ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡರ ಬೆಂಬಲ

ಬಂಡಾಯ ಅಭ್ಯರ್ಥಿ ಡಾ.ಆರ್‌.ಎಂ.ಕುಬೇರಪ್ಪ ನಿರೀಕ್ಷೆ
Last Updated 26 ಮೇ 2016, 8:33 IST
ಅಕ್ಷರ ಗಾತ್ರ

ಕಾರವಾರ: ‘ಬಿಜೆಪಿಯಿಂದ ಸ್ಪರ್ಧಿಸಿರುವ ಮಾ.ನಾಗರಾಜ ದುರ್ಬಲ ಅಭ್ಯರ್ಥಿ ಎನ್ನುವುದು ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರಿಗೆ ಅರಿವಾಗಿದೆ. ಹೀಗಾಗಿ ಅವರೆಲ್ಲ ನನಗೆ ಬೆಂಬಲ ನೀಡುವ ನಿರೀಕ್ಷೆ ಇದೆ’ ಎಂದು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಡಾ.ಆರ್‌.ಎಂ.ಕುಬೇರಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲ ಅಪಪ್ರಚಾರದಿಂದ ನನಗೆ ಈ ಬಾರಿ ಪಕ್ಷದ ಟಿಕೆಟ್‌ ತಪ್ಪಿತು. ಶಿಕ್ಷಕ ಸಮುದಾಯಕ್ಕೆ ಅಪರಿಚಿತರಾದ ನಾಗರಾಜ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಅವರು ಸೂಕ್ತ ಅಭ್ಯರ್ಥಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಉತ್ತಮ ಅವಕಾಶವನ್ನು ಕಲ್ಪಿಸಲಾಗುವುದು. ಹೀಗಾಗಿ ಕಣದಿಂದ ಹಿಂದೆ ಸರಿಯಲು ಬಿಜೆಪಿ ವರಿಷ್ಠ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಇತರೆ ಹಿರಿಯ ಮುಖಂಡರು ಕೋರಿದ್ದರು. ಆದರೆ ಶಿಕ್ಷಕ ಸಂಘಟನೆಗಳಿಂದ ಅಪಾರ ಬೆಂಬಲ ದೊರೆತಿರುವ ಕಾರಣ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದರು.

ನೀವೇನು ಮಾಡಿದ್ದೀರಾ?:
‘ಎದುರಾಳಿ ಅಭ್ಯರ್ಥಿಗಳ ವಿರುದ್ಧ ಹಗುರವಾಗಿ ಮಾತನಾಡುತ್ತಿರುವ ಬಸವರಾಜ ಹೊರಟ್ಟಿ ಅವರೇ ನೀವು ವಿಧಾನ ಪರಿಷತ್‌ ಸದಸ್ಯರಾಗುವ ಮುನ್ನ ಏನು ಸಾಧನೆ ಮಾಡಿದ್ದೀರ ಅಂತ ಹೇಳಿ. ಶಿಕ್ಷಕ ಸಮುದಾಯದಲ್ಲಿನ ಪ್ರಮುಖ 36 ಸಮಸ್ಯೆಗಳನ್ನು ಪಟ್ಟಿ ಮಾಡಿ ನಿಮ್ಮ ಮುಂದೆ ಇಟ್ಟಿದ್ದೇನೆ. ಸತತವಾಗಿ 36 ವರ್ಷಗಳ ಕಾಲ ಅಧಿಕಾರ ನಡೆಸಿದ ನೀವು ಈ ಸಮಸ್ಯೆಗಳನ್ನು ಬಗೆಹರಿಸದಿರುವುದಕ್ಕೆ ಉತ್ತರಿಸಿ’ ಎಂದು ಸವಾಲು ಹಾಕಿದರು.  

ಪಶ್ಚಿಮ ಶಿಕ್ಷಕರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಮತಯಾಚನೆ ಮಾಡಿದ್ದೇನೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಕ್ಷಕರ ಅನೇಕ ಸಮಸ್ಯೆಗಳನ್ನು ಹೊರಟ್ಟಿ ಅವರು ಜೀವಂತವಾಗಿರಿಸಿದ್ದಾರೆ. ಅವರಿಗೆ ವಿಶ್ರಾಂತಿ ನೀಡಲು ಶಿಕ್ಷಕ ವರ್ಗದವರು ತೀರ್ಮಾನಿಸಿದ್ದು, ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದರು.

‘ನಾನು ಯಾವುದೇ ರಾಜಕಾರಣದಿಂದ ಬಂದವನ್ನಲ್ಲ. ಶಿಕ್ಷಕ ಸಂಘಟನೆಯಿಂದ ಬಂದಿರುವ ನಾನು ಶಿಕ್ಷಕರ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದೇನೆ. ಅವುಗಳನ್ನು ಬಗೆಹರಿಸುವ ಸಲುವಾಗಿ ಶಿಕ್ಷಕ ಸಮುದಾಯ ನನ್ನನ್ನು ವಿಧಾನ ಪರಿಷತ್‌ಗೆ ಆರಿಸಿ ಕಳುಹಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT