ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಖಾರಿಗೆ ತಕರಾರು!

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ/ಐಎನ್‌ಎಸ್‌): ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್‌್ ಸೈಯದ್‌್ ಅಹ್ಮದ್‌್ ಬುಖಾರಿ ಅವರು ಕಾಂಗ್ರೆಸ್‌ಗೆ ಮತ ಹಾಕು­­­ವಂತೆ ಮುಸ್ಲಿಮರಲ್ಲಿ ಮನವಿ ಮಾಡಿ­ಕೊಂಡಿರುವುದು ಉತ್ತರ­ಪ್ರದೇಶ­ದಲ್ಲಿ ರಾಜಕೀಯ ಪಕ್ಷಗಳ ಹಾಗೂ ಮುಸ್ಲಿಂ   ಧಾರ್ಮಿಕ ಮುಖಂಡರ ಪಿತ್ತ ಕೆರಳಿಸಿದೆ.

‘ಕಾಂಗ್ರೆಸ್‌ ಹಾಗೂ ಬಿಜೆಪಿ ಕಾದಾ­ಟಕ್ಕೆ ಅಲ್ಪಸಂಖ್ಯಾತರು ಅಸಹ್ಯಪಟ್ಟು­ಕೊಳ್ಳುತ್ತಿದ್ದಾರೆ’ ಎಂದು ಷಿಯಾ ಪಂಥದ ಕಲ್ಬೆ ಜವಾದ್‌ ಟೀಕಿಸಿದ್ದಾರೆ. ‘ಸೋನಿಯಾ ದರ್ಬಾರ್‌ನಲ್ಲಿ ಬುಖಾರಿ ಪರಿಚಾರಿಕೆ ಮಾಡುತ್ತಾರೆ’ ಎಂದು ರಾಷ್ಟ್ರೀಯ ಉಲೆಮಾ ಮಂಡಳಿ ಅಧ್ಯಕ್ಷ ಮೌಲಾನಾ ಅಮೀರ್‌ ರಷೀದ್‌ ಲೇವಡಿ ಮಾಡಿದ್ದಾರೆ.

‘ಕಾಂಗ್ರೆಸ್‌ ಜತೆ ಮಾಡಿಕೊಂಡ ಒಳ ಒಪ್ಪಂದ ಏನು ಎನ್ನುವುದನ್ನು ಅವರು ಸ್ಪಷ್ಟ­­ಪಡಿಸಬೇಕು. ಕಾಂಗ್ರೆಸ್‌  ಮುಸ್ಲಿಮ­ರಿಗೆ ಕೈಕೊಟ್ಟಿದೆ’ ಎಂದು ಟೀಕಿಸಿದ್ದಾರೆ. ‘ದೇಶ­ದಲ್ಲಿರುವ ಮುಸ್ಲಿಮರು ಬುಖಾರಿ ಸ್ವತ್ತಲ್ಲ’ ಎಂದ ಅವರು, ‘ನಿಮ್ಮಿಷ್ಟದ ಜಾತ್ಯತೀತ ಅಭ್ಯರ್ಥಿಗೆ ಮತ ಹಾಕಿ’ ಎಂದು ಅಲ್ಪಸಂಖ್ಯಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಿಎಸ್‌ಪಿ, ಎಸ್‌ಪಿ ಸೇರಿದಂತೆ ರಾಜಕೀಯ ಪಕ್ಷಗಳು ಕೂಡ ಬುಖಾರಿಗೆ ಛೀಮಾರಿ ಹಾಕಿವೆ. ‘ಅವರು ತಮ್ಮ ನಿರ್ಧಾರದ ಬಗ್ಗೆ ಇನ್ನೊಮ್ಮೆ ಯೋಚಿಸ­ಬೇಕು’ ಎಂದು ಉತ್ತರಪ್ರದೇಶ ನಗರಾ­ಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವ­ಹಾರ­ಗಳ ಸಚಿವ ಅಜಂ ಖಾನ್‌  ಆಗ್ರ­ಹಿಸಿ­ದ್ದಾರೆ. 2012ರ ವಿಧಾನಸಭೆ ಚುನಾ­­ವಣೆ­ಯಲ್ಲಿ ಬುಖಾರಿ ಎಸ್‌ಪಿಗೆ ಬೆಂಬಲ ನೀಡಿ­ದ್ದರು. ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಮತ ಹಾಕಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದರು.

ಕೊಯಮತ್ತೂರು ವರದಿ: ಸಿಪಿಐ ಕೂಡ ಬುಖಾರಿ ಅವರನ್ನು ಟೀಕಿಸಿದೆ. ‘ದೇಶದ ಮುಸ್ಲಿಮರಿಗೆ ಬುಖಾರಿ ಏಕಮೇವ ಯಜ­ಮಾನನಲ್ಲ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸುಧಾಕರ್‌ ರೆಡ್ಡಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು‌.

ಪಟ್ನಾ ವರದಿ: ‘ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತೀಯ ರಾಜ­ಕೀಯ ಮಾಡುತ್ತಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಈ ತಂತ್ರ ಫಲಿ­ಸು­­­ವುದಿಲ್ಲ’ ಎಂದು ಬಿಹಾರ ಮುಖ್ಯ­ಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

‘1984ರ ಸಿಖ್‌ ನರಮೇಧ ಹಾಗೂ 1990ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ನಡೆದ ಕೋಮು ಗಲಭೆಗೆ ನಿಮ್ಮ ಬಳಿ ಉತ್ತರ ಇದೆಯೇ’ ಎಂದು ಸೋನಿಯಾರನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT