿಖರವಾಗಿ ಇಷ್ಟೇ ಎಂದು ಹೇಳಲು ಇಲಾಖೆ ಬಳಿ ಮಾಹಿತಿ ಇಲ್ಲ. ಈ ಸಂಬಂಧ ಸಮೀಕ್ಷೆ ಕೂಡ ಆಗಿಲ್ಲ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ನಗರ,  ಪಟ್ಟಣ ಪ್ರದೇಶಗಳಲ್ಲಿ ಶೇ 50ಕ್ಕಿಂತ ಕಡಿಮೆ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳು ಸಿಗುವುದು ಅಪರೂಪ ಎನ್ನುತ್ತವೆ ನಗರಾಭಿವೃದ್ಧಿ ಇಲಾಖೆ ಮೂಲಗಳು.

ಬೆಂಗಳೂರು ನಗರದಲ್ಲಿನ 18 ಲಕ್ಷ ವಸತಿ ಕಟ್ಟಡಗಳ ಪೈಕಿ ಶೇ 95ರಷ್ಟು ಕಟ್ಟಡಗಳನ್ನು ನಿಯಮ ಉಲ್ಲಂಘಿಸಿಯೇ ನಿರ್ಮಿಸಲಾಗಿದೆ. ಅದೂ ಶೇ 50ಕ್ಕಿಂತ ಹೆಚ್ಚು ಪ್ರಮಾಣದ ಉಲ್ಲಂಘನೆ ಆಗಿ­ರುವ ಕಾರಣ ಬಹುತೇಕ ಆಸ್ತಿಗಳು ಸಕ್ರಮದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ­ಯೊಬ್ಬರು ಹೇಳಿದರು.

‘ಬೆಂಗಳೂರು ನಗರದಲ್ಲಿ ನಿವೇಶನಕ್ಕೆ ಸಿಕ್ಕಾಪಟ್ಟೆ ಬೆಲೆ. ಈ ಕಾರಣದಿಂದ ಕಡಿಮೆ ವಿಸ್ತೀರ್ಣದ (20X30, 30X40 ಅಡಿ) ನಿವೇಶನಗಳಲ್ಲಿಯೇ ಹೆಚ್ಚು ಕಟ್ಟಡಗಳಿವೆ. ನಿವೇಶನ ಚಿಕ್ಕದಿರುವ ಕಾರಣ ಅದ­ರಲ್ಲಿ ನಿಯಮ ಪ್ರಕಾರ ಸುತ್ತ ಸ್ಥಳ (ಸೆಟ್‌ಬ್ಯಾಕ್‌) ಬಿಟ್ಟು  ಕಟ್ಟಿದರೆ ವಾಸಕ್ಕೆ ಸಿಗು­ವುದು ಕಡಿಮೆ ಜಾಗ ಎನ್ನುವ ಅಭಿಪ್ರಾಯ ಬಹುತೇಕರದು. ಹೀಗಾಗಿ  ನಿಗದಿತ ಸೆಟ್‌ಬ್ಯಾಕ್‌ ಬಿಟ್ಟವರು ಬಹಳ ಕಡಿಮೆ’ ಎನ್ನುವುದು ಅವರ ವಿಶ್ಲೇಷಣೆ.

ಇದು ಉಲ್ಲಂಘನೆ: ‘ಬೆಳಗಾವಿಯಲ್ಲಿ  30X40 ಅಡಿ ನಿವೇಶನದಲ್ಲಿ ಮನೆ ಸುತ್ತಲೂ ಕನಿಷ್ಠ 3 ಅಡಿ 3 ಇಂಚು ಜಾಗ ಬಿಡಬೇಕು. ಇದು ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮ. ಒಂದು ವೇಳೆ ಕೇವಲ ಎರಡು ಅಡಿ ಜಾಗ ಬಿಟ್ಟಿದ್ದರೂ ಅದನ್ನು ಸಕ್ರಮಕ್ಕೆ ಪರಿಗಣಿಸಬಹುದು.  ಆದರೆ ಒಂದೂವರೆ ಅಡಿ ಜಾಗ ಬಿಟ್ಟು ಕಟ್ಟಿದರೆ ಸಕ್ರಮ ಮಾಡಲು ಅಲ್ಲಿ ಅವಕಾಶ ಇಲ್ಲ. ಕಾರಣ ಅವು ಶೇ 50ಕ್ಕಿಂತ ಹೆಚ್ಚು ಉಲ್ಲಂಘನೆಯಾದಂತಾಗುತ್ತದೆ’ ಎಂದು ಉದಾಹರಣೆ ನೀಡುತ್ತಾರೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ನಿರ್ದೇಶಕ ಎಸ್‌.ಬಿ.ಹೊನ್ನೂರ್‌.

ಶೇ 100ಕ್ಕಿಂತ ಹೆಚ್ಚು ಉಲ್ಲಂಘನೆ
ನಗರ ಪ್ರದೇಶಗಳಲ್ಲಿ ಶೇ50ರೊಳಗಿನ ಉಲ್ಲಂಘನೆಗಳು ಕಡಿಮೆ. ಬಹುತೇಕ ನಿರ್ಮಾಣಗಳಲ್ಲಿ ಶೇ 100ಕ್ಕಿಂತ ಹೆಚ್ಚು ಉಲ್ಲಂಘನೆಗಳು ಇದ್ದು, ಅವುಗಳ ಸಕ್ರಮಕ್ಕೆ ಅವಕಾಶ ಇಲ್ಲ ಎನ್ನುತ್ತವೆ ಮೂಲಗಳು.

ಹೀಗಾಗಿ ಅಕ್ರಮ– ಸಕ್ರಮ ಯೋಜನೆಯ ಭವಿಷ್ಯವೇ ಅತಂತ್ರವಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.
ಒಂದು ವೇಳೆ ಸಕ್ರಮ ಮಾಡಿಸಿಕೊಳ್ಳದಿದ್ದರೆ ವಿದ್ಯುತ್‌ ಮತ್ತು ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ನಿಯಮಗಳಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲದೆ, ನಿಯಮ ಮೀರಿ ಕಟ್ಟಿದ ಕಟ್ಟಡಗಳನ್ನು ನೆಲಸಮ ಮಾಡುವುದಕ್ಕೂ ಅವಕಾಶವಿದೆ.

‘ಶೇ 95ರಷ್ಟು ಕಟ್ಟಡಗಳನ್ನು ಶೇ 50ಕ್ಕಿಂತ ಹೆಚ್ಚು ಉಲ್ಲಂಘನೆ ಮಾಡಿ ಕಟ್ಟಿರುವ ಕಾರಣ ಅಷ್ಟೂ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆಯೇ? ವಿದ್ಯುತ್‌, ನೀರು ಸಂಪರ್ಕ ಕಡಿತ ಮಾಡಲಾಗುತ್ತದೆಯೇ? ಇದು ಜಾರಿ ಯೋಗ್ಯ ಯೋಜನೆಯೇ’ ಎಂದೂ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ಸೆಟ್‌ಬ್ಯಾಕ್‌ ಎಷ್ಟಿರಬೇಕು
ಬೆಂಗಳೂರು ಮತ್ತು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಗಳ ನಿಯಮಗಳ ಪ್ರಕಾರ ವಿವಿಧ ಅಳತೆಯ ನಿವೇಶನಗಳಲ್ಲಿ ಮನೆ ಕಟ್ಟುವಾಗ ನಕ್ಷೆಯಲ್ಲಿ ಇರುವಂತೆ ಸೆಟ್‌ಬ್ಯಾಕ್‌ ಬಿಡಬೇಕು. ಇಲ್ಲದಿದ್ದರೆ ಅದನ್ನು ಅಕ್ರಮ ಎಂದೇ ಪರಿಗಣಿಸಲಾಗುತ್ತದೆ. ಗರಿಷ್ಠ ಶೇ 50ರವರೆಗಿನ  ಉಲ್ಲಂಘನೆ ಇದ್ದರೆ ಮಾತ್ರ ಅದನ್ನು ಸಕ್ರಮಗೊಳಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT