ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯಕ್ಕೆ ಹೊಸ ಶಕ್ತಿ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಉಭಯ ರಾಷ್ಟ್ರಗಳ ಬಾಂಧವ್ಯಕ್ಕೆ ಹೊಸ ಸಾಧ್ಯತೆಗಳನ್ನು  ತೆರೆದಿದೆ.  28 ವರ್ಷಗಳ ದೀರ್ಘ ಅಂತರದ ನಂತರ  ಆಸ್ಟ್ರೇಲಿಯಾಗೆ ಭಾರತದ ಪ್ರಧಾನಿ­­ಯೊಬ್ಬರು ಭೇಟಿ ನೀಡಿದ್ದಾರೆ ಎಂಬುದು ಇಲ್ಲಿ ಮುಖ್ಯ.  ಬಾಂಧ­ವ್ಯದ ಬಲವರ್ಧನೆ, ಉಭಯ ರಾಷ್ಟ್ರಗಳಿಗೂ  ಪ್ರಸ್ತುತ ಸಂದರ್ಭದಲ್ಲಿ ಪ್ರಯೋ­ಜನಕಾರಿ.  ಆಸ್ಟ್ರೇಲಿಯಾದ ನೈಸರ್ಗಿಕ ಸಂಪನ್ಮೂಲದಲ್ಲಿ   ಭಾರತಕ್ಕೆ ಆಸಕ್ತಿ ಇದೆ.

ಕಲ್ಲಿದ್ದಲಿನ ಮುಖ್ಯ ಮೂಲವಾಗಿ ಆಸ್ಟ್ರೇಲಿಯಾ ಉದಯ­ವಾಗುತ್ತಿದೆ ಎಂಬುದನ್ನು ಮರೆಯಲಾಗದು. ಭಾರತದ ವಿದ್ಯುತ್ ಬೇಡಿಕೆ ಪೂರೈಕೆಗೆ ಕಲ್ಲಿದ್ದಲು ಅವಶ್ಯ. ಹಾಗೆಯೇ ಭಾರತದಂತಹ ದೊಡ್ಡ  ಮಾರು­ಕಟ್ಟೆ  ಆಸ್ಟ್ರೇಲಿಯಾಗೆ ಪ್ರಮುಖ ಆಕರ್ಷಣೆ. ಬ್ರಿಸ್ಬೇನ್‌ನಲ್ಲಿ ನಡೆದ ಜಿ 20 ಶೃಂಗ­ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿಯವರು ಸಿಡ್ನಿ, ಕ್ಯಾನ್‌ಬೆರಾ­ಗಳಿಗೂ ನೀಡಿದ  ಭೇಟಿ ಮಹತ್ವದ್ದು. ಆಸ್ಟ್ರೇಲಿಯಾದಲ್ಲಿ ಸುಮಾರು ಮೂರು ಲಕ್ಷ ಭಾರ­ತೀಯರಿದ್ದಾರೆ.

ಸಿಡ್ನಿಯಲ್ಲಿ ಅನಿವಾಸಿ ಭಾರತೀಯರ­ನ್ನು­ದ್ದೇಶಿಸಿ ಮೋದಿ­ಯವರು ಮಾಡಿದ ಭಾಷಣ ಉತ್ಸಾಹದ ಅಲೆಗಳನ್ನಂತೂ ಎಬ್ಬಿಸಿದೆ. ಭಾರತದಲ್ಲಿ ಹಣಹೂಡಿಕೆ ಹೆಚ್ಚಳಕ್ಕೆ ಕರೆ ನೀಡಿರುವ ಮೋದಿ ಇದಕ್ಕಾಗಿ ಅಗತ್ಯ ಸೌಕರ್ಯಗಳನ್ನು ನೀಡುವ ಭರವಸೆಗಳನ್ನು ನೀಡಿದ್ದಾರೆ. 2016­ರೊಳಗೆ ಭಾರತ– ಆಸ್ಟ್ರೇಲಿಯಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಅಂಕಿತ ಹಾಕುವ ಪ್ರಯತ್ನಗಳು ನಡೆದಿವೆ.  ಇಂತಹ ಸನ್ನಿವೇಶ­ದಲ್ಲಿ ಉಭಯ ದೇಶಗಳ ಬಾಂಧವ್ಯವರ್ಧನೆಗೆ ಪ್ರಧಾನಿ ಭೇಟಿ ಸಹಕಾರಿ­ಯಾಗುವಂತಹದ್ದು. 

ಸದ್ಯಕ್ಕೆ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಹೆಚ್ಚಿನ ಮಟ್ಟದಲ್ಲಿಲ್ಲ. ಅದ­ರಲ್ಲೂ ಆಸ್ಟ್ರೇಲಿಯಾ ಜೊತೆ ಚೀನಾ ಹೊಂದಿರುವ ದ್ವಿಪಕ್ಷೀಯ ವ್ಯಾಪಾರ ವಹಿವಾಟಿಗೆ ಹೋಲಿಸಿದಲ್ಲಿ ಇದು ಏನೇನೂ ಅಲ್ಲ.  ಈ ಕ್ಷೇತ್ರದಲ್ಲಿ ಇರುವ  ಸಾಧ್ಯತೆಗಳನ್ನು ಭಾರತ ಪೂರ್ಣಪ್ರಮಾಣದಲ್ಲಿ ಬಳಸಿ­ಕೊಂಡಿಲ್ಲ ಎಂಬುದು ನಿಜ. ಹೀಗಾಗಿ ಈ ನಿಟ್ಟಿನಲ್ಲಿ ಆರ್ಥಿಕ ಸಹಕಾರ ವೃದ್ಧಿಗೆ  ಉಭಯ ದೇಶಗಳು ಮುಂದಾಗಿರುವುದು ಸಕಾರಾತ್ಮಕ ಬೆಳವಣಿಗೆ. ಆಸ್ಟ್ರೇಲಿಯಾ ಜೊತೆಗಿನ ನಾಗ­ರಿಕ ಪರಮಾಣು ಸಹಕಾರ ಒಪ್ಪಂದವೂ ಇನ್ನೂ ಅಂತಿಮವಾಗಿಲ್ಲ.  ಈ  ಒಪ್ಪಂದ ಜಾರಿಯಾದಲ್ಲಿ ಆಸ್ಟ್ರೇಲಿಯಾವು ಭಾರತಕ್ಕೆ ಯುರೇನಿಯಂ ರಫ್ತು ಮಾಡಲಿದೆ.    

ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾದ ಸಂಸತ್ ಉದ್ದೇಶಿಸಿ ಮೋದಿ ಮಾತ­ನಾಡಿ­ದ್ದಾರೆ.  ಮೋದಿ ಭೇಟಿಗೆ ಮುಂಚೆಯೇ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಆಸ್ಟ್ರೇಲಿಯಾ ಜೊತೆ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.  ಜೊತೆಗೆ ಆಯಕಟ್ಟಿನ ಸಹಕಾರ ಹೆಚ್ಚಳಕ್ಕೆ  ಉಭಯ ದೇಶಗಳು ಬದ್ಧವಾಗಿವೆ. ಇಂತಹ ಸನ್ನಿ­ವೇಶ­ದಲ್ಲಿ ಭಾರತ– ಆಸ್ಟ್ರೇಲಿಯಾ ಸೇನಾ ಸಂಬಂಧ ಗಟ್ಟಿಗೊಳಿಸುವ ಆಶಯ­ದೊಂದಿಗೆ ಭದ್ರತಾ ಸಹಕಾರಕ್ಕೆ ಅಡಿಪಾಯ ಹಾಕಿರುವುದು ಮಹತ್ವದ ಹೆಜ್ಜೆ.

ಆಯಕಟ್ಟಿನ ಪಾಲುದಾರಿಕೆಗಾಗಿ ಉಭಯ ರಾಷ್ಟ್ರಗಳು ಒಪ್ಪಿ ಸಹಿ ಹಾಕಿ­ರುವ  ‘ಭದ್ರತಾ ಸಹಕಾರದ ಚೌಕಟ್ಟಿನಲ್ಲಿ’  ರಕ್ಷಣೆ, ಸೈಬರ್ ಭದ್ರತೆ ಇತ್ಯಾದಿ ಸೇರಿವೆ. ಅಲ್ಲದೆ ಉಭಯ ರಾಷ್ಟ್ರಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರು, ಹಿರಿಯ ರಾಜತಾಂತ್ರಿಕರು ಮತ್ತು ಸೇನಾ ಮುಖ್ಯಸ್ಥರ ವಾರ್ಷಿಕ ಸಭೆಗಳನ್ನು ನಡೆಸುವ ಯೋಜನೆಗಳಿವೆ.  ಏಷ್ಯಾ– ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದ ಆಯಕಟ್ಟಿನ ನೆಲೆಯಲ್ಲಿದೆ ಆಸ್ಟ್ರೇಲಿಯಾ. ಇದರ ಮಹತ್ವ­ವನ್ನು ಗ್ರಹಿಸುವುದು ಮುಖ್ಯ. ಹೀಗೆಂದೇ ರಾಷ್ಟ್ರೀಯ ಆದ್ಯತೆಯ ಎಲ್ಲಾ ಕ್ಷೇತ್ರ­­ಗಳಲ್ಲಿ ಆಸ್ಟ್ರೇಲಿಯಾ  ಪ್ರಮುಖ ಪಾಲುದಾರ ರಾಷ್ಟ್ರವಾಗಲಿದೆ ಎಂಬ ಮೋದಿಯವರ ಮಾತು ಮುಖ್ಯವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT