ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿನ್ನಿ, ಮಿಥುನ್‌ಗೆ ಹೆಚ್ಚು ಬೆಲೆ

Last Updated 25 ಜುಲೈ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಸ್ಟುವರ್ಟ್‌ ಬಿನ್ನಿ ಮತ್ತು ಬಲಗೈ ವೇಗಿ ಅಭಿಮನ್ಯು ಮಿಥುನ್‌ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ನಾಲ್ಕನೇ ಆವೃತ್ತಿಗೆ ನಡೆದ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದಾರೆ. ಆದರೆ, ಹೋದ ವರ್ಷ ಗರಿಷ್ಠ ಬೆಲೆ ಪಡೆದಿದ್ದ  ರಾಬಿನ್‌ ಉತ್ತಪ್ಪ ಅವರನ್ನು ಖರೀದಿಸಲು ಹೆಚ್ಚು ಪೈಪೋಟಿ ಕಂಡು ಬರಲಿಲ್ಲ.

ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಶನಿವಾರ ಆಟಗಾರರ ಹರಾಜು ನಡೆಯಿತು. ನಿರೂಪಕ ಹಾಗೂ ವೀಕ್ಷಕ ವಿವರಣೆಗಾರ ಚಾರು ಶರ್ಮಾ ಹರಾಜು ನಡೆಸಿಕೊಟ್ಟರು. ಒಟ್ಟು 239 ಆಟಗಾರರು ಕಣದಲ್ಲಿದ್ದರು. ಪ್ರತಿ ತಂಡಗಳು ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿತ್ತು.

ರಾಜ್ಯ ತಂಡದಲ್ಲಿ ಆಡಿದ್ದ ಪ್ರಮುಖ 35 ಆಟಗಾರರನ್ನು ‘ಎ’ ಗುಂಪಿನಲ್ಲಿ ಸೇರಿಸಲಾಗಿತ್ತು. ₹ 50, 000 ಆಟಗಾರರ ಮೂಲಬೆಲೆಯಾಗಿತ್ತು. ಎಲ್ಲಾ ಫ್ರಾಂಚೈಸ್‌ಗಳು ಹೋದ ವರ್ಷದ ಟೂರ್ನಿಯಲ್ಲಿ ತಮ್ಮ ತಂಡದಲ್ಲಿ ಆಡಿದ್ದ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ‘ಬಿ’ ಗುಂಪಿನಲ್ಲಿದ್ದ ಆಟಗಾರರಿಗೆ ₹ 10,000 ಮೂಲ ಬೆಲೆ ನಿಗದಿ ಮಾಡಲಾಗಿತ್ತು.

‘ಪೀಣ್ಯ ಎಕ್ಸ್‌ಪ್ರೆಸ್’ ಎಂದೇ ಹೆಸರಾದ ಅಭಿಮನ್ಯು ಮಿಥುನ್ ಹೆಸರನ್ನು ಮೊದಲು ಹರಾಜಿನಲ್ಲಿ ಕೂಗಲಾಯಿತು. ಚೊಚ್ಚಲ ಕೆಪಿಎಲ್‌ ಆಡುತ್ತಿರುವ ‘ನಮ್ಮ ಶಿವಮೊಗ್ಗ’ ತಂಡ ಬಿಡ್‌ ಸಲ್ಲಿಸಿತು. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಮಿಥುನ್ ಅವರನ್ನು ಖರೀದಿಸಲು ಬಳ್ಳಾರಿ ಟಸ್ಕರ್ಸ್‌, ಮೈಸೂರು ವಾರಿಯರ್ಸ್‌, ಬಿಜಾಪುರ ಬುಲ್ಸ್‌ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತು.

ಹೇಗಾದರೂ ಮಾಡಿ ಮಿಥುನ್‌ ಅವರನ್ನು ತಮ್ಮ ತಂಡಕ್ಕೆ ಪಡೆದುಕೊಳ್ಳಬೇಕೆಂದು ಪಟ್ಟು ಹಿಡಿದ ಬುಲ್ಸ್‌ ₹ 5.10 ಲಕ್ಷ ನೀಡಿ ತನ್ನಲ್ಲಿಯೇ ಉಳಿಸಿಕೊಂಡಿತು. 25 ವರ್ಷದ ಮಿಥುನ್‌ ಹೋದ ವರ್ಷದ ಕೆಪಿಎಲ್ ಟೂರ್ನಿಯಲ್ಲೂ ಬುಲ್ಸ್ ತಂಡದಲ್ಲಿಯೇ ಇದ್ದರು. 2014ರಲ್ಲಿ ಅವರಿಗೆ ₹ 5 ಲಕ್ಷ ನೀಡಲಾಗಿತ್ತು. ಏಳು ಪಂದ್ಯಗಳನ್ನು ಆಡಿದ್ದ ಅವರು ಒಂಬತ್ತು ವಿಕೆಟ್‌ ಉರುಳಿಸಿದ್ದರು.

ಕೆಪಿಎಲ್‌ ಮೂರನೇ ಆವೃತ್ತಿಗೆ ಅಲಭ್ಯರಾಗಿದ್ದ ಸ್ಟುವರ್ಟ್‌ ಬಿನ್ನಿ ಅವರನ್ನು ನಮ್ಮ ಶಿವಮೊಗ್ಗ ತಂಡ ಖರೀದಿಸಿತು. 63 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಬಿನ್ನಿ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಬೆಳಗಾವಿ ಪ್ಯಾಂಥರ್ಸ್‌ ಇನ್ನಿಲ್ಲದ ಕಸರತ್ತು ನಡೆಸಿತು. ಆದರೆ, ಶಿವಮೊಗ್ಗದ ತಂಡ ಮೇಲಿಂದ ಮೇಲೆ ಬಿಡ್‌ ಸಲ್ಲಿಸಿ ಪ್ಯಾಂಥರ್ಸ್‌ಗೆ ಪೈಪೋಟಿ ಒಡ್ಡಿತು.

ನಿರಾಸೆ ಮೂಡಿಸಿದ ಉತ್ತಪ್ಪ:  ದೇಶಿ ಮತ್ತು ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆಟವಾಡಿದ್ದ ರಾಬಿನ್‌ ಉತ್ತಪ್ಪ ಅವರನ್ನು ಬಳ್ಳಾರಿ ಟಸ್ಕರ್ಸ್‌ ಕೈ ಬಿಟ್ಟಿದ್ದರಿಂದ ಹರಾಜಿನಲ್ಲಿ ಅವರಿಗೆ ಭಾರಿ ಬೆಲೆ ಲಭಿಸಬಹುದು ಎಂದು ನಿರೀಕ್ಷಿಲಾಗಿತ್ತು. ಆದರೆ, ಉತ್ತಪ್ಪ ಖರೀದಿಗೆ ಹೆಚ್ಚು ಪೈಪೋಟಿ ಕಂಡು ಬರಲಿಲ್ಲ. ಹಿಂದಿನ ತಂಡ ಟಸ್ಕರ್ಸ್‌ ಫ್ರಾಂಚೈಸ್‌ ಬಿಡ್‌ ಮಾಡುವ ಗೋಜಿಗೂ ಹೋಗಲಿಲ್ಲ.

ಉತ್ತಪ್ಪ ಅವರನ್ನು ಖರೀದಿಸಲು ಬೆಳಗಾವಿ ಪ್ಯಾಂಥರ್ಸ್‌ ಕೆಲ ಹೊತ್ತು ಯತ್ನಿಸಿತು. ಕೊನೆಯಲ್ಲಿ ಬುಲ್ಸ್‌ ₹ 3.4 ಲಕ್ಷ ನೀಡಿ ಖರೀದಿಸಿತು. ಬಲಗೈ ಬ್ಯಾಟ್ಸ್‌ಮನ್‌ ಉತ್ತಪ್ಪ ಅವರನ್ನು ಹೋದ ವರ್ಷ ಟಸ್ಕರ್ಸ್ ತಂಡ ₹ 5.3 ಲಕ್ಷ ನೀಡಿ ಖರೀದಿಸಿತ್ತು.

ನಿದೇಶ್‌ಗೆ ಭಾರಿ ಬೇಡಿಕೆ:  ಶಿವಮೊಗ್ಗದ ಎಂ. ನಿದೇಶ್‌ ‘ಬಿ’ ಗುಂಪಿನಿಂದ ಹೆಚ್ಚು ಹಣಕ್ಕೆ ಮಾರಾಟವಾದ ಕೀರ್ತಿ ತಮ್ಮದಾಗಿಸಿಕೊಂಡರು. ಹೋದ ವರ್ಷದ ಕೆಪಿಎಲ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡದಲ್ಲಿ ಆಡಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ನಿದೇಶ್‌ ಈ ಬಾರಿ ಬುಲ್ಸ್ ಪಾಲಾದರು. ಹಳೆಯ ತಂಡದಲ್ಲಿ ಉಳಿಸಿಕೊಳ್ಳಲು ಬುಲ್ಸ್ ಇನ್ನಿಲ್ಲದ ಕಸರತ್ತು ನಡೆಸಿತು.  ಮೂರನೇ ಆವೃತ್ತಿಯಲ್ಲಿ ಈ ಆಟಗಾರ ಎಂಟು ಪಂದ್ಯಗಳಿಂದ 198 ರನ್ ಗಳಿಸಿದ್ದರು.

2014ರ ಟೂರ್ನಿಯ ಫೈನಲ್‌ನಲ್ಲಿ ಮೈಸೂರು ವಾರಿಯರ್ಸ್‌ ಮತ್ತು ಬೆಳಗಾವಿ ತಂಡಗಳು ಪೈಪೋಟಿ ನಡೆಸಿದ್ದವು. ಆ ಪಂದ್ಯದಲ್ಲಿ ಬೆಳಗಾವಿ ಸೋಲು ಕಂಡಿತ್ತಾದರೂ, ನಿದೇಶ್‌ 53   ಎಸೆತಗಳಲ್ಲಿ 70 ರನ್‌ ಗಳಿಸಿದ್ದರು. ಆದ್ದರಿಂದ ಹಾಲಿ ಚಾಂಪಿಯನ್‌ ವಾರಿಯರ್ಸ್‌ ನಿದೇಶ್ ಅವರನ್ನು ಖರೀದಿಸಲು ಸಾಕಷ್ಟು ಪ್ರಯತ್ನ ಪಟ್ಟು ವಿಫಲವಾಯಿತು.

ಗುಂಪಿನಲ್ಲಿ ಹೆಚ್ಚು ಹಣ ಲಭಿಸಿದ ಬಗ್ಗೆ ಮಾತನಾಡಿದ ನಿದೇಶ್‌, ‘ಕೆಎಸ್‌ಸಿಎ ಟೂರ್ನಿಯಲ್ಲಿ ಆಡುತ್ತಿದ್ದೆ. ಗೆಳೆಯರ ಮೂಲಕ ವಿಷಯ ಗೊತ್ತಾಯಿತು. ಹಣದ ಬಗ್ಗೆ ಯೋಚಿಸುವುದಿಲ್ಲ. ತಂಡಗಳ ಮಾಲೀಕರು ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇನೆ’ ಎಂದರು.

ಸೆಂಟ್ರಲ್‌ ಎಕ್ಸೈಜ್‌ನಲ್ಲಿ ಉದ್ಯೋಗಿಯಾಗಿರುವ 28 ವರ್ಷದ ನಿದೇಶ್ ಮೊದಲು ದಾವಣಗೆರೆ ಡೈಮಂಡ್ಸ್ ತಂಡದಲ್ಲಿದ್ದರು. ‘ಎಷ್ಟು ಹಣ ಲಭಿಸುತ್ತದೆ ಎನ್ನುವುದರ ಬಗ್ಗೆ ಯೋಚಿಸಲಿಲ್ಲ. ಸಿಗುವ ಪ್ರತಿ ಅವಕಾಶವನ್ನು ಬಳಸಿಕೊಳ್ಳಬೇಕು. ಯಾವ ತಂಡವಾದರೇನು ಆಡುವುದಷ್ಟೇ ಕೆಲಸ’ ಎಂದು ಸ್ವಸ್ತಿಕ್‌ ಯೂನಿಯನ್ ಕ್ಲಬ್‌ ಪ್ರತಿನಿಧಿಸುವ ನಿದೇಶ್ ಹೇಳಿದರು.

ಹೋದ ವರ್ಷದ ಹರಾಜಿನ ವೇಳೆ ‘ಬಿ’ ಗುಂಪಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದ ವಲ್ಚರ್ಸ್‌ ಕ್ಲಬ್‌ನ ಅನಿರುದ್ಧ್‌ ಜೋಶಿಗೆ ಈ ಬಾರಿ ಕಡಿಮೆ ಬೆಲೆ ಲಭಿಸಿತು. 2014ರಲ್ಲಿ ₹ 4.5 ಲಕ್ಷಕ್ಕೆ ಮಂಗಳೂರು ತಂಡದ ಪಾಲಾಗಿದ್ದ ಅನಿರುದ್ಧ್‌ ಅವರನ್ನು ಬಳ್ಳಾರಿ ತಂಡ ₹ 3.7 ಲಕ್ಷಕ್ಕೆ ಖರೀದಿಸಿತು.

ಏಳು ತಂಡಗಳಿಗಷ್ಟೇ ಹರಾಜು:  ಕೆಪಿಎಲ್‌ ನಾಲ್ಕನೇ ಆವೃತ್ತಿಯಲ್ಲಿ ಎಂಟು ತಂಡಗಳು ಪೈಪೋಟಿ ನಡೆಸುತ್ತವೆ. ಆದರೆ, ಶನಿವಾರ ಏಳು ತಂಡಗಳಿಗಷ್ಟೇ ಹರಾಜು ನಡೆಯಿತು. ನಟ ಸುದೀಪ್‌ ನೇತೃತ್ವದ ಆಲ್‌ ಸ್ಟಾರ್ಸ್ ತಂಡ ಕೆಲ ಹಿರಿಯ ಆಟಗಾರರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಆದ್ದರಿಂದ ಈ ತಂಡ ಹರಾಜಿನಲ್ಲಿ ಪಾಲ್ಗೊಂಡಿರಲಿಲ್ಲ. ನಮ್ಮ ಶಿವಮೊಗ್ಗ ತಂಡದ ಬೆಂಬಲಿಗರಾಗಿರುವ ಸುದೀಪ್‌ ಹರಾಜಿನ ವೇಳೆ ಹಾಜರಿದ್ದರು. ಆಗಸ್ಟ್‌ 26ರಿಂದ ಕೆಪಿಎಲ್ ಆರಂಭವಾಗಲಿದೆ.

ಕೆಎಸ್‌ಸಿಎ ಅಧ್ಯಕ್ಷ ಪಿ.ಆರ್. ಅಶೋಕ ಆನಂದ್‌, ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌, ಉಪಾಧ್ಯಕ್ಷರಾದ ಸಂಜಯ್‌ ದೇಸಾಯಿ, ಆರ್‌. ಸುಧಾಕರರಾವ್‌, ಸಹಾಯಕ ಕಾರ್ಯದರ್ಶಿ ಸಂತೋಷ್‌ ಮೆನನ್‌ ಮತ್ತು ವಕ್ತಾರ ವಿನಯ್ ಮೃತ್ಯುಂಜಯ ಅವರು ಹರಾಜಿನ ವೇಳೆ ಹಾಜರಿದ್ದರು.
*
ಕುನಾಲ್‌ಗೆ ಒಲಿದ ಅದೃಷ್ಟ
ರಣಜಿ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಕರ್ನಾಟಕದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ಕೀರ್ತಿ ಹೊಂದಿರುವ ಬಲಗೈ ಬ್ಯಾಟ್ಸ್‌ಮನ್‌ ಕುನಾಲ್‌ ಕಪೂರ್ ಅವರಿಗೆ ಭರ್ಜರಿ ಅದೃಷ್ಟ ಒಲಿದು ಬಂದಿತು. ಕುನಾಲ್ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದರು. ಮೊದಲು ಕುನಾಲ್‌ ಅವರನ್ನು ಹರಾಜಿಗಿಟ್ಟಾಗ ಖರೀದಿಸಲು ಯಾರೂ ಮುಂದೆಬರಲಿಲ್ಲ. ಆದ್ದರಿಂದ ಅವರನ್ನು ‘ಅನ್ ಸೋಲ್ಡ್‌’ ಆಟಗಾರ ಎಂದು ಪರಿಗಣಿಸಿ ‘ಬಿ’ ಗುಂಪಿಗೆ ವರ್ಗಾಯಿಸಲಾಯಿತು. ಆಗ ಎರಡು ಮೂರು ಫ್ರಾಂಚೈಸ್‌ಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು.

ಕೆಲ ಫ್ರಾಂಚೈಸ್‌ಗಳು ಪ್ರಮುಖ ಆಟಗಾರರನ್ನು ಖರೀದಿಸಲು ಹೆಚ್ಚು ಹಣ ವೆಚ್ಚ ಮಾಡಿದ್ದವು. ಆದರೆ, ಮಂಗಳೂರು ಯುನೈಟೆಡ್‌ ಬಳಿ ಸಾಕಷ್ಟು ಹಣ ಉಳಿದುಕೊಂಡಿತ್ತು. ಆದ್ದರಿಂದ ಕುನಾಲ್ ಅವರನ್ನು ಸುಲಭವಾಗಿ ಖರೀದಿಸಲು ಅವಕಾಶವಿತ್ತು. ಇದಕ್ಕೆ ಯುನೈಟೆಡ್‌ ಒಪ್ಪಲಿಲ್ಲ. ಅಚ್ಚರಿಯೆಂದರೆ, ‘ಬಿ’ ಗುಂಪಿನ ಹರಾಜು ನಡೆದಾಗ ತಮ್ಮ ತಂಡಕ್ಕೆ ಪಡೆದುಕೊಳ್ಳಲು ಯುನೈಟೆಡ್‌ ತಂಡವೂ ಬಿಡ್ ಸಲ್ಲಿಸಿತು.  ಕೊನೆಗೆ ಅವರು  ₹ 1.7 ಲಕ್ಷಕ್ಕೆ ಹುಬ್ಬಳ್ಳಿ ಟೈಗರ್ಸ್ ಪಾಲಾದರು.
*
17 ವರ್ಷದ ನಿಕಿನ್‌ಗೂ ಅವಕಾಶ
ಬೆಂಗಳೂರು:
16 ವರ್ಷದ ಒಳಗಿನವರ ರಾಜ್ಯ ಕ್ರಿಕೆಟ್‌ ತಂಡಕ್ಕೆ ನಾಯಕರಾಗಿದ್ದ ಮೈಸೂರಿನ ನಿಕಿನ್‌ ಜೋಸ್‌ಗೆ ಕೆಪಿಎಲ್‌ ತಂಡದಲ್ಲಿ ಅವಕಾಶ ಲಭಿಸಿದೆ. ನಿಕಿನ್‌ಗೆ ತವರಿನ ತಂಡ ಮೂಲಬೆಲೆ ನೀಡಿ ಖರೀದಿಸಿತು. ಬಲಗೈ ಬ್ಯಾಟ್ಸ್‌ಮನ್‌ ನಿಕಿನ್‌ ಕೆಎಸ್‌ಸಿಎ ಆಯೋಜಿಸುವ ಮೊದಲ ಡಿವಿಷನ್‌ ಟೂರ್ನಿಯಲ್ಲಿ ಜವಾಹರ್ ಕ್ಲಬ್ ಪ್ರತಿನಿಧಿಸುತ್ತಿದ್ದರು.

ಈಗ ಮೈಸೂರಿನಲ್ಲಿರುವ ಜೊಜೊ ಕ್ಲಬ್‌ ಪರ ಆಡುತ್ತಾರೆ. ನಿಕಿನ್‌ ಮೈಸೂರಿ ನಲ್ಲಿ ಸೆಂಟ್‌ ಜೋಸೆಫ್‌ ಸೆಂಟ್ರಲ್‌ ಕಾಲೇಜಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾನೆ. 14 ಮತ್ತು 16 ವರ್ಷದ ಒಳಗಿನವರ ವಿಭಾಗದ ಟೂರ್ನಿಯಲ್ಲಿ ನಿಕಿನ್‌ ಮೈಸೂರು ವಲಯವನ್ನು ಪ್ರತಿನಿಧಿಸಿದ್ದರು. 2013–14ರಲ್ಲಿ ನಡೆದ ವಿವಿಧ ಟೂರ್ನಿಗಳಲ್ಲಿ ಶ್ರೇಷ್ಠ ಆಟವಾಡಿದ್ದಕ್ಕೆ ಕೆಎಸ್‌ಸಿಎ ವತಿಯಿಂದ ‘ವರ್ಷದ ಶ್ರೇಷ್ಠ ಆಟಗಾರ’ ಪ್ರಶಸ್ತಿ ಪಡೆದಿದ್ದರು.

‘ರಾಜ್ಯ ತಂಡ ಪ್ರತಿನಿಧಿಸಬೇಕು. ಎತ್ತರದ ಸಾಧನೆ ಮಾಡಬೇಕೆನ್ನು ವುದು ಬದುಕಿನ ದೊಡ್ಡ ಗುರಿಯಾಗಿದೆ. ಕೆಪಿಎಲ್‌ ತಂಡದಲ್ಲಿ ಅವಕಾಶ ಲಭಿಸುತ್ತದೆ ಎನ್ನುವ ನಿರೀಕ್ಷೆಯೇ ಇರಲಿಲ್ಲ. 19 ವರ್ಷದ ಒಳಗಿನವರ ಟೂರ್ನಿಯಲ್ಲಿ ಆಡಲು ಬೆಂಗಳೂರಿಗೆ ಬಂದಿದ್ದೆ.

ಕೆಪಿಎಲ್‌ ತಂಡದಲ್ಲಿ ಸ್ಥಾನ ಸಿಕ್ಕ ವಿಷಯ ಗೊತ್ತಾಗಿ ತುಂಬಾ ಖುಷಿ ಯಾಯಿತು’ ಎಂದು ನಿಕಿನ್ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು. ನಿಕಿನ್‌ ತಾಯಿ ಬೇಬಿಲತಾ ಮಾತನಾಡಿ ‘ಮಗನಿಗೆ ಕೆಪಿಎಲ್‌ ಸ್ಥಾನ ಸಿಕ್ಕ ವಿಷಯ ತಿಳಿದು ಸಂತೋಷ ವಾಯಿತು. ಇದೇ ರೀತಿ ಅವನು ಎತ್ತರಕ್ಕೆ ಬೆಳೆಯಲಿ’ ಎಂದು ಹಾರೈಸಿದರು.
*
ಹೋದ ವರ್ಷದ ಕೆಪಿಎಲ್ ಆಡುವ ಅವಕಾಶ ಕಳೆದುಕೊಂಡಿದ್ದೆ. ‘ನಮ್ಮ ಶಿವಮೊಗ್ಗ’ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗಿದೆ.
-ಸ್ಟುವರ್ಟ್‌ ಬಿನ್ನಿ

*
ಮುಖ್ಯಾಂಶಗಳು
* ಹಿಂದಿನ ವರ್ಷಕ್ಕಿಂತಲೂ ಉತ್ತಪ್ಪಗೆ ಈ ಬಾರಿ ಕಡಿಮೆ ಬೆಲೆ್ಲಿ
* ‘ನಮ್ಮ ಶಿವಮೊಗ್ಗ’ ತಂಡದ ಪಾಲಾದ ಶ್ರೇಯಸ್‌ ಗೋಪಾಲ್‌
* ಆಗಸ್ಟ್‌ 26ರಿಂದ ಕೆಪಿಎಲ್‌ ನಾಲ್ಕನೇ ಅವೃತ್ತಿ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT