ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಪ್ರಸ್ತಾವಕ್ಕೆ ವಿರೋಧ

ಅನ್ಯರಾಜ್ಯದವರಿಗೆ ಫ್ಲ್ಯಾಟ್‌ ಖರೀದಿ ಮಿತಿ ಇಳಿಕೆ
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊರ ರಾಜ್ಯದ ಜನರು ನಗರದಲ್ಲಿ ಫ್ಲ್ಯಾಟ್‌ ಖರೀದಿಸಲು ಕನಿಷ್ಠ 15 ವರ್ಷ ರಾಜ್ಯದಲ್ಲಿ ವಾಸವಿರಬೇಕು ಎಂಬ ಮಿತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಐದು ವರ್ಷಕ್ಕೆ ಇಳಿಸಲು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವಕ್ಕೆ ಸಾಹಿತಿಗಳು, ಕನ್ನಡಪರ ಸಂಘಟನೆಗಳ  ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ಬಿಡಿಎ ನಿವೇಶನ ಮತ್ತು ವಸತಿ ಹಂಚಿಕೆ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿರುವ ಹೊಸ ಪ್ರಸ್ತಾವ ಕನ್ನಡಿಗರಿಗೆ ವರವೋ? ಶಾಪವೋ’ ಎಂಬ ವಿಷಯ ಕುರಿತು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಗರದಲ್ಲಿ ಮಂಗಳವಾರ ಚಿಂತನಾ ಗೋಷ್ಠಿ ಆಯೋಜಿಸಿತ್ತು.

ಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಪಿ.ವಿ.ನಾರಾಯಣ, ‘ಜಮ್ಮು ಮತ್ತು ಕಾಶ್ಮೀರದ ಮಾದರಿಯಲ್ಲಿ ಸಂವಿಧಾನದ 370ನೇ ವಿಧಿ ಅಡಿ ಎಲ್ಲ ರಾಜ್ಯಗಳಿಗೂ ವಿಶೇಷ ಸ್ಥಾನಮಾನ ನೀಡಬೇಕು. ಆಗ ನಮ್ಮಲ್ಲಿ  ಹೊರಗಿನವರು ಭೂಮಿ ಖರೀದಿಸಲು ಅವಕಾಶ ಇಲ್ಲದಂತಾಗುತ್ತದೆ’ ಎಂದು ಹೇಳಿದರು.

‘ನಮ್ಮ ರಾಷ್ಟ್ರದ ಮೂಲ ಕಲ್ಪನೆಯಲ್ಲಿಯೇ ದೋಷವಿದೆ. ಹೀಗಾಗಿ ಎಲ್ಲಿಯೋ ವಾಸ ಮಾಡುವವರು ಇಲ್ಲಿ ಭೂಮಿ, ನಿವೇಶನ ಖರೀದಿಸುತ್ತಿದ್ದಾರೆ. ಹೀಗಾಗಿ ನಾವು ಬೇಲಿ ಇಲ್ಲದ ಹೊಲವಾಗಿದ್ದೇವೆ. 15 ವರ್ಷ ಇಲ್ಲಿ ಬದುಕಿ ಕನ್ನಡ ಓದಲು ಮತ್ತು ಬರೆಯಲು ಬಲ್ಲವರಿಗೆ ಮಾತ್ರ ಇಲ್ಲಿ ಭೂಮಿ ಖರೀದಿಸುವ ಹಕ್ಕು ಇರಬೇಕು’ ಎಂದು ಪ್ರತಿಪಾದಿಸಿದರು.

‘ದೆಹಲಿ ಗುಲಾಮಗಿರಿಯಲ್ಲಿಯೇ ಇರುವ ಪಕ್ಷಗಳಿಂದಲೇ ನಾವು ಆಡಳಿತ ನಡೆಸಬೇಕಾಗಿರುವುದು ಕನ್ನಡ ನಾಡಿನ ದುರಂತ. ಹೀಗಾಗಿ ನಮ್ಮತನ ಹೋಗಿದೆ. ಈ ಸಂದರ್ಭದಲ್ಲಿ ನಾವು ಕ್ರಾಂತಿಕಾರಿಗಳಾಗಬೇಕು. ಕನ್ನಡಕ್ಕಾಗಿ ಯಾವುದೇ ವಿದ್ರೋಹಿ ಕೆಲಸ ಮಾಡಲು ನಾನು ಸಿದ್ಧ’ ಎಂದರು.

ನಟ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ರಾಜ್ಯದಲ್ಲಿ 15 ವರ್ಷ ವಾಸ ಮಾಡಿದವರೆಲ್ಲ ಕನ್ನಡಿಗರು ಹಾಗೂ ಅವರಿಗೆ ಇಲ್ಲಿ ಭೂಮಿ, ನಿವೇಶನ ಖರೀದಿಸುವ ಹಕ್ಕಿದೆ ಎಂಬ ನಿಯಮವನ್ನು ಬಿಡಿಎ 5 ವರ್ಷಕ್ಕೆ ಇಳಿಸಿ ಪ್ರಸ್ತಾವ ಸಲ್ಲಿಸಿದ್ದರೆ ಅದನ್ನು ಖಂಡಿಸಲೇ ಬೇಕು’ ಎಂದು ಹೇಳಿದರು.

‘ಇದನ್ನು ವಿರೋಧಿಸಿ ಬಿಡಿಎ ಆಯುಕ್ತರು, ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಿಗೆ ಕಠೋರವಾದ ಭಾಷೆಯಲ್ಲಿಯೇ ಪತ್ರ ಬರೆದು, ಛೀಮಾರಿ ಹಾಕಿ ಪ್ರಸ್ತಾವವನ್ನು ಹಿಂದಕ್ಕೆ ಪಡೆಯಿರಿ ಎಂದು ಹೇಳುವ ಕಾರ್ಯ ತುರ್ತಾಗಿ ಆಗಬೇಕಿದೆ’ ಎಂದು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಮಾತನಾಡಿ, ‘ಬಿಡಿಎ ನಗರದಲ್ಲಿ ಈವರೆಗೆ 20 ಸಾವಿರಕ್ಕೂ ಅಧಿಕ ಎಕರೆ ಜಮೀನು ಖರೀದಿಸಿ, 65ಕ್ಕೂ ಅಧಿಕ ಬಡಾವಣೆಗಳನ್ನು ನಿರ್ಮಿಸಿದೆ. ಅದರಲ್ಲಿ ಶೇ10 ರಷ್ಟನ್ನು ಮಾತ್ರ ಕನ್ನಡಿಗರಿಗೆ ನೀಡಿರಬಹುದು. ಬಿಡಿಎ ಈ ಅನ್ಯಾಯ ಖಂಡಿಸಿ ಹೋರಾಟ ನಡೆಸಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT