ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂಕ ಬಿನ್ನಾಣರ ನಡೆನುಡಿ

Last Updated 6 ಜುಲೈ 2016, 19:30 IST
ಅಕ್ಷರ ಗಾತ್ರ

ರಂಗಭೂಮಿಯತ್ತ ವಿಶೇಷ ತುಡಿತವಿದ್ದ ಕೆಲ ಯುವಕರು ಸೇರಿ ಕಟ್ಟಿಕೊಂಡ ತಂಡ ‘ಬಿಂಕ ಬಿನ್ನಾಣರು’. ಚನ್ನಪಟ್ಟಣ ಮೂಲದ ಹೊನ್ನಿಗನಹಳ್ಳಿ ಎಸ್‌. ಶಿವಕುಮಾರ ಸಮಾನ ಮನಸ್ಕ ಗೆಳೆಯರ ಜೊತೆ ಸೇರಿ ಈ ತಂಡವನ್ನು 2015 ಮೇ ತಿಂಗಳಲ್ಲಿ ಪ್ರಾರಂಭಿಸಿದರು.

ರಂಗಭೂಮಿ, ನಟನೆ, ನಾಟಕಗಳ ಬಗೆಗೆ ಮೊದಲಿನಿಂದಲೂ ಒಲವು ಬೆಳೆಸಿಕೊಂಡವರೇ ಇದರಲ್ಲಿದ್ದಾರೆ. ಎಲ್ಲರೂ ಹವ್ಯಾಸಿ ಕಲಾವಿದರೇ. ನೀನಾಸಮ್‌ನಲ್ಲಿ ತರಬೇತಿ ಪಡೆದ ಹನುಮಕ್ಕ ಮರಿಯಮ್ಮನಹಳ್ಳಿ ಅವರೊಬ್ಬರನ್ನು ಬಿಟ್ಟರೆ ಈ ತಂಡದಲ್ಲಿರುವ ಬೇರೆ ಯಾರಿಗೂ ರಂಗಭೂಮಿ ತರಬೇತಿ ಇಲ್ಲ.

ಎಸ್ಸೆಸ್ಸೆಲ್ಸಿ ಮುಗಿಸಿರುವ ಶಿವಕುಮಾರ ನಾಟಕ ಪ್ರೀತಿಯಿಂದ ಗೆಳೆಯರ ಜೊತೆಗೆ ಬೆಂಗಳೂರಿನಲ್ಲಿ ಆಗುವ ನಾಟಕಗಳನ್ನು ವೀಕ್ಷಿಸಲು ಹೋಗುತ್ತಿದ್ದರು. ನಾಟಕ ನೋಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಈ ಗೆಳೆಯರ ಬಳಗ ಒಮ್ಮೆ ನಗರದ ಪ್ರತಿಷ್ಠಿತ ತಂಡವೊಂದರ ಜೊತೆಗೆ ಎರಡು ತಿಂಗಳುಗಳ ಕಾಲ ಕೆಲಸ ಮಾಡಿತು.

ಆ ತಂಡದೊಂದಿಗೆ ಹೊರಟು ಕರ್ನಾಟಕದ ವಿವಿಧೆಡೆ ಹಲವು ನಾಟಕಗಳನ್ನು ಪ್ರದರ್ಶಿಸಿದರು. ಕಲಾವಿದರಿಗೆ ಸಂಭಾವನೆ ಕೊಡುವಲ್ಲಿ ಮೋಸ ಉಂಟಾಯಿತು. ತಿಂಗಳುಗಟ್ಟಲೆ ಕಷ್ಟಪಟ್ಟು ದುಡಿದರೂ ಸರಿಯಾದ ಸಂಭಾವನೆ ನೀಡದೆ ಕಲಾವಿದರನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ಕಂಡು ನೊಂದ ಈ ಗೆಳೆಯರು ತಮ್ಮದೇ ಆದ ರಂಗತಂಡವೊಂದನ್ನು ಕಟ್ಟಲು ನಿರ್ಧರಿಸಿದರು.

‘ಕಲಾವಿದರಿಗೆ ಸಮಾನ ಸಂಭಾವನೆ ಸಿಗುವ, ಅವರಿಗೆ ಗೌರವ ದಕ್ಕುವಂತೆ ಮಾಡುವ ತಂಡವೊಂದನ್ನು ಕಟ್ಟಬೇಕು ಎನ್ನುವ ಮಹದಾಸೆಯೊಂದಿಗೆ ‘ಬಿಂಕ ಬಿನ್ನಾಣರು’ ಪ್ರಾರಂಭಿಸಿದೆವು. ಆಗ 40 ಜನ ತಂಡದಲ್ಲಿದ್ದೆವು. ಈಗ ರಂಗಭೂಮಿಯಲ್ಲೇ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸುಮಾರು 25ಮಂದಿ ಇದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಶಿವಕುಮಾರ್‌.

ತಂಡದ ಸದಸ್ಯರು ಪ್ರತಿನಿತ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ 1 ಗಂಟೆಯವರೆಗೆ ರಂಗತಾಲೀಮು ನಡೆಸುತ್ತಾರೆ. ತಂಡದಲ್ಲಿರುವ ಹೆಚ್ಚಿನವರು ದಿನಗೂಲಿ ಕೆಲಸಗಾರರಾಗಿ ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಅಭ್ಯಾಸ ಮುಗಿಸಿ ನಂತರ ಕಚೇರಿಗೆ ತೆರಳುತ್ತಾರೆ. ಇನ್ನುಳಿದವರು ದಿನಪೂರ್ತಿ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆ, ಬೀದಿ ನಾಟಕ ಅಭ್ಯಾಸದಲ್ಲಿ ತೊಡಗಿಕೊಂಡಿರುತ್ತಾರೆ.

ತಂಡದಲ್ಲಿ ಎಲ್ಲರೂ ಹವ್ಯಾಸಿ ಕಲಾವಿದರು. ಹೀಗಾಗಿ ಪ್ರತಿ ಬಾರಿ ನಾಟಕವನ್ನು ಆಯ್ದುಕೊಳ್ಳುವಾಗ, ಅವುಗಳನ್ನು ನಿರ್ದೇಶನ ಮಾಡುವಾಗ ತಂಡದ ಸದಸ್ಯರೆಲ್ಲರೂ ಸೇರಿ ಚರ್ಚೆ ನಡೆಸುತ್ತಾರೆ. ‘ಹೀಗಾಗಿಯೇ ಒಂದು ನಾಟಕ ಪ್ರದರ್ಶನ ಮಾಡುವಾಗ ನಾವು ಕನಿಷ್ಠ ಎರಡು ತಿಂಗಳಾದರೂ ಸಮಯ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ಶಿವಕುಮಾರ್‌.

ಅಂದಹಾಗೆ ಬಿಂಕ ಬಿನ್ನಾಣರು ಇದುವರೆಗೆ ಏಳು ನಾಟಕಗಳ ಪ್ರದರ್ಶನ ನೀಡಿದೆ. ತಂಡದ ಮೊದಲ ನಾಟಕವಾಗಿ ಮೂಡಿಬಂದಿದ್ದು ಭಾಸನ ‘ದೂತ ಘಟೋತ್ಕಜ’ (20 ಪ್ರದರ್ಶನ). ರಂಗಶ್ರೀ ನಡೆಸಿದ ಸ್ಪರ್ಧೆಯಲ್ಲಿ ಈ ನಾಟಕಕ್ಕೆ ಮೊದಲ ಬಹುಮಾನ ಬಂದಿತ್ತು.

ನಂತರ ಭಾಸ ವಿರಚಿತ ‘ಊರುಭಂಗ’ (10 ಪ್ರದರ್ಶನ), ‘ಮಧ್ಯಮ ವ್ಯಾಯೋಗ’ (5 ಪ್ರದರ್ಶನ), ‘ಕರ್ಣಭಾರ’ (4 ಪ್ರದರ್ಶನ), ‘ದೂತವಾಕ್ಯ’  (2 ಪ್ರದರ್ಶನ) ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ. ಅಲ್ಲದೆ ಪರ್ವತವಾಣಿಯವರ ‘ಆಶೀರ್ವಾದ’ ನಾಟಕ ಪ್ರದರ್ಶನವನ್ನೂ ತಂಡ ಮಾಡಿದೆ. ‘ಅಚ್ಛೆ ದಿನ್‌’ ಎನ್ನುವ ಬೀದಿ ನಾಟಕದ ಮೂರು ಪ್ರದರ್ಶನವನ್ನೂ ತಂಡ ನೀಡಿದೆ.

ನಟನೆಯ ಕಲಿಕೆಗೆ, ರಂಗಭೂಮಿಗೆ ಅಗತ್ಯವಾದ ಶಕ್ತಿಯುತ ನಿಲುವು ಹಾಗೂ ಸ್ಫೂರ್ತಿ ಸಿಗುತ್ತದೆ ಎನ್ನುವ ಕಾರಣಕ್ಕೆ ಮೊದಲ ಪ್ರಯೋಗವಾಗಿ ತಂಡ ‘ದೂತ ಘಟೋತ್ಕಜ’ ನಾಟಕವನ್ನು ಆಯ್ದುಕೊಂಡಿತು. ‘ಆದರೆ ಭಾಸನ ಕಥೆಗಳ ಆಳಕ್ಕೆ ಇಳಿಯುತ್ತಿದ್ದ ಹಾಗೆ ಐದೂ ನಾಟಕಗಳನ್ನು ಅಭಿನಯಿಸುವಂತಾಯಿತು’ ಎನ್ನುವ ಶಿವಕುಮಾರ್‌ ಅವರೇ ಈ ಎಲ್ಲಾ ನಾಟಕಗಳನ್ನು ನಿರ್ದೇಶಿಸಿದ್ದು.

ತಂಡದ ಪ್ರಮುಖರು
ನಾಗರಾಜ ಬಿ.ಎನ್‌, ಹರೀಶ್‌, ರಾಘವೇಂದ್ರ, ಸಂಗಮೇಶ್‌, ನವೀನ್‌ ಆಚಾರ್ಯ, ಮಾಳ ಸುದೀಪ್‌ ಶೆಟ್ಟಿ, ಹನುಮಕ್ಕ ಮರಿಯಮ್ಮನಹಳ್ಳಿ ಮುಂತಾದವರು. ತಂಡದಲ್ಲಿರುವ ಸಂಗಮೇಶ್‌ ಹಾಗೂ ಸುಹಿತ್‌ ಗೌಡ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತಂಡದಲ್ಲಿ ಈ ಮೊದಲಿದ್ದ ನವೀನ್‌ ಎನ್ನುವವರೂ ಈಗ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ.

ತಂಡದ ನಿಯಮ
ಪ್ರತಿ ನಾಟಕದ ತಾಲೀಮು ಆರಂಭಿಸುವುದಕ್ಕೂ ಮುನ್ನ ಅವುಗಳ ಬಗ್ಗೆ ಚರ್ಚೆ, ವಿಸ್ತೃತ ಮಾಹಿತಿಯ ವಿನಿಮಯವಾಗುತ್ತದೆ. ನಾಟಕಾಭ್ಯಾಸಕ್ಕೂ ಮುನ್ನ ನಿತ್ಯವೂ ಒಂದು ಗಂಟೆ ವ್ಯಾಯಾಮ ನಡೆಯುತ್ತದೆ. ನಾಟಕದಿಂದ ಬಂದ ಹಣ ಸಮಾನವಾಗಿ ಕಲಾವಿದರಿಗೆ ಹಂಚಿಕೆಯಾಗುತ್ತದೆ.

ಕಲಾವಿದನಾದವ ಎಂದಿಗೂ ಹಸಿದುಕೊಂಡಿರಬಾರದು. ನಟನೆಯ ಮೂಲ ಬೇರಾದ ರಂಗಭೂಮಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂಥ ಸನ್ನಿವೇಶ ನಿರ್ಮಾಣವಾಗಬೇಕು. ದೊಡ್ಡ ದೊಡ್ಡ ನಾಟಕ ಕಂಪೆನಿಗಳಲ್ಲಿ ತರಬೇತಿ ಪಡೆದರೆ ಮಾತ್ರ ಕಲಾವಿದ ಎನ್ನುವ ಅನೇಕರ ಭಾವನೆಯನ್ನು ಬದಲಾಯಿಸಿ ಸಾಮಾನ್ಯರಿಂದಲೇ ರಂಗಭೂಮಿ ಎನ್ನುವ ಮನಸ್ಥಿತಿ ಬೆಳೆಸಬೇಕು ಎಂಬುದು ತಂಡದ ಆಶಯ.

ಮುಂದಿನ ಯೋಜನೆ
‘ಬಿಂಕ ಬಿನ್ನಾಣರು’ ಅಭಿನಯದ ಎಲ್ಲಾ ನಾಟಕಗಳಿಗೂ ಜನರಿಂದ ಸಿಕ್ಕ ಪ್ರತಿಕ್ರಿಯೆ ಬಗೆಗೆ ತಂಡಕ್ಕೆ ಖುಷಿಯಿದೆ. ಇತ್ತೀಚೆಗೆ ಭಾಸನ ಐದೂ ನಾಟಕಗಳನ್ನು ಸೇರಿಸಿ ‘ಭಾಸಭಾರತ’ ಪ್ರಯೋಗವನ್ನೂ ತಂಡ ಮಾಡಿತ್ತು. ಒಂದು ಗಂಟೆ ನಲವತ್ತು ನಿಮಿಷಗಳ ಕಾಲದ ಈ ಪ್ರಯತ್ನಕ್ಕೆ ಮೆಚ್ಚುಗೆ ಕೂಡ ಸಿಕ್ಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದಾದರೂ ಐದು ಹಳೆ ಕಾಮಿಡಿ ನಾಟಕಗಳನ್ನು ಹೊಸರೂಪದಲ್ಲಿ ರಂಗಕ್ಕೆ ತರುವ ಕನಸು ತಂಡಕ್ಕಿದೆ. ಅಲ್ಲದೆ ತಂಡ ಅಭಿನಯಿಸಿರುವ ಏಳು ನಾಟಕ ಹಾಗೂ ಐದು ಕಾಮಿಡಿ ನಾಟಕಗಳನ್ನು ಸೇರಿಸಿ  ಈ ವರ್ಷದಲ್ಲೇ ಉತ್ಸವ ಮಾಡುವ ಯೋಜನೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT