ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯ ಚಿಗುರಿಸಿದ ಒಬಾಮ ಭೇಟಿ

Last Updated 27 ಜನವರಿ 2015, 19:30 IST
ಅಕ್ಷರ ಗಾತ್ರ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಭೇಟಿ ನೀಡಿರುವುದು ಈ ವಾರದ ಪ್ರಮುಖ ವಿದ್ಯಮಾನ­ವಾಗಿ ಎರಡೂ ದೇಶಗಳಲ್ಲಿ ತೀವ್ರ ಗಮನ ಸೆಳೆದಿದೆ. ದೇವಯಾನಿ ಖೋಬ್ರಗಡೆ ಪ್ರಕರಣದ ನಂತರ ಎರಡೂ ದೇಶಗಳ ನಡುವಣ ಬಾಂಧವ್ಯದಲ್ಲಿ ಬಿರುಕು ಮೂಡಿತ್ತು. ಉಭಯ ದೇಶಗಳ ಸಂಬಂಧ­­ವನ್ನು ಹೊಸ ಎತ್ತರಕ್ಕೆ ಕೊಂಡೊ­­ಯ್ಯು­ವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾಲು ಗಮನಾ­ರ್ಹವಾಗಿದೆ. ಭಾರತ ಮತ್ತು ಅಮೆರಿ­ಕದ ಮಧ್ಯೆ ಇಂತಹ ಸುಮಧುರ ಬಾಂಧವ್ಯ ಕಂಡು ಬರಲಿದೆ ಎಂದು ಎರಡು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಿ­ರಲಿಲ್ಲ.

ಮನಮೋಹನ್ ಸಿಂಗ್ ಅವರು ಸಹಿ ಹಾಕಿದ್ದ ನಾಗರಿಕ ಪರಮಾಣು ಒಪ್ಪಂದವು ಜಾರಿಗೆ ಬಂದಿರಲಿಲ್ಲ. ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದಂತೆ ಯುಪಿಎ ಸರ್ಕಾರದ ಒಳಗಿನ ಎಡ­ಪಂಥೀಯರು ಮತ್ತು ಸೈದ್ಧಾಂತಿಕ ಸಲಹೆಗಾಗಿ ಸದಾ ಚೀನಾದತ್ತ ನೋಡುವ ಎಡಪಕ್ಷಗಳು ಮತ್ತು ಪ್ರತಿ­ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಕೂಡ ಭಾರತದ ಹಿತಾಸಕ್ತಿ­ಯನ್ನು ಸಾಮ್ರಾಜ್ಯ­ಶಾಹಿ ಅಮೆರಿಕಕ್ಕೆ ಒತ್ತೆ ಇಡಲಾಗುತ್ತದೆ ಎಂದು ಹುಯಿಲೆಬ್ಬಿಸುತ್ತಿದ್ದವು. ಹೀಗಾಗಿ ಮನಮೋಹನ್ ಸಿಂಗ್ ಅವರು  ಮೈತ್ರಿ­ಕೂಟ ಸರ್ಕಾರದ ಇತಿಮಿತಿಗಳ ಕಾರಣಕ್ಕೆ ಅನಿವಾರ್ಯವಾಗಿ ಹಿಂದೆ ಹೆಜ್ಜೆ ಇಡಬೇಕಾಗು­ತ್ತಿತ್ತು. ಪೂರ್ವಾ­ನ್ವಯ­ಗೊಳಿಸುವ ತೆರಿಗೆ ಮತ್ತು ಇತರ ಪ್ರತಿಗಾಮಿ ಕ್ರಮ­ಗಳಿಂದಾಗಿ ಅಮೆರಿಕದ ಉದ್ಯಮಿಗಳು ಬಂಡವಾಳ ಹೂಡಿಕೆಗೆ ಭಾರತದ ಬದಲಿಗೆ ಇತರ ದೇಶಗಳತ್ತ ಗಮನ ಕೇಂದ್ರೀಕರಿಸಿ­ದ್ದರು. ಇದ­ರಿಂದಾಗಿ ಭಾರತದ ಅರ್ಥ ವ್ಯವಸ್ಥೆಯು ಕುಸಿತದತ್ತ ಸಾಗಿತ್ತು.

ರಾಜತಾಂತ್ರಿಕ ನೈಪುಣ್ಯದಲ್ಲಿ ಪಳ­ಗಿದ ಅನು­ಭವ ಇಲ್ಲದಿದ್ದರೂ, ಮೋದಿ ಅವರು ತಮ್ಮ ಚತುರ ನಡೆ– ನುಡಿ ಮೂಲಕ ಪ್ರತಿಸ್ಪರ್ಧಿಗಳು ಮತ್ತು ಟೀಕಾಕಾರರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು. ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಸಂಪದ್ಭರಿತ ಪ್ರಜಾಸತ್ತಾತ್ಮಕ ದೇಶದ ಜತೆಗಿನ ಬಾಂಧವ್ಯದಲ್ಲಿ ಮೂಡಿದ್ದ ಬಿರುಕುಗಳನ್ನು ಸರಿ­ಪಡಿಸಿ, ಸಂಬಂಧಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಸಫಲರಾಗಿದ್ದಾರೆ.

ಹಿಂದೊಮ್ಮೆ ಭಾರತದ ಮಿತ್ರ ದೇಶ­ವಾಗಿದ್ದ ರಷ್ಯಾ ಈಗ ದುರ್ಬಲಗೊಂಡಿ­ದೆಯಷ್ಟೇ ಅಲ್ಲದೇ, ವಿಶ್ವ ಸಮುದಾಯ­ದಲ್ಲಿ ಏಕಾಂಗಿಯೂ ಆಗಿದೆ. ಧೂರ್ತ ದೇಶವಾಗಿರುವ ಪಾಕಿಸ್ತಾನವು ಭಯೋ­ತ್ಪಾದಕರ ನೆಲೆಯಾಗಿ ರೂಪುಗೊ­ಳ್ಳುತ್ತಿದೆ. ಆರ್ಥಿಕ ಮತ್ತು ಸೇನಾ ಶಕ್ತಿ­ಯಾಗಿ ಬೆಳೆಯುತ್ತಿ­ರುವ ರಣೋತ್ಸಾಹಿ ಚೀನಾ, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಷ್ಟೇ ಅಲ್ಲದೇ ಭಾರತದ ನೆರೆಹೊರೆಯಲ್ಲಿಯೂ ತನ್ನ ಬಲ ಪ್ರದರ್ಶನ ನಡೆಸಲು ಹವಣಿಸುತ್ತಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಅಮೆ­ರಿಕದ ಜತೆ ರಕ್ಷಣಾ ಒಪ್ಪಂದ ಮತ್ತು ಬಲಿಷ್ಠ ಆರ್ಥಿಕ ಪಾಲುದಾರಿಕೆ ಮಾಡಿ­ಕೊಳ್ಳುವುದರಿಂದ ಭಾರತಕ್ಕೇ ಹೆಚ್ಚು ಲಾಭಕರ ಎನ್ನುವುದು ಮೋದಿ ಅವರಿಗೆ ಮನ­ವರಿಕೆಯಾಗಿದೆ. ಸವಕಲಾದ ಮತ್ತು ದುರ್ಬಲ­ಗೊಂಡಿ­ರುವ ನೆಹರೂ ಅವರ ಕಾಲದ ಅಲಿಪ್ತ ಚಳವಳಿ ನೀತಿಗಿಂತ ವಿಶ್ವದ ದೊಡ್ಡಣ್ಣನತ್ತ ವಾಲುವುದರಲ್ಲಿಯೇ ಭಾರತದ ಹಿತಾಸಕ್ತಿ ಅಡಗಿದೆ ಎಂಬುದು ಮೋದಿ ಅವರ ಆಶಯ­ವಾಗಿರುವಂತಿದೆ.

ಇತರ ದೇಶಗಳಿಗಿಂತ ಅಮೆರಿಕದ­ಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು (ಎನ್‌ಆರ್‌ಐ) ಮತ್ತು ವಿದ್ಯಾರ್ಥಿಗಳು ನೆಲೆಸಿ­ದ್ದಾರೆ.

ಭಾರತ ಸಂಜಾತ ಅನೇಕರು ಒಬಾಮ ಸರ್ಕಾರ­ದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿ­ಸಿದ್ದಾರೆ. ಅಮೆರಿಕ ಮತ್ತು ಭಾರತದ ವಾಣಿಜ್ಯ ವಹಿವಾಟಿನ ಮೊತ್ತ ಕೇವಲ 100 ಶತಕೋಟಿ ಡಾಲರ್ (₨ 6.30 ಲಕ್ಷ ಕೋಟಿ)  ಇದ್ದರೆ, ಚೀನಾ ಮತ್ತು ಭಾರತದ ವಹಿವಾಟು 560 ಶತಕೋಟಿ ಡಾಲರ್‌ಗಳಷ್ಟು  (₨ 35.28 ಲಕ್ಷ ಕೋಟಿ) ಇದೆ. ಇದೇ ಕಾರಣಕ್ಕೆ ಭಾರತ ಮತ್ತು ಅಮೆರಿಕದ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮೋದಿ ಆದ್ಯತೆ ನೀಡಿರುವುದು ಸ್ಪಷ್ಟಗೊಳ್ಳುತ್ತದೆ. ಅವರ ದೃಢ ನಿರ್ಧಾರ ಕೊನೆಗೂ ಫಲ ನೀಡಿದೆ. ರಕ್ಷಣೆ ಮತ್ತು ವ್ಯಾಪಾರ ವಹಿವಾಟಿನ ಬಗ್ಗೆಯೇ ಅವರು ಹೆಚ್ಚು ಒತ್ತು ನೀಡಿದ್ದರು. ಇವೆರಡೂ  ಭಾರತದ ಅರ್ಥ ವ್ಯವಸ್ಥೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ.

ರಕ್ಷಣಾ ವ್ಯಾಪಾರ ಮತ್ತು ತಂತ್ರ­ಜ್ಞಾನ ಉಪಕ್ರಮ ಒಪ್ಪಂದಕ್ಕೆ ಮೋದಿ ಮತ್ತು ಒಬಾಮ ಸಹಿ ಹಾಕಿರುವು­ದರಿಂದ ಅಮೆರಿಕವು ಭಾರತ­ದಲ್ಲಿ ಜೆಟ್ ಎಂಜಿನ್, ವಿಮಾನ, ಸಮರ ಹೆಲಿ­ಕಾಪ್ಟರ್ ಮತ್ತಿತರ ಸೇನಾ ಹಾರ್ಡ್ ವೇರ್ ವಲಯದಲ್ಲಿ ಬಂಡವಾಳ ಹೂಡಲು ಮಾರ್ಗ ಸುಗಮವಾಗಲಿದೆ. ಸದ್ಯದ ಶೇ 49ರಷ್ಟು ಎಫ್‌ಡಿಐ ನೀತಿ ಅನ್ವಯ, ಆಯ್ದ ರಕ್ಷಣಾ ರಂಗಗಳಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೂ ಅವಕಾಶ ದೊರೆಯಲಿದೆ.

ಚೀನಾದ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ಮೋದಿ ಮತ್ತು ಒಬಾಮ ಅವರ ಏಷ್ಯಾ ಕೇಂದ್ರಿತ ಧೋರಣೆಗೆ ಉಭಯ ದೇಶಗಳ ಜಂಟಿ ಒಪ್ಪಂದವೂ ಪೂರಕವಾಗಿದೆ. ವಿಯೆಟ್ನಾಮ್ ಕರಾವಳಿ­ಯಲ್ಲಿ ಭಾರತದ ಸಹಭಾಗಿತ್ವ­ದಲ್ಲಿ ಕಚ್ಚಾ ತೈಲ ಶೋಧಿಸುವುದಕ್ಕೆ ಚೀನಾ ಬೆದರಿಕೆ ಹಾಕಿರುವುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ.

ಉಭಯ ಮುಖಂಡರು ಬಿಡುಗಡೆ ಮಾಡಿ­ರುವ ಜಂಟಿ ಹೇಳಿಕೆಯು ಎರಡೂ ದೇಶಗಳ ರಕ್ಷಣೆ ಮತ್ತು ಆರ್ಥಿಕ ಹಿತಾ­ಸಕ್ತಿಗಳಿಗೂ ಪೂರಕವಾಗಿದೆ. ನಾಗರಿಕ ಪರಮಾಣು ಒಪ್ಪಂದ ಜಾರಿಗೆ ಬರುವು­ದರಿಂದ ಮುಂಬರುವ ದಿನ­ಗಳಲ್ಲಿ 30 ಶತಕೋಟಿ ಡಾಲರ್‌ಗಳಷ್ಟು
(₨ 1.89 ಲಕ್ಷ ಕೋಟಿ) ಬಂಡವಾಳವು ಅಮೆರಿಕ­ದಿಂದ ಭಾರತಕ್ಕೆ ಹರಿದು ಬರಲಿದೆ.

ಆರು ವರ್ಷ­ಗಳಿಂದ ನನೆಗುದಿಗೆ ಬಿದ್ದಿದ್ದ ನಾಗರಿಕ ಪರಮಾಣು ಒಪ್ಪಂದ ಜಾರಿಗೆ ಅಡ್ಡಿ­ಯಾಗಿದ್ದ ಕಂಟಕಗಳನ್ನು ದೂರ ಮಾಡುವಲ್ಲಿ  ಮೋದಿ ಅವರ ಶ್ರದ್ಧೆ, ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ವರ್ಚಸ್ಸು ಪ್ರಮುಖ ಪಾತ್ರ ವಹಿಸಿತು.   ಬಿಜೆಪಿಯಲ್ಲಿನ ‘ಸ್ವದೇಶಿ’ ಟೀಕಾಕಾರರು ಅನಿ­ವಾರ್ಯವಾಗಿ ಬಾಯಿ ಮುಚ್ಚಿ­ಕೊಂಡು ತೆಪ್ಪ­ಗಾದರು. ಗೊಂದಲದಲ್ಲಿ ಮುಳುಗಿದ್ದ ಪ್ರತಿಪಕ್ಷ­ಗಳೂ ಮೌನ ಪ್ರೇಕ್ಷಕರಾಗಿಯೇ ಉಳಿದವು. 

ಭಾರತ ಮತ್ತು ಅಮೆರಿಕ ಉದ್ದಿಮೆ ಶೃಂಗ­ಸಭೆ ಮತ್ತು ಮುಖ್ಯ ಕಾರ್ಯ­ನಿರ್ವಹಣಾ ಅಧಿಕಾರಿಗಳ (ಸಿಇಒ) ವೇದಿಕೆ ಉದ್ದೇಶಿಸಿ ಉಭಯ ಮುಖಂಡರು ಮಾಡಿದ ಭಾಷಣ­ದಲ್ಲಿ, ವಾಣಿಜ್ಯ ಮತ್ತು ವ್ಯಾಪಾರ ಹೆಚ್ಚಿಸುವ ಮಾರ್ಗೋಪಾಯಗಳು ಪ್ರಸ್ತಾಪ­ವಾಗಿದ್ದವು. ಸ್ನೇಹಪರತೆ ಹೆಚ್ಚಿಸುವ ಈ ಎಲ್ಲ ಬೆಳವಣಿಗೆಗಳು ಪುನರ್ ಬಳಕೆ ಇಂಧನ, ಮೂಲ ಸೌಕರ್ಯ, ಐ.ಟಿ ಹಾರ್ಡ್‌ವೇರ್ ಮತ್ತಿತರ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಳಗೊಳ್ಳಲು ಖಂಡಿತ­ವಾ­ಗಿಯೂ ಹಾದಿ ಸುಗಮಗೊ­ಳಿಸಲಿವೆ. ಇಂತಹ ಬೆಳವಣಿಗೆ ಸಾಧ್ಯವಾ­ಗಬೇ­ಕಾದರೆ, ಭಾರತವು ತನ್ನ ಕೆಲ ಅಡೆತಡೆಗಳನ್ನು ನಿವಾರಿಸಿಕೊಂಡು, ಸುಲ­ಲಿತ ವಹಿವಾಟಿಗೆ ಅವಕಾಶ ಮಾಡಿ­ಕೊಡ­ಬೇಕು ಎಂದು ಒಬಾಮ ಖಡಾ­ಖಂಡಿತವಾಗಿ ಹೇಳಿದ್ದಾರೆ.

ಭಾರತವನ್ನು ‘ಉದ್ದಿಮೆ ಸ್ನೇಹಿ’ ದೇಶ­ವನ್ನಾಗಿಸಲು ಮೋದಿ ಅವರೂ ಭರವಸೆ ನೀಡಿ­ದ್ದಾರೆ. ಆರ್ಥಿಕತೆ ಬೆಳವಣಿಗೆಗೆ ಕಾರಣವಾಗುವ ಬಡವರ ಖರೀದಿ ಶಕ್ತಿ ಹೆಚ್ಚಿಸುವುದೇ ತಮ್ಮ ಆದ್ಯತೆಯಾಗಿದೆ ಎಂದೂ ಮೋದಿ ಹೇಳಿದ್ದಾರೆ. ಅಮೆ­ರಿಕದ ಉದ್ಯಮಿಗಳಿಗೆ ಇದು ಕರ್ಣಾ­ನಂದ­ಕರ­ವಾಗಿದ್ದರೂ, ಅನೇಕರು ಈ ಬೆಳವಣಿಗೆ­ಗಳನ್ನು ಎಚ್ಚರಿಕೆಯಿಂದ ನೋಡು­ತ್ತಿದ್ದಾರೆ. ಈ ಹಿಂದೆ ಭಾರತವು ನುಡಿದಂತೆ ನಡೆದುಕೊಂಡಿಲ್ಲ ಎಂದು ಅನುಮಾನಿಸಿರುವ ಕೆಲ ಉದ್ಯಮಿಗಳು ಈಗಲೂ ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.

ಒಬಾಮ ಅವರ ದೆಹಲಿ ಭೇಟಿಯ ಫಲವಾಗಿ ಉದ್ಯಮ ವಲಯದಲ್ಲಿ ಉತ್ಸಾಹ ಕಂಡು ಬಂದ ಸಂದರ್ಭ­ದಲ್ಲಿಯೇ, ನನಗೆ ನನ್ನ ಸ್ವಂತ ಜಿಲ್ಲೆ­ಯಲ್ಲಿ ಅನುಭವಕ್ಕೆ ಬಂದ ಎರಡು ವಿದ್ಯಮಾನ­ಗಳು ವಸ್ತುಸ್ಥಿತಿ­ಯನ್ನು ನನಗೆ ಚೆನ್ನಾಗಿಯೇ ಮನದಟ್ಟು ಮಾಡಿ­ಕೊಟ್ಟವು.

ನಾನು ಇಲ್ಲಿ ಇಬ್ಬರು ಯಶಸ್ವಿ ಉದ್ಯಮಿಗಳ ಸಾಧನೆ ಮತ್ತು ಅವರಿನ್ನೂ  ಇನ್ನಷ್ಟು ಉನ್ನತಿ ಸಾಧಿಸಲು ಏನೆಲ್ಲಾ ಮಾರ್ಗಗಳನ್ನು ಕಂಡು­ಕೊಂಡಿದ್ದಾರೆ ಎನ್ನುವುದನ್ನು ಓದುಗರ ಜತೆ ಹಂಚಿ­ಕೊಳ್ಳಲು ಇಷ್ಟಪಡುವೆ. ಇವರಲ್ಲಿ ಒಬ್ಬರು ಆರಂಭದಲ್ಲಿ ಸಣ್ಣ ವ್ಯಾಪಾರಿ­ಯಾಗಿದ್ದರು.  ಹಲ­ವಾರು ಪ್ರತಿಕೂಲ­ಗಳನ್ನು ಧೈರ್ಯದಿಂದ ಎದು­ರಿಸಿ ಸಫಲತೆ ಕಂಡಿದ್ದಾರೆ. ಕ್ರಮೇಣ ತಮ್ಮ ವಹಿ­ವಾಟನ್ನು ಹಲವು ದಿಕ್ಕುಗಳಿಗೆ ವಿಸ್ತರಿ­ಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀ­ಚೆಗೆ ಅವರು ಒಂದೂ­ವರೆ ಕೋಟಿ ರೂಪಾಯಿಗಳನ್ನು ಕೊಟ್ಟು ಮದ್ಯ­ದಂಗಡಿಯ ಲೈಸನ್ಸ್ ಖರೀದಿಸಿದ್ದರು. ವ್ಯಕ್ತಿಯೊಬ್ಬರಿಗೆ ಇಷ್ಟು ದೊಡ್ಡ ಮೊತ್ತದ ದುಡ್ಡು ಕೊಟ್ಟು ಲೈಸನ್ಸ್‌ ಖರೀದಿಸುವ ಬದಲಿಗೆ ಸರ್ಕಾರ­ದಿಂದಲೇ ಲೈಸನ್ಸ್‌ ಖರೀದಿಸಬಹುದಿತ್ತಲ್ಲ ಎಂದು ನಾನು ಅವರನ್ನು ಪ್ರಶ್ನಿಸಿದೆ.  ಸರ್ಕಾರವು ಮದ್ಯ­ದಂಗಡಿ ಲೈಸನ್ಸ್‌ ನೀಡುವುದನ್ನು ನಿಲ್ಲಿಸಿದೆ.  ಲಂಚ ನೀಡಿ, ರಾಜ­ಕೀಯ ಪ್ರಭಾವ ಬಳಸಿ  ಅಥವಾ ಎರಡನ್ನೂ ಬಳಸಿ ಲೈಸನ್ಸ್‌ ಪಡೆದು­ಕೊಂಡವರು ತಮಗೆ ಆ ಲೈಸನ್ಸ್‌ ಮಾರಿ­ಕೊಂಡಿ­ದ್ದಾರೆ ಎಂದು ಅವರು ನನಗೆ ತಿಳಿಸಿದರು.

ಇಂತಹ ವಹಿವಾಟಿನಿಂದ ಸರ್ಕಾರಕ್ಕೆ ಒಂದು ನಯಾಪೈಸೆ ವರಮಾನ ಬರುವುದಿಲ್ಲ. ಈ ಬಗೆಯ ಅಬಕಾರಿ ನೀತಿಯು ಭ್ರಷ್ಟಾಚಾರ ಮತ್ತು ‘ಕಪ್ಪು ಹಣ’ದ ಚಲಾವಣೆಯನ್ನು ಇನ್ನಷ್ಟು ಉತ್ತೇಜಿಸುತ್ತದೆಯೇ  ಹೊರತು ಮದ್ಯ­ಪಾನ ನಿಷೇಧವನ್ನೇನೂ ಅಲ್ಲ. ಅಬಕಾರಿ ನೀತಿಯು ರಾಜ್ಯದಲ್ಲಿ ಮದ್ಯದ ಉತ್ಪಾದನೆ ಅಥವಾ ಬಳಕೆ ಮೇಲೆ ನಿಯಂತ್ರಣವನ್ನೇನೂ ವಿಧಿಸುವುದಿಲ್ಲ.

ಕೆಲವೇ ಕೆಲ ಪ್ರಭಾವಿ ಜನರು ಸರ್ಕಾರದ ಮೇಲೆ ಪ್ರಭಾವ ಬೀರಿ ವಾಮಮಾರ್ಗದಲ್ಲಿ ತಮ್ಮ ಕೆಲಸ­ಕಾರ್ಯ­­ಗಳನ್ನು ಈಡೇರಿಸಿಕೊಳ್ಳುವ ಕೆಟ್ಟ ನಡವಳಿಕೆಗೆ ಇದು ಇನ್ನೊಂದು ನಿದರ್ಶನವಾಗಿದೆ.

ಸರ್ಕಾರವು ಯಾರಿಗಾದರೂ  ಮದ್ಯ ಮಾರಾ­ಟದ ಲೈಸನ್ಸ್‌ ನೀಡಿದರೆ ಅದರಿಂದ ಸರ್ಕಾರದ ಬೊಕ್ಕಸಕ್ಕೆ ವರಮಾನ ಹರಿದು ಬರುತ್ತದೆ. ಆ ಹಣವನ್ನು ಆರ್ಥಿಕ ಚಟುವಟಿಕೆ­ಗಳಿಗೆ ಸದ್ವಿನಿಯೋಗ ಮಾಡಬಹುದು. 

ಇನ್ನೊಬ್ಬ ಉದ್ಯಮಿಯೊಬ್ಬರು ಮೂಲತಃ ಕೃಷಿಕರಾಗಿದ್ದು, ಅದರಲ್ಲಿ ತಮ್ಮ ಕುಟುಂಬವನ್ನು ನಿರ್ವಹಿಸಲಿ­ಕ್ಕಾಗದೇ ಸರಕು ಸಾರಿಗೆ ವಹಿವಾಟು ಆರಂಭಿಸಿ ಯಶಸ್ವಿಯಾಗಿದ್ದಾರೆ. ಹೋಬಳಿ ಮುಖ್ಯ ಕೇಂದ್ರದಲ್ಲಿ ಅವರು ಈಗ 20 ವಾಹನ­ಗಳ ಒಡೆಯನಾ­ಗಿದ್ದಾರೆ. ಈ ವಾಹನಗಳಲ್ಲಿ ಜನ, ಸರಕು ಅಥವಾ ಒಮ್ಮೊಮ್ಮೆ ಎರಡನ್ನೂ ತುಂಬಿಸಿ ಸಾಗಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಿಂದ ಹಲವು ತಾಲ್ಲೂಕು ಕೇಂದ್ರಗಳಿಗೆ ಬಸ್‌ ಸೌಲಭ್ಯ­ವನ್ನೂ ಕಲ್ಪಿಸ­ಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ಎದುರಿನಲ್ಲಿಯೇ ಇವರ ವಾಹನ­ಗಳು ಪ್ರಯಾಣಿಕರನ್ನು ತುಂಬಿಸಿ­ಕೊಳ್ಳುತ್ತವೆ. ಅವರೊಬ್ಬ ವ್ಯವಹಾರ ನಿಪುಣ ಮತ್ತು ಕುಶಾಗ್ರ­ಮತಿ­ಯಾಗಿದ್ದು, ತಮ್ಮ ಗ್ರಾಹಕರ ಅಗತ್ಯಗಳೇನು ಎನ್ನುವು­ದನ್ನು ತಿಳಿದುಕೊಳ್ಳುವ ಒಳನೋಟ­ವನ್ನೂ ಹೊಂದಿದ್ದಾರೆ. ಈ ಮಾರ್ಗ­ಗಳನ್ನು ರಾಷ್ಟ್ರೀಕರಣ­ಗೊಳಿಸಿರು­ವುದ­ರಿಂದ ಇವರು ತಮ್ಮ ಪ್ರಯಾಣಿಕರ ಬಸ್‌ಗಳ ಓಡಾಟಕ್ಕೆ ಲೈಸನ್ಸ್ ಅನ್ನೇ ಪಡೆದುಕೊಂಡಿಲ್ಲ. ಇವರು ಎಲ್ಲ ಇಲಾಖೆ­ಗಳಿಗೆ ನಿಯಮಿತವಾಗಿ ಲಂಚ ನೀಡುತ್ತ ಲಾಭ ಬಾಚಿಕೊಳ್ಳುತ್ತಲೇ ಇದ್ದಾರೆ. ಒಂದು ಟ್ರಕ್‌ನಿಂದ ಆರಂಭವಾದ ಅವರ ವಹಿವಾಟು ಈಗ 20 ವಾಹನಗಳಿಗೆ ಬಂದು ನಿಂತಿದೆ. ಒಂದು ವೇಳೆ ಸರ್ಕಾರವು ಇಂತಹ ಸೇವೆಗಳಿಗೆ ಲೈಸನ್ಸ್‌ ಕಡ್ಡಾಯ ಮಾಡಿದ್ದರೆ ಅಧಿಕಾರಿಗಳ ಕಿಸೆ ಭರ್ತಿಯಾಗುವ ಬದಲಿಗೆ ಸರ್ಕಾರದ ಬೊಕ್ಕಸಕ್ಕೆ ವರಮಾನ ಹರಿದು ಬರುತ್ತಿತ್ತು.

ಈ ಎರಡೂ ಪ್ರಕರಣಗಳಲ್ಲಿ ಉದ್ಯಮ­ಶೀಲತೆಗೆ ಬಹುದೊಡ್ಡ ಅಡ­ಚಣೆ ಇರುವುದು ವೇದ್ಯವಾಗುತ್ತದೆ.  ವಿಳಂಬ, ಲಂಚದ ಹಾವಳಿ ಮತ್ತು ಕಿರುಕುಳ ನೀಡುವುದು ನಿರಂತರವಾಗಿ ನಡೆಯುತ್ತಲೇ ಇರುವುದರಿಂದ ನನಗೆ ಇಲ್ಲಿ ‘ಬೇಲಿಯೇ ಎದ್ದು ಹೊಲ ಮೇಯಿತು’ ಎಂಬ ಗಾದೆ ನೆನಪಾಗುತ್ತದೆ.

ಕಳೆದ ವಾರ ಮೋದಿ ಅವರು ಕೂಡ ಇದೇ ಬಗೆಯಲ್ಲಿ ಟ್ವೀಟ್‌ ಮಾಡಿರು­ವುದು ಇಲ್ಲಿ ಉಲ್ಲೇಖನೀಯ. ‘ಭಾರತ­ದಲ್ಲಿ ಜನರು ಮೋಕ್ಷ ಪಡೆಯಲು ಚಾರ್‌ ಧಾಮ್‌ ಯಾತ್ರೆ ಕೈಗೊಳ್ಳು­ತ್ತಾರೆ. ಆದರೆ, ಕಡತವೊಂದು 36 ಧಾಮ್‌ಗಳಿಗೆ (ಕಂಬಗಳಿಗೆ ಎಡತಾ­ಕಿದರೂ) ಭೇಟಿಕೊಟ್ಟರೂ  ಮೋಕ್ಷ ಪಡೆಯುವುದಿಲ್ಲ’ ಎಂದು ಬರೆದು­ಕೊಂಡಿದ್ದರು.

ಮೋದಿ ಅವರ ಕನಸು ಮತ್ತು ಭರವಸೆಗಳೆಲ್ಲ ನನಸಾಗುವ ಬಗ್ಗೆ ದೇಶಬಾಂಧವರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಪ್ರಧಾನಿ ಆಶಯ­ಗಳಿಗೆ ನಾವೆಲ್ಲ ಸೂಕ್ತವಾಗಿ ಸ್ಪಂದಿಸ­ದಿ­ದ್ದರೆ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಂದಕ್ಕೂ ಅಡ್ಡಿ ಮಾಡು­ವಂತಾ­ದರೆ ಏನಾದೀತು. ಕಾಲವೇ ಉತ್ತರ ಹೇಳಲಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT