ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆದಿಂಡಿಗೂ ಬಹು ಬೆಲೆ!

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬಾಳೆ ರಫ್ತಿನಿಂದ ಭಾರತದ ಗಳಿಕೆ ನೂರು ಕೋಟಿ ರೂಪಾಯಿ. ರಾಜ್ಯದಲ್ಲಿ ಸುಮಾರು 90 ಸಾವಿರ ಹೆಕ್ಟೇರಿನಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಆದರೆ ಬಾಳೆದಿಂಡಿನ ಮೌಲ್ಯವರ್ಧನೆ ವಿಷಯದಲ್ಲಿ ನಾವು ಅಷ್ಟಾಗಿ ಆಸಕ್ತಿ ತೋರಿಲ್ಲ. ಇದಕ್ಕೆ ಕಾರಣ ಹಲವಾರು. ಈ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯವರು ಗಮನ ಹರಿಸಿದರೆ ಒಳಿತು

ರಸಭರಿತ ಬಾಳೆ ಹಣ್ಣಿಗೆ ಬೆಲೆಯಿದೆ. ರಸಭರಿತ ಬಾಳೆದಿಂಡಿಗೆ ಯಾಕಿಲ್ಲ? ಖಂಡಿತವಾಗಿಯೂ ಬೆಲೆ ಇದೆ. ಆದರೆ ಅದರ ಅರಿವು ಬೇಕಷ್ಟೆ! ಬಾಳೆದಿಂಡನ್ನು ಹಿಂಡಿದಾಗ ಸಿಗುವ ರಸ, ನಾರು ಮತ್ತು ಅದರ ಒಳ ತಿರಳು ಎಲ್ಲವೂ ಬೆಲೆ ಬಾಳುವಂಥವೇ.
ಬಾಳೆ ಉತ್ಪಾದನೆಯಲ್ಲಿ ನಮ್ಮ ದೇಶಕ್ಕೇ ಅಗ್ರಸ್ಥಾನ, ಜಾಗತಿಕ ಉತ್ಪಾದನೆಯ ಶೇ 29 ನಮ್ಮ ಕೊಡುಗೆ. ಬಾಳೆ ರಫ್ತಿನಿಂದ ದೇಶದ ಗಳಿಕೆ ನೂರು ಕೋಟಿ ರೂಪಾಯಿ. ನಮ್ಮ ದೇಶದಲ್ಲಿ ಬಾಳೆ ಉತ್ಪಾದನೆಗೆ ತಮಿಳುನಾಡು, ಗುಜರಾತ್, ಮಹಾರಾಷ್ಟ್ರಗಳ ಕೊಡುಗೆ ಅತಿ ಹೆಚ್ಚು. ರಾಜ್ಯದಲ್ಲಿ ಸುಮಾರು 90 ಸಾವಿರ ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಿದೆ. ಅದರೆ ಬಾಳೆದಿಂಡಿನ ಮೌಲ್ಯವರ್ಧನೆ ವಿಷಯದಲ್ಲಿ ನಾವು ಅಷ್ಟಾಗಿ ಆಸಕ್ತಿ ತೋರಿಲ್ಲ.

ಮೌಲ್ಯವರ್ಧನೆ ಅವಶ್ಯಕತೆ
ಇಂದು ಕೃಷಿ ಭೂಮಿ, ಕೃಷಿಕರ ಸಂಖ್ಯೆ, ಕೃಷಿಯಲ್ಲಿ ಆಸಕ್ತಿ ಕ್ಷೀಣಿಸುತ್ತಿದೆ. ಬೆಳೆಗೆ ತಕ್ಕ ಬೆಲೆ ಸಿಗುವುದು ಕಷ್ಟವಾಗುತ್ತಿದೆ. ಹೀಗಿರುವಾಗ ಬಂದ ಬೆಳೆಯಿಂದಲೇ ಆದಷ್ಟೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ನಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕಾದುದು ಅವಶ್ಯವೂ, ಅನಿವಾರ್ಯವೂ ಆಗಿದೆ. ‘ಪ್ರತಿ ಹನಿಗೂ, ಪ್ರತಿ ಅಂಗುಲಕ್ಕೂ ಹೆಚ್ಚೆಚ್ಚು ಬೆಳೆ’ ಎಂಬಂತೇ,  ‘ಬೆಳೆಯೊಂದು- ಉತ್ಪನ್ನಗಳು ನೂರೊಂದು’ ಎಂಬುದೂ ನಮ್ಮ ಧ್ಯೇಯವಾಗಬೇಕಿದೆ.

ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಪರಿಸರಸ್ನೇಹಿ ನೈಸರ್ಗಿಕ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದೆ. ಬಾಳೆ ನಾರು ನೈಸರ್ಗಿಕ ನಾರುಗಳಲ್ಲೇ ಹೆಚ್ಚು ಸದೃಢವಾದ, ಬಿರುಸಾದ ನಾರು. ಸೂರತ್‌ನ ‘ಮಂತ್ರ’ ಸಂಶೋಧನಾ ಸಂಸ್ಥೆ ಈಗಾಗಲೇ ಬಾಳೆ ನಾರಿನಿಂದ ಬಟ್ಟೆ ತಯಾರಿಕೆಗೆ ಸಿದ್ಧವಾಗಿದೆ. ತ್ಯಾಜ್ಯಕ್ಕೋ ಗೊಬ್ಬರಕ್ಕೋ ಹೋಗುವ ದಿಂಡನ್ನು ಮೌಲ್ಯವರ್ಧನೆ ಮಾಡಿದರೆ ರೈತರಿಗೊಂದು ಉಪ ಆದಾಯ ಆಗಬಲ್ಲದು.

ವಿಪುಲ ಅವಕಾಶ
ಅಚ್ಚರಿಯೆಂದರೆ, ಯಾವುದೇ ಸದ್ದುಗದ್ದಲವಿಲ್ಲದೇ, ರಾಜ್ಯದಲ್ಲಿ ಇಂದು ಹಲವಾರು ಸ್ವಯಂಸೇವಾ ಸಂಸ್ಥೆಗಳು ಬಾಳೆನಾರಿನ ಉತ್ಪನ್ನಗಳ ತಯಾರಿಯಲ್ಲಿ ತೊಡಗಿಸಿಕೊಂಡಿವೆ. ಕರಕುಶಲ ವಸ್ತುಗಳು, ಕಿಟಕಿ ಪರದೆಗಳು, ಫ್ಯಾನ್ಸಿ ಲೇಡೀಸ್ ಚೀಲಗಳು, ಪರ್ಸ್‌ಗಳು, ವಿಂಡೊ ಬ್ಲೈಂಡ್ಸ್, ಹಾಸುಗಂಬಳಿಗಳು, ಡೋರ್ ಮ್ಯಾಟ್ ಮುಂತಾದವು ಸಿದ್ಧವಾಗುತ್ತಿವೆ. ಇಂತಹ ಬಹುತೇಕ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿವೆ.

ರಾಜ್ಯದಲ್ಲಿ ಮುಖ್ಯವಾಗಿ ಬಾಳೆ ನಾರು ಮತ್ತು ಬಾಳೆ ಪಟ್ಟಿಗಳು ಬಳಕೆಯಲ್ಲಿವೆ. ಹೊಳೆಯುವ, ನಯವಾದ ನಾರಿನಿಂದ ಹೆಚ್ಚು ತಾಂತ್ರಿಕ ನಿಪುಣತೆ ಬೇಕಾಗುವ, ಬೆಲೆಬಾಳುವ ವಸ್ತುಗಳು ತಯಾರಾಗುತ್ತವೆ. ಬಾಳೆ ಪಟ್ಟಿಯಿಂದ ಅವಶ್ಯಕತೆಗೆ ಅನುಗುಣವಾಗಿ ಸ್ವಲ್ಪ ಗಡುಸಾದ ನಾರುಗಳನ್ನು ಸಿದ್ಧಪಡಿಸಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ‘ಪ್ರಶಾಂತಿ ಫೌಂಡೇಶನ್’ ಶಿರಸಿಯಲ್ಲಿ ಅಂಗವಿಕಲ ಮಕ್ಕಳಿಗೆ ಆಸರೆಯಾಗಿದೆ. ಇವರು ಸುತ್ತಮುತ್ತಲಿನ ರೈತರಿಂದ ಬಾಳೆಪಟ್ಟಿಯನ್ನು ಕೊಂಡುಕೊಂಡು ವಿಧ ವಿಧದ ಬ್ಯಾಗ್ ತಯಾರಿಸುತ್ತಾರೆ.
ಹಿರಿಯೂರು ತಾಲ್ಲೂಕು ಲಕ್ಕವನಹಳ್ಳಿ ಇನ್ನೊಂದು ಬಾಳೆ ನಾರಿನ ಚಟುವಟಿಕಾ ಕೇಂದ್ರವಿದೆ. ಇಲ್ಲಿನ ನೂರಾರು ಮಹಿಳೆಯರು ಸ್ವತಃ ನಾರು ತೆಗೆದು ಕರಕುಶಲ ವಸ್ತುಗಳನ್ನು, ವಿಶೇಷವಾಗಿ ಕೈಮಗ್ಗದ ಬಟ್ಟೆ ತಯಾರಿಸುತ್ತಿದ್ದಾರೆ. ಹಿಂದೊಮ್ಮೆ ಜೀವನೋಪಾಯಕ್ಕಾಗಿ ಆರಂಭಿಸಿದ ಈ ಗೃಹ ಕೈಗಾರಿಕೆ ಇಂದು ಇವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

ಆನಂದ ಧಾರವಾಡ, ಟೆಕ್ಸ್‌ಟೈಲ್ ಎಂಜಿನಿಯರ್. ಕನಕಪುರ ಬಳಿ ಸಾತನೂರಿನಲ್ಲಿ ‘ಗ್ರಾಮ ನಿರ್ಮಾಣ’ ಸಂಸ್ಥೆ ಮೂಲಕ ಗ್ರಾಮೀಣಾಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು, ಎರಡು ಮತ್ತು ನಾಲ್ಕು ಅಂಗುಲ ಅಗಲದ ಬಾಳೆಪಟ್ಟಿ  ತರಿಸಿಕೊಳ್ಳುತ್ತಾರೆ. ತಮಗೆ ಬೇಕಾದ ಅಳತೆಯಲ್ಲಿ ನಾರು ಹೆಣೆದು ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ‘ಈ ಉದ್ಯಮದಲ್ಲಿ ಸಾಕಷ್ಟು ಕೆಲಸ ಇದೆ, ಉತ್ಪನ್ನಗಳಿಗೆ ಬೇಡಿಕೆಯೂ ಇದೆ. ಆದರೆ ಇದರತ್ತ ಗಮನ ಹರಿಸುವವರೇ ಕಡಿಮೆ’ ಎನ್ನುತ್ತಾರೆ ಆನಂದ.
ಶಿವಪ್ರಸಾದ, ಕಂಪೆನಿಯೊಂದರಲ್ಲಿ ವ್ಯವಸ್ಥಾಪಕ ಆಗಿದ್ದವರು. ಅನಂತರ ಸ್ವಂತ ಉದ್ದಿಮೆ ಸ್ಥಾಪಿಸಲು ಬಾಳೆನಾರಿನ ಉದ್ಯಮವನ್ನೇ ಆಯ್ದುಕೊಂಡರು. ಧಾರವಾಡದಲ್ಲಿರುವ ‘ಗಗನ್ ಎಂಟರ್‌ಪ್ರೈಸಸ್’ ಮೂಲಕ ಬಾಳೆನಾರಿನ ಉತ್ಪಾದನೆ ಮತ್ತು ರಫ್ತು ಮಾಡುತ್ತಿದ್ದಾರೆ. ರೈತರಲ್ಲಿ ಬಾಳೆದಿಂಡಿನ ಮೌಲ್ಯವರ್ಧನೆ ಕುರಿತು ಅರಿವು, ಜಾಗೃತಿ ಮೂಡಿಸಬೇಕೆಂಬ ತೀವ್ರ ಹಂಬಲ ಇರುವವರು. 

ಉದ್ಯಮಕ್ಕೆ ತಮಿಳುನಾಡಿನ ಬಾಳೆಪಟ್ಟಿ

ಬೆಂಗಳೂರು, ಕನಕಪುರ, ಮೈಸೂರು, ಗೋಕಾಕ, ಬೀದರ್ ಹಲವೆಡೆ ಬಾಳೆನಾರಿನ ಗೃಹ ಕೈಗಾರಿಕೆಗಳಿವೆ. ಇವುಗಳಿಗೆಲ್ಲ ಬೇಕಾಗುವ ಬಾಳೆಪಟ್ಟಿಗಳನ್ನು ಪೂರೈಸುವಂಥ ವ್ಯವಸ್ಥೆ ನಮ್ಮಲ್ಲಿಲ್ಲ. ತಮಿಳುನಾಡಿನಿಂದ ಬರಬೇಕು.
‘ಬಾಳೆನಾರಿನ ವಸ್ತುಗಳಿಗೆ, ಉದ್ಯಮಕ್ಕೆ ಬೇಡಿಕೆಯಿದೆ, ಬಾಳೆನಾರನ್ನು ಮಾತ್ರ ಹೆಚ್ಚಾಗಿ ನೆರೆಯ ರಾಜ್ಯದಿಂದಲೇ ತರಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಬೆಂಗಳೂರಿನಲ್ಲಿರುವ ‘ಶ್ರೀಅನ್ವಿ ಹ್ಯಾಂಡಿಕ್ರಾಫ್ಟ್ಸ್’ ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಷಾ. ‘ಬಾಳೆಪಟ್ಟಿಗೆ ತುಂಬ ಬೇಡಿಕೆ ಇದೆ. ಆದರೆ ಎಲ್ಲ ತಮಿಳುನಾಡಿನಿಂದ ಬರಬೇಕು. ಒಂದು ತಿಂಗಳು ಮೊದಲೇ ಅವರಿಗೆ ಹಣ ಕೊಟ್ಟು ಬುಕ್ ಮಾಡಬೇಕು. ಆಮೇಲೆ ಅವರು ಕಳಿಸೋದು, ಅಲ್ಲಿಯೂ ಅಷ್ಟು ಡಿಮಾಂಡಿದೆ’ ಎನ್ನುತ್ತಾರೆ ಆನಂದ ಧಾರವಾಡ.

ತಮಿಳುನಾಡಿನಲ್ಲಿ ಈಗಾಗಲೇ ನೂರಾರು ಸ್ವಸಹಾಯ ಸಂಘಗಳು ಬಾಳೆನಾರಿನ ಉತ್ಪನ್ನಗಳನ್ನು ತಯಾರಿಸುತ್ತಿವೆ. ‘ಎಕೊ ಗ್ರೀನ್ ಯುನಿಟ್’ ಎಂಬ ಸಂಸ್ಥೆ ಇವರಿಗೆಲ್ಲ ಮಾರ್ಗದರ್ಶನ, ತರಬೇತಿ ನೀಡುತ್ತಿದೆ. ಸ್ವತಃ ಬಾಳೆನಾರಿನ ಯಂತ್ರಗಳನ್ನು ತಯಾರಿಸುತ್ತದೆ. ಅಲ್ಲದೇ ಅವರ ಉತ್ಪನ್ನಗಳನ್ನು ರಫ್ತು ಮಾಡಲು ಸಹಕರಿಸುತ್ತಿದೆ. ‘ರೈತರಿಗೆ ಮಾರ್ಗದರ್ಶನ ಮಾಡಲು ಅವರ ಉತ್ಪನ್ನಗಳನ್ನು ಖರೀದಿಸಲು ನಾವು ಸಿದ್ಧರಿದ್ದೇವೆ’ ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿ ಎಸ್ ಕೆ ಬಾಬು.

ಕರ್ನಾಟಕದಲ್ಲೇ ಬಾಳೆನಾರಿನ ಯಂತ್ರಗಳೂ ತಯಾರಾಗುತ್ತಿವೆ. ಬೆಳಗಾವಿಯ ‘ಫೀನಿಕ್ಸ್ ಪ್ರಾಡಕ್ಟ್ಸ್‌’ ನ ಹೇಮಂತ್ ಕಳೆದ ಹಲವಾರು ವರ್ಷಗಳಿಂದ ಇಂಥ ಯಂತ್ರ ತಯಾರಿಸುತ್ತಿದ್ದಾರೆ. ಇಂಥ ಯಂತ್ರಗಳಿಂದ ಕತ್ತಾಳೆ, ಅನಾನಸ್ ಎಲೆಗಳಿಂದಲೂ ನಾರು ತೆಗೆಯಬಹುದು ಎನ್ನುತ್ತಾರೆ.

ಸವಾಲುಗಳು
ರಾಜ್ಯದಲ್ಲಿ ರೈತರು ಏಕೆ ಈ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ? ಕಾರ್ಮಿಕರ ಕೊರತೆ, ಮಾಹಿತಿ, ಪ್ರೋತ್ಸಾಹದ ಕೊರತೆ;   ಕಚ್ಚಾವಸ್ತುಗಳ ಸಾಗಾಣಿಕೆಯ ಸಮಸ್ಯೆ ಮತ್ತು ಸರಿಯಾದ ಮಾರುಕಟ್ಟೆಯ ಅಲಭ್ಯತೆಯೂ ಕಾರಣವಿರಬಹುದು.
ಉತ್ಪಾದನೆ, ಮಾರುಕಟ್ಟೆ, ಬೇಡಿಕೆ, ಬೆಲೆ ಇವೆಲ್ಲವೂ ಒಂದನ್ನೊಂದು ಅವಲಂಬಿಸಿದ ಸರಪಳಿ. ಆ ಸರಪಳಿ ಸದೃಢಗೊಳ್ಳಬೇಕಿದೆ. ಸಹಕಾರಿ ಸಂಘಗಳ ಮೂಲಕ ಬಾಳೆನಾರಿನ ಉತ್ಪಾದನೆಗೆ ಪ್ರೋತ್ಸಾಹ ದೊರೆಯಬೇಕು. ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕಾ ಇಲಾಖೆಗಳು ರೈತರಿಗೆ ಮಾರ್ಗದರ್ಶನ, ಪ್ರೇರಣೆ ನೀಡುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT