ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿ ಭದ್ರತೆ ನಡುವೆ ಶಾಂತಿಯುತ ಮತದಾನ

ಶಾಂತಿಯುತ ಮತದಾನ * ಕೇರಳ ಶೇ 71.7, ತಮಿಳುನಾಡು ಶೇ 69.2, ಪುದುಚೇರಿ ಶೇ 71.08
Last Updated 16 ಮೇ 2016, 19:30 IST
ಅಕ್ಷರ ಗಾತ್ರ

ಚೆನ್ನೈ/ತಿರುವನಂತಪುರ/ ಪುದುಚೇರಿ (ಪಿಟಿಐ): ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗಳಿಗೆ ಸೋಮವಾರ ನಡೆದ ಚುನಾವಣೆಗಳಲ್ಲಿ ಕ್ರಮವಾಗಿ ಶೇ 71.7, ಶೇ 69.19 ಮತ್ತು ಶೇ 71.08ರಷ್ಟು ಮತದಾನವಾಗಿದೆ. ಬಿಗಿ ಭದ್ರತೆ ನಡುವೆ ಚುನಾವಣೆಯು ಬಹುತೇಕ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಅಂತಿಮ ಹಂತದ ನಿಖರ ಅಂಕಿ–ಅಂಶಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ಮತದಾನದ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ ಲಭ್ಯವಾಗಿರುವ ಅಂಕಿ ಅಂಶಗಳನ್ನು ಪರಿಗಣಿಸಿ ಹೇಳುವುದಾದರೆ, 2011ರ ಚುನಾವಣೆಗೆ ಹೋಲಿಸಿದರೆ ಮೂರೂ ಕಡೆಗಳಲ್ಲಿ ಈ ಬಾರಿ ಮತದಾನದ ಪ್ರಮಾಣ ಕಡಿಮೆಯಾಗಿದೆ.

ತಮಿಳುನಾಡು: 232 ಕ್ಷೇತ್ರಗಳಿಗೆ ನಡೆದಿರುವ ಚುನಾವಣೆಯಲ್ಲಿ ಸಂಜೆ 5 ಗಂಟೆವರೆಗೆ ಶೇ 69.19ರಷ್ಟು ಮತ ಚಲಾವಣೆಯಾಗಿದೆ ಎಂದು ಉಪ ಚುನಾವಣಾ ಆಯುಕ್ತ ಉಮೇಶ್‌ ಸಿನ್ಹಾ ಹೇಳಿದ್ದಾರೆ. 2011ರ ಚುನಾವಣೆಯಲ್ಲಿ ಶೇ 78.35ರಷ್ಟು ಮತದಾನವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆ ಬಂದಿದ್ದರೂ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಮಳೆ– ಮತದಾರರ ಪರದಾಟ: ತಮಿಳುನಾಡಿನ ಅನೇಕ ಕಡೆಗಳಲ್ಲಿ ಸೋಮವಾರ ಮಳೆ ಆಗಿದ್ದರಿಂದ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ತೊಂದರೆಗೆ ಒಳಗಾದರು. ಚೆನ್ನೈ, ತಿರುಚಿರಾಪಳ್ಳಿ, ಶಿವಗಂಗಾ, ತಿರುವಳ್ಳೂರ್, ವಿಲ್ಲುಪಮ್ ಮತ್ತು ಕಂಚಿಪುರ ಜಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ರಾಮನಾಥಪುರಂ ಜಿಲ್ಲೆಯ  ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ.

ಬಂಗಾಳಕೊಲ್ಲಿಯ ವಾಯವ್ಯ ಭಾಗದಲ್ಲಿ ಮತ್ತು ಹಿಂದೂ ಮಹಾ ಸಾಗರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಮುಂದಿನ 24ರಿಂದ 48 ಗಂಟೆಯೊಳಗೆ ದಕ್ಷಿಣ ತಮಿಳುನಾಡಿನ ಒಂದೆರಡು ಕಡೆಗಳಲ್ಲಿ ಮತ್ತು ಉತ್ತರ ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಪುದುಚೇರಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ಕೇರಳ: ಸಂಜೆ 6 ಗಂಟೆವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಶೇ 71.7ರಷ್ಟು ಮಂದಿ ಮತದಾನ ಮಾಡಿದ್ದಾರೆ. 2011ರಲ್ಲಿ ಶೇ 74.02ರಷ್ಟು ಮತ ಚಲಾವಣೆ ಆಗಿತ್ತು.

ಪುದುಚೇರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 30 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಆರು ಗಂಟೆವರೆಗೆ ಶೇ 71.08ರಷ್ಟು ಮತ ಚಲಾವಣೆ ಆಗಿದೆ. 2011ರಲ್ಲಿ ಈ ಪ್ರಮಾಣ ಶೇ 74.02ರಷ್ಟಿತ್ತು.

ಹಣ ಹಂಚಿಕೆ ಆರೋಪ: ಅರವಾಕುರಿಚಿ ಮತ್ತು ತಂಜಾವೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಹಣ  ಹಂಚಿರುವ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕು ಎಂದು ಬಿಜೆಪಿ ಮತ್ತು ಸಿಪಿಎಂ ಒತ್ತಾಯಿಸಿವೆ.

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿಕೆ ಮತ್ತು ನಿತ್ಯಬಳಕೆಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿರುವುದರಿಂದ ಈ ಎರಡು ವಿಧಾನಸಭಾ ಕ್ಷೇತ್ರಗಳ ಮತದಾನವನ್ನು ಇದೇ 23ಕ್ಕೆ ಮುಂದೂಡಲಾಗಿದೆ.

‘ಇಂತಹ ಆರೋಪ ವ್ಯಾಪಕವಾಗಿ  ಕೇಳಿ ಬರುತ್ತಿರುವುದರಿಂದ ಎರಡು ಕ್ಷೇತ್ರಗಳಲ್ಲಿ ಮಾತ್ರ ಅಕ್ರಮ ನಡೆದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷೆ ತಮಿಳಿಸಾಯಿ ಸೌಂದರರಾಜ  ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿಸಿರುವ ಸಿಪಿಎಂನ ರಾಜ್ಯ ಕಾರ್ಯದರ್ಶಿ ಜಿ. ರಾಮಕೃಷ್ಣನ್‌, ‘ಹಿಂದೆಂದೂ ಕಂಡಿಲ್ಲದ ರೀತಿಯಲ್ಲಿ ಹಣ ಹಂಚಿಕೆ ನಡೆದಿದೆ. ಇಂತಹ ಪ್ರಕರಣಗಳು ವರದಿಯಾಗಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಗೆಲುವು ನಮ್ಮದೇ–ಚಾಂಡಿ: ಈ ಬಾರಿ ಚುನಾವಣೆಯಲ್ಲಿ ಗೆದ್ದು ಕೇರಳದ ಅಧಿಕಾರ ಚುಕ್ಕಾಣಿ ಹಿಡಿಯುವ ವಿಶ್ವಾಸವನ್ನು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನಾಯಕತ್ವದ ಎಲ್‌ಡಿಎಫ್‌ ವ್ಯಕ್ತಪಡಿಸಿವೆ.

ಯುಡಿಎಫ್‌ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹೇಳಿದರೆ, ರಾಜ್ಯದಾದ್ಯಂತ ‘ಎಲ್‌ಡಿಎಫ್‌ ಅಲೆ’ಯಿದೆ ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ, ಎಲ್‌ಡಿಎಫ್‌ನ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಪಿನರಾಯಿ ವಿಜಯನ್‌ ಹೇಳಿಕೊಂಡಿದ್ದಾರೆ.

‘ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವುದು ಅಸಾಧ್ಯ’: ಸೊಮಾಲಿಯಾ ಬಡತನವನ್ನು ಕೇರಳಕ್ಕೆ ಹೋಲಿಸಿ ಪ್ರಧಾನಿ ಮೋದಿ ಹೇಳಿಕೆ ನೀಡಿರುವುದು ರಾಜ್ಯದಲ್ಲಿ ಬಿಜೆಪಿ ಖಾತೆ ತೆರೆಯುವುದಕ್ಕೆ ಅಡ್ಡಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಎ. ಕೆ. ಅಂಟನಿ ಹೇಳಿದರು.

ಹಸಿವು, ಬಡತನ, ಸಾವು ಮತ್ತು ಕಡಲ್ಗಳ್ಳತನಕ್ಕೆ ಕುಖ್ಯಾತಿ ಹೊಂದಿರುವ ಸೊಮಾಲಿಯಾಕ್ಕೆ ಕೇರಳವನ್ನು ಪ್ರಧಾನಿ ಹೋಲಿಸಿರುವುದು ಮತದಾರರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ ಎಂದು ಅಂಟನಿ ಅವರು ಮತ ಚಲಾಯಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮತದಾನ: ಮೂವರ ಸಾವು
ಕೊಯಮತ್ತೂರು/ಮದುರೆ (ಪಿಟಿಐ):
ತೀವ್ರ ಹೃದಯಾಘಾತದಿಂದಾಗಿ 54 ವರ್ಷದ ಮತಗಟ್ಟೆ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ತಮಿಳುನಾಡಿನ ಕಂಗೆಯಂ ಕ್ಷೇತ್ರದಲ್ಲಿ ನಡೆದಿದೆ. ಮತದಾನಕ್ಕೆಂದು ಬಂದಿದ್ದ ಇಬ್ಬರು ಮತದಾರರು ಕುಸಿದು ಬಿದ್ದು ಪ್ರಾಣ ಕಳೆದುಕೊಂಡ ಪ್ರಕರಣಗಳು ಮದುರೆ ಮತ್ತು ಶಿವಗಂಗೆಗಳಲ್ಲಿ ವರದಿಯಾಗಿವೆ.

ಶಿಕ್ಷಕರಾಗಿರುವ ಸೆಲ್ವರಾಜ್‌ ಎಂಬುವವರು ತಿರಪುರ ಜಿಲ್ಲೆಗೆ ಸಮೀಪದ ಕಂಗೆಯಂಪಾಳ್ಯದ ಮತಗಟ್ಟೆಯೊಂದಕ್ಕೆ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಸೋಮವಾರ ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರು ಕುಸಿದು ಬಿದ್ದು, ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ.

ಮತದಾರರ ಸಾವು: ಮದುರೆಯ ಕೇಂದ್ರ ವಿಧಾನಸಭಾ ಕ್ಷೇತ್ರದ ಸಮೀಪದ ಮತಗಟ್ಟೆಗೆ ಮತದಾನ ಮಾಡಲು ಬಂದಿದ್ದ 70 ವರ್ಷದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.70 ವರ್ಷದ ಮಹಿಳೆಯೊಬ್ಬರು ವಿರುಧುನಗರ ಜಿಲ್ಲೆಯ ಅರುಪ್ಪುಕೊಟ್ಟಾಯಿ ಮತಗಟ್ಟೆಯಲ್ಲಿ  ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT