ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯದ ಹೊಸ ಅಧ್ಯಾಯ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಮ್ಯುನಿಸ್ಟ್‌ ರಾಷ್ಟ್ರ ಕ್ಯೂಬಾ ಜೊತೆಗೆ ಸುಮಾರು  53 ವರ್ಷಗಳ ಹಗೆತನ ಅಂತ್ಯಗೊಳಿಸಲು ಅಮೆರಿಕ ಮುಂದಾಗಿದೆ. ಕ್ಯೂಬಾ ರಾಜಧಾನಿ ಹವಾನಾದಲ್ಲಿ ಹೊಸದಾಗಿ ಅಮೆರಿಕ ರಾಯಭಾರ ಕಚೇರಿ ತೆರೆಯಲಾಗುತ್ತಿದೆ. ರಾಜತಾಂತ್ರಿಕ ಸಂಬಂಧಗಳ ಮರುಸ್ಥಾಪನೆಯ ಈ ಯತ್ನ  ಅಮೆರಿಕ  – ಕ್ಯೂಬಾ ಬಾಂಧವ್ಯದಲ್ಲಿ  ಐತಿಹಾಸಿಕ ಮೈಲುಗಲ್ಲು.

1959ರಲ್ಲಿ  ಕ್ಯೂಬಾದಲ್ಲಿದ್ದ ಅಮೆರಿಕ ಬೆಂಬಲಿತ  ಸರ್ಕಾರವನ್ನು  ಫಿಡೆಲ್‌ ಕ್ಯಾಸ್ಟ್ರೊ ಹಾಗೂ ಅವರ ಗೆರಿಲ್ಲಾಪಡೆ ಕೆಳಗಿಳಿಸಿತ್ತು. ಜತೆಗೆ,  ಕ್ಯೂಬಾ­ದಲ್ಲಿದ್ದ ಅಮೆರಿಕ ಉದ್ದಿಮೆಗಳನ್ನು 1960ರಲ್ಲಿ  ರಾಷ್ಟ್ರೀಕರಣ­ಗೊಳಿಸ­ಲಾಗಿತ್ತು.  ಆಗಿನಿಂದಲೂ ಕ್ಯೂಬಾ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದು­ಕೊಂಡಿದ್ದ  ಅಮೆರಿಕ, ಕ್ಯೂಬಾದ ಮೇಲೆ ದಿಗ್ಬಂಧನಗಳನ್ನು ಹೇರಿತ್ತು.

ದಿಗ್ಬಂಧನಗಳನ್ನು ವ್ಯವಸ್ಥಿತವಾಗಿ ಬಿಗಿಗೊಳಿಸುತ್ತಲೇ  ಭಯೋತ್ಪಾದನೆಗೆ ಪ್ರಾಯೋಜನೆ ನೀಡುವ ರಾಷ್ಟ್ರ ಎಂಬಂತೆ ಕ್ಯೂಬಾವನ್ನು ಬಿಂಬಿಸುತ್ತಾ ಅಮೆರಿಕದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳೂ ಕ್ಯೂಬಾ ಮೇಲೆ ಇನ್ನಿಲ್ಲದ ಒತ್ತಡಗಳನ್ನು ಹೇರಿದ್ದವು. ಆದರೆ ಪುಟ್ಟ  ರಾಷ್ಟ್ರ ಕ್ಯೂಬಾ, ಅದರ ಕಮ್ಯುನಿಸ್ಟ್ ಸರ್ಕಾರ ಹಾಗೂ ಕ್ಯಾಸ್ಟ್ರೊ, ಈ ಎಲ್ಲಾ ಒತ್ತಡಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾದದ್ದಲ್ಲದೆ ವಾಷಿಂಗ್ಟನ್ ಕಾರ್ಯತಂತ್ರಗಳನ್ನು ವಿಫಲಗೊಳಿಸಿದ್ದರು.

ಈಗ ರಾಜತಾಂತ್ರಿಕ ಸಂಬಂಧ ಮರುಸ್ಥಾಪನೆ­ಗೊಳ್ಳುತ್ತಿದ್ದಂತೆಯೇ ಪ್ರವಾಸ, ಬ್ಯಾಂಕಿಂಗ್ ಹಾಗೂ ವಾಣಿಜ್ಯ ವ್ಯವಹಾರಗಳ ನಿರ್ಬಂಧಗಳು ಸಡಿಲವಾಗಲಿವೆ.  ಈ ನಿಟ್ಟಿನಲ್ಲಿ  ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಫಲರಾದ ಕ್ಯೂಬಾದ ಈಗಿನ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ  ಅಭಿನಂದನಾರ್ಹರು. ಫಿಡೆಲ್ ಕ್ಯಾಸ್ಟ್ರೊ ಸೋದರರಾಗಿರುವ  ರೌಲ್ ಕ್ಯಾಸ್ಟ್ರೊ  ಅವರು ಪ್ರಪಂಚ ಬದಲಾಗಿದೆ ಎಂಬುದನ್ನು ಅರ್ಥೈಸಿಕೊಂಡಿರುವಂತಹ  ವ್ಯಾವಹಾರಿಕ ದೃಷ್ಟಿ-­ಕೋನಗಳ ವ್ಯಕ್ತಿ. ಸದ್ಯದ ವಾಸ್ತವಗಳಿಗೆ ಅವರು  ಮುಕ್ತವಾಗಿ ತೆರೆದು­ಕೊಂಡಿ­ರುವುದು ಐತಿಹಾಸಿಕ ಸಂಗತಿ.

ಶೀತಲ ಯುದ್ಧ ತಾರಕದಲ್ಲಿದ್ದಾಗಲೇ ಕಮ್ಯುನಿಸ್ಟ್ ಚೀನಾ ಜೊತೆಗೆ  ಸಂಬಂಧ­ವನ್ನು ವಾಷಿಂಗ್ಟನ್ ಸುಗಮಗೊಳಿಸಿಕೊಂಡಿತ್ತು.  ಹಾಗೆಯೇ   ತೀವ್ರ ಯುದ್ಧವನ್ನೇ ನಡೆಸಲಾಗಿದ್ದ ವಿಯೆಟ್ನಾಂ ಜೊತೆಗೂ ತನ್ನ ಸಂಬಂಧವನ್ನು  ಅಮೆರಿಕ ಸುಧಾರಿಸಿಕೊಂಡಿತ್ತು. ಹೀಗಿದ್ದೂ ಕ್ಯೂಬಾ ಜೊತೆಗಿನ ಸಂಬಂಧ   ಬದಲಾವಣೆಯಿಲ್ಲದೆ ಸ್ಥಗಿತಗೊಂಡಿತ್ತು.

ಶೀತಲ ಯುದ್ಧದ ಸಂದರ್ಭದಲ್ಲಿ ರೂಪಿಸಿಕೊಳ್ಳಲಾಗಿದ್ದ ಈ ನೀತಿ  ಶೀತಲ ಯುದ್ಧ ಮುಗಿದ ನಂತರವೂ  ಮುಂದುವರಿದಿದ್ದು ವಿಪರ್ಯಾಸ.  ಈ ನೀತಿಯಲ್ಲಿನ ವಿಫಲತೆಯನ್ನು ಒಬಾಮ ಒಪ್ಪಿಕೊಂಡಿದ್ದಾರೆ. ಕ್ಯೂಬಾ­ದೊಂದಿಗೆ ಈ ಹೊಸ ಸ್ನೇಹಪರತೆ ಎಷ್ಟು ದೂರ ಸಾಗುತ್ತದೆ ಎಂಬುದು ಸ್ಪಷ್ಟವಿಲ್ಲ.  ಇದು ಅರ್ಥಪೂರ್ಣ­ವಾಗಬೇಕಾದರೆ ಕ್ಯೂಬಾ ಮೇಲಿನ ದಿಗ್ಬಂಧ­ನ­­­ಗಳನ್ನು  ಅಮೆರಿಕ ಕಿತ್ತುಹಾಕಬೇಕು. ಇದಕ್ಕಾಗಿ   ಒಬಾಮ ಅವರಿಗೆ  ರಿಪಬ್ಲಿಕನ್ನರೇ ಹೆಚ್ಚಿರುವ ಅಮೆರಿಕ ಕಾಂಗ್ರೆಸ್‌ನ ಬೆಂಬಲ ಬೇಕಾ­ಗುತ್ತದೆ. 

ಇದಕ್ಕಾಗಿ ದಿಗ್ಬಂಧನ ಕಿತ್ತು ಹಾಕುವುದರ ಪರ ಇರುವ ಸಾರ್ವ­ಜನಿಕ ಅಭಿಪ್ರಾಯದ ಒತ್ತಾಸೆಯನ್ನು ಒಬಾಮ ಪಡೆದುಕೊಳ್ಳಬಹುದು. ವ್ಯಾಪಾರ ವಹಿವಾಟು ಸುಗಮಗೊಳಿಸಿ ಎರಡೂ ರಾಷ್ಟ್ರಗಳ ಮಧ್ಯೆ ಆಮದು, ರಫ್ತು  ವ್ಯವಹಾರಗಳಿಗೆ ಅವಕಾಶ ಮಾಡಿಕೊಡುವುದರಿಂದ ಉಭಯ ರಾಷ್ಟ್ರಗಳಿಗೂ ಲಾಭದಾಯಕ. ಪರಸ್ಪರ ಅವಿಶ್ವಾಸ ಅಳಿಯುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT