ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲಿಗೆ ಬಂದ ನವಿಲು

Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ಕಾಕಾಡುನಾಯಿಗಳ ಅಧ್ಯಯನಕ್ಕೆಂದು ಬಂಡೀಪುರಕ್ಕೆ ಬರುವ ಮುನ್ನ ಏಳೆಂಟು ವರ್ಷಗಳ ಕಾಲ ತಮಿಳುನಾಡಿನ ಮುದುಮಲೈ ಅರಣ್ಯದಲ್ಲಿ ನೆಲೆಸಿದ್ದೆವು.

ಮುದುಮಲೈನ ದಟ್ಟ ಕಾಡಿಗಿಂತ ಸ್ವಲ್ಪ ಬಯಲಿನಂತಿರುವ ಬಂಡೀಪುರ ಅರಣ್ಯದಲ್ಲಿ ನಾಯಿಗಳನ್ನು ಹಿಂಬಾಲಿಸುವುದು ಸುಲಭವೆಂಬುದು ಈ ನಿರ್ಧಾರಕ್ಕೆ ಕಾರಣವಾಗಿತ್ತು.

ಗುಂಪಿನಲ್ಲಿ ವಾಸಿಸುವ ಕಾಡುನಾಯಿಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟೇನು ಸುಲಭವಲ್ಲ. ಯಾವ ಅಂದಾಜಿಗೂ ಸಿಗದ ಜಾಯಮಾನ ಅವುಗಳದು. ಗುಂಪಿನ ಎಲ್ಲಾ ನಾಯಿಗಳು ಹೆಚ್ಚು ಕಡಿಮೆ ಒಂದೇ ರೀತಿ ಕಾಣುವುದರಿಂದ ಅವುಗಳನ್ನು ವೈಯಕ್ತಿಕವಾಗಿ ಗುರುತಿಸುವುದು ಸವಾಲಿನ ಕೆಲಸ.

ಆದರೆ ಗುಂಪಿನಲ್ಲಿ ಸದಸ್ಯರ ಸ್ಥಾನಮಾನವೇನು? ಅವುಗಳ ನಡುವಣ ಪರಸ್ಪರ ಸಂಬಂಧಗಳೇನೆಂಬುದು ಅರಿಯಲೇಬೇಕು. ಅದು ಯಾವುದೇ ಅಧ್ಯಯನದ ಪ್ರಾಥಮಿಕ ಕೆಲಸ. ನಮ್ಮಂತೆ ಬಡಾವಣೆಯ ನಿರ್ದಿಷ್ಟ ವಿಳಾಸದಲ್ಲಿ ನೆಲೆಸದೆ ವಿಸ್ತಾರದ ಕಾಡಿನಲ್ಲಿ ದಿಕ್ಕು ದೆಸೆ ಇಲ್ಲದೆ ಅಲೆದಾಡುವ ಇವುಗಳ ಪ್ರವೃತ್ತಿ ಈ ಮೇಲಿನ ಕೆಲಸವನ್ನು ಜಟಿಲಗೊಳಿಸುತ್ತವೆ. ಅದರಲ್ಲೂ ಬೇಟೆಯಲ್ಲಿ ತೊಡಗಿದಾಗ ಮಿಂಚಿನಂತೆ ಚಿಮ್ಮುತ್ತಾ ಕಾಡಿನಲ್ಲಿ ಕರಗಿಹೋದ ಬಳಿಕ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

ಜೀವ ವಿಜ್ಞಾನದ ಯಾವುದೇ ಪ್ರಬುದ್ಧ ಪ್ರಬಂಧಗಳನ್ನಾಗಲಿ ಅಥವಾ ನಿಖರವಾದ ಕತೆಯನ್ನಾಗಲಿ ದಾಖಲಿಸುವ ಮುನ್ನ ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅನಿವಾರ್ಯ. ಅಂತ್ಯಕಾಣದ ಈ ಪ್ರಯಾಣಕ್ಕೆ ಸಮಯದ ಮಿತಿಗಳನ್ನು ನಿಗದಿಪಡಿಸಿ ಗುರಿ ತಲುಪುವುದು ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ಬಂಡೀಪುರದಲ್ಲಿ ದೀರ್ಘಕಾಲ ನೆಲೆಸಬೇಕಾದ ಪರಿಸ್ಥಿತಿ ನಮ್ಮ ಮುಂದಿತ್ತು.

ಈ ದಿಕ್ಕಿನಲ್ಲಿ ಬಂಡೀಪುರ ಕಾಡಿನ ಮಗ್ಗುಲಲ್ಲಿ ಭೂಮಿ ಖರೀದಿಸಿದೆವು. ಅದೊಂದು ಪಾಳು ಬಿದ್ದ ಭೂಮಿ. ಆ ಭೂಮಿ ಸ್ಥಳೀಯರ ಬದುಕಿನ ಸಕಲ ಬೇಡಿಕೆಗಳನ್ನು ಈಡೇರಿಸಿ ದಣಿದಿತ್ತು. ರಣರಂಗದ ಬಳಿಕ ಅನಾಥವಾಗಿ ಬಿದ್ದಿರುವ ಮೈದಾನದಂತಿತ್ತು.

ಎಂದೋ ಜೀವ ತೆತ್ತು ಸ್ಮಾರಕಗಳಂತೆ ತುಂಡಾಗಿ ನಿಂತಿದ್ದ ಮರದ ಕಾಂಡಗಳು, ಒಂದಿಷ್ಟು ಮುಳ್ಳಿನ ಬಳ್ಳಿಗಳು, ವೈಪರೀತ್ಯ ಪರಿಸ್ಥಿತಿಯಲ್ಲಿ ಬದುಕುಳಿಯುವ ಸಾಮರ್ಥ್ಯವನ್ನು ರೂಢಿಸಿಕೊಂಡಿರುವ ಒಂದೆರಡು ಜಾತಿಯ ಮರಗಳು ಅಲ್ಲಲ್ಲಿ ಚಿಗುರೊಡೆಯಲು ಪ್ರಯತ್ನಿಸುತ್ತಿದ್ದವು. ಇದರ ಹೊರತಾಗಿ ಅಲ್ಲಿ ಪುಟಿಯುವ ಜೀವಂತಿಕೆ ಇರಲಿಲ್ಲ.

ಅಲ್ಲೊಂದು ಪುಟ್ಟ ಮನೆ ನಿರ್ಮಿಸಿದೆವು. ಅಪರೂಪಕ್ಕೊಮ್ಮೆ ಆನೆಗಳು ಅಲ್ಲಿ ಕಾಣಿಸುತ್ತಿದ್ದವು. ಆದರೆ ಮನುಷ್ಯರನ್ನು ಕಂಡಾಗ ಅತ್ಯಂತ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದವು. ಕೆಲವೊಮ್ಮೆ ಜಿಂಕೆ, ಕಡವೆಗಳು ಕಂಡರೂ, ಮನುಷ್ಯನ ಸುಳಿವು ದೊರೆತ ಕೂಡಲೆ ಕಾಡಿನೊಳಗೆ ನುಸುಳಿ ಮಾಯವಾಗುತ್ತಿದ್ದವು.

ಇವುಗಳ ವರ್ತನೆ ಅಲ್ಲಿ ಜರುಗಿರುವ ಬೇಟೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ಪರೋಕ್ಷವಾಗಿ ಸೂಚಿಸುತ್ತಿತ್ತು. ಈ ತೀರ್ಮಾನಕ್ಕೆ ಇನ್ನಷ್ಟು ಪುಷ್ಟಿನೀಡುವಂತೆ ಆಗೊಮ್ಮೆ ಈಗೊಮ್ಮೆ ನಡು ರಾತ್ರಿಯಲ್ಲಿ ಸಿಡಿಯುವ ಕೋವಿಯ ಸದ್ದು ಕೇಳಿಬರುತ್ತಿತ್ತು.

ಈ ಹಿನ್ನೆಲೆಯಲ್ಲಿ ಪುಟ್ಟ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆವು. ಭೂಮಿಯ ಸುತ್ತ ಮುಳ್ಳಿನ ಬೇಲಿ ನಿರ್ಮಿಸಿ ಜಾನುವಾರುಗಳಿಗೆ, ಮರ ಮುಟ್ಟುಗಳನ್ನು ಸಂಗ್ರಹಿಸುವವರಿಗೆ ನಿರ್ಬಂಧ ಹೇರಿದೆವು. ಬೆಳೆಯಿಲ್ಲದ ಬರಡು ಭೂಮಿಗೆ ಬೇಲಿ ಹಾಕಿ ರಕ್ಷಿಸುತ್ತಿದ್ದುದ್ದನ್ನು ಕಂಡು ಹಳ್ಳಿಗರು ಒಳಗೊಳಗೆ ನಗುತ್ತಿದ್ದರು.

ಮಳೆಯ ನೀರು ಓಡಿಹೋಗದಂತೆ ಸಣ್ಣ ಪುಟ್ಟ ಅಡ್ಡಗಟ್ಟೆಗಳನ್ನು ನಿರ್ಮಿಸಿದೆವು. ಎರಡು ವರ್ಷಗಳಲ್ಲಿ ಚಮತ್ಕಾರ ನಡೆದಂತೆ ಆಫ್ರಿಕಾದ ಸವನ್ನಾ ಹುಲ್ಲುಗಾವಲನ್ನು ಹೋಲುವಂತೆ ದಟ್ಟವಾದ ಹುಲ್ಲು ಆವರಿಸಿತು. ಅಲ್ಲಿಯವರಿಗೆ ಇದೊಂದು ಅದ್ಭುತವಾದ ಹುಲ್ಲುಗಾವಲು ಪ್ರದೇಶವಾಗಿ ಬದಲಾಗಬಹುದೆಂಬ ಕಲ್ಪನೆಯೇ ನಮಗಿರಲಿಲ್ಲ.

ಹುಲ್ಲುಗಾವಲಿನಲ್ಲಿ ಆಶ್ರಯ ಪಡೆಯುವ ಬಗೆ ಬಗೆಯ ಹಕ್ಕಿಗಳು ಆಗಮಿಸಿದವು. ತಲೆಮರೆಸಿಕೊಂಡು ಭೂಲೋಕದ ಅಂತರಾಳದೊಳಗೆ ಅಡಗಿ ಕುಳಿತಿದ್ದ ವಿಭಿನ್ನ ಜಾತಿಯ ಇರುವೆಗಳು ಪ್ರತ್ಯಕ್ಷಗೊಂಡು ತಮ್ಮ ಸಾಮ್ರಾಜ್ಯವನ್ನು ಪ್ರತಿಷ್ಠಾಪಿಸಿಕೊಂಡವು. ಕಲ್ಲಿನಂತಿದ್ದ ಭೂಮಿ ಕ್ರಮೇಣ ಹತ್ತಿಯಂತೆ ಮೃದುವಾಗತೊಡಗಿತು. ಆಕಾಶದಿಂದ ಜಾರಿದ ಮಳೆಯ ಹನಿಗಳೆಲ್ಲ ಹರಿದೋಡುವುದನ್ನು ಮರೆತು ಭೂಮಿಯಲ್ಲಿ ಅಂತರ್ಧಾನಗೊಂಡವು.

ಆದರೆ ಹುಲ್ಲುಗಾವಲಿನ ಹಿಡಿತ ಹೆಚ್ಚುಕಾಲ ಮುಂದುವರಿಯಲಿಲ್ಲ. ನಡುನಡುವೆ ತಲೆ ಎತ್ತಿದ ಗಿಡ ಬಳ್ಳಿಗಳು ಹುಲ್ಲುಗಾವಲಿನ ಸಾರ್ವಭೌಮತ್ವಕ್ಕೆ ತಡೆಯೊಡ್ಡಿದವು. ಕಳೆದುಕೊಂಡ ವೈಭವವನ್ನು ಮರಳಿ ಗಳಿಸಿದ ಸಂಭ್ರಮದಲ್ಲಿ, ಗಿಡಮರಗಳನ್ನು ಹಬ್ಬಿ ಏರಿದ್ದ ಬಳ್ಳಿಗಳಲ್ಲಿ, ಬಗೆಬಗೆಯ ಹೂವುಗಳು ನೂರಾರು ರೂಪ ಸ್ವರೂಪಗಳಲ್ಲಿ ಅರಳಿದವು.

ಕೆಲವೇ ವರ್ಷಗಳಲ್ಲಿ ಪವಾಡ ಜರುಗಿದಂತೆ ಬದಲಾದ ಚಿತ್ರಣದಿಂದ ಪುಳಕಿತರಾದೆವು. ನೆಲೆ ಕಳೆದುಕೊಂಡ ಮರಗಳನ್ನು ಮತ್ತೆ ಪರಿಚಯಿಸಬೇಕೆಂದು ದೂರದೂರುಗಳಿಂದ ಆಲ, ಬೇವು, ಬೀಟೆ, ಮತ್ತಿ, ತಾರೆ, ಸಾಗುವಾನಿ ಸಸಿಗಳನ್ನು ಸಂಗ್ರಹಿಸಿ ತಂದೆವು.

ಮತ್ತೆ ಕಾಡಿನ ನೈಜ ಸ್ವರೂಪ ತರಬಹುದೆಂಬ ಕನಸು ಕಂಡೆವು. ಆದರೆ ಈ ಪ್ರಯತ್ನ ಕರುಣಾಜನಕ ಅಂತ್ಯಕಂಡಿತು. ತಟ್ಟೆಯಾಕಾರದಲ್ಲಿ ಎಲೆಗಳನ್ನು ಅರಳಿಸಿ ಹುಲುಸಾಗಿ ಬೆಳೆದಿದ್ದ ಸಾಗುವಾನಿ ಗಿಡಗಳೆಲ್ಲಾ ಮೈ ಮೇಲೆ ಕುಳಿತ ಸೊಳ್ಳೆಗಳನ್ನು ಓಡಿಸಲು ಆನೆಗಳಿಗೆ ಪೊರಕೆಗಳಾದವು. ಮುಳ್ಳು ಬಳ್ಳಿಗಳೊಳಗೆ ಅಡಗಿಸಿಟ್ಟಿದ್ದ ಆಲದ ಮರಗಳನ್ನೆಲ್ಲ ಹೆಕ್ಕಿ ಒಂದೇ ದಿನದಲ್ಲಿ ಜಗಿದು ಬಿಸಾಡಿದವು.

ಅಳಿದುಳಿದ ಗಿಡಗಳ ರಕ್ಷಣೆಗೆ ಇರಿಸಿದ್ದ ಮುಳ್ಳಿನ ತಡೆಗೋಡೆಗಳನ್ನೆಲ್ಲ ಕಿತ್ತೊಗೆದವು. ಜೀವವ್ಯವಸ್ಥೆಯ ಅಂಗಳದಲ್ಲಿ ಏನನ್ನೂ ತಿದ್ದುವ, ಬದಲಿಸುವ, ಇಲ್ಲವೇ ರೂಪಿಸುವ ಹಕ್ಕು ನಿಮಗಿಲ್ಲವೆಂದು ಪರೋಕ್ಷವಾಗಿ ತಿಳಿಸಿದವು.

ಮರಗಿಡಗಳನ್ನು ಮತ್ತೆ ಪರಿಚಯಿಸುವ ನಮ್ಮ ಈ ಪ್ರಯತ್ನ ವಿಫಲವಾದರೂ ಜೀವಕೋಠಿ ಪುಟಿಯತೊಡಗಿತು. ಎಷ್ಟೋ ವರ್ಷಗಳಿಂದ ಕಾಣದಾಗಿದ್ದ ಹಲವಾರು ಜಾತಿಯ ಸಸ್ಯಗಳು ನೆಲದೊಡಲಿಂದ ಹೊರಗಿಣುಕಿದವು.

ಜಿಂಕೆ, ಕಡವೆ, ಕಾಡು ಹಂದಿಗಳು ಗುಂಪಾಗಿ ನೆರೆಯತೊಡಗಿದವು. ನಡುರಾತ್ರಿಯಲ್ಲಿ ಗಿಡಗಂಟೆಗಳ ಬೇರುಗಳನ್ನು ಕದ್ದು ಮುಳ್ಳುಹಂದಿಗಳು ಮಾಯವಾಗುತ್ತಿದ್ದವು. ಮನೆಯ ಹಿಂಭಾಗದಲ್ಲೇ ಕಾಡು ಹಂದಿ ಗೂಡು ಕಟ್ಟಿ ಮರಿ ಇರಿಸಿತು. ಈ ಎಲ್ಲಾ ಬದಲಾವಣೆಯ ಸುದ್ದಿ ಹುಲಿ ಚಿರತೆಗಳಿಗೂ ತಲುಪಿ ಅಲ್ಲಿಗೆ ಬರಲಾರಂಭಿಸಿದವು.

ಕಾಲಿನಡಿಯಲ್ಲಿ ಮರಿಗಳನ್ನು ಸುಭದ್ರವಾಗಿರಿಸಿಕೊಂಡು ಎಚ್ಚರಿಕೆಯಿಂದ ಓಡಾಡುವ ಆನೆಗಳು ನಿರ್ಭಯವಾಗಿ ಅಲೆದಾಡಲು ಮರಿಗಳಿಗೆ ಅವಕಾಶವಿತ್ತವು. 600 ಚ.ಕೀ.ಮೀ ವ್ಯಾಪ್ತಿಯ ವಾರ್ಷಿಕ ಸುತ್ತಾಟದ ಅವುಗಳ ದೀರ್ಘ ದಿನಚರಿಯಲ್ಲಿ ಕೇವಲ ನಾಲ್ಕೈದು ದಿನಗಳ ಮಟ್ಟಿಗೆ ಮನೆಗೆ ಬರುತ್ತಿದ್ದ ಆನೆಗಳು ಮನೆಯಂಗಳದಲ್ಲಿ ಬದಲಾದ ಸ್ಥಿತಿಗತಿಗಳನ್ನು ಕೆಲವೇ ವರ್ಷಗಳಲ್ಲಿ ಅರ್ಥಮಾಡಿಕೊಂಡು ನಿರ್ಭೀತಿಯಿಂದ ವರ್ತಿಸಿದ್ದು ಅಚ್ಚರಿ ಮೂಡಿಸಿತು.

ಈ ಎಲ್ಲ ಬದಲಾವಣೆಗಳ ನಡುವೆ ಬರಡು ಭೂಮಿಯಲ್ಲಿ ಮರು ಸ್ಥಾಪನೆಗೊಂಡ ಪ್ರಶಾಂತತೆಗೆ ಅಂದು ಧಕ್ಕೆ ಒದಗಿ ಬಂದಿತ್ತು. ಆ ರಾತ್ರಿ ನಿದ್ರೆಗೆ ಸಿದ್ಧವಾಗುವಾಗ ಅರ್ಧಚಂದ್ರ ಮೋಡಗಳೊಳಗೆ ಮರೆಯಾಗಿದ್ದ. ಆ ಕತ್ತಲಿಗೆ ವಿಶೇಷ ಮೌನವಿತ್ತು.

ನಡು ರಾತ್ರಿಯ ಗಾಢ ನಿದ್ರೆಯ ನಡುವೆ ಸ್ಫೋಟಕದ ಸದ್ದಿಗೆ ಬೆಚ್ಚಿ ಎದ್ದು ಕುಳಿತೆ. ತುಸು ಹೊತ್ತಿನಲ್ಲಿ ವೇಗವಾಗಿ ಓಡಿ ಬರುತ್ತಿದ್ದ ಭಾರವಾದ ಗೊರಸಿನ ಹೆಜ್ಜೆಗಳ ಸದ್ದು ಮನೆಗೆ ಹತ್ತಿರವಾಗುತ್ತಾ ಸಾಗಿ ಒಮ್ಮೆಲೆ ಕುಸಿದು ಬಿದ್ದ ಭೀಕರ ಶಬ್ದದೊಂದಿಗೆ ಅಂತ್ಯಗೊಂಡಿತು. ತೆರೆದಿದ್ದ ಕಿಟಕಿಯಲ್ಲಿ ಕಣ್ಣಾಡಿಸಿದೆ. ಆ ಕತ್ತಲಲ್ಲಿ ಕತ್ತಲ ಹೊರತಾಗಿ ಮತ್ತೇನು ಕಾಣಲಿಲ್ಲ.

ಮುಂಜಾನೆ ಬೆಳಕು ಹರಿದಾಗ ಹಕ್ಕಿಗಳಿನ್ನೂ ಹಾಡಿರಲಿಲ್ಲ. ನಡು ರಾತ್ರಿ ಅಪ್ಪಳಿಸಿದ ಸದ್ದು ಏನೆಂದು ಸುತ್ತಮುತ್ತ ಹುಡುಕಿದೆ. ಮನೆಯ ಹಿಂಭಾಗದಲ್ಲಿ ಭಾರೀ ಕಡವೆಯೊಂದು ಚಿರ ನಿದ್ರೆಯಲ್ಲಿ ಮಲಗಿತ್ತು. ಅದರಿಂದ ಹರಿದ ರಕ್ತ ಪುಟ್ಟ ಮಡುವಾಗಿ ಹೆಪ್ಪುಗಟ್ಟಿತ್ತು.

ಹಂತಕರ ಗುಂಡು ಕಡವೆಯ ಹೊಟ್ಟೆಯನ್ನು ಹೊಕ್ಕಿತ್ತು. ಅಪಾಯ ಎದುರಾದಾಗ ಸುರಕ್ಷಿತ ಸ್ಥಳಗಳಿಗೆ ದೌಡಾಯಿಸುವುದು ಜೀವಿಗಳ ಸಹಜ ಸ್ವಭಾವ. ಸಾವಿನಲ್ಲೂ ಸುರಕ್ಷಿತ ಸ್ಥಳವನ್ನು ಅರಸಿ ನಮ್ಮ ಮನೆಯ ಹಿತ್ತಲಿಗೆ ಬಂದದ್ದು ಮನಸ್ಸನ್ನು ಕಲಕಿತು. ಆದರೆ ಪ್ರಕ್ಷುಬ್ಧ ವಲಯದಲ್ಲಿ ಭರವಸೆ ಮೂಡಿಸುವ ನಮ್ಮ ಪ್ರಯತ್ನವೇ ಅದರ ಸಾವಿಗೆ ಕಾರಣವಾಯಿತೇನೋ ಎಂದು ಕ್ಷಣ ಕಾಲ ಪಾಪಪ್ರಜ್ಞೆ ಕಾಡಿದ್ದು ನಿಜ.

ಈ ದುರ್ಘಟನೆಯ ನೆನಪು ಮಾಸಿದ ಕೆಲವೇ ಸಮಯದಲ್ಲಿ ಕಂದು ಮರಗಪ್ಪೆಯೊಂದು ಮನೆಯೊಳಗೆ ಬರಲಾರಂಭಿಸಿತು. ದೊಡ್ಡ ಕಣ್ಣುಗಳ ಈ ಪುಟ್ಟ ಕಪ್ಪೆಗೆ ಹೊರಚಾಚಿದ ಅಗಲವಾದ ಕಾಲುಗಳು.

ಪ್ರತಿ ದಿನ ಮುಂಜಾನೆ ಕಿಟಕಿಯಿಂದ ಆಗಮಿಸುತ್ತಿದ್ದ ಕಪ್ಪೆ ಗೋಡೆಗೆ ನೇತು ಬಿಟ್ಟಿದ್ದ ಚಿತ್ರಪಟದ ಮೇಲೆ ವಿರಮಿಸುತ್ತಿತ್ತು. ಅದು ಗಾಜಿನ ಒಳಗಿದ್ದ ಕೃತಿಯ ಕಲ್ಪನೆಗಳನ್ನು ವಿಸ್ತರಿಸುವಂತೆ ‘3 ಡಿ’ ಆಯಾಮವನ್ನು ಒದಗಿಸುತ್ತಿತ್ತು. ಮನೆಗೆ ಬಂದ ಗೆಳೆಯರು ನಾವು ಬೇಕೆಂದೇ ಪ್ಲಾಸ್ಟಿಕ್ ಕಪ್ಪೆಯನ್ನು ಪಟಕ್ಕೆ ಅಂಟಿಸಿದ್ದೇವೆಂದು ಭಾವಿಸುತ್ತಿದ್ದರು.

ಪಟದಲ್ಲಿ ವಿರಮಿಸುತ್ತಿದ್ದ ಕಪ್ಪೆ ಮುಸ್ಸಂಜೆಯ ಹೊತ್ತಿಗೆ ಕಿಟಕಿಯಿಂದ ಹೊರಗೆ ಹಾರಿ ಕಾಡಿಗೆ ಹೋಗುತ್ತಿದ್ದರಿಂದ ಕಿಟಕಿಯನ್ನು ಯಾವಾಗಲೂ ತೆರೆದಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸದಾ ಆನೆ ಕರಡಿಗಳಷ್ಟೆ ಓಡಾಡುತ್ತಿದ್ದ ಮನೆಯಂಗಳಕ್ಕೆ ಕಳ್ಳರಿಗೆ ಬರುವ ಧೈರ್ಯವಿಲ್ಲದಿದ್ದರಿಂದ ಅದೇನು ಅಷ್ಟು ಸಮಸ್ಯೆ ಎನಿಸಲಿಲ್ಲ.

ಒಂದು ದಿನ ಸಂಜೆ ಕಪ್ಪೆಯ ನಿರ್ಗಮನವನ್ನು ಗಮನಿಸುತ್ತಿದ್ದ ನಮಗೆ ವಿಚಿತ್ರ ನಡವಳಿಕೆಯೊಂದು ಕುತೂಹಲ ಮೂಡಿಸಿತು. ಅದು ಪಟದಿಂದ ಸರಿದು ಗೋಡೆಯ ಮೇಲೆ ತೆವಳುತ್ತಾ ಅಡುಗೆ ಮನೆಯೊಳಗೆ ತೆರಳಿ, ವಾಶ್ ಬೇಸಿನ್‌ಗೆ ಇಳಿದು ಮತ್ತೆ ಗೋಡೆಯ ಮೇಲೆ ಮೆಲ್ಲನೆ ಸಾಗಿ ಕಿಟಕಿಯಿಂದ ಹೊರನಡೆಯಿತು.

ಮರುದಿವಸ ನಾವು ನೋಡುತ್ತಿದ್ದಂತೆಯೇ ವಾಶ್ ಬೇಸಿನ್ ಬಳಿ ಇದ್ದ ಪ್ಲಾಸ್ಟಿಕ್ ಬಟ್ಟಲಿನಲ್ಲಿದ್ದ ನೀರಿಗೆ ಇಳಿಯಿತು. ನಂತರ ಮನುಷ್ಯರಂತೆಯೆ ಕೈ ಕಾಲುಗಳನ್ನು ತೊಳೆದುಕೊಂಡು ರಾತ್ರಿಯ ಕೆಲಸಕ್ಕೆ ಹೊರಟಿತು. ಇದಾದ ಬಳಿಕ ಪ್ರತಿ ನಿತ್ಯವೂ ಕಪ್ಪೆಗೆ ಬಟ್ಟಲಿನಲ್ಲಿ ನೀರು ಇಡುವ ಸಂಪ್ರದಾಯ ಆಚರಣೆಗೆ ಬಂತು.

ಮುಂದೊಂದು ದಿನ ಆಕಸ್ಮಿಕವಾಗಿ ಬೆಂಗಳೂರಿನಿಂದ ಸ್ನೇಹಿತರ ದಂಡೇ ಆಗಮಿಸಿತು. ಕಪ್ಪೆ ಮತ್ತು ನಮಗಷ್ಟೇ ಸಾಕಾಗುತ್ತಿದ್ದ ಪುಟ್ಟ ಮನೆಯನ್ನು ಆರು ಅಡಿ ಎತ್ತರದ ಏಳು ಮಂದಿ ಸೇರಿಕೊಂಡಾಗ ಸ್ಥಳಾವಕಾಶವೇ ಇರಲಿಲ್ಲ.

ಪ್ರವಾಸವೆಂದರೆ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಚೆನ್ನಾಗಿ ಉಂಡು ವಾಪಸಾಗುವುದೆಂದು ತಿಳಿದಿರುವ ಹೆಚ್ಚಿನ ಮಂದಿಯಂತೆ ಇವರು ಸಹ ಸಂಜೆಗೆ ಮುನ್ನ ಬಗೆಬಗೆಯ ಅಡುಗೆಗೆ ಸಿದ್ಧರಾದರು. ಚಾಕು, ಕತ್ತಿಗಳೆಲ್ಲಾ ಹೊರಬಂದು ಚಳಪಳಿಸಿದವು. ಮೌನವಷ್ಟೇ ಜೀವಿಸಿದ್ದ ಮನೆಯಲ್ಲಿ ಗದ್ದಲ ಮನೆಮಾಡಿತು. ನಡುವೆ ಕೈತಪ್ಪಿ ಉರುಳಿ ಬೀಳುತ್ತಿದ್ದ ಪಾತ್ರೆಗಳು ಸದ್ದು ಮಾಡಿದಾಗಲೆಲ್ಲಾ ಆತಂಕದಲ್ಲಿ ಒಮ್ಮೆ ಕಪ್ಪೆಯನ್ನು ನೋಡಿ ಸುಮ್ಮನಾಗುತ್ತಿದ್ದೆವು.

ಸೂರ್ಯ ಮುಳುಗಿ ಆಗಷ್ಟೇ ಕತ್ತಲು ಆವರಿಸತೊಡಗಿತು. ಅಡುಗೆಯ ಸಿದ್ಧತೆಯು ಭರದಿಂದ ಸಾಗಿತ್ತು. ಕಪ್ಪೆ ಕಾಡಿಗೆ ಮರಳುವ ಸಮಯ. ಮೆಲ್ಲನೆ ಚಿತ್ರಪಟದಿಂದ ಸರಿದು ಅಡುಗೆ ಮನೆಯತ್ತ ತೆವಳಿತು. ಗೋಡೆಯನ್ನು ಅಪ್ಪಿ ಹಿಡಿದು ಹೊರ ಚಾಚಿದ ಅಗಲವಾದ ಕಣ್ಣುಗಳಿಂದ ಒಳಗೆ ಇಣುಕಿ ನೋಡಿತು.

ಕುದಿಯುವ ಎಣ್ಣೆಯಲ್ಲಿ ಸಿಡಿದು ಬದುಕಿನ ಸಾರ್ಥಕತೆಯನ್ನು ಪೂರೈಸಲಾಗದೆ ಜೀವ ಕಳೆದುಕೊಳ್ಳುತ್ತಿದ್ದ ಸಾಸಿವೆ, ಲಕ್ಷಾಂತರ ವರ್ಷಗಳಿಂದ ವಿಕಸನಹೊಂದಿ ಪಡೆದಿದ್ದ ರೂಪಗಳನ್ನು ಕಳೆದುಕೊಂಡು ಬಾಣಲೆಯಲ್ಲಿ ಅಂತ್ಯಕಾಣುತ್ತಿದ್ದ ಕಾಯಿ,

ಪಲ್ಯ, ಸೊಪ್ಪುಗಳನ್ನೆಲ್ಲಾ ನೋಡಿ ಕಪ್ಪೆಗೆ ಜಗತ್ತು ಭೀಕರವೆನಿಸಿರಬೇಕು. ಕೇವಲ ಕಲ್ಪನೆಯಲ್ಲಿ ಉಳಿದಿದ್ದ ರಾಕ್ಷಸರನ್ನು ಕಣ್ಣಾರೆ ಕಂಡ ಅನುಭವವಾಯಿತೋ ತಿಳಿಯಲಿಲ್ಲ. ನರಕ–ಯಮರಾಯ–ಅವನ ಸಂಗಡಿಗರ ಚಿತ್ರಣ ಮೂಡಿರಬಹುದು. ಅಲ್ಲಿ ಕುದಿಯುವ ಎಣ್ಣೆಯಲ್ಲಿ ಅದ್ದಿ ಜೀವನದಲ್ಲಿ ಮಾಡಿದ ಪಾಪಗಳನ್ನು ಪರಿಹರಿಸುವ ಬಗೆ ಎಲ್ಲವೂ ನೆನಪಾಗಿರಬೇಕು.

ಬೆಚ್ಚಿ ಕುಳಿತಿದ್ದ ಕಪ್ಪೆಯ ನೆರವಿಗೆ ಧಾವಿಸಿ, ಹತ್ತು ನಿಮಿಷ ಅಡುಗೆಗೆ ಬಿಡುವು ಕೊಡಿ. ಅದು ಕೈ ಕಾಲು ತೊಳೆದುಕೊಂಡು ಹೊರಟು ಬಿಡುತ್ತದೆ ಎಂದಾಗ ಸ್ನೇಹಿತರ ಮುಖದಲ್ಲಿ ಅಸಹನೆ. ‘‘ಬುದ್ಧಿ ಸರಿ ಇದ್ದಿದ್ದರೆ ಈ ಕಾಡಿನಲ್ಲೇಕೆ ಇರುತ್ತಿದ್ದರು ಹೇಳಿ’’ ಎಂಬ ಮಾತು ತೂರಿಬಂತು.

ಅವನ್ನೆಲ್ಲ ನಿರ್ಲಕ್ಷಿಸಿ ಕಪ್ಪೆಗೆ ದಾರಿ ಮಾಡಿಕೊಟ್ಟೆವು. ಆದರೆ ಕಪ್ಪೆ ಅವಸರದಲ್ಲಿ ಕೈ ಕಾಲುಗಳನ್ನು ತೊಳೆದುಕೊಳ್ಳುವುದನ್ನು ಮರೆತು ಕಿಟಕಿಯಿಂದ ಹಾರಿ ಕಾಡಿನಲ್ಲಿ ಕಣ್ಮರೆಯಾಯಿತು. ಸ್ನೇಹಿತರ ಕುಹಕ ಹಾಸ್ಯಕ್ಕೆ ನಮ್ಮಲ್ಲಿ ಉತ್ತರವಿರಲಿಲ್ಲ.

ಮತ್ತೆ ಆ ಕಂದು ಮರಗಪ್ಪೆ ನಮ್ಮ ಮನೆಗೆ ಬರಲೇ ಇಲ್ಲ. ಗೋಡೆಯಲ್ಲಿ ನೇತುಬಿದ್ದಿದ್ದ ಚಿತ್ರಪಟದ ಕೃತಿ ಸುಲಭವಾಗಿ ದಕ್ಕಿದ್ದ ‘3 ಡಿ’ ಆಯಾಮದಿಂದ ವಂಚಿತಗೊಂಡು ತನ್ನ ಮೌಲ್ಯವನ್ನು ಕಳೆದುಕೊಂಡಿತ್ತು.

ಮರಕಪ್ಪೆಯ ನೆನಪು ಇನ್ನೂ ಹಸಿಯಾಗಿದ್ದಾಗಲೆ ಮತ್ತೊಂದು ಘಟನೆ ಸಂಭವಿಸಿತು. ಮನೆಯ ಪಕ್ಕದ ಗುಡ್ಡದಲ್ಲಿ ಸ್ಫೋಟಗೊಂಡಂತಹ ಗದ್ದಲ. ದಿಗಿಲಿನಿಂದ ಶತದಿಕ್ಕುಗಳತ್ತ ಓಡುತ್ತಿದ್ದ ಗೊರಸುಗಳ ಸಪ್ಪಳ. ಮುಗಿಲಿಗೆ ಚಿಮ್ಮಿದ್ದ ದೂಳು ಇಳಿಯುವ ಮುನ್ನವೇ ಸಹಾಯಕ ಮೂರ್ತಿ ಅತ್ತ ಓಡಿದ.

ಅಲ್ಲೆಲ್ಲೋ ಅಡಗಿದ್ದ ಚಿರತೆ ಕಾಡಿಗೆ ಬಂದಿದ್ದ ಊರಿನ ದನಗಳಿಗೆ ಹೊಂಚು ಹಾಕಿ ಮೇಲೆರಗಲು ಮಾಡಿದ್ದ ಪ್ರಯತ್ನ ವಿಫಲಗೊಂಡಿದ್ದರಿಂದ ದನಕರುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಚದುರಿದ್ದವು. ಈ ಗದ್ದಲದಿಂದ ಹುಲ್ಲಿನಲ್ಲಿ ಗೋಪ್ಯವಾಗಿ ಅಡಗಿಸಿಟ್ಟಿದ್ದ ನವಿಲಿನ ಪುಟ್ಟ ಮರಿಗಳು ಭಯಗೊಂಡು ಹೊರಬಂದು ದನಗಾಹಿಗೆ ಸಿಕ್ಕಿಬಿದ್ದಿದ್ದವು.

ಅನೇಕ ವರ್ಷಗಳಿಂದ ನವಿಲು ಸಾಕಬೇಕೆಂಬ ಆಸೆ ತೋಡಿಕೊಳ್ಳುತ್ತಿದ್ದ ಮೂರ್ತಿಗೆ ಇದು ವರವಾಗಿ ಪರಿಣಮಿಸಿತು. ದನಗಾಹಿಯನ್ನು ಪುಸಲಾಯಿಸಿ ಮರಿಗಳನ್ನು ಕಸಿದು ಜೇಬಿನಲ್ಲಿರಿಸಿಕೊಂಡು ಮನೆಗೆ ಬಂದ. ಮರಿಗಳನ್ನು ಸಿಕ್ಕ ಸ್ಥಳದಲ್ಲೇ ಬಿಟ್ಟು ಬರುವಂತೆ ಮಾಡಿದ ಮನವಿಗೆ ಆತ ಒಪ್ಪಲೇ ಇಲ್ಲ. ಸುಳ್ಳುಗಳನ್ನು ಪೋಣಿಸುತ್ತಾ, ತಾಯಿ ತನ್ನ ಮರಿಗಳನ್ನು ಅಡಗಿಸಿಟ್ಟ ಸ್ಥಳ ಯಾವುದೆಂದು ತನಗೆ ತಿಳಿದೇ ಇಲ್ಲವೆಂದಾಗ ನಾವು ಸುಮ್ಮನಾಗಬೇಕಾಯಿತು.

ಕಾಡುಜೀವಿಗಳೊಂದಿಗೆ ಎಂದಿಗೂ ಭಾವನಾತ್ಮಕ ನಂಟಿಗೆ ಆಸ್ಪದ ನೀಡಬಾರದೆಂಬ ತಿಳಿವಳಿಕೆ ಹೇಳುತ್ತಾ ನವಿಲು ಸಾಕುವ ಹುಚ್ಚನ್ನು ನಿರುತ್ಸಾಹಗೊಳಿಸುವ ಪ್ರಯತ್ನ ಫಲಕಾರಿಯಾಗಲಿಲ್ಲ, ನಾವೂ ಅಸಹಾಯಕರಾದೆವು. ಹೌದು, ಹಾರಲಾರದ ಮರಿಗಳು ತನ್ನ ತಾಯಿಯನ್ನು ಸೇರುವುದಾದರೂ ಹೇಗೆ? ಏನಾಗುವುದೋ ನೋಡೋಣ ಎಂದು ಸುಮ್ಮನಾದೆವು.

ತಲೆಯನ್ನಷ್ಟೇ ಹೊರ ಚಾಚಿ ಜೇಬಿನಲ್ಲಿ ಕುಳಿತಿದ್ದ ಮರಿಗಳನ್ನು ಬೆತ್ತದ ಬುಟ್ಟಿಯೊಳಗಿರಿಸಿ ಒಳಗೆ ರಾಗಿ ಚೆಲ್ಲಿ ತನ್ನ ಬಹುಕಾಲದ ಕನಸು ನನಸಾಗುವ ಸಂತಸದಲ್ಲಿ ಮೂರ್ತಿ ಮುಳುಗಿದ್ದ.

ಬುಟ್ಟಿಯೊಳಗಿದ್ದ ಮರಿಗಳು ರಾಗಿಯ ಕಾಳುಗಳನ್ನು ತಿರಸ್ಕರಿಸಿ ದಿಗಂತದತ್ತ ತಲೆಮಾಡಿ ಸಿಗ್ನಲ್ ಲೈಟ್ ಬಳಿ ಪೊಲೀಸರು ಹಾಕುವ ಸೀಟಿಯಂತೆ ಫೀ..... ಫೀ..... ಫೀ..... ಎಂದು ಕೂಗಲಾರಂಭಿಸಿದವು. ಇನ್ನೆರಡು ದಿನಗಳಲ್ಲಿ ಅವು ಸಾಯುವುದು ಖಚಿತ ಎಂದರೆ ತಾನು ಬದುಕಿಸಿಕೊಳ್ಳುತ್ತೇನೆಂದು ಮೂರ್ತಿ ಆತ್ಮವಿಶ್ವಾಸದಿಂದ ನುಡಿದ.

ಬಹುಶಃ ನಲವತ್ತು ನಿಮಿಷ ಕಳೆದಿರಬಹುದು, ಇದ್ದಕ್ಕಿದ್ದಂತೆ ಮನೆಯ ಹತ್ತಿರದಲ್ಲಿ ನವಿಲೊಂದರ ಅಪಾಯದ ಕರೆಗಳು ತೇಲಿಬಂದವು. ಸದ್ದು ಕ್ರಮೇಣ ಹತ್ತಿರವಾಗುತ್ತಾ ಸಾಗಿ ಮನೆಯ ಮುಂಭಾಗದಲ್ಲಿ ಎತ್ತರಕ್ಕೆ ಬೆಳೆದಿದ್ದ ಹುಲ್ಲಿನ ನಡುವೆ ನವಿಲಿನ ತಲೆಯೊಂದು ಗೋಚರಿಸಿತು. ನಮ್ಮನ್ನು ಗಮನಿಸಿ ಅಲ್ಲೇ ನಿಂತು ಕತ್ತನ್ನು ಇನ್ನಷ್ಟು ಎತ್ತರಕ್ಕೆ ಚಾಚುತ್ತಾ ಮನೆಯತ್ತ ದೃಷ್ಟಿ ಹಾಯಿಸಿ ಮತ್ತೊಮ್ಮೆ ಕರೆ ನೀಡಿತು.

ಬಹುಶಃ ಆ ಧ್ವನಿ ಅಪಾಯದ ಗಳಿಗೆಯನ್ನು ಮರಿಗಳಿಗೆ ತಿಳಿಸುವ ಭಾಷೆಯಿರಬಹುದು. ನಿರಂತರವಾಗಿ ಬರುತ್ತಿದ್ದ ಮರಿಗಳ ಕೂಗು ಆ ನಿರ್ದಿಷ್ಟ ಕೂಗಿಗೆ ಪ್ರತಿಕ್ರಿಯಿಸಿ ಒಮ್ಮೆಗೆ ಸ್ತಬ್ಧಗೊಂಡಿತು. ಮನೆಯೊಳಗೆ ಕುಳಿತು ಜರುಗುತ್ತಿರುವ ನಾಟಕೀಯ ಬೆಳವಣಿಗೆಯನ್ನು ಕುತೂಹಲದಿಂದ ನೋಡುತ್ತಿದ್ದೆವು.

ಕೆಲವೇ ಕ್ಷಣಗಳಲ್ಲಿ ಉದ್ದನೆಯ ಕಾಲುಗಳನ್ನು ಮೆಲ್ಲನೆ ಚಾಚುತ್ತಾ ನವಿಲು ಬಾಗಿಲಿನ ಹೊಸಲಿಗೆ ಬಂದು ನಿಂತಾಗ ಎಲ್ಲರು ಬೆರಗಾಗಿ ಹೋದೆವು. ನಿಜಕ್ಕೂ ಇದೊಂದು ನಂಬಲಾರದ ದೃಶ್ಯ.

ಬೇಟೆ ಅವ್ಯಾಹತವಾಗಿರುವ ವಲಯದಲ್ಲಿ ಜೀವಿಗಳು ಸೂಕ್ಷ್ಮವಾಗಿ ವರ್ತಿಸುತ್ತವೆ. ಮನುಷ್ಯರ ಸುಳಿವು ದೊರೆತೊಡನೆ ಪಲಾಯನ ಮಾಡುತ್ತವೆ. ಆದರೆ ತನ್ನ ಮರಿಗಳ ಉಳಿವಿಗೆ ನವಿಲು ತಳೆದ ನಿರ್ಧಾರ ಅಚ್ಚರಿ ಮೂಡಿಸಿತು. ಪ್ರಕೃತಿಯಲ್ಲಿ, ತಮ್ಮ ಸಂತತಿಗಳನ್ನು ಮುಂದುವರೆಸುವುದು ಎಲ್ಲಾ ಜೀವಿಗಳ ಅಂತಿಮ ಗುರಿ. ಆ ಒತ್ತಾಸೆ ಜೀವದ ಅಪಾಯವನ್ನು ಬದಿಗಿರಿಸುವಂತೆ ನವಿಲಿನಲ್ಲಿ ಕೆಲಸ ಮಾಡಿರಬಹುದು.

ಬಾಗಿಲಿನಲ್ಲಿ ನಿಂತ ನವಿಲು ನಮ್ಮನ್ನೇ ದೃಷ್ಟಿಸುತ್ತಾ ಅಲುಗಾಡದೆ ನಿಂತಿತು. ಅದು ತನ್ನ ಮರಿಗಳಿಗೆ ಇಟ್ಟ ಮೌನ ಬೇಡಿಕೆ ಮನ ಕಲುಕಿತು.
ಮರಿಗಳನ್ನು ಬಿಟ್ಟು ಬಿಡುವಂತೆ ಮೂರ್ತಿಗೆ ಸನ್ನೆ ಮಾಡಿದಾಗ ಬುಟ್ಟಿಯನ್ನು ತೆರೆದ. ಕತ್ತಲಿಂದ ಬೆಳಕಿಗೆ ಬಂದು ಸದ್ದು ಮಾಡದೆ ತಾಯಿಯತ್ತ ಹೆಜ್ಜೆ ಹಾಕಿದವು. ತನ್ನ ಮರಿಗಳನ್ನು ಕರೆದುಕೊಂಡು ಹುಲ್ಲಿನಲ್ಲಿ ಹೆಜ್ಜೆ ಹಾಕುತ್ತಾ ನವಿಲು ಕಾಡಿನಲ್ಲಿ ಮರೆಯಾಯಿತು.

ನಂಬಲಾಗದ ಈ ಭಾವನಾತ್ಮಕ ಘಟನೆಯನ್ನು ನೆನೆಯುತ್ತಾ ಕುಳಿತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಮತ್ತೆ ನವಿಲು ವಾಪಸಾಯಿತು. ಮತ್ತೆ ಬಾಗಿಲ ಬಳಿ ನಿಂತು ಮನೆಯೊಳಗೆ ಕಣ್ಣು ಹಾಯಿಸಿತು. ಆಕ್ಷಣದಲ್ಲಿ ಅದರ ಬೇಡಿಕೆ ಏನಿರಬಹುದೆಂದು ತಿಳಿಯಲಿಲ್ಲ.

ಕೋಣೆಯ ಮೂಲೆಯಲ್ಲಿ ಅಲುಗಾಡದೆ ನಿಂತಿದ್ದ ಮೂರ್ತಿಯತ್ತ ನೋಡಿದೆ. ನಿಜಕ್ಕೂ ಆಘಾತವಾಯಿತು. ಆತ ಒಂದು ಮರಿಯನ್ನು ತನ್ನಲ್ಲೇ ಇರಿಸಿಕೊಂಡಿದ್ದ. ನಮಗೆ ಕೇಳದ, ಆ ಮರಿಯ ಸಣ್ಣ ಧ್ವನಿ, ಲೆಕ್ಕ ಪತ್ರ ಅರಿಯದೆ ಎರಡು ಮರಿಗಳೊಂದಿಗೆ ಕಾಡು ಸೇರಿದ್ದ ನವಿಲಿನ ಕಿವಿಗೆ ತಲುಪಿರಬಹುದು.

ಮರಿಯನ್ನು ಕೂಡಲೇ ಬಿಡುವಂತೆ ತಿಳಿಸಿದೆವು. ಮರಿಯೊಂದಿಗೆ ಕಾಡಿನತ್ತ ಹೆಜ್ಜೆ ಹಾಕಿದ ನವಿಲು ನಡುವೆ ಒಂದು ಕ್ಷಣ ನಿಂತು ಒಮ್ಮೆ ಮನೆಯತ್ತ ತಿರುಗಿ ನೋಡಿ ಬೆಳೆದ ಹುಲ್ಲಿನಲ್ಲಿ ಮರೆಯಾಯಿತು.

ಇದಾದ ಒಂದೆರಡು ತಿಂಗಳಲ್ಲಿ ಕಾಕತಾಳೀಯವೆಂಬಂತೆ ಒಂದು ಹೆಣ್ಣು ನವಿಲು ತನ್ನ ಬೆಳೆದ ಮರಿಗಳೊಂದಿಗೆ ಮನೆಯ ಬಳಿ ಕಾಣಲಾರಂಭಿಸಿತು.

ಮರು ವರ್ಷ ಇನ್ನಷ್ಟು ಅಚ್ಚರಿ ಮೂಡಿಸುವಂತೆ ಮನೆಯ ಬಳಿ ನವಿಲೊಂದು ಮೊಟ್ಟೆಗಳನ್ನಿಟ್ಟು ಕಾವು ಕೊಡಲಾರಭಿಸಿತು. ಅದು ಬಾಗಿಲಿಗೆ ಬಂದು ಮರಿಗಳನ್ನು ಕರೆದೊಯ್ದ ನವಿಲಿರಬಹುದೇ? ನಮಗೆ ತಿಳಿಯಲಿಲ್ಲ. ನವಿಲು ಪ್ರತಿ ದಿನದ ಚರ್ಚೆಯ ವಿಷಯವಾಯಿತು. ಕಾಡುಹಕ್ಕಿಯ ವಿಶ್ವಾಸ ಗೆದ್ದ ಸಂತೃಪ್ತಿ ನಮ್ಮದಾಯಿತು.

ಇದರ ನಡುವೆ ಯಾವುದೋ ಕೆಲಸದ ಮೇರೆಗೆ ಕೆಲವು ದಿನ ಬಂಡೀಪುರದಿಂದ ಹೊರನಡೆದೆವು. ಪಕ್ಕದ ಹಳ್ಳಿಯ ಬಾಲಕನೊಬ್ಬನನ್ನು ಮನೆ ಕಾವಲಿಗಿರಿಸಿದೆವು. ಜಾನುವಾರುಗಳು ಮನೆಯಂಗಳಕ್ಕೆ ಬಾರದಂತೆ ಎಚ್ಚರವಹಿಸುವುದು ಅವನ ಕೆಲಸವಾಗಿತ್ತು. ನವಿಲಿನ ಗೂಡಿನ ಬಗ್ಗೆ ಎಚ್ಚರವಹಿಸುವಂತೆಯೂ ಸೂಚಿಸಿದ್ದೆವು.

ಆದರೆ ಆದದ್ದೇ ಬೇರೆ. ಮತ್ತೆ ಮನೆಗೆ ಮರಳಿದಾಗ ಗೂಡಿನಲ್ಲಿ ನವಿಲಿರಲಿಲ್ಲ. ಮೊಟ್ಟೆಗಳು ಇರಲಿಲ್ಲ. ಬಾಲಕ ಮೊಟ್ಟೆಗಳನ್ನು ಕದ್ದು ತಿಂದಿದ್ದ ವಿಷಯ ವಿಚಾರಿಸಿದಾಗ ತಿಳಿದುಬಂತು. ನಂತರದ ಎಷ್ಟೋ ವರ್ಷಗಳ ಕಾಲ, ನಮ್ಮ ಮನೆಯ ಬಳಿ ನವಿಲುಗಳು ಗೂಡುಮಾಡಲು ಬರಲೇ ಇಲ್ಲ.

ಕೃಪಾಕರ ಸೇನಾನಿ ಅವರ ‘ಅವ್ಯಕ್ತ ಭಾರತ’ ಅಂಕಣ ಎರಡು ವಾರಗಳಿಗೊಮ್ಮೆ ಪ್ರಕಟಗೊಳ್ಳಲಿದೆ.  –ಸಂ

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎ.ಆರ್‌. ಕೃಷ್ಣಶಾಸ್ತ್ರಿ ಹಾಗೂ ಟಿ.ಎಸ್‌. ವೆಂಕಣ್ಣಯ್ಯ ಅಶ್ವಿನಿದೇವತೆಗಳೆಂದು ಪ್ರಸಿದ್ಧರು. ಈ ವಿಶೇಷಣವನ್ನು ಕನ್ನಡದ ಸಾಮಾಜಿಕ ಸಂದರ್ಭದಲ್ಲಿ ಕೃಪಾಕರ ಸೇನಾನಿ ಅವರಿಗೆ ಬಳಸಬಹುದು.

ಪರಿಸರದ ಸನ್ನಿಧಿಯಲ್ಲಿ ಬದುಕಿನ ಅರ್ಥಪೂರ್ಣ ಗಳಿಗೆಗಳ ಹುಡುಕಾಟದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಈ ಜೋಡಿಯ ಅಲೆದಾಟದಲ್ಲಿ ಅಧ್ಯಯನವಿದೆ, ಅಧ್ಯಾತ್ಮವೂ ಇದೆ. ಮುಖ್ಯವಾಗಿ ವಿನಯ – ವಿವೇಕಗಳಿವೆ.

ಅಂದಹಾಗೆ, ಕಾಡಿನ ನಿಗೂಢ ಜಗತ್ತು ಹುಟ್ಟಿಸುವ ಕುತೂಹಲಕ್ಕೆ ಕಾನನದಲ್ಲಿಯೇ ಉತ್ತರ ಹುಡುಕುವ ಅವರ ಸಾಹಸಪ್ರಣಯಕ್ಕೆ ಈಗ ಮೂರು ದಶಕಗಳ ಹರೆಯ.

ಏಷ್ಯಾದ ಕೆನ್ನಾಯಿಗಳ ಜೀವನ ಕುರಿತ ‘ದಿ ಪ್ಯಾಕ್’ ಸಾಕ್ಷ್ಯಚಿತ್ರದ ಮೂಲಕ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ ಕೃಪಾಕರ ಸೇನಾನಿ ವಿಶ್ವದ ವನ್ಯಜೀವಿ ಚಲನಚಿತ್ರ ನಿರ್ಮಾಪಕರ ಮೊದಲ ಪಂಕ್ತಿಯಲ್ಲಿ ಸಲ್ಲುವವರು. ಬಂಡೀಪುರ, ಮುದುಮಲೈ ಕಾಡಿನಲ್ಲಿನ ಕೆನ್ನಾಯಿಗಳನ್ನು ಕುರಿತು ಚಿತ್ರೀಕರಿಸಿರುವ ‘ದಿ ಪ್ಯಾಕ್‌’ 2010ರಲ್ಲಿ ‘ಗ್ರೀನ್‌ ಆಸ್ಕರ್‌’ ಪ್ರಶಸ್ತಿಗೆ ಪಾತ್ರವಾಗಿತ್ತು.

‘ವೈಲ್ಡ್‌ ಸ್ಕ್ರೀನ್ ಚಲನಚಿತ್ರೋತ್ಸವ’ದ ಮುಕ್ತ ವಿಭಾಗದಲ್ಲಿ ನಾಮಕರಣಗೊಂಡು ಪ್ರಶಸ್ತಿ ಗಳಿಸಿದ ಏಷ್ಯಾದ ಏಕೈಕ ಸಾಕ್ಷ್ಯಚಿತ್ರ ಎನ್ನುವುದು ಅದರ ಅಗ್ಗಳಿಕೆ. ಅಟೆನ್‌ ಬರೋ ಅವರ ‘ಲೈಫ್‌ ಸರಣಿ’ಯನ್ನು ಹಿಂದಿಕ್ಕಿ ‘ದಿ ಪ್ಯಾಕ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಗಮನಾರ್ಹ.

ಬಂಡೀಪುರದ ಅಂಚಿನಲ್ಲಿ ಸೂರು ಕಟ್ಟಿಕೊಂಡು ವಾಸವಾಗಿರುವ ಅವರಿಗೆ ಅರಣ್ಯದ ಬಗ್ಗೆ ಕಳ್ಳುಬಳ್ಳಿಯಂಥ ಪ್ರೀತಿ. ಬಂಡೀಪುರದ ಮೇಲುಕಾಮನಹಳ್ಳಿ ಬಳಿ ಸ್ಥಾಪಿಸಿರುವ ‘ನಮ್ಮ ಸಂಘ’ ಅವರ ಸಾಮಾಜಿಕ ಕಾಳಜಿಗೊಂದು ಉದಾಹರಣೆ.

ಪರಿಸರ ಸಂರಕ್ಷಣೆಯಲ್ಲಿ ವಿಶ್ವಕ್ಕೆ ಮಾದರಿಯಾದ ಒಂದು ಯಶಸ್ವಿ ಪ್ರಯೋಗ ‘ನಮ್ಮ ಸಂಘ’. ಜನಾಂದೋಲನದ ರೂಪು ಪಡೆದಿರುವ ಈ ಯೋಜನೆಯ ಮೂಲಕ ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನ ಹಳ್ಳಿಗರಿಗೆ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದೆ. ಇದರಿಂದ ಹಳ್ಳಿಗರ ಕಾಡಿನ ಅವಲಂಬನೆ ಕಡಿಮೆಯಾಗಿದೆ.

ಸರ್ಕಾರ ಅಥವಾ ಯಾವುದೇ ವಿದೇಶಿ ನೆರವು ಇಲ್ಲದ, 36 ಸಾವಿರಕ್ಕೂ ಹೆಚ್ಚು ಜನರ ಪರಿಸರ ಸಂರಕ್ಷಣೆಯ ಆಶಯ ‘ನಮ್ಮ ಸಂಘ’ದ ನೆರಳಲ್ಲಿ ಅರಳಿದೆ. ಒಂದು ದಿನಕ್ಕೆ 3.50 ಲಕ್ಷ ಕೇಜಿಗೂ ಹೆಚ್ಚು ಉರುವಲು ಬಳಕೆಗೆ ಪೂರ್ಣವಿರಾಮ ಬಿದ್ದಿದೆ.

ದಕ್ಷಿಣ ಪ್ರಸ್ಥಭೂಮಿಯಲ್ಲಿ ಅಲೆದಾಡುತ್ತ ಉತ್ತರ ಕರ್ನಾಟಕ ಭಾಗಕ್ಕೆ ನಡೆದು ನಡೆಸಿದ, ಸತತ ಮೂರು ವರ್ಷಗಳ ಅಧ್ಯಯನದ ಅಭಿವ್ಯಕ್ತಿ ‘ವಾಕಿಂಗ್‌ ವಿತ್‌ ವುಲ್ಫ್‌್ಸ್’. ಭಾರತದ ತೋಳಗಳ ಜೀವನ ಕುರಿತು ಅಧ್ಯಯನ ನಡೆಸಿ ಚಿತ್ರೀಕರಿಸಿರುವ ಮೊದಲ ಸಾಕ್ಷ್ಯಚಿತ್ರ ಎನ್ನುವ ವಿಶೇಷಣದ ಇದು, ಕುರಿಗಾಹಿಗಳು ಮತ್ತು ತೋಳಗಳ ನಡುವಿನ ಬಾಂಧವ್ಯವನ್ನು ಹಿಡಿದಿಡುವ ವಿಶಿಷ್ಟ ಪ್ರಯತ್ನವೂ ಹೌದು.

ಕೃಪಾಕರ ಸೇನಾನಿ ಅವರ ವನ್ಯಜೀವಿ ಛಾಯಾಚಿತ್ರಗಳು ‘ನ್ಯಾಚುರಲ್ ಹಿಸ್ಟರಿ’, ‘ಜಿಯೊ’, ‘ಲಂಡನ್‌ ಟೈಮ್ಸ್‌’, ‘ಬಿಬಿಸಿ ವೈಲ್ಡ್‌ಲೈಫ್‌’ ಸೇರಿದಂತೆ ವಿಶ್ವದ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ವೀರಪ್ಪನ್‌ ಸೆರೆಯಲ್ಲಿದ್ದಾಗಿನ ಅನುಭವಗಳನ್ನು ಕುರಿತ ‘ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’ ಕೃಪಾಕರ ಸೇನಾನಿ ಅವರ ಪ್ರಸಿದ್ಧ ಕೃತಿ.

‘ಸುಧಾ’ ವಾರಪತ್ರಿಕೆಯಲ್ಲಿ ಮಾಲಿಕೆಯಾಗಿ ಪ್ರಕಟಗೊಂಡ ಈ ಅನುಭವ ಕಥನ ಮರಾಠಿ, ತಮಿಳು, ಇಂಗ್ಲಿಷ್‌ಗಳಿಗೆ ಅನುವಾದವಾಗಿದೆ. ‘ಜೀವ ಜಾಲ’ (ಕೆ. ಪುಟ್ಟಸ್ವಾಮಿ ಜೊತೆ) ಅವರ ಮತ್ತೊಂದು ಕೃತಿ. ಪ್ರಸ್ತುತ ಈ ಜೋಡಿ ಹಿಮ ಚಿರತೆಗಳ ಜೀವನ ಚರಿತ್ರೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಸಾಹಸದಲ್ಲಿ ಕಾರ್ಯನಿರತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT