ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹೂಪಯೋಗಿ ಶುಂಠಿ

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ನಮ್ಮ ನಿತ್ಯದ ಅಡುಗೆಯಲ್ಲಿ ಬಳಸಲ್ಪಡುವ ಶುಂಠಿ ಎಲ್ಲರಿಗೂ ಚಿರಪರಿಚಿತವಾದುದು. ಇದಕ್ಕೆ ವಿಶ್ವಭೇಷಜ ಎನ್ನುತ್ತಾರೆ. ಅಂದರೆ ವಿಶ್ವದ ಎಲ್ಲೆಡೆ ಸಿಗುವ ಅತ್ಯತ್ತಮ ಔಷಧವೆಂದರ್ಥ. ಹಲವಾರು ಅಡುಗೆಗಳಲ್ಲಿ ರುಚಿ, ಸುಗಂಧ, ಜೀರ್ಣಕಾರಿಯಾಗಿಯೂ ಬಳಸುವ ಇದನ್ನು ಬಾಯಿಯಲ್ಲಿ ಹಾಕಿದರೆ ಜಠರದ ಚಲನೆ ವರ್ಧನೆಯಾಗಿ ಅದರಿಂದ ಜಠರದ ಸ್ರಾವ ಹೆಚ್ಚಾಗಿ ಆಹಾರ ಜೀರ್ಣವಾಗುತ್ತದೆ. ಆದ್ದರಿಂದಲೇ ಆಯುರ್ವೇದದಲ್ಲಿ ‘ಭೋಜನಾಗ್ರೆ ಸದಾ ಪಥ್ಯಂ ಲವಣಾರ್ದ್ರಕ ಭಕ್ಷಣಂ’ ಎಂಬ ಸೂಕ್ತಿಯಿದೆ. ಅಂದರೆ ‘ಊಟಕ್ಕೆ ಮುಂಚೆ ಉಪ್ಪಿನೊಂದಿಗೆ ಶುಂಠಿ ಸೇವನೆ ಆರೋಗ್ಯಕರ’.

ಒಂದು ತುಂಡು ನೆಡುವುದರಿಂದ ಕುಂಡಗಳಲ್ಲಿಯೂ ಬೆಳಸಬಹುದಾದ ಇದಕ್ಕೆ ಹೆಚ್ಚು ನೀರಿನ ಆಸರೆ ಬೇಕು. ಎಲೆಗಳು ಬಲಿತು ಹಳದಿಯಾಗಿ ಒಣಗತೊಡಗಿದಾಗ ಒಳಗೆ ಗಡ್ಡೆ ಬಲಿತಿದೆ ಎಂದರ್ಥ. ಅಜೀರ್ಣ, ವಾಯು, ಜಠರಾಂತ್ರದಲ್ಲಿ ಸೂಕ್ಷ್ಮಾಣು, ಸೋಂಕು, ವಾಕರಿಕೆಗಳಿಂದ ರಕ್ಷಣೆ ನೀಡುತ್ತದೆ. ಅನೇಕ ಔಷಧೀಯ ಗುಣ ಹೊಂದಿರುವ ಇದಕ್ಕೆ ನಾಗರ, ಮಹೌಷಧ ಮುಂತಾದ ಹೆಸರುಗಳಿವೆ.

* ಶುಂಠಿಯನ್ನು ತೇಯ್ದು ಬರುವ ಗಂಧವನ್ನು ಹಣೆಗೆ ಹಚ್ಚುವುದರಿಂದ ಶೀತ, ಶೀತದಿಂದ ಬರುವ ತಲೆನೋವು ಕಡಿಮೆಯಾಗುತ್ತದೆ.

* ಒಂದು ಚಮಚ ಒಣಶುಂಠಿ ಪುಡಿಗೆ ಒಂದು ಲೋಟ ನೀರು ಹಾಕಿ ಅರ್ಧಕ್ಕಿಳಿಸಿ, ಶೋಧಿಸಿ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಬಿಸಿಬಿಸಿಯಾಗಿ ಕುಡಿದರೆ ನೆಗಡಿ, ಶೀತ, ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ.

* ಒಂದು ಚಮಚ ಜೇನು, 2 ಚಮಚ ತುಳಸಿ ರಸ, ಅರ್ಧ ಚಮಚ ಶುಂಠಿರಸ ಮಿಶ್ರ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಫ ಕಡಿಮೆಯಾಗುತ್ತದೆ.

* ಚೂರು ಹಸಿ ಶುಂಠಿಯನ್ನು ಕಲ್ಲುಸಕ್ಕರೆ ಅಥವಾ ಬೆಲ್ಲದೊಂದಿಗೆ ತಿಂದರೆ ಹೊಟ್ಟೆಯುಬ್ಬರ ಕಡಿಮೆಯಾಗಿ ಹಸಿವುಂಟಾಗುತ್ತದೆ, ನಾಲಿಗೆ ರುಚಿ ಹೆಚ್ಚಾಗುತ್ತದೆ.

* 1 ತುಂಡು ಒಣಶುಂಠಿ ಮತ್ತು 1 ಚಮಚ ಜೀರಿಗೆ ಪುಡಿಮಾಡಿ 4 ಲೋಟ ನೀರಿಗೆ ಹಾಕಿ ಕುದಿಸಿ ಶೋಧಿಸಬೇಕು, ಈ ಕಷಾಯವನ್ನು ಆಗಾಗ ಒಂದೆರಡು ಚಮಚ ಸೇವಿಸುವುದರಿಂದ ಹೊಟ್ಟೆಯುಬ್ಬರ, ಅಜೀರ್ಣ ನಿವಾರಣೆಯಾಗುತ್ತದೆ.

* ಶುಂಠಿ ಮತ್ತು ಬೆಲ್ಲದ ಮಿಶ್ರಣ ರೋಗ ನಿರೋಧಕ, ವಾಯುನಾಶಕ, ಜೀರ್ಣಕಾರಿ. ಜೊತೆಗೆ ತುಪ್ಪ ಸೇರಿಸಿ ಕೊಡುವುದರಿಂದ ಬಾಣಂತಿಯರಿಗೆ ಬಹಳ ಒಳ್ಳೆಯದು.

* ಒಂದು ಲೋಟ ಹಾಲು, ಒಂದು ಲೋಟ ನೀರಿಗೆ ಅರ್ಧ ಚಮಚ ಶುಂಠಿ ಚೂರ್ಣವನ್ನು ಹಾಕಿ, ಹಾಲು ಮಾತ್ರ ಉಳಿಯುವಂತೆ ಕುದಿಸಿ ಕಾಲು ಚಮಚ ಅರಿಶಿನ ಪುಡಿ, ಬೆಲ್ಲ ಸೇರಿಸಿ ಕುಡಿದರೆ ನೆಗಡಿ, ಗಂಟಲು ನೋವು, ಕೆಮ್ಮು ಕಡಿಮೆಯಾಗುತ್ತದೆ. ಅರ್ಧ ಟೀ ಚಮಚ ಶುಂಠಿರಸ, 1 ಚಮಚ ನಿಂಬೆರಸ, ಪುದಿನರಸ, ಜೇನುತುಪ್ಪ ಸೇರಿಸಿ ಮೂರು ಭಾಗ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅಜೀರ್ಣ, ಕೆಮ್ಮು ನಿವಾರಣೆಯಾಗುತ್ತದೆ.

* ಒಂದು ತುಂಡು ಹಸಿಶುಂಠಿಯನ್ನು 1 ಕಪ್ ನೀರಿನಲ್ಲಿ 15 ನಿಮಿಷ ಕುದಿಸಿ, ಸಕ್ಕರೆ ಹಾಕಿ ದಿನಕ್ಕೆ ಮೂರು ಬಾರಿ ಆಹಾರದ ನಂತರ ಸೇವಿಸಿದರೆ ಕಷ್ಟಕರ ಋತುಸ್ರಾವ ನಿವಾರಣೆಯಾಗುತ್ತದೆ.

* ಒಂದು ತುಂಡು ಶುಂಠಿ, 1 ಲವಂಗ ಚೂರು ಉಪ್ಪಿನೊಂದಿಗೆ ಬಾಯಲ್ಲಿಟ್ಟು ರಸ ಸೇವಿಸುತ್ತಿದ್ದರೆ ತಲೆನೋವು ಶಮನವಾಗುತ್ತದೆ.

* ಒಣಶುಂಠಿ ಚೂರ್ಣವನ್ನು ಬೆಲ್ಲದೊಂದಿಗೆ ಸೇವಿಸಿದರೆ ಅಜೀರ್ಣದಿಂದ ಉಂಟಾದ ಭೇದಿಗೆ ಉತ್ತಮ ಪರಿಣಾಮ ನೀಡುತ್ತದೆ.
ಸೀತಾ ಎಸ್. ನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT