ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಪಾವತಿಗೆ ಕ್ರಮ ಕೈಗೊಳ್ಳಿ

Last Updated 24 ಜೂನ್ 2014, 19:30 IST
ಅಕ್ಷರ ಗಾತ್ರ

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಣ ‘ಗುದ್ದಾಟ’ಕ್ಕೆ ಕೊನೆಯೇ ಇದ್ದಂತಿಲ್ಲ. ಕಬ್ಬಿಗೆ ದರ ನಿಗದಿಯಿಂದ ಬಾಕಿ ಹಣ ಪಡೆ­ಯುವವರೆಗೂ ಬೆಳೆ­ಗಾರರು ಯಾವುದೋ ಒಂದು ಬಗೆಯಲ್ಲಿ ಒತ್ತಡ ಹೇರ­­ಲೇಬೇಕಾದ ಅನಿ­ವಾರ್ಯ ಸ್ಥಿತಿ ಒದಗಿರುವುದು ಕಾರ್ಖಾನೆಗಳು ಹಾಗೂ ಸರ್ಕಾರಕ್ಕೆ  ಶೋಭೆ ತರು­ವುದಿಲ್ಲ. ಅಲ್ಲದೇ ರೈತರು ಮತ್ತು ಕಾರ್ಖಾನೆ­ಗಳ ನಡುವೆ ಉಳಿದಿರುವ ಚೂರು­ಪಾರು ಸೌಹಾರ್ದ ಸಂಬಂಧಕ್ಕೂ ಇದು ಧಕ್ಕೆ ತರಲಿದೆ. 

ಕಬ್ಬು ಅರೆಯುವ ಹಂಗಾಮು ಇನ್ನೇನು ಶುರು­ವಾಗಲಿದೆ ಎನ್ನುವ ಹೊತ್ತಿಗೆ ‘ಕಬ್ಬಿಗೆ ಯೋಗ್ಯ ಬೆಲೆ ನೀಡ­ಬೇಕು’ ಎಂದು ಒತ್ತಾಯಿಸಿ ರೈತರು ಚಳವಳಿ ಮಾರ್ಗ ಹಿಡಿಯುವುದು ಈಚೆಗೆ ಮಾಮೂ­ಲಿಯೆನಿಸಿದೆ. ಕಳೆದ ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ವಿಧಾನ­ಮಂಡಲದ ಅಧಿವೇಶನ ನಡೆ­ಯುತ್ತಿರುವಾಗಲೇ ಬೆಲೆ ನಿಗದಿಗೆ ಒತ್ತಾಯಿಸಿ ನಡೆದ ಧರಣಿ ವೇಳೆ ಹತಾ­ಶ­ಗೊಂಡ ರೈತರೊಬ್ಬರು ಆತ್ಮಹತ್ಯೆ ಮಾಡಿ­ಕೊಂಡಿದ್ದರು. ಇಂತಹ ಧರಣಿ, ಪ್ರತಿ­ಭಟನೆ­ಗಳ ಬಿಸಿ ತಟ್ಟುತ್ತಲೇ ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದು ಕಬ್ಬಿಗೆ ಬೆಲೆ ನಿಗದಿ ಮಾಡು­­ತ್ತ­ದೆಯಾದರೂ ಎಷ್ಟೋ ಕಾರ್ಖಾನೆಗಳು ಆ ದರ ಕೂಡ ನೀಡುವುದಿಲ್ಲ. ಅಂತಹ ಕಾರ್ಖಾ­ನೆಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಇದುವರೆಗೂ ಸಾಧ್ಯ­ವಾಗಿಲ್ಲ. ಬಹು­ಪಾಲು ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲೇ ಇರುವುದು ಇದ­­ಕ್ಕೊಂದು ಕಾರಣ ಇರಬಹುದು. ಇದಕ್ಕೆ ಪಕ್ಷಭೇದ ಕೂಡ ಇಲ್ಲ. ಈ ಲಾಬಿ ಪ್ರಭಾವಕ್ಕೆ ಮಣಿ­ಯುತ್ತಲೇ ಬಂದಿರುವ ಸರ್ಕಾರ  ಈಗಲಾದರೂ ಆತ್ಮಾವಲೋಕನ ಮಾಡಿ­ಕೊಳ್ಳಬೇಕು. ನಿವಾರಣೋಪಾಯಗಳ ಕುರಿತು ಗಂಭೀರವಾಗಿ ಚಿಂತಿಸಬೇಕು.

ಕಾರ್ಖಾನೆಗಳಿಂದ ಬರಬೇಕಿರುವ ಬಾಕಿ ಹಣ ಪಾವತಿಗೆ  ಸರ್ಕಾರ ಮಧ್ಯ ಪ್ರವೇಶಿಸ­ಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಈಗ ಬೀದಿಗೆ ಇಳಿ­ದಿವೆ. ರೈತರ ಕೂಗು ವಿಧಾ­­ನ­ಸಭೆಯಲ್ಲೂ ಪ್ರತಿಧ್ವನಿಸಿದೆ. ಪ್ರತಿ ಟನ್‌ ಕಬ್ಬಿಗೆ ಕೇಂದ್ರ ಸರ್ಕಾರ ₨ 2,100 ದರ ನಿಗದಿಪಡಿಸಿದೆ. ಆ ದರ ನೀಡದ  ಕಾರ್ಖಾನೆ­ಗಳಿಗೆ ಷೋಕಾಸ್‌ ನೋಟಿಸ್ ನೀಡ­ಲಾ­ಗಿದೆ ಎಂದು ಸಕ್ಕರೆ ಸಚಿವರು ತಿಳಿಸಿದ್ದಾರೆ. ಆ ಪೈಕಿ ಕೆಲವು ಕಾರ್ಖಾನೆಗಳು ನೋಟಿ­ಸ್‌ಗೂ ಉತ್ತರ ನೀಡದಿ­ರು­ವುದು ಉದ್ಧಟತನವಲ್ಲದೆ ಬೇರೇನೂ ಅಲ್ಲ.

ಕಾರ್ಖಾನೆ­ಗ­ಳಿಂದ ರೈತರಿಗೆ ₨ 503 ಕೋಟಿ ಬಾಕಿ ಪಾವತಿಯಾಗಬೇಕಾಗಿದೆ ಎಂದು ಸರ್ಕಾರವೇ ಒಪ್ಪಿ­­ಕೊಂಡಿದೆ. ಆದರೆ ರೈತ ಸಂಘದ ಪ್ರಕಾರ ಬೆಳೆಗಾರರಿಗೆ ಬರಬೇಕಿರುವ ಬಾಕಿ ಮೊತ್ತ ₨ 3,500 ಕೋಟಿ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿಗದಿ ಮಾಡಿ­ರುವ ದರದಲ್ಲಿ ವ್ಯತ್ಯಾಸ ಇರುವುದರಿಂದ ಬಾಕಿ ಮೊತ್ತದ ಲೆಕ್ಕಾಚಾರ­ದಲ್ಲಿಯೂ ವ್ಯತ್ಯಾ­ಸ­ವಿರಲು ಸಾಧ್ಯ. ಆದರೆ  ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆಗಳು ಪ್ರತೀ ವರ್ಷ ರೈತರನ್ನು ಸತಾ­ಯಿ­ಸುವುದು ಅಕ್ಷಮ್ಯ. ಸಕ್ಕರೆ ಅಲ್ಲದೆ, ಕಾಕಂಬಿ ಮತ್ತಿತರ ಉಪ ಉತ್ಪನ್ನಗ­ಳಿಂದಲೂ ಆದಾಯ ಬರುವುದ­ರಿಂದ ಕಾರ್ಖಾನೆಗಳು ಉದಾರ ನಿಲುವು ತಾಳಬೇಕು.

ಬೆಲೆ ನಿಗದಿ ಮಾಡು­ವಾಗ ಸರ್ಕಾರ ಇದನ್ನೆಲ್ಲ ಗಣನೆಗೆ ತೆಗೆದು­ಕೊಳ್ಳ­ಬೇಕು. ಬಾಕಿ ಪಾವತಿಯಲ್ಲಿ ವಿಳಂಬ ಧೋರಣೆ ಅನುಸರಿಸದಂತೆ ಕಾರ್ಖಾ­­ನೆ­ಗಳ ಕಿವಿ ಹಿಂಡಬೇಕು. ಬಾಕಿ ಪಾವತಿಸಲು ಅನುಕೂಲ ಆಗುವಂತೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ₨ 4,400 ಕೋಟಿ ಬಡ್ಡಿ­ರಹಿತ ಸಾಲ ನೀಡಲು ಮುಂದಾ­ಗಿದೆ. ಇದರ ಪ್ರಯೋಜನ ಪಡೆದು ರೈತರ ಬಾಕಿ ಚುಕ್ತಾ ಮಾಡಬೇಕು. ರಾಜ್ಯ ಸರ್ಕಾರ ಕೂಡ ₨ 189 ಕೋಟಿ ನೀಡ­ಬೇಕಾಗಿದೆ. ಈ ಪ್ರೋತ್ಸಾಹ ಧನವನ್ನಾದರೂ ತಕ್ಷಣ ಬಿಡುಗಡೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT