ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ– ಸೇನಾ ಮರುಮೈತ್ರಿ ಘೋಷಣೆಯಷ್ಟೇ ಬಾಕಿ?

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ/ಐಎಎನ್‌ಎಸ್‌):  ಬಿಜೆಪಿ­ಯೊಂದಿಗೆ ಮರುಮೈತ್ರಿ ಏರ್ಪಡುವ ಪ್ರಬಲ ಸುಳಿವು ನೀಡಿರುವ ಶಿವಸೇನಾ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ ೨೬ರಂದು ಎನ್‌ಡಿಎ ಮಿತ್ರಪಕ್ಷಗಳಿಗೆ ಹಮ್ಮಿಕೊಂಡಿ­ರುವ ದೀಪಾವಳಿ ಔತಣಕೂಟದಲ್ಲಿ ತನ್ನ ಸಂಸದರು ಭಾಗವಹಿಸುತ್ತಾರೆ ಎಂದು ಗುರುವಾರ ಹೇಳಿದೆ.

‘ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ನೀಡುವುದು ಎರಡೂ ಪಕ್ಷಗಳ ಉದ್ದೇಶ’ ಎಂದೂ ಸೇನಾ ತಿಳಿಸಿದೆ. ‘ದೆಹಲಿಯಲ್ಲಿ ಬಿಜೆಪಿ ಮುಖಂಡರನ್ನು ಭೇಟಿಯಾಗುವಂತೆ ಪಕ್ಷದ ವರಿಷ್ಠ ಉದ್ಧವ್‌್ ಠಾಕ್ರೆ ನಮಗೆ ತಿಳಿಸಿದ್ದರು. ನಮ್ಮ ನಡುವಿನ ಮಾತುಕತೆ ಸಕಾ­ರಾತ್ಮಕವಾಗಿದೆ. ಎರಡೂ ಪಕ್ಷಗಳಿಗೂ ರಾಜ್ಯದಲ್ಲಿ ಉತ್ತಮ ಜನಾದೇಶ ಸಿಕ್ಕಿದೆ. ರಾಜ್ಯದ ಜನರ ಭಾವನೆಯನ್ನು ದೃಷ್ಟಿಯ­ಲ್ಲಿಟ್ಟುಕೊಂಡು ನಾವು ಖಂಡಿತವಾ­ಗಿಯೂ ಸ್ಥಿರ ಸರ್ಕಾರ ಕೊಡುತ್ತೇವೆ’ ಎಂದು ಸೇನಾ ಮುಖಂಡ  ಅನಿಲ್‌ ದೇಸಾಯಿ ಹೇಳಿದ್ದಾರೆ.

‘ದೀಪಾವಳಿಯ ಶುಭ ಸಮಯದಲ್ಲಿ ನಮ್ಮ ನಡುವೆ ಮಾತುಕತೆ ನಡೆಯು­ತ್ತಿದೆ. ದೀಪಾವಳಿ ಆಚರಿಸುವುದಕ್ಕೆ  ನಾವು ದೆಹಲಿಯಿಂದ ಮರಳಿ ಬಂದೆವು.  ಸರ್ಕಾರ ರಚನೆ ಸಂಬಂಧ ಸೋಮವಾರ ಎರಡೂ ಪಕ್ಷಗಳು ಮತ್ತೆ ಸಭೆ ಸೇರಲಿವೆ’ ಎಂದು ಅವರು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವುದಷ್ಟೇ ನಮ್ಮ ಉದ್ದೇಶ. ನಾವು ಯಾವುದೇ ಬೇಡಿಕೆ ಇಟ್ಟಿಲ್ಲ’ ಎಂದು ದೇಸಾಯಿ ಸ್ಪಷ್ಟಪಡಿಸಿದ್ದಾರೆ.

ಸಿ.ಎಂ ಸ್ಥಾನದ ಆಕಾಂಕ್ಷಿ ಅಲ್ಲ– ಗಡ್ಕರಿ
ನಾಗಪುರ (ಪಿಟಿಐ/ಐಎಎನ್‌ಎಸ್‌):
ಮಹಾ­ರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ತಾವು ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌್ ಗಡ್ಕರಿ, ‘ನಾನು ರಾಜ್ಯ ರಾಜಕೀಯಕ್ಕೆ ಮರಳುವುದಿಲ್ಲ. ದೆಹಲಿ­ಯಲ್ಲಿ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತೇನೆ’ ಎಂದಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ೩೯ ನೂತನ ಶಾಸಕರು ಗಡ್ಕರಿ ಅವರು ಮುಖ್ಯ­ಮಂತ್ರಿ­ಯಾಗಬೇಕು ಎಂದು ಬಯಸಿ­ರುವ ಬೆನ್ನಲ್ಲಿಯೇ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಗಾದಿಗೆ ಗಡ್ಕರಿ ಹೆಸರನ್ನು ತೇಲಿಬಿಟ್ಟವರು ಮಾಜಿ ಸಚಿವ ಸುಧೀರ್‌ ಮುಂಗಂಟಿ­ವರ್‌. ಗುರುವಾರ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್‌ ಅವರು ಗಡ್ಕರಿ ನಿವಾಸಕ್ಕೆ ತೆರಳಿ ಅವರಿಗೆ ದೀಪಾವಳಿ ಶುಭಾಶಯ ತಿಳಿಸಿದರು.

ಸುಮಾರು ಅರ್ಧಗಂಟೆ ಕಾಲ ಫಡ್ನವಿಸ್‌ ಅವರು ಗಡ್ಕರಿ ನಿವಾಸದಲ್ಲಿ ಇದ್ದರು. ಇವರಿಬ್ಬರ ಮಧ್ಯೆ ಯಾವ ವಿಷಯ ಚರ್ಚೆ ಆಯಿತು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ‘ಫಡ್ನವಿಸ್‌ ನನ್ನ ಸಹೋದ್ಯೋಗಿ. ದೀಪಾವಳಿ ಶುಭಾಶಯ ತಿಳಿಸುವುದಕ್ಕೆ ನಮ್ಮ ಮನೆಗೆ ಬಂದಿದ್ದರು’ ಎಂದು ಗಡ್ಕರಿ ನಂತರ ತಿಳಿಸಿದರು.

ಗಡ್ಕರಿ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಫಡ್ನವಿಸ್‌ ಜತೆ ನಗರದ ಮೇಯನ್‌ ಪ್ರವೀಣ್‌ ಡಾಟ್ಕೆ ಕೂಡ ಇದ್ದರು.
ತಾವು ರಾಜ್ಯ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಈ ಮೊದಲೇ ಗಡ್ಕರಿ ಸ್ಪಷ್ಟಪಡಿಸಿದ್ದರು.ಕೇಂದ್ರ ನಾಯಕತ್ವಕ್ಕೆ ಫಡ್ನವಿಸ್‌್ ಅವರು  ಮಹಾರಾಷ್ಟ್ರ ಮುಖ್ಯಮಂತ್ರಿ­ಯಾಗಬೇಕೆನ್ನುವ ಇರಾದೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT